ADVERTISEMENT

ವಿಶ್ವ ಪರಿಸರ ದಿನ ಪ್ಲಾಸ್ಟಿಕ್‌ ತ್ಯಜಿಸಲು ಅರ್ಜುನ್ ಕರೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 2:35 IST
Last Updated 6 ಜೂನ್ 2020, 2:35 IST
ಅರ್ಜುನ್‌ ಕಪೂರ್‌
ಅರ್ಜುನ್‌ ಕಪೂರ್‌   

ನಟ ಅರ್ಜುನ್ ಕಪೂರ್‌ ‘ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತ್ಯಜಿಸಿ’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕರೆ ನೀಡಿದ್ದಾರೆ. ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಿರುವ ಅರ್ಜುನ್‌ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ಹಾನಿಯ ಕುರಿತೂ ಮಾತನಾಡಿದ್ದಾರೆ.

‘ನಮ್ಮ ದೈನಂದಿನ ಜೀವನದಲ್ಲಿ ನಾವು ಪ್ಲಾಸ್ಟಿಕ್‌ ಬಳಸುವುದನ್ನು ಕಡಿಮೆ ಮಾಡಿದರೆ ಪರಿಸರವನ್ನು ಉಳಿಸಬಹುದು. ನಮ್ಮಿಂದ ಅದು ಸಾಧ್ಯ. ನಮಗೆ ತಿಳಿದೊ ತಿಳಿಯದೆಯೋ ನಾವು ಮಾಡಿದ ತಪ್ಪಿಗೆ ಈಗ ವನ್ಯಜೀವಿಗಳು ಹಾಗೂ ಜಲಚರ ಜೀವಿಗಳು ಸಂಕಟ ಅನುಭವಿಸುತ್ತಿವೆ. ಇದನ್ನೆಲ್ಲಾ ನೋಡಿದಾಗ ಭವಿಷ್ಯದ ಜನಾಂಗದ ಉಳಿವಿನ ಬಗ್ಗೆ ಭಯ ಮೂಡುತ್ತದೆ. ಈಗ ನಾವು ಬಳಸುತ್ತಿರುವ ಪ್ಲಾಸ್ಟಿಕ್‌ನಲ್ಲಿ ಕೇವಲ ಶೇ 9 ರಷ್ಟನ್ನು ಮಾತ್ರ ಮರುಬಳಕೆ ಮಾಡಲಾಗುತ್ತಿದೆ. ಉಳಿದ ಶೇ 91 ರಷ್ಟು ಮರುಬಳಕೆಗೆ ಸಾಧ್ಯವಾಗದ ಪ್ಲಾಸ್ಟಿಕ್‌ ಅನ್ನು ನಾವು ಬಳಸುತ್ತಿದ್ದೇವೆ. ನಾನು ಇಲ್ಲಿಯವರೆಗೆ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಸುತ್ತಿದ್ದು ಇವತ್ತಿಂದ ಮೆಟಲ್‌ ಬಾಟಲಿಯನ್ನು ಬಳಸುತ್ತಿದ್ದೇನೆ. ಇದು ಸಣ್ಣ ಬದಲಾವಣೆಯೇ ಇರಬಹುದು. ಆದರೆ ಸಣ್ಣ ಸಣ್ಣ ಬದಲಾವಣೆಯೇ ಮುಂದಿನ ದೊಡ್ಡ ಬದಲಾವಣೆಗೆ ನಾಂದಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ನಾನು ಕ್ಲೈಮೆಟ್ ವಾರಿಯರ್ಸ್‌ನೊಂದಿಗೆ ಕೈ ಜೋಡಿಸಿ ಪರಿಸರ ಉಳಿಸುತ್ತೇನೆ’ ಎಂದಿದ್ದಾರೆ.

ನಟಿ ಭೂಮಿ ಪಡ್ನೆಕರ್‌ ಜೊತೆ ಕೈ ಜೋಡಿಸುತ್ತೇನೆ ಎಂದಿರುವ ಅರ್ಜುನ್‌ ‘ಪರಿಸರ ಉಳಿಸುವುದು ಕೇವಲ ನಮ್ಮ ಮುಂದಿನ ಜನಾಂಗದ ಉಳಿವಿಗೆ ಮಾತ್ರವಲ್ಲ, ವನ್ಯಜೀವಿಗಳು ಹಾಗೂ ಜಲಚರಗಳ ಉಳಿವಿಗೂ ಪರಿಸರ ಅಷ್ಟೇ ಮುಖ್ಯ’ ಎಂದಿದ್ದಾರೆ.

ADVERTISEMENT

ಅಲ್ಲದೇ ಭೂಮಿ ಪಡ್ನೆಕರ್ ಕ್ಲೈಮೆಟ್‌ ವಾರಿಯರ್ಸ್‌ನ ನೇತೃತ್ವ ವಹಿಸಿರುವುದಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ.

ಈ ಹಿಂದೆ ಪರಿಸರ ಉಳಿಸಲು ತನ್ನ ಜೊತೆ ಕೈ ಜೋಡಿಸಿ ಎಂದು ಸೆಲೆಬ್ರೆಟಿಗಳ ಜೊತೆ ಭೂಮಿ ಕೇಳಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ್ದ ಅನುಷ್ಕಾ ಶರ್ಮಾ, ಅಮಿತಾಬ್ ಬಚ್ಚನ್‌ ಹಾಗೂ ಅಕ್ಷಯ್‌ ಕುಮಾರ್ ಸೇರಿದಂತೆ ಕೆಲ ಬಾಲಿವುಡ್‌ ಸಿನಿತಾರೆಯರು ಅವರೊಂದಿಗೆ ಸೇರಿಕೊಂಡಿದ್ದರು. ಭೂಮಿ ಪರಿಸರವನ್ನು ಉಳಿಸುವ ವಿಧಾನ ಹಾಗೂ ಪರಿಸರದಲ್ಲಿನ ಉಳಿದ ಜೀವಿಗಳು ಬದುಕಲು ಯಾವ ರೀತಿ ಸಹಾಯ ಮಾಡಬೇಕು ಎಂಬ ಬಗ್ಗೆ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.