ADVERTISEMENT

ಬಿಗಿಲ್ ಸಿನಿಮಾ ವಿಮರ್ಶೆ: ಹಿಂಡಿದ ಭಾವದ ಕ್ರೀಡಾ ಕಥನ

ವಿಶಾಖ ಎನ್.
Published 26 ಅಕ್ಟೋಬರ್ 2019, 3:09 IST
Last Updated 26 ಅಕ್ಟೋಬರ್ 2019, 3:09 IST
‘ಬಿಗಿಲ್’ ಚಿತ್ರದಲ್ಲಿ ವಿಜಯ್, ನಯನತಾರಾ
‘ಬಿಗಿಲ್’ ಚಿತ್ರದಲ್ಲಿ ವಿಜಯ್, ನಯನತಾರಾ   

ಚಿತ್ರ: ಬಿಗಿಲ್ (ತಮಿಳು)
ನಿರ್ಮಾಣ: ಕಲ್ಪತಿ ಎಸ್. ಅಘೋರಾಮ್, ಕಲ್ಪತಿ ಎಸ್. ಗಣೇಶ್, ಕಲ್ಪತಿ ಎಸ್. ಸುರೇಶ್
ನಿರ್ದೇಶನ: ಅಟ್ಲಿ ಕುಮಾರ್
ತಾರಾಗಣ: ವಿಜಯ್, ಜಾಕಿ ಶ್ರಾಫ್, ನಯನತಾರಾ, ವಿವೇಕ್, ಕತಿರ್, ಡೇನಿಯೆಲ್ ಬಾಲಾಜಿ, ಇಂದುಜಾ, ರೆಬಾ, ವರ್ಷಾ, ಅಮೃತಾ ಅಯ್ಯರ್, ಇಂದ್ರಜಾ ಶಂಕರ್, ಗಾಯತ್ರಿ ರೆಡ್ಡಿ.

‘ಚಕ್‌ ದೇ ಇಂಡಿಯಾ’ ಹಿಂದಿ ಸಿನಿಮಾ ಗೆಲುವನ್ನು ವಿಶ್ಲೇಷಿಸುತ್ತಾ ಎಷ್ಟೋ ಜನ ಅದು ಮಹಿಳಾ ಪ್ರಧಾನ ಸಿನಿಮಾ ಎಂದಿದ್ದರು. ನಿಜಕ್ಕೂ ಅದರಲ್ಲಿ ಶಾರುಖ್ ಖಾನ್ ಪಾತ್ರವೇ ತಂತುವಾಗಿತ್ತು. ಅದರ ಸುತ್ತ ಉಳಿದೆಲ್ಲ ಹಾಕಿ ಆಟಗಾರ್ತಿಯರ ಗಿರಕಿ. ‘ಅಟ್ಲಿ’ ತಮಿಳು ಚಿತ್ರದ ಎರಡನೇ ಅರ್ಧದ ಆತ್ಮ ‘ಚಕ್‌ ದೇ ಇಂಡಿಯಾ’ ಚಿತ್ರದ್ದೇ. ಆದರೆ, ಚಿತ್ರಕಥೆಯನ್ನು ನಿರ್ದೇಶಕರು ತಮಿಳೀಕರಿಸಿರುವ ರೀತಿ ‘ಮಾಸ್ ಅಪೀಲ್’ ಉಮೇದಿಗೆ ತಕ್ಕಂತಿದೆ.

‘ಮರ್ಸಲ್’ ಯಶಸ್ಸಿನ ನಂತರ ಅಟ್ಲಿ ಒಪ್ಪಿತ ಮಸಾಲೆ ಸಿನಿಮಾವನ್ನು ಕೊಟ್ಟಿದ್ದಾರೆ. ವಿಜಯ್ ಇಲ್ಲಿ ಅಪ್ಪನೂ ಹೌದು, ಮಗನೂ. ಅಪ್ಪ ಉಗ್ಗುತ್ತಾನೆ. ಮಗ ಫುಟ್‌ಬಾಲ್ ಆಡುತ್ತಾನೆ. ಇಬ್ಬರದ್ದೂ ‘ಇಕ್ರಲಾ ಒದಿರ್ಲಾ’ ಕುಟುಂಬ. ಮಗ ತನ್ನ ರೌಡಿಲೋಕದಿಂದ ದೂರ ಉಳಿದು ಫುಟ್‌ಬಾಲ್‌ ಆಡಿ, ದೊಡ್ಡ ಕಪ್‌ ಗೆದ್ದು ತರಲಿ. ತನ್ನ ಸಮಾಜದವರ ಕುರಿತು ಇರುವ ಕೆಟ್ಟ ಜನಾಭಿಪ್ರಾಯ ದೂರ ಮಾಡಲಿ ಎನ್ನುವುದು ಅಪ್ಪನ ಮಹತ್ವಾಕಾಂಕ್ಷೆ. ಅದನ್ನು ಈಡೇರಿಸಲು ಮಗ ಇನ್ನೇನು ಕೊನೆ ಮೆಟ್ಟಿಲು ಹತ್ತಬೇಕು, ಅಷ್ಟರಲ್ಲಿ ನಿರೀಕ್ಷಿತ ತಿರುವು. ಅಪ್ಪನ ರಕ್ತ ಮೆತ್ತಿದ ದೇಹವನ್ನು ಅಪ್ಪಿಕೊಳ್ಳುವ ಮಗ ಅವನ ರಕ್ತದೋಕುಳಿ ಆಟವನ್ನೇ ಮುಂದುವರಿಸಬೇಕಾದ ಅನಿವಾರ್ಯಕ್ಕೆ ಸಿಲುಕುತ್ತಾನೆ. ಇದು ಪೀಠಿಕೆ.

ADVERTISEMENT

ಸಿನಿಮಾದ ಮೊದಲ ಒಂದೂಕಾಲು ಗಂಟೆ ಹೀಗೆ ಚದುರಿದ ಹೊಡೆದಾಟಗಳ ನಡುವೆ ಅಲ್ಲಲ್ಲಿ ಕಚಗುಳಿ ಇಡುವ ದೃಶ್ಯಗಳಿಂದ ಕಳೆದುಹೋಗುತ್ತದೆ. ಇದೂ ಮಾಮೂಲಿ ಕಥೆ ಎಂದು ಅಂದುಕೊಳ್ಳುವಷ್ಟರಲ್ಲಿ ಮಹಿಳೆಯರ ಫುಟ್‌ಬಾಲ್ ತಂಡದ ಪ್ರವೇಶವಾಗುತ್ತದೆ. ಸಿನಿಮಾ ಕಳೆಗಟ್ಟುವುದೇ ಇಲ್ಲಿಂದ.

‘ರೌಡಿ ಕೋಚ್’ ಹೇಗೆ ಆ ಆಟಗಾರ್ತಿಯರ ಮನವನ್ನಷ್ಟೇ ಅಲ್ಲದೆ ಕಪ್ ಕೂಡ ಗೆದ್ದು ತರುತ್ತಾನೆ ಎನ್ನುವುದು ಹಿಡಿದಿಡುವ ಮೆಲೋಡ್ರಾಮಾಗಳಿಂದ ವ್ಯಕ್ತಗೊಳ್ಳುತ್ತದೆ. ಸಿನಿಮಾದ ಶೀರ್ಷಿಕೆಯ ಅರ್ಥ ಶೀಟಿ. ಪದೇ ಪದೇ ಪ್ರೇಕ್ಷಕರು ಶೀಟಿ ಹೊಡೆಯಬೇಕು, ಆಗೀಗ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳಬೇಕು, ಹುಡುಗಿಯರು ಗೋಲ್‌ಗಳನ್ನು ಹೊಡೆದಾಗ ಶಹಬ್ಬಾಸ್‌ ಎನ್ನಬೇಕು ಆ ರೀತಿ ಜಿ.ಕೆ. ವಿಷ್ಣು ಸಿನಿಮಾಟೊಗ್ರಫಿ ಕೆಲಸ ಮಾಡಿದೆ.

ಅಪ್ಪನಾಗಿ ಕಷ್ಟಪಟ್ಟು ನಟಿಸಿರುವ ವಿಜಯ್, ಮಗನಾಗಿ ಎರಡು ‘ಶೇಡ್‌’ಗಳಲ್ಲಿ ಲೀಲಾಜಾಲ. ಅವರ ರಂಜನೀಯ ಶೈಲಿ, ಕಾಮಿಡಿ ಟೈಮಿಂಗ್ ಇಲ್ಲೂ ಕೆಲಸ ಮಾಡಿದೆ. ನಗಿಸುವ ವಿಜಯ್ ಇಷ್ಟವಾದಷ್ಟು ಅಳಿಸುವ ವಿಜಯ್ ಹಿಡಿಸುವುದಿಲ್ಲ. ಎ.ಆರ್. ರೆಹಮಾನ್ ಸಂಗೀತದ ಒಂದು ಹಾಡಿನ ಲಯ ಕಾಡಿದರೆ, ಹಿನ್ನೆಲೆ ಸಂಗೀತ ಇಡೀ ಚಿತ್ರವನ್ನು ಮೇಲೆತ್ತುತ್ತದೆ. ಜಾಕಿ ಶ್ರಾಫ್ ತಮ್ಮದೇ ತಣ್ಣಗಿನ ಅಭಿನಯದಿಂದ ಕ್ರೌರ್ಯ ತುಳುಕಿಸುತ್ತಾರೆ. ನಯನತಾರಾ ಮಾಗಿದ ನಟಿ. ಆಟಗಾರ್ತಿಯರಾಗಿ ಇಂದುಜಾ, ರೆಬಾ, ವರ್ಷಾ, ಅಮೃತಾ ಅಯ್ಯರ್, ಇಂದ್ರಜಾ ತಮ್ಮ ತಮ್ಮ ಪಾತ್ರಗಳನ್ನು ಸುಖಿಸಿದ್ದಾರೆ.

ಸ್ಟಾರ್‌ ನಟನ ಸುತ್ತ ಹೀಗೆ ಭಾವುಕ ಕ್ರೀಡಾ ಕಥನವನ್ನು ಕಟ್ಟಿ, ಗಿರಿಗಿಟ್ಲೆ ಆಡಿಸಿರುವ ನಿರ್ದೇಶಕ ಅಟ್ಲಿ ದೊಡ್ಡದಾಗಿ ಯೋಚಿಸುತ್ತಾರೆ ಎನ್ನುವುದಕ್ಕೆ ಸಾಕಷ್ಟು ಕುರುಹುಗಳು ಚಿತ್ರದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.