ADVERTISEMENT

Discovery Plus Docuseries: ಕುತೂಹಲ ತಣಿಸುವ ‘ಲೆಜೆಂಡ್ಸ್ ಆಫ್ ದಿ ರಾಮಾಯಣ’

ಏ.7ರಿಂದ ‘ಡಿಸ್ಕವರಿ ಪ್ಲಸ್’ನಲ್ಲಿ ಸಾಕ್ಷ್ಯಚಿತ್ರ ಸರಣಿ ಪ್ರಸಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 20:30 IST
Last Updated 3 ಏಪ್ರಿಲ್ 2022, 20:30 IST
‘ಲೆಜೆಂಡ್ಸ್ ಆಫ್ ದಿ ರಾಮಾಯಣ’ ಪೋಸ್ಟರ್ ಹಿನ್ನೆಲೆಯೊಂದಿಗೆ ಲೇಖಕ, ನಿರೂಪಕ ಅಮೀಶ್ ತ್ರಿಪಾಠಿ (ಚಿತ್ರ ಕೃಪೆ: ಡಿಸ್ಕವರಿ ಪ್ಲಸ್)
‘ಲೆಜೆಂಡ್ಸ್ ಆಫ್ ದಿ ರಾಮಾಯಣ’ ಪೋಸ್ಟರ್ ಹಿನ್ನೆಲೆಯೊಂದಿಗೆ ಲೇಖಕ, ನಿರೂಪಕ ಅಮೀಶ್ ತ್ರಿಪಾಠಿ (ಚಿತ್ರ ಕೃಪೆ: ಡಿಸ್ಕವರಿ ಪ್ಲಸ್)   

ಮುಂಬೈ: ಶ್ರೀರಾಮಚಂದ್ರನಿಗೆ ಒಬ್ಬ ಅಕ್ಕ ಇದ್ದಳಂತೆ, ನಿಜವೇ? ರಾಮ 14 ವರ್ಷ ಮಾತ್ರ ವನವಾಸ ಮಾಡಬೇಕೆಂದು ಕೈಕೇಯಿ ಹೇಳಲು ಕಾರಣವೇನು? ನಾಶಿಕ್ ನಗರಕ್ಕೆ ಹೇಗೆ ಆ ಹೆಸರು ಬಂತು?

ರಾಮಾಯಣದ ಬಗ್ಗೆ ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರಿಸುವ ಯತ್ನವಾಗಿ ಏ.7ರಿಂದ ‘ಲೆಜೆಂಡ್ಸ್ ಆಫ್ ದಿ ರಾಮಾಯಣ ವಿದ್ ಅಮೀಶ್’ ಸಾಕ್ಷ್ಯಚಿತ್ರ ಸರಣಿ (ಡಾಕ್ಯೂ ಸೀರೀಸ್) ಪ್ರಸಾರ ಮಾಡಲಾಗುವುದು ಎಂದು ‘ಡಿಸ್ಕವರಿ ಪ್ಲಸ್’ ಒಟಿಟಿ ವೇದಿಕೆ ತಿಳಿಸಿದೆ.

ರಾಮಾಯಣದ ಪಾತ್ರಗಳು, ಅದರಲ್ಲಿ ಬರುವ ಸ್ಥಳಗಳು, ಅವುಗಳ ಐತಿಹಾಸಿಕ, ಭೌಗೋಳಿಕ ಮಹತ್ವ, ದೇಶದ ವಿವಿಧೆಡೆಗಳಲ್ಲಿ ರಾಮಾಯಣ ಆಧಾರಿತವಾಗಿ ಆಚರಣೆಯಲ್ಲಿರುವ ಸಂಸ್ಕೃತಿ ಹಾಗೂ ಇನ್ನೂ ಅನೇಕ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ ಸಾಕ್ಷ್ಯಚಿತ್ರ ಸರಣಿ ರೂಪಿಸಲಾಗಿದೆ. ಮುಂಬರುವ ರಾಮನವಮಿ ಪ್ರಯುಕ್ತ ಇದನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ‘ಡಿಸ್ಕವರಿ ಪ್ಲಸ್’ ಹೇಳಿದೆ.

ADVERTISEMENT

ಲೇಖಕ ಅಮೀಶ್ ತ್ರಿಪಾಠಿ ಅವರ ನಿರ್ದೇಶನ, ನಿರೂಪಣೆಯಲ್ಲಿ ಸರಣಿ ಮೂಡಿಬರಲಿದೆ. ‘ವೈಡ್ ಆಂಗಲ್ ಫಿಲಮ್ಸ್’ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಈ ಸಾಕ್ಷ್ಯಚಿತ್ರ ಸರಣಿಗೆ ಸುಜಾತಾ ಕುಲಶ್ರೇಷ್ಠ ಹಾಗೂ ಅಭಿಮನ್ಯು ತಿವಾರಿ ಅವರ ಸಹ ನಿರ್ದೇಶನವಿದೆ.

‘ಲೆಜೆಂಡ್ಸ್ ಆಫ್ ದಿ ರಾಮಾಯಣ’ ಪ್ರಚಾರಾರ್ಥ ಮುಂಬೈಯ ತಾಜ್ ಸಾಂತಾಕ್ರೂಜ್‌ ಹೋಟೆಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿಅಮೀಶ್ ತ್ರಿಪಾಠಿ ಮತ್ತುಮೇಘಾ ಟಾಟ

ಒಟ್ಟು ಮೂರು ಸಂಚಿಕೆಗಳಿವೆ. ಪ್ರತಿ ಸಂಚಿಕೆ 45ರಿಂದ 50 ನಿಮಿಷ ಇರಲಿದೆ.ಅಯೋಧ್ಯೆ, ನಾಸಿಕ್‌, ರಾಮೇಶ್ವರ ಸೇರಿ ವಿವಿಧೆಡೆ ಹಾಗೂ ಶ್ರೀಲಂಕಾದಲ್ಲೂ ಚಿತ್ರೀಕರಣ ನಡೆದಿದೆ. ಇದಕ್ಕಾಗಿ ‘ಡಿಸ್ಕವರಿ ಪ್ಲಸ್’ ತಂಡವು 5,000 ಕಿ.ಮೀ ಹೆಚ್ಚು ಪ್ರಯಾಣ ಮಾಡಿದೆ.ಹಂಪಿಯ ಆನೆಗೊಂದಿ, ಅಂಜನಾದ್ರಿ ಬೆಟ್ಟದಲ್ಲೂ ಚಿತ್ರೀಕರಣ ನಡೆಸಲಾಗಿದೆ. ರಾಮಸೇತುವಿನ ವೈಜ್ಞಾನಿಕ ಹಿನ್ನೆಲೆ ಕುರಿತು ಭೂಗೋಳಶಾಸ್ತ್ರಜ್ಞರ ಅಧ್ಯಯನ ವರದಿ ಆಧಾರಿತ ಚಿತ್ರಣವನ್ನೂ ಕಟ್ಟಿಕೊಡಲಾಗಿದೆ ಎಂದು ‘ಡಿಸ್ಕವರಿ ಪ್ಲಸ್’ ತಂಡ ಹೇಳಿದೆ.

ಎಫ್‌ಪಿವಿ ಡ್ರೋಣ್‌ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದೇವೆ. ಸಂಪೂರ್ಣ ಹೊರಾಂಗಣದಲ್ಲೇ ಚಿತ್ರೀಕರಣ ನಡೆದಿದೆ ಎಂದುಡಿಸ್ಕವರಿ ಕಮ್ಯುನಿಕೇಷನ್ಸ್‌ನದಕ್ಷಿಣ ಏಷ್ಯಾ ವಿಭಾಗದವ್ಯವಸ್ಥಾಪಕ ನಿರ್ದೇಶಕಿಮೇಘಾ ಟಾಟ ಅವರು ತಿಳಿಸಿದ್ದಾರೆ.

****

ಇತಿಹಾಸ, ಸಂಸ್ಕೃತಿ, ವೈಜ್ಞಾನಿಕ ತಳಹದಿಯೊಂದಿಗೆ ಮನರಂಜನೆ ಒದಗಿಸಲೂ ಯತ್ನಿಸಿದ್ದೇವೆ. ರಾಮಾಯಾಣದಲ್ಲಿ ಉಲ್ಲೇಖಿಸಿರುವ ಅನೇಕ ಸ್ಥಳಗಳ ನೈಜ ಚಿತ್ರಣ ಕಟ್ಟಿಕೊಡಲು ಪ್ರಯತ್ನಿಸಿದ್ದೇವೆ.

– ಅಮೀಶ್ ತ್ರಿಪಾಠಿ, ಲೇಖಕ, ನಿರೂಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.