ADVERTISEMENT

Ayyana Mane Web Series: ಖುಷಿಗೆ ಸಿನಿಮಾವೇ ಖುಷಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 23:52 IST
Last Updated 24 ಏಪ್ರಿಲ್ 2025, 23:52 IST
ಖುಷಿ ರವಿ
ಖುಷಿ ರವಿ   

ಖುಷಿ ರವಿ ನಟಿಸಿರುವ ‘ಅಯ್ಯನ ಮನೆ’ ವೆಬ್‌ ಸಿರಿಸ್‌ ಇಂದು ಜಿ5 ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಜೊತೆಗೆ ‘ನಾಕು ತಂತಿ’ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಿವೆ. ತಮ್ಮ ಸಿನಿಪಯಣದ ಕುರಿತು ಅವರು ಮಾತನಾಡಿದ್ದಾರೆ...

‘ರಮೇಶ್‌ ಇಂದಿರ ಜೊತೆ ಕೆಲಸ ಮಾಡಬೇಕೆಂದು ಬಹಳ ಆಸೆಯಿತ್ತು. ಅವರು ನಟ, ಬರಹಗಾರ, ನಿರ್ದೇಶಕ. ‘ಅಯ್ಯನ ಮನೆ’ ವೆಬ್‌ ಸಿರಿಸ್‌ಗೆ ಕರೆದರು. ಇದರಲ್ಲಿ ಜಾಜಿ ಎಂಬ ಪಾತ್ರ ಮಾಡಿದ್ದೇನೆ. ಅಯ್ಯನ ಮನೆಗೆ ಸೊಸೆಯಾಗಿ ಬಂದೆ. ನಾನು ನಿರ್ದೇಶಕರ ನಟಿ. ಅವರು ಹೇಳಿದ್ದನ್ನು ಚಾಚು ತಪ್ಪದೇ ಮಾಡುತ್ತೇನೆ. ಹೀಗಾಗಿ ನನಗೆ ಈ ಪಾತ್ರವಾಗಲಿ, ಚಿತ್ರೀಕರಣವಾಗಲಿ ಸವಾಲು ಎನಿಸಲಿಲ್ಲ’ ಎಂದು ಮಾತು ಪ್ರಾರಂಭಿಸಿದರು ಖುಷಿ. 

ದಿಯಾ ಚಿತ್ರದಿಂದ ಜನಪ್ರಿಯರಾದ ಖುಷಿ ತೆಲುಗು, ತಮಿಳಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ನಾಯಕಿಯಾದ ಬಳಿಕವೂ ಆಲ್ಬಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ‘ಬಡ್ಡಿ’ ಎಂಬ ತಮಿಳು ಆಲ್ಬಂ ಸಾಂಗ್‌ ಎರಡು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದು, ಮಣಿರತ್ನಂ ಪ್ರೆಸೆಂಟ್‌ ಮಾಡಿದ್ದಾರೆ. 

ADVERTISEMENT

‘ಸದ್ಯದ ಚಿತ್ರಮಂದಿರಗಳ ಪರಿಸ್ಥಿತಿ ನೋಡಿದರೆ ಜನರನ್ನು ಕರೆಸುವುದು ಕಷ್ಟವಾಗುತ್ತಿದೆ. ನಾವು ಟ್ರೆಂಡ್‌ ಪ್ರಕಾರ ಬದಲಾಗಬೇಕು ಅನ್ನಿಸುತ್ತದೆ. ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆದರೆ ನಟಿಗೆ ಸಿಗುವ ಬೆಲೆಯೇ ಬೇರೆ. ಇವತ್ತು ಸಿನಿಮಾವೊಂದನ್ನೇ ಮಾಡುತ್ತೇನೆ ಎಂದು ಕುಳಿತುಕೊಂಡರೆ ಕೆಲಸವೇ ಸಿಗುವುದಿಲ್ಲ. ಹೀಗಾಗಿ ವೆಬ್‌ ಸಿರಿಸ್‌ಗೆ ಕಾಲಿಟ್ಟೆ. ಬೇರೆ ಭಾಷೆಯವರು ಇದನ್ನು ನೋಡಿ ನನಗೆ ಅಲ್ಲಿಂದಲೂ ಅವಕಾಶ ಸಿಗಬಹುದೆಂದು ಮಾಡಿದೆ. ನಯನತಾರಾರಂಥ ದೊಡ್ಡ ನಟಿಯರೇ ಇವತ್ತು ಸಿನಿಮಾ ಜೊತೆಗೆ ವೆಬ್‌ ಸಿರಿಸ್‌ ಕೂಡ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅವರು. 

ಇವರ ನಟನೆಯ ‘ಫುಲ್‌ ಮಿಲ್ಸ್‌’ ಚಿತ್ರ ರೆಡಿಯಾಗಿ ಬಿಡುಗಡೆಗೆ ಕಾದಿದೆ. ‘ಸನ್‌ ಆಫ್‌ ಮುತ್ತಣ್ಣ’ ಚಿತ್ರದಲ್ಲಿ ಪ್ರಣಮ್‌ ದೇವರಾಜ್‌ಗೆ ಜೋಡಿಯಾಗಿದ್ದಾರೆ. ‘ನಾಕುತಂತಿ’ ಎಂಬ ಸಿನಿಮಾ ಸಿದ್ಧವಾಗಿದೆ. ನಾಲ್ಕು ಹೆಣ್ಣುಮಕ್ಕಳ ಕಥೆಯ ಅದ್ಭುತವಾದ ಸಿನಿಮಾ. ಒಳ್ಳೆಯ ಪ್ರೆಸೆಂಟರ್‌ಗಾಗಿ ಕಾಯುತ್ತಿದ್ದೇವೆ. ನಾಲ್ಕು ಕಥೆಯನ್ನು ನಾಲ್ಕು ಯುವ ನಿರ್ದೇಶಕರು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೇಲೆ ಬಹಳ ಕೆಲಸ ಮಾಡುತ್ತಿದ್ದೇವೆ. ಮತ್ತೊಂದು ಚಿತ್ರ ‘ಒನ್‌ ವೇ’ ಹಿಂದಿನ ವರ್ಷ ಚಿತ್ರೀಕರಣ ಮಾಡಿದ್ದು. ಇಡೀ ಸಿನಿಮಾದಲ್ಲಿ ಎರಡೇ ಪಾತ್ರಗಳು. ಇದೊಂದು ಪ್ರಯೋಗಾತ್ಮಕ ಸಿನಿಮಾ. ಬೇಬಿ ಹನಿಮೂನ್‌ ಕಾನ್ಸೆಪ್ಟ್‌ ಇಟ್ಟುಕೊಂಡು ಮಾಡಿರುವ ವಿಭಿನ್ನ ಸಿನಿಮಾ. ‘ನೀತಿ’ ಎಂಬ ಒಂದು ಸಿನಿಮಾ ಮಾಡಿದ್ದೇವೆ. ಇವಿಷ್ಟು ಬಿಡುಗಡೆಗೆ ಸಿದ್ಧವಿದೆ’ ಎಂದು ಮಾಹಿತಿ ನೀಡಿದರು.

ಮದುವೆಯಾಗಿ, ಮಗುವಾದ ಬಳಿಕ ಚಿತ್ರರಂಗದಲ್ಲಿ ಸೂಕ್ತ ನೆಲೆ ಕಂಡುಕೊಂಡವರು ಇವರು.  ‘ಮದುವೆಯಾಗಿದೆ, ಮಗುವಿದೆ. ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಕೆಲವರಿಗೆ ಇರುತ್ತದೆ. ಆ ತಪ್ಪು ಕಲ್ಪನೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಮದವೆಯಾಗದ ನಟಿಯರು ಯಾವ ಬದ್ಧತೆಯಿಂದ ಕೆಲಸ ಮಾಡುತ್ತಾರೋ ಅದೇ ಬದ್ಧತೆಯಿಂದ ನಾನು ಕೆಲಸ ಮಾಡುತ್ತೇನೆ. ನನ್ನ ಕುರಿತು ನಂಬಿಕೆ ಇರುವವರೊಂದಿಗೆ, ನನಗೆ ಗೌರವ ನೀಡುವವರ ಜೊತೆ ಕೆಲಸ ಮುಂದುವರಿಸುತ್ತೇನೆ’ ಎಂದು ಮಾತಿಗೆ ವಿರಾಮವಿತ್ತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.