ADVERTISEMENT

ನೂರು ಗಾಯಕರಿಂದ 14 ಭಾಷೆಗಳಲ್ಲಿ ಗೀತನಮನ

​ಪ್ರಜಾವಾಣಿ ವಾರ್ತೆ
Published 1 ಮೇ 2020, 19:30 IST
Last Updated 1 ಮೇ 2020, 19:30 IST
ಗಾಯಕ ವಿಜಯಪ್ರಕಾಶ್
ಗಾಯಕ ವಿಜಯಪ್ರಕಾಶ್   

ನೂರು ಗಾಯಕರು, ಹದಿನಾಲ್ಕು ಭಾಷೆ, ಒಂದೇ ಗೀತೆ. ಅದೇ ‘ಒಂದು ದೇಶ, ಒಂದು ಧ್ವನಿ...’ ಗೀತ ಗಾಯನ.

ಇದುಕೋವಿಡ್‌ 19 ವಿರುದ್ಧದ ಹೋರಾಟಕ್ಕಾಗಿ ಸ್ಥಾಪಿಸಿರುವ ‘ಪಿಎಂ ಕೇರ್‌’ ‌ನಿಧಿಗೆ ದೇಣಿಗೆ ನೀಡುವುದನ್ನು ಉತ್ತೇಜಿಸುವುದಕ್ಕಾಗಿ ದೇಶದ ನೂರು ಖ್ಯಾತ ಗಾಯಕರು ಸೇರಿ ಹದಿನಾಲ್ಕು ಭಾಷೆಗಳಲ್ಲಿ ಹಾಡಿರುವ ಗೀತ ಗಾಯನ ಕಾರ್ಯಕ್ರಮ.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಮೇ 3ರಂದು ಈ ಗೀತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಈ ಹಾಡು ಟಿ.ವಿ., ರೇಡಿಯೊ, ಸಾಮಾಜಿಕ ಮಾಧ್ಯಮ, ಅಪ್ಲಿಕೇಷನ್‍ಗಳು, ಒಟಿಟಿ, ವಿಒಡಿ, ಐಎಸ್‍ಪಿ, ಡಿಟಿಎಚ್ ಮತ್ತು ಸಿಆರ್‌ಬಿಟಿಗಳು ಸೇರಿದಂತೆ ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಬಿಡುಗಡೆಯಾಗಲಿದೆ.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ದೇಶದ ವಿವಿಧೆಡೆಗಳಲ್ಲಿರುವ ಗಾಯಕರೂತಮ್ಮ ಮನೆಗಳಿಂದಲೇ ಹಾಡು, ದೃಶ್ಯವನ್ನು ರೆಕಾರ್ಡ್‌ ಮಾಡಿ ಕಳುಹಿಸಿದ್ದಾರೆ. ಇದೊಂದು ಹೊಸ ಪರಿಕಲ್ಪನೆಯಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಗಾಯಕ/ಗಾಯಕಿಯರು ಒಟ್ಟಿಗೆ ಸೇರಿ ಹಾಡುತ್ತಿದ್ದಾರೆ.

ಭಾರತೀಯ ಗಾಯಕರ ಹಕ್ಕುಗಳ ಸಂಘ - ಇಸ್ರಾ (Indian Singers Rights Association -ISRA ) ದ ಸದಸ್ಯರಾಗಿರುವ ಈ ನೂರು ಗಾಯಕರು ಈ ಹಾಡನ್ನು ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳ, ಮರಾಠಿ, ಹಿಂದಿ, ಬಂಗಾಲಿ, ಗುಜರಾತಿ, ಭೋಜ್ಪುರಿ, ಅಸ್ಸಾಮಿ, ಕಾಶ್ಮೀರಿ, ಸಿಂಧಿ, ರಾಜಸ್ಥಾನಿ, ಒಡಿಯಾ ಭಾಷೆಗಳಲ್ಲಿ ಈ ಹಾಡನ್ನು ಹಾಡಲಾಗಿದೆ.

ಖ್ಯಾತ ಗಾಯಕ / ಗಾಯಕಿಯರಾದ ಆಶಾ ಭೋಸ್ಲೆ, ಅನೂಪ್‍ಜಲೋಟಾ, ಅಲ್ಕಾ ಯಾಗ್ನಿಕ್, ಹರಿಹರನ್, ಕೈಲಾಶ್ ಖೇರ್, ಪಂಕಜ್ ಉಧಾಸ್, ಕವಿತಾ ಕೃಷ್ಣಮೂರ್ತಿ, ಕುಮಾರ್ ಸಾನು, ಮಹಾಲಕ್ಷ್ಮಿ ಐಯರ್, ಎಸ್.ಪಿ. ಬಾಲಸುಬ್ರಮಣ್ಯಂ, ಸೋನು ನಿಗಂ, ಸುರೇಶ್ ವಾಡ್ಕರ್, ವಿಜಯ ಪ್ರಕಾಶ್, ಶ್ರೀನಿವಾಸ್, ಉದಿತ್ ನಾರಾಯಣ, ಶಂಕರ್ ಮಹದೇವನ್, ಜಸ್ಬೀರ್‌ ಜಸ್ಸಿಸೇರಿದಂತೆ ನೂರು ಗಾಯಕರು ಈ ಹಾಡನ್ನು ಹಾಡಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ದೇಶದ ವೈದ್ಯಕೀಯ ಸಿಬ್ಬಂದಿಗೆ ಹಾಡನ್ನು ಸಮರ್ಪಿಸುತ್ತಿದ್ದಾರೆ

ವಿಜಯಪ್ರಕಾಶ್ ಸಾಹಿತ್ಯ, ಗಾಯನ

ಬಹುಭಾಷೆಗಳ ಈ ಹಾಡಿನಲ್ಲಿ ಕನ್ನಡದ ಗೀತೆಗೆ ಖ್ಯಾತ ಗಾಯಕ ವಿಜಯಪ್ರಕಾಶ್‌ ಸಾಹಿತ್ಯದ ಸಾಲುಗಳನ್ನು ಬರೆದಿದ್ದಾರೆ. ಜತೆಗೆ ಹಾಡಿದ್ದಾರೆ. ಇವರೊಂದಿಗೆ ಖ್ಯಾತಗಾಯಕಿಯರಾದ ಬಿ.ಕೆ. ಸುಮಿತ್ರ, ಶಮಿತಮಲ್ನಾಡ್ ಕೂಡ ಹಾಡಿದ್ದಾರೆ.

‘ಕನ್ನಡಿಗರು ಎಂದೆಂದೂ ಭಾರತಕ್ಕಾಗಿ ನಿಲ್ಲುವೆವು.. ಒಂದೇ ಮತ ಒಂದೇ ಗುರಿ.. ಎಂಬ ಸಾಹಿತ್ಯದ ಸಾಲುಗಳನ್ನು ಬರೆದು, ಹಾಡಿದ್ದೇನೆ. ಈ ಗಾಯನದಿಂದ ಮನರಂಜನೆಗೂ ಮೀರಿ, ‘ಪಿಎಂ ಕೇರ್‌‘ಗೆ ಏನಾದರೂ ನೆರವಾಗಲಿ ಎಂಬುದು ನಮ್ಮ ಆಶಯ’ ಎಂದರು ವಿಜಯಪ್ರಕಾಶ್.

‘ಈ ಹಾಡಿನಲ್ಲಿ ನಾವು ಕನ್ನಡಿಗರು. ಕನ್ನಡಾಂಬೆಯಂತೆ ಭಾರತಾಂಬೆಯನ್ನೂ ಪೂಜಿಸುತ್ತೇವೆ. ಕರ್ನಾಟಕದ ಸಂಪ್ರದಾಯ, ಇತಿಹಾಸ, ಆಚಾರ ವಿಚಾರಗಳನ್ನು ಗೌರವಿಸುವಷ್ಟೇ ದೇಶವನ್ನೂ ಗೌರವಿಸುತ್ತೇವೆ, ಪ್ರೀತಿಸುತ್ತೇವೆ.. ಎಂದು ಅರ್ಥ ಬರುವ ಸಾಹಿತ್ಯವಿದೆ’ ಎಂದು ಅವರು ವಿವರಿಸಿದರು.

‘ಒಬ್ಬರು ಇಬ್ಬರು ಗಾಯಕರು ಹಾಡುವುದಕ್ಕಿಂತ, ಹೆಚ್ಚು ಗಾಯಕರು ಒಟ್ಟಿಗೆ ಹಾಡಿದಾಗ ಅದರ ಸೊಬಗು, ಸೌಂದರ್ಯ ಹಾಗೂ ಅದರ ಶಕ್ತಿಯೇ ಬೇರೆ.ಕೇಳುಗರು ತಮ್ಮ ನೆಚ್ಚಿನ ಗಾಯಕರ ಧ್ವನಿಯಲ್ಲಿ ಹಾಡು ಕೇಳಿ, ಈ ಕಾರ್ಯಕ್ರಮದ ಉದ್ದೇಶವನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.