ADVERTISEMENT

ವಿಕ್ರಾಂತ್ ರೋಣ: ಇಂಗ್ಲಿಷ್‌ ಡಬ್ಬಿಂಗ್ ಪೂರ್ಣಗೊಳಿಸಿದ ಸುದೀಪ್; ಭಂಡಾರಿ ಮಾಹಿತಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 5:30 IST
Last Updated 3 ಮಾರ್ಚ್ 2022, 5:30 IST
 ‘ವಿಕ್ರಾಂತ್‌ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್‌ ಮತ್ತು ಜಾಕ್ವೆಲಿನ್ ಫರ್ನಾಂಡಿಸ್
‘ವಿಕ್ರಾಂತ್‌ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್‌ ಮತ್ತು ಜಾಕ್ವೆಲಿನ್ ಫರ್ನಾಂಡಿಸ್   

ಬೆಂಗಳೂರು: ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ‘ವಿಕ್ರಾಂತ್‌ ರೋಣ’ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

ಈ ಚಿತ್ರ ಟೀಸರ್, ಪೋಸ್ಟರ್‌ಗಳ ಮೂಲಕ ಈಗಾಗಲೇ ಸದ್ದು ಮಾಡುತ್ತಿದೆ. ಫೆ.24ರಂದು ತೆರೆ ಕಾಣಬೇಕಿದ್ದ ಚಿತ್ರದ ಬಿಡುಗಡೆ ಕೋವಿಡ್‌ ಸೃಷ್ಟಿಸಿದ ಪ್ರತಿಕೂಲ ಪರಿಸ್ಥಿತಿ, ನಿಯಮಾವಳಿಗಳ ಇತಿಮಿತಿಗಳಿಂದಾಗಿ ಮುಂದೂಡಲಾಗಿದೆ.ಇದರ ನಡುವೆ ಅಭಿಮಾನಿಗಳಿಗಾಗಿ ಚಿತ್ರತಂಡ ಹೊಸ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಕೂತುಹಲ ಹೆಚ್ಚಿಸುತ್ತಿದೆ.

ಮಾ.2ರಂದು ಅನೂಪ್ ಭಂಡಾರಿ ಜನ್ಮದಿನ. ಚಿತ್ರರಂಗದ ಹಲವು ತಾರೆಯರು ಸೇರಿದಂತೆ ಅಭಿಮಾನಿಗಳು ನಿರ್ದೇಶಕರಿಗೆ ಶುಭಾಶಯ ಕೋರಿದ್ದಾರೆ. ಈ ನಡುವೆ ಅಭಿಮಾನಿಗಳಿಗಾಗಿ ಭಂಡಾರಿ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಸುದೀಪ್ ಅವರು ಈಗಾಗಲೇ ಇಂಗ್ಲಿಷ್‌ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ ಎಂದು ಅನೂಪ್ ಭಂಡಾರಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಇಂಗ್ಲಿಷ್‌ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ತಮ್ಮ ಇಂಗ್ಲಿಷ್‌ಚಿತ್ರಕ್ಕೆ ತಮ್ಮದೇ ಧ್ವನಿ ನೀಡುತ್ತಿರೋದು ಇದೇ ಮೊದಲು. ಅಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಇಂತಹ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ’ ಎಂದು ಬರೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸುದೀಪ್ ಕಾಣಿಸಿಕೊಂಡಿರುವ ಟೀಸರ್‌ವೊಂದನ್ನು ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಡಬ್ಬಿಂಗ್‌ ಮಾಡಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈ ಚಿತ್ರದ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದು, ರಕೇಲ್‌ ಡಿಕೋಸ್ಟ ಉರ್ಫ್‌ ‘ಗಡಂಗ್‌ ರಕ್ಕಮ್ಮ’ನಾಗಿ ವಿಶೇಷ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಪ್ರಮೋಷನ್ಸ್‌ ಸೇರಿ ಚಿತ್ರದ ಬಜೆಟ್‌ ₹100 ಕೋಟಿ ದಾಟಿದೆ ಎಂದು ಇತ್ತೀಚೆಗೆ ಚಿತ್ರದ ನಿರ್ಮಾಪಕ ಜಾಕ್‌ ಮಂಜು ತಿಳಿಸಿದ್ದರು. ಜೀ ಸ್ಟುಡಿಯೊಸ್‌ ಹಾಗೂ ಕಿಚ್ಚ ಕ್ರಿಯೇಷನ್ಸ್‌ನಡಿ ಜಾಕ್‌ ಮಂಜು ಅವರ ಶಾಲಿನಿ ಆರ್ಟ್ಸ್‌ ಈ ಚಿತ್ರವನ್ನು ವಿತರಣೆ ಮಾಡಲಿದೆ. ಚಿತ್ರಕ್ಕೆ ಬಿ.ಅಜನೀಶ್‌ ಲೋಕನಾಥ್‌ ಸಂಗೀತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.