ADVERTISEMENT

ಭರ್ಜರಿಯಾಗಿರಲಿದೆ ‘ಟಾಕ್ಸಿಕ್‌’ ಆ್ಯಕ್ಷನ್ಸ್‌: 45 ದಿನ ಸತತ ಶೂಟಿಂಗ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 23:30 IST
Last Updated 25 ಆಗಸ್ಟ್ 2025, 23:30 IST
   

ಯಶ್‌ ನಟನೆಯ 19ನೇ ಸಿನಿಮಾ ‘ಟಾಕ್ಸಿಕ್‌’ 2026ರ ಮಾರ್ಚ್‌ 19ರಂದು ತೆರೆಕಾಣಲಿದೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾದ ಮುಖ್ಯ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಇದೀಗ ಚಿತ್ರತಂಡ ಆರಂಭಿಸಿದೆ. ಸತತ 45 ದಿನ ಈ ಆ್ಯಕ್ಷನ್‌ ಸೀಕ್ವೆನ್ಸ್‌ಗಳ ಶೂಟಿಂಗ್‌ ನಡೆಯಲಿದೆ. 

ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್‌ ಆಗಿ ರಿಲೀಸ್‌ ಆಗಲಿದೆ. ಹಾಲಿವುಡ್‌ನ ‘ಜಾನ್‌ ವಿಕ್‌’, ‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌’, ‘ವಾರಿಯರ್‌’ ಮುಂತಾದ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೆ.ಜೆ.ಪೆರ್‍ರಿ ‘ಟಾಕ್ಸಿಕ್‌’ನ ಸಾಹಸ ದೃಶ್ಯಗಳ ಸಂಯೋಜನೆಯ ನೇತೃತ್ವ ವಹಿಸಿದ್ದಾರೆ. 

45 ದಿನ ಸತತ ಶೂಟಿಂಗ್‌:

ADVERTISEMENT

ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಮುಂಬೈನಲ್ಲಿ 45 ದಿನಗಳ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಭಾರತೀಯ ಸಿನಿಮಾದಲ್ಲಿ ಹಿಂದೊಂದೂ ಈ ಪ್ರಮಾಣದಲ್ಲಿ ಆ್ಯಕ್ಷನ್‌ ಸೀಕ್ವೆನ್ಸ್‌ಗಳನ್ನು ಸೆರೆಹಿಡಿಯಲಾಗಿಲ್ಲ ಎಂದಿದೆ ಚಿತ್ರತಂಡ. ಈ ಹಿಂದಿನ ಸಾಹಸ ದೃಶ್ಯಗಳಿಗೆ ವಿದೇಶಿ ಸಾಹಸ ತಜ್ಞರನ್ನು ಕರೆತಂದಿದ್ದ ಪೆರ್‍ರಿ, ಭಾರತೀಯ ಸಾಹಸ ಕಲಾವಿದರ ಕೆಲಸ, ಶ್ರದ್ಧೆಯನ್ನು ಗಮನಿಸಿ ಅವರೊಂದಿಗೇ ಈ ಭಾಗದ ಚಿತ್ರೀಕರಣ ಆರಂಭಿಸಿದ್ದಾರೆ. ‘ಪ್ರಸ್ತುತ ಒಂದು ಮುಖ್ಯ ಸೀಕ್ವೆನ್ಸ್‌ ಶೂಟಿಂಗ್‌ ಮಾಡುತ್ತಿದ್ದೇವೆ. ಇದೊಂದು ಸವಾಲಾಗಿದ್ದು, ಇಂಥ ಸವಾಲು ನನಗಿಷ್ಟ’ ಎಂದಿದ್ದಾರೆ ಪೆರ್‍ರಿ. 

ಈ ನಿರ್ಣಾಯಕ ಸೀಕ್ವೆನ್ಸ್‌ ಅನ್ನು ಪೆರ್‍ರಿ, ಯಶ್‌, ವೆಂಕಟ್‌ ಕೆ.ನಾರಾಯಣ, ಗೀತು ಮೋಹನ್‌ದಾಸ್‌ ಹಾಗೂ ಈ ಚಿತ್ರದ ವಿಎಫ್‌ಎಕ್ಸ್‌ ಕೆಲಸ ಮಾಡುತ್ತಿರುವ ಡಿಎನ್‌ಇಜಿ ಸಂಸ್ಥೆ ಜೊತೆಗೂಡಿ ಯೋಜಿಸಿದೆ. 2024ರ ಆಗಸ್ಟ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರತಂಡ ಮುಂಬೈಗೆ ಹೆಜ್ಜೆ ಇಟ್ಟಿತ್ತು. ಈ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ನಿರ್ಮಾಣ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.