ADVERTISEMENT

ರಶ್ಮಿಕಾ ಮಂದಣ್ಣ ಬಾಲಿವುಡ್‌ ಪ್ರವೇಶದ ಅವಕಾಶ ತಪ್ಪಿಸಿಕೊಂಡಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 11:27 IST
Last Updated 30 ನವೆಂಬರ್ 2019, 11:27 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   

ಕನ್ನಡತಿ ರಶ್ಮಿಕಾ ಮಂದಣ್ಣ ಟಾಲಿವುಡ್‌ನ ಬಹುಬೇಡಿಕೆಯ ನಟಿ. ಅವರು ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದು ನಾಗಶೌರ್ಯ ನಾಯಕರಾಗಿದ್ದ ‘ಚಲೊ’ ಚಿತ್ರದ ಮೂಲಕ. ಆ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಸಕ್ಸಸ್‌ ಕಾಣಲಿಲ್ಲ. ಬಳಿಕ ವಿಜಯ್‌ ದೇವರಕೊಂಡ ಜೊತೆಗೆ ನಟಿಸಿದ ‘ಗೀತ ಗೋವಿಂದಂ’ ಸಿನಿಮಾದ ಯಶಸ್ಸು ಅವರಿಗೆ ತೆಲುಗಿನಲ್ಲಿ ಅವಕಾಶದ ಬಾಗಿಲು ತೆರೆಯಿತು.

ಮತ್ತೆ ‘ಡಿಯರ್‌ ಕಾಮ್ರೆಡ್‌’ ಚಿತ್ರದಲ್ಲಿ ದೇವರಕೊಂಡ ಜೊತೆಗೆ ನಟಿಸಿದರೂ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದಿಲ್ಲದೆ ಸೋತು ಹೋಯಿತು. ಆದರೆ, ರಶ್ಮಿಕಾ ತನ್ನ ಮೋಹಕ ಚೆಲುವಿನ ಮೂಲಕವೇ ಟಾಲಿವುಡ್‌ನಲ್ಲಿ ಅವಕಾಶಗಳನ್ನು ಬಾಚಿಕೊಂಡಿದ್ದು ಎಲ್ಲರಿಗೂ ಗೊತ್ತು.

ಪ್ರಸ್ತುತ ರಶ್ಮಿಕಾ ಸ್ಟಾರ್‌ ನಟರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ಖುಷಿಯಲ್ಲಿದ್ದಾರೆ. ‘ಟಾಲಿವುಡ್‌ ಪ್ರಿನ್ಸ್‌’ ಮಹೇಶ್‌ಬಾಬು ನಾಯಕರಾಗಿರುವ ‘ಸರಿಲೇರು ನೀಕೆವ್ವರು’ ಚಿತ್ರದಲ್ಲೂ ಅವರೇ ನಾಯಕಿ. ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ನಟ ನಿತಿನ್‌ ಜೊತೆಗೆ ನಟಿಸಿರುವ ‘ಭೀಷ್ಮ’ ಚಿತ್ರ ಫೆಬ್ರುವರಿಯಲ್ಲಿ ತೆರೆ ಕಾಣಲಿದೆ. ಈ ನಡುವೆಯೇ ನಟ ಅಲ್ಲು ಅರ್ಜುನ್‌ ಅವರ ಹೊಸ ಸಿನಿಮಾದಲ್ಲೂ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಪ್ರೀಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಶೂಟಿಂಗ್‌ ಶುರುವಾಗಲಿದೆ.

ADVERTISEMENT

ಕಳೆದ ಏಪ್ರಿಲ್‌ನಲ್ಲಿ ತೆರೆಕಂಡ ನಾನಿ ನಟನೆಯ ತೆಲುಗಿನ ‘ಜೆರ್ಸಿ’ ಚಿತ್ರ ಹಿಂದಿಗೆ ರಿಮೇಕ್‌ ಆಗುತ್ತಿರುವುದು ಎಲ್ಲರಿಗೂ ಗೊತ್ತು. ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿದ್ದ ಈ ಚಿತ್ರದಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿದ್ದರು. ಇದಕ್ಕೆ ಆ್ಯಕ್ಷನ್‌ ಹೇಳಿದ್ದು ಗೌತಮ್‌ ತಿನ್ನನೂರಿ. ಹಿಂದಿಯಲ್ಲಿಯೂ ಈ ಚಿತ್ರವನ್ನು ಅವರೇ ನಿರ್ದೇಶಿಸುತ್ತಿದ್ದು, ನಾನಿ ನಿಭಾಯಿಸಿದ್ದ ಪಾತ್ರವನ್ನು ಶಾಹಿದ್‌ ಕಪೂರ್‌ ನಿಭಾಯಿಸಲಿದ್ದಾರೆ.

ಅಂದಹಾಗೆ ಶ್ರದ್ಧಾ ಶ್ರೀನಾಥ್‌ ನಿರ್ವಹಿಸಿದ್ದ ಪಾತ್ರದಲ್ಲಿ ನಟಿಸುವಂತೆ ಚಿತ್ರತಂಡ ರಶ್ಮಿಕಾಗೆ ಕೇಳಿತ್ತಂತೆ. ಆದರೆ, ಅವರು ತೆಲುಗಿನ ಬಿಗ್‌ಬಜೆಟ್‌ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ, ದಿನಾಂಕದ ಸಮಸ್ಯೆಯಿಂದಾಗಿ ಬಾಲಿವುಡ್‌ ಪ್ರವೇಶಿಸುವ ಅವಕಾಶವನ್ನು ನಿರಾಕರಿಸಿದ್ದಾರೆ ಎನ್ನುತ್ತವೆ ಮೂಲಗಳು.

ಮತ್ತೊಂದು ಮೂಲದ ಪ್ರಕಾರ ರಶ್ಮಿಕಾ ಅವರು ದುಬಾರಿ ಸಂಭಾವನೆ ನೀಡುವಂತೆ ಬೇಡಿಕೆ ಮುಂದಿಟ್ಟರಂತೆ. ಹಾಗಾಗಿಯೇ, ನಿರ್ಮಾಪಕರು ರಶ್ಮಿಕಾ ಬದಲಿಗೆ ಆ ಪಾತ್ರಕ್ಕೆ ‘ಬಾಟ್ಲಹೌಸ್‌’ ಚಿತ್ರದ ಖ್ಯಾತಿಯ ನಟಿ ಮೃಣಾಲ್‌ ಠಾಕೂರ್‌ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.