ADVERTISEMENT

ವಿಜಯಶಾಂತಿ ನಟನೆಯಿಂದ ದೂರ ಸರಿದರೇ?

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 19:30 IST
Last Updated 6 ಏಪ್ರಿಲ್ 2020, 19:30 IST
ವಿಜಯಶಾಂತಿ
ವಿಜಯಶಾಂತಿ   

ಅದು ಎಂಬತ್ತು– ತೊಂಬತ್ತರ ದಶಕದ ಅವಧಿ. ಇಡೀ ತೆಲುಗು ಚಿತ್ರರಂಗ ಪುರುಷರ ಪಾರುಪತ್ಯದಲ್ಲಿದ್ದ ಕಾಲವದು. ‘ಲೇಡಿ ಸೂಪರ್‌ ಸ್ಟಾರ್’ ಖ್ಯಾತಿಯ ವಿಜಯಶಾಂತಿ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಇಟ್ಟಿದ್ದು ಆಗಲೇ. ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರ ಮನದಲ್ಲಿ ಭದ್ರವಾಗಿ ನೆಲೆಯೂರಿದ ಆಕೆ ಚಿತ್ರರಂಗ ಪ್ರವೇಶಿಸಿದ್ದು, 80ರ ದಶಕದಲ್ಲಿ.

ತಮಿಳಿನ ‘ಕಲ್ಲುಕ್ಕುಲ್‌ ಈರಾಮ್’ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಅಡಿ ಇಟ್ಟರು. ಅದೇ ವರ್ಷ ತೆಲುಗಿನ ‘ಕಿಲಾಡಿ ಕೃಷ್ಣನುಡು’ ಸಿನಿಮಾದಲ್ಲೂ ನಟಿಸಿದರು. ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿದ ಆಕೆ ಎರಡು ದಶಕಗಳ ಕಾಲ ಟಾಲಿವುಡ್‌ನಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದಿದ್ದು ಈಗ ಇತಿಹಾಸ. ಕನ್ನಡದಲ್ಲಿ ಆಕೆ ಕೊನೆಯದಾಗಿ ನಟಿಸಿದ ಚಿತ್ರ ‘ವಂದೇ ಮಾತರಂ’.

1998ರ ವೇಳೆಗೆ ಅವರು ರಾಜಕೀಯದ ಸೆಳೆತಕ್ಕೆ ಸಿಲುಕಿದರು. ರಾಜಕಾರಣದಲ್ಲಿಯೇ ಬದುಕು ಕಟ್ಟಿಕೊಳ್ಳಲು ಹೊರಟ ಅವರು ನಿಧಾನವಾಗಿ ಹಿರಿತೆರೆಯಿಂದಲೂ ದೂರವಾದರು. ತೆಲುಗಿನಲ್ಲಿ ಅವರು ಕೊನೆಯದಾಗಿ ನಟಿಸಿದ ಚಿತ್ರ ‘ನಾಯುಡಮ್ಮ’. ಎ. ಮಾದವಸಾಯಿ ಆ್ಯಕ್ಷನ್‌ ಕಟ್‌ ಹೇಳಿದ್ದ ಈ ಸಿನಿಮಾ ತೆರೆಕಂಡಿದ್ದು, 2006ರಲ್ಲಿ. ಆ ನಂತರ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದರು.

ADVERTISEMENT

ಮತ್ತೆ ಅವರು ಬಣ್ಣಹಚ್ಚಿದ್ದು ಈ ವರ್ಷ ತೆರೆಕಂಡ ಮಹೇಶ್‌ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಚಿತ್ರದ ಮೂಲಕ. ಹದಿಮೂರು ವರ್ಷದ ಬಳಿಕ ಭರ್ಜರಿಯಾಗಿಯೇ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಸಿನಿಮಾವೂ ಸೂಪರ್‌ ಹಿಟ್‌ ಆಯಿತು. ಈ ಚಿತ್ರದ ಪೂರ್ವ ಬಿಡುಗಡೆ ಸಮಾರಂಭದಲ್ಲಿ ನಟ ಚಿರಂಜೀವಿ, ‘ಮತ್ತೆ ನೀವು ನನ್ನೊಟ್ಟಿಗೆ ನಟಿಸುತ್ತೀರಾ’ ಎಂದು ವಿಜಯಶಾಂತಿಗೆ ಕೇಳಿದಾಗ ನೆರೆದಿದ್ದವರು ಅಚ್ಚರಿಗೊಂಡಿದ್ದರು. ‘ಮೆಗಾಸ್ಟಾರ್‌’ ಮಾತಿಗೆ ಅವರಿಂದ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಬಂದಿತ್ತು. ‘ವರ್ಷದಲ್ಲಿ ಒಂದು ಸಿನಿಮಾದಲ್ಲಿಯಾದರೂ ನಟಿಸುತ್ತೇನೆ’ ಎಂದಿದ್ದರು ವಿಜಯಶಾಂತಿ.

ಪ್ರಸ್ತುತ ಅವರಿಗೆ ಹೊಸ ಅವಕಾಶಗಳು ಹುಡುಕೊಂಡು ಬರುತ್ತಿವೆ. ತಾಯಿ ಪಾತ್ರಗಳಷ್ಟೇ ಬರುತ್ತಿವೆ ಎಂಬ ಮಾತು ಇದೆ. ಹಾಗಾಗಿಯೇ, ಅವರು ಸಿನಿಮಾದಲ್ಲಿ ಮತ್ತೆ ನಟಿಸಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ ಎಂಬ ಸುದ್ದಿಯಿದೆ. ಇದು ಆಕೆಯ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರಿಗೆ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿನ ಪಾತ್ರಕ್ಕಿಂತಲೂ ಉತ್ತಮವಾದ ಪಾತ್ರದಲ್ಲಿ ನಟಿಸುವ ಆಸೆಯಿದೆಯೇ ಎನ್ನುವುದನ್ನು ಅವರೇ ಹೇಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.