ಗಂಡು ಮತ್ತು ಹೆಣ್ಣಿನ ಸಂಬಂಧದ ನಡುವಿನ ಸಾಕಷ್ಟು ಸೂಕ್ಷ್ಮ ವಿಚಾರಗಳನ್ನೇ ಕಥೆಯಾಗಿ ಹೊಂದಿರುವ ಚಿತ್ರ ‘ದೂರ ತೀರ ಯಾನ’. ಗಂಡ–ಹೆಂಡತಿ ನಡುವಿನ ಸಂಬಂಧ ಒಂದು ರೀತಿ ‘ಸೀಸಾ’ ಆಟದಂತೆ. ಒಬ್ಬರು ಕೆಳಕ್ಕೆ ಇಳಿದಾಗ ಮತ್ತೊಬ್ಬರು ಕೈಹಿಡಿದು ಮೇಲಕ್ಕೆ ಎತ್ತಲೇಬೇಕು. ಆಗ ಮಾತ್ರ ಬದುಕು ಸಮತೋಲನಗೊಳ್ಳುತ್ತದೆ.ಯಾರೋ ಒಬ್ಬರು ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಆದರೆ ಈಗಿನ ತಲೆಮಾರಿನಲ್ಲಿ ಹೊಂದಾಣಿಕೆ ಎಂಬುದೇ ಬಲು ಕಷ್ಟದ ಮಾತು. ಇದು ಅರ್ಥವಾಗಬೇಕಾದರೆ ಬದುಕಿನಲ್ಲಿ ಆಳಕ್ಕೆ ಇಳಿಯಬೇಕು. ದೂರ ತೀರದಲ್ಲಿ ಪ್ರಯಾಣ ಮಾಡಬೇಕು ಎಂಬುದನ್ನು ಮಂಸೋರೆ ದೃಶ್ಯ ಕಾವ್ಯವಾಗಿ ಹೇಳಿದ್ದಾರೆ.
ಕಥೆಯ ನಾಯಕ ಆಕಾಶ್ ಮತ್ತು ನಾಯಕಿ ಭೂಮಿ ಐದು ವರ್ಷಗಳಿಂದ ಪ್ರೀತಿಸುತ್ತಿರುತ್ತಾರೆ. ಇಬ್ಬರ ನಡುವಿನ ಸಂಬಂಧ ಸರಿ ಬರುತ್ತಿಲ್ಲ. ಸಣ್ಣ, ಸಣ್ಣ ವಿಷಯಗಳಿಗೂ ಕಿತ್ತಾಡಿಕೊಳ್ಳುತ್ತಾರೆ. ಹೀಗಾಗಿ ಮದುವೆಯಾಗದೇ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಇಬ್ಬರೂ ವಾರ ಒಟ್ಟಿಗೆ ಪಯಣಿಸಿ, ಬಳಿಕ ಬೇರೆಯಾಗಲು ನಿರ್ಧಾರ ಮಾಡುತ್ತಾರೆ. ಆ ಒಂದು ವಾರ ಬದುಕಿನ ಪಯಣವೇ ಕಥೆಯಾಗಿದೆ.
ಬೆಂಗಳೂರಿನಿಂದ ಪ್ರಾರಂಭಗೊಳ್ಳುವ ಕಥೆ ಉಡುಪಿ, ಮುರುಡೇಶ್ವರ, ಕುಮಟಾ, ಗೋಕರ್ಣಗಳ ಕಡಲ ತೀರವನ್ನು ಸುತ್ತುತ್ತದೆ. ಚಿತ್ರದ ಬಹುದೊಡ್ಡ ಶಕ್ತಿ ಶೇಖರ್‌ಚಂದ್ರ ಛಾಯಾಚಿತ್ರಗ್ರಹಣ ಮತ್ತು ಅದಕ್ಕೆ ಸರಿಹೊಂದುವ ಕಾರ್ತಿಕ್ ಮತ್ತು ಬಕ್ಕೇಶ್ ಅವರ ಹಿನ್ನೆಲೆ ಸಂಗೀತ. ದೃಶ್ಯ ಮತ್ತು ಸಂಗೀತ ಚಿತ್ರವನ್ನು ಪ್ರಾರಂಭದಿಂದ ಅಂತ್ಯದವರೆಗೂ ಹಿತವಾಗಿಡುತ್ತದೆ. ಹಾಡುಗಳು ಕೂಡ ಕಥೆಯ ಸನ್ನಿವೇಶಗಳೊಂದಿಗೆ ಬಹಳ ಚೆನ್ನಾಗಿ ಬೆರೆತು ಮುದ ನೀಡುತ್ತವೆ.
ಬದುಕಿನ ಕುರಿತಾಗಿ ಆಕಾಶ್ ಕಲ್ಪನೆ ಬೇರೆಯದ್ದು, ಭೂಮಿ ಆಲೋಚನೆಯೇ ಭಿನ್ನ. ಸಾಕಷ್ಟು ಸನ್ನಿವೇಶಗಳು ಬಹುತೇಕ ಎಲ್ಲ ಜೋಡಿಗಳ ನಡುವೆ ನಡೆಯುವ ಘಟನೆಗಳೇ ಆಗಿವೆ. ಹುಡುಗನಿಗೆ ಇಷ್ಟವಾದ ಅಂಗಿ, ಪ್ಯಾಂಟ್ ಹುಡುಗಿಗೆ ಇಷ್ಟವಾಗುವುದಿಲ್ಲ. ಹುಡುಗಿ ಇಷ್ಟಪಡುವ ಜಾಗ ಹುಡುಗನ ಅಭಿರುಚಿಗೆ ತಕ್ಕಂತೆ ಇರುವುದಿಲ್ಲ. ಕಿತ್ತಾಡಿಕೊಂಡು, ಅತ್ತು, ಕರೆದು ಕೊನೆಗೆ ಯಾರೋ ಒಬ್ಬರು ರಾಜಿಯಾಗುತ್ತಾರೆ. ಬದುಕು ಸಹಜ ಸ್ಥಿತಿಗೆ ಬರುತ್ತದೆ. ಇಂಥ ಒಂದಷ್ಟು ಸಹಜ ಸನ್ನಿವೇಶಗಳು ಚಿತ್ರದ ಉದ್ದಕ್ಕೂ ಕಾಣಸಿಗುತ್ತವೆ.
ಆಕಾಶ್ ಆಗಿ ವಿಜಯ್ ಕೃಷ್ಣ ಬಹಳ ಇಷ್ಟವಾಗುತ್ತಾರೆ. ತಾವೊಬ್ಬ ಭರವಸೆಯ ನಟ ಎಂಬುದನ್ನು ಸಾಕಷ್ಟು ಕಡೆ ಸಾಬೀತುಪಡಿಸುತ್ತಾರೆ. ಪ್ರಿಯಾಂಕ ಒಂದಷ್ಟು ಭಾವನಾತ್ಮಕ ಸನ್ನಿವೇಶಗಳಲ್ಲಿ ಇನ್ನಷ್ಟು ಪಳಗಬೇಕಿತ್ತು ಅನ್ನಿಸುತ್ತದೆ. ಇಡೀ ಕಥೆ ಇವರಿಬ್ಬರ ನಡುವೆಯೇ ನಡೆಯುವುದರಿಂದ ಉಳಿದ ಪಾತ್ರಗಳಿಗೆ ಅಷ್ಟೊಂದು ಮಹತ್ವವಿಲ್ಲ. ಉಳಿದ ಬಹುತೇಕ ಕಲಾವಿದರು ಒಂದೆರಡು ದೃಶ್ಯಗಳಿಗೆ ಅತಿಥಿಗಳಂತೆ ಬಂದು ಹೋಗುತ್ತಾರೆ.
ಇಷ್ಟಾಗಿಯೂ ಕಥೆ ಗಾಢವಾಗಿ ಕಾಡುವುದಿಲ್ಲ. ಹೆಚ್ಚು ತಿರುವುಗಳಿಲ್ಲದೇ, ಹಾಸ್ಯದ ಲೇಪವಿಲ್ಲದೇ ನಿರೂಪಣೆ ಗಂಭೀರವಾಗಿಯೇ ಸಾಗುತ್ತದೆ. ಕೆಲವು ಭಾಗಗಳಲ್ಲಿ ಬದುಕಿನ ಕುರಿತಾದ ಉಪದೇಶ ತುಸು ಹೆಚ್ಚಾದಂತೆ ಭಾಸವಾಗುತ್ತದೆ. ಕಥೆಯನ್ನು ಕೊಂಚ ಗಟ್ಟಿಯಾಗಿಸಿ, ಸಂಬಂಧವನ್ನು ಇನ್ನಷ್ಟು ಭಾವುಕವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದ ಅವಧಿಯನ್ನೂ ಇನ್ನೊಂದು 20 ನಿಮಿಷಗಳಷ್ಟು ಕುಗ್ಗಿಸಬಹುದಿತ್ತು.
ನೋಡಬಹುದಾದ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.