ADVERTISEMENT

‘800’ ಚಿತ್ರ ವಿವಾದ: ವಿಜಯ್‌ ಸೇತುಪತಿ ಪುತ್ರಿಗೆ ಅತ್ಯಾಚಾರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 8:51 IST
Last Updated 20 ಅಕ್ಟೋಬರ್ 2020, 8:51 IST
ವಿಜಯ್‌ ಸೇತುಪತಿ
ವಿಜಯ್‌ ಸೇತುಪತಿ    

ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ ‘800’ ಸಿನಿಮಾದಲ್ಲಿ ನಟಿಸುವುದಕ್ಕೆ ತಮಿಳು ಭಾಷಿಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಟ ವಿಜಯ್ ಸೇತುಪತಿ ಚಿತ್ರದಿಂದ ಹೊರ ನಡೆದಿದ್ದಾರೆ. ಆದರೂ ಅವರನ್ನು ಗುರಿಯಾಗಿಸಿಕೊಂಡು ನೆಟ್ಟಿಗರು ನಡೆಸುತ್ತಿರುವ ದಾಳಿಗಳು ನಿಂತಿಲ್ಲ. ಈಗ ಟ್ವಿಟಿಗನೊಬ್ಬ ವಿಜಯ್‌ ಸೇತುಪತಿಯ ಮಗಳ ಮೇಲೆ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ.

‘ತಮಿಳರಿಗೆ ಆದ ನೋವು ವಿಜಯ್‌ ಸೇತುಪತಿಗೆ ಮನದಟ್ಟಾಗಬೇಕೆಂದರೆ ಅವರ ಮಗಳನ್ನು ಲೈಂಗಿಕವಾಗಿ ಶೋಷಣೆ ಮಾಡಬೇಕು’ ಎಂದು ಟ್ವಿಟರ್‌ ಬಳಕೆದಾರನೊಬ್ಬ ಪೋಸ್ಟ್‌ ಹಂಚಿಕೊಂಡಿ ದ್ದಾನೆ. ವಿಜಯ್‌ ಸೇತುಪತಿಯವರ ಅಪ್ರಾಪ್ತ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿದವನ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಬಾಲಕಿಗೆ ಬೆದರಿಕೆ ಹಾಕಿದವನನ್ನು ಕೂಡಲೇ ಬಂಧಿಸಬೇಕೆಂದು ಗಾಯಕಿ ಚಿನ್ಮಯಿ ಶ್ರೀಪಾದ್‌, ಧನ್ಯಾ ರಾಜೇಂದ್ರನ್‌, ಎಸ್‌. ಸೇಂಥಿಲ್‌ ಕುಮಾರ್‌ ಸೇರಿ ಹಲವು ಮಂದಿ ಒತ್ತಾಯಿಸಿದ್ದಾರೆ.

‘ಇವರೆಲ್ಲರೂ ಮನುಷ್ಯರಾ? ಈ ವ್ಯಕ್ತಿಯನ್ನು ತಕ್ಷಣ ಪತ್ತೆ ಹಚ್ಚಿ ಜೈಲಿಗೆ ಕಳಿಸಿ’ ಎಂದು ಸೇಂಥಿಲ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಮುತ್ತಯ್ಯ ಮುರಳೀಧರನ್‌ ಪತ್ರ

ಸೇತುಪತಿ ವಿರುದ್ಧ ವ್ಯಕ್ತವಾಗುತ್ತಿದ್ದ ಟೀಕೆಗಳನ್ನು ಗಮನಿಸಿದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್, ‘ಭವಿಷ್ಯದಲ್ಲಿ ನಿಮಗೆ ತೊಂದರೆ ಆಗಬಾರದು. ಚಿತ್ರದಿಂದ ಹೊರ ನಡೆಯಿರಿ’ ಎಂದು ಮನವಿ ಮಾಡಿ ಸೇತುಪತಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸೇತುಪತಿ, ಧನ್ಯವಾದಗಳು, ಶುಭ ವಿದಾಯ’ ಎಂದು ಟ್ವಿಟರ್‌ನಲ್ಲಿ ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ.

ತಮಿಳು ನಿರ್ದೇಶಕ ಎಂ.ಎಸ್‌. ಶ್ರೀಪತಿ ಅವರು ಸ್ಪಿನ್‌ ಮಾಂತ್ರಿಕ ಮುತ್ತಯ್ಯ ಮುರಳೀಧರನ್‌ ಅವರ ಬಯೋಪಿಕ್‌ಗೆ ಆ್ಯಕ್ಷನ್‌ ಕಟ್‌ ಹೇಳಲು ಸಿದ್ಧತೆ ನಡೆಸಿ, ತೆರೆಯ ಮೇಲೆ ಸೇತುಪತಿಯನ್ನು ಮುತ್ತಯ್ಯ ಮುರಳೀಧರನ್‌ ಆಗಿ ತೋರಿಸಲು ಸಜ್ಜಾಗಿದ್ದರು. ಚಿತ್ರ ಭಾಗವಾಗಿದ್ದಕ್ಕೆ ಸೇತುಪತಿ ಕೂಡ ಸಂತಸ ಹಂಚಿಕೊಂಡಿದ್ದರು.

ಕಳೆದ ವಾರವಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಇದರಲ್ಲಿ ಮುತ್ತಯ್ಯ ಮುರಳೀಧರನ್ ಅವರನ್ನೇ ಹೋಲುವಂತೆ ಸೇತುಪತಿಯವರ ಕ್ಯಾರಿಕೇಚರ್‌ ಚಿತ್ರವನ್ನು ಮಾರ್ಫ್‌ ಮಾಡಲಾಗಿತ್ತು. ಅನಿಮೇಟೆಡ್ ಗ್ರಾಫಿಕ್ಸ್ ಬಳಸಿ ತಯಾರಿಸಿದ್ದ ಒಂದು ನಿಮಿಷದ ಮೋಷನ್ ಪೋಸ್ಟರ್‌ನಲ್ಲಿ ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ಕ್ರಿಕೆಟಿಗನೊಬ್ಬ ಹುಟ್ಟಿದ ಕಥೆಯನ್ನು ಇದರಲ್ಲಿ ತೋರಿಸಲಾಗಿತ್ತು.

ಮೂವಿ ಟ್ರೈನ್‌ ಮೋಷನ್‌ ಪಿಕ್ಚರ್‌ ಮತ್ತು ದಾರ್‌ ಮೋಷನ್‌ ಪಿಕ್ಚರ್‌ನಡಿ ಇದಕ್ಕೆ ಬಂಡವಾಳ ಹೂಡುತ್ತಿರುವ ಈ ಚಿತ್ರ ಸೆಟ್ಟೇರುವ ಮೊದಲೇ ಸೇತುಪತಿಯ ಹೊಸ ಚಿತ್ರ ‌ತಮಿಳುನಾಡಿನಲ್ಲಿ ರಾಜಕೀಯ ಬಣ್ಣ ಪಡೆದುಕೊಂಡುಬಿಟ್ಟಿತು.

ಮರಳೀಧರನ್‌ ಬಯೋಪಿಕ್‌ನಲ್ಲಿ ತಮಿಳಿನ ಖ್ಯಾತ ನಟ ವಿಜಯ್‌ ಮುಂದಾದಾಗಲೂ ಅವರ ನಿರ್ಧಾರಕ್ಕೆ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಶ್ರೀಲಂಕಾದಲ್ಲಿರುವ ತಮಿಳು ಭಾಷಿಕರ ಭಾವನೆಗೆ ಧಕ್ಕೆ ಉಂಟು ಮಾಡಬಾರದೆಂದು ವಿಜಯ್‌ ಕೂಡ ಈ ಚಿತ್ರ ಕೈಬಿಟ್ಟಿದ್ದರು.

ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಭಾಗಿಯಾದಗಿನಿಂದ ತಮಿಳುನಾಡಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಒಬ್ಬ ತಮಿಳು ನಟರಾಗಿ ಅವರ ಸಮುದಾಯದ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ #ShameonVijaySethupathi ಎಂಬ ಹ್ಯಾಷ್ಟ್ಯಾಗ್ ಮೂಲಕ ಸೇತುಪತಿ ವಿರುದ್ಧ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ದ್ರಾವಿಡ ಸಂಘ ಕೂಡ ಚಿತ್ರದಿಂದ ಹಿಂದೆಸರಿಯುವಂತೆ ಸೇತುಪತಿಯವರನ್ನು ಒತ್ತಾಯಿಸಿತ್ತು.

ಆಕ್ರೋಶಕ್ಕೆ ಕಾರಣವೇನು?

‘ಈ ಹಿಂದೆ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ನಡೆದಿದ್ದ ದೌರ್ಜನ್ಯಕ್ಕೆ ಮುತ್ತಯ್ಯ ಮುರಳೀಧರ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸಿರಲಿಲ್ಲ. ಈ ಕಾರಣಕ್ಕೆ ಅವರ ಬಯೋಪಿಕ್‌ನಲ್ಲಿ ತಮಿಳು ನಟರು ನಟಿಸುವುದನ್ನು ತಮಿಳು ಭಾಷಿಗರು ಆಕ್ಷೇಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.