ಮಹಾರಾಜ
ಚೆನ್ನೈ: ವಿಜಯ ಸೇತುಪತಿ ನಟನೆಯ ತಮಿಳಿನ ಸೂಪರ್ ಹಿಟ್ ಚಿತ್ರ ಮಹಾರಾಜ, ಚೀನಾದಲ್ಲಿ ತೆರೆ ಕಾಣಲು ಸಜ್ಜಾಗಿದೆ. ಇದಕ್ಕಾಗಿ ಬರೋಬ್ಬರಿ 40 ಸಾವಿರ ಸ್ಕ್ರೀನ್‌ಗಳನ್ನು ಚಿತ್ರದ ವಿತರಕರು ಕಾಯ್ದಿರಿಸಿದ್ದಾರೆ ಎಂಬ ಸಂಗತಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಕಳೆದ ಜೂನ್‌ನಲ್ಲಿ ತೆರೆ ಕಂಡ ಮಹಾರಾಜ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾದ ‘ಮಹಾರಾಜ’ದ ಕಥೆಯು ನೋಡುಗರನ್ನು ಭಾವನಾತ್ಮಕವಾಗಿ ಬೆಸೆದಿತ್ತು. ಈ ಚಿತ್ರ ಇದೀಗ ಶುಕ್ರವಾರ (ನ. 29) ಚೀನಾದಲ್ಲಿ ತೆರೆ ಕಾಣಲಿದೆ.
ಚಿತ್ರ ಬಿಡುಗಡೆಗೂ ಮುನ್ನ ಚೀನಾದಲ್ಲಿ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿತ್ರ ತೆರೆ ಕಾಣುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮೈಲಿಗಲ್ಲನ್ನು ಮಹಾರಾಜ ಸ್ಥಾಪಿಸಲಿದೆ. ಆ ಮೂಲಕ ಚಿತ್ರವು ₹1 ಸಾವಿರ ಕೋಟಿ ಆದಾಯ ಗಳಿಸುವ ವಿಶ್ವಾಸವಿದೆ ಎಂದು ಚಿತ್ರತಂಡ ಹೇಳಿದೆ.
ಚಿತ್ರದಲ್ಲಿ ವಿಜಯ ಸೇತುಪತಿ ಮುಖ್ಯಭೂಮಿಕೆಯಲ್ಲಿದ್ದಾರೆ. ಅನುರಾಗ್ ಕಶ್ಯಪ್ ಅವರ ಸೆಲ್ವಂ ಪಾತ್ರ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅಭಿರಾಮಿ ಪಾತ್ರದಲ್ಲಿ ಮಮತಾ ಮೋಹನದಾಸ್ ಅಭಿನಯಿಸಿದ್ದಾರೆ.
ಹಾಸ್ಯ ಹಾಗೂ ಭಾವನಾತ್ಮಕ ದೃಶ್ಯಗಳೊಂದಿಗೆ ಸಾಗುವ ಚಿತ್ರದ ಕೊನೆಯವರೆಗೂ ಕಾಪಿಟ್ಟ ಕುತೂಹಲದಿಂದಾಗಿ ಕುರ್ಚಿಯ ತುದಿಯಲ್ಲಿ ಕೂರುವಂತೆ ನಿರ್ದೇಶಕರು ಚಿತ್ರಕಥೆ ಹೆಣೆದಿದ್ದಾರೆ ಎಂಬ ಅಭಿಪ್ರಾಯಗಳು ಪ್ರೇಕ್ಷಕರಿಂದ ವ್ಯಕ್ತವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.