ಪುನೀತ್ ರಾಜ್‌ಕುಮಾರ್ ನಟನೆಯ ‘ಜಾಕಿ’ ಸಿನಿಮಾದ ಆರಂಭಿಕ ಶೀರ್ಷಿಕೆ ‘ಎಕ್ಕ’ ಆಗಿತ್ತು. ಈಗಿನ ‘ಎಕ್ಕ’ ಹೊಸ ಕಥೆಯೊಂದಿಗೆ ಹಳೇ ಮಾದರಿಯಲ್ಲೇ ಬಂದಿದೆ. ಯಾವುದೋ ಒಂದು ಕಾರಣಕ್ಕೆ ಹುಟ್ಟಿದ ಊರು ಬಿಟ್ಟು ನಗರ ಸೇರುವ ನಾಯಕ ಮುಂದೆ ಯಾವುದೋ ಕಾರಣಕ್ಕೆ ಭೂಗತ ಜಗತ್ತಿಗೆ ಹೆಜ್ಜೆ ಇಡುವ, ತಾಯಿ ಪ್ರೀತಿ ಅರಸುವ ಹಲವು ಕಥೆಗಳು ತೆರೆ ಮೇಲೆ ಬಂದಿವೆ. ‘ಜೋಗಿ’ ಈ ಪೈಕಿ ಹಿಟ್ ಸಾಲಿಗೆ ಸೇರಿದ ಚಿತ್ರ. ಇದೇ ಮಾದರಿಯಲ್ಲಿ ಭಿನ್ನವಾದ ಹೊಸ ಕಥೆಯೊಂದನ್ನು ಇಟ್ಟುಕೊಂಡು ರೋಹಿತ್ ಪದಕಿ ‘ಎಕ್ಕ’ ಹೆಣೆದಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಅಂಕ ಗಿಟ್ಟಿಸಿಕೊಳ್ಳುವ ಈ ಕಥೆ ಕ್ಲೈಮ್ಯಾಕ್ಸ್‌ನಲ್ಲಿ ಕೊಂಚ ಎಡವಿದೆ.
‘ಮುತ್ತು’ (ಯುವ ರಾಜ್‌ಕುಮಾರ್) ಪಾರ್ವತಿಪುರದ ‘ರತ್ನ’ನ(ಶೃತಿ) ಪುತ್ರ. ತಾಯಿಯನ್ನು ‘ರತ್ನ’ ಎಂದೇ ಕರೆಯುವಷ್ಟು ಸಲುಗೆ. ಮಗುವಿನಂತೆ ಬೆಳೆದ ಈತ ಕ್ಯಾಬ್ ಡ್ರೈವರ್. ವೃತ್ತಿಯಿಂದ ಬಿಡುವಾದಾಗ ಇಸ್ಪಿಟ್ ಆಟದ ಹವ್ಯಾಸ. ತಾಯಿ, ಗೆಳೆಯರು ಹಾಗೂ ಊರು ಬಿಟ್ಟು ಬೆಂಗಳೂರಿಗೆ ಹೋಗಲೊಲ್ಲದ ಮನಸ್ಸು ಈತನದು. ಇಂತಹ ಸಂದರ್ಭದಲ್ಲಿ ಸ್ನೇಹಿತನೋರ್ವನ ಕಾರಣಕ್ಕೆ ಊರು ಬಿಡುವ ಸಂದರ್ಭ ಬರುತ್ತದೆ. ಬೆಂಗಳೂರಿಗೆ ಬಂದು ಕ್ಯಾಬ್ ಡ್ರೈವರ್ ವೃತ್ತಿಯನ್ನು ಮುಂದುವರಿಸುವ ‘ಮುತ್ತು’ವಿಗೆ ಹೆಜ್ಜೆ ಇಟ್ಟ ಕೂಡಲೇ ‘ನಂದಿನಿ’(ಸಂಜನಾ ಆನಂದ್) ಜೊತೆ ಪ್ರೇಮ. ‘ಮುತ್ತು’ ಕೆಲಸ ನಿರ್ವಹಿಸುತ್ತಿರುವಾಗಲೇ ನಡೆದ ಘಟನೆಯೊಂದು ಕಥೆಗೆ ತಿರುವು ನೀಡುತ್ತದೆ. ಕ್ಲೈಮ್ಯಾಕ್ಸ್ ತಲುಪುತ್ತಾ ಮಗುವಾಗಿದ್ದ ‘ಮುತ್ತು’ ಪರಿಸ್ಥಿತಿಯಿಂದಾಗಿ ಮೃಗವಾಗುವ ಮತ್ತೆ ಕಥಾಂತ್ಯದಲ್ಲಿ ಮಗುವಾಗುವ ಕಥೆಯೇ ‘ಎಕ್ಕ’.
ಕ್ಲೈಮ್ಯಾಕ್ಸ್‌ನಿಂದ ಕಥೆಯನ್ನು ಆರಂಭಿಸುತ್ತಾ ನಾಯಕನ ಹಿನ್ನೆಲೆಯ ವಿವರಣೆಗೆ ಇಳಿಯುವ ಶೈಲಿಯಲ್ಲಿ ಚಿತ್ರವಿದೆ. ‘ರತ್ನನ್‌ಪ್ರಪಂಚ’ದಲ್ಲಿ ತಾಯಿ–ಮಗನ ನಡುವೆ ಒಂದು ಗಾಢವಾದ ಭಾವನಾತ್ಮಕ ಕಥೆ ಹೆಣೆದಿದ್ದ ರೋಹಿತ್, ಈ ಕಥೆಯಲ್ಲೂ ಆ ಅಂಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಜೊತೆಗೆ ‘ಮುತ್ತು ಹಾಗೂ ಪಮ್ಮಿ’ಯ ದೃಶ್ಯಗಳನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಹಲವು ದೃಶ್ಯಗಳಲ್ಲಿ ಪುನೀತ್ ಅವರ ಹಾವಭಾವವನ್ನು ಅನುಕರಿಸುವ ಯುವ ‘ಜಾಕಿ’ಯ ನೆನಪುಗಳನ್ನು ಹರಿಸುತ್ತಾರೆ. ಈ ಸಿನಿಮಾ ಸಂಭಾಷಣೆ ದೃಷ್ಟಿಯಿಂದ ಗೆದ್ದಿದೆ. ಪಾತ್ರಗಳ ಸಂಭಾಷಣೆಯ ಬರವಣಿಗೆ ಚೆನ್ನಾಗಿದೆ. ‘ಬ್ಯಾಂಗಲ್ ಬಂಗಾರಿ’ ಹಾಗೂ ‘ಎಕ್ಕ ಮಾರ್..’ ಹಾಡು ಚಿತ್ರಕಥೆಗೆ ಇಂಬು. ಹಳೆ ಮಾದರಿಯಲ್ಲೇ ಸಿನಿಮಾವಿರುವ ಕಾರಣ ದೃಶ್ಯಗಳನ್ನು ಊಹಿಸಬಹುದಾಗಿದೆ.
ನಟನೆಯಲ್ಲಿ ಯುವ ರಾಜ್‌ಕುಮಾರ್ ಮತ್ತಷ್ಟು ಪಳಗಿದ್ದಾರೆ. ಡಾನ್ಸ್, ಭಾವನಾತ್ಮಕ ದೃಶ್ಯಗಳಲ್ಲಿ, ಫೈಟ್ಸ್‌ಗಳಲ್ಲಿ ಅವರ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸಂಜನಾ ಆನಂದ್ ಪಾತ್ರ ಹಠಾತ್ ಸ್ಥಗಿತವಾಗುತ್ತದೆ. ಸಂಭಾಷಣೆ ಹಾಗೂ ಭಾಷಾಶೈಲಿಯಿಂದ ಗಮನ ಸೆಳೆಯುವ ಈ ಪಾತ್ರದ ಬರವಣಿಗೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಸಂಪದಾ ತಮ್ಮ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಿದ್ದಾರೆ. ಪೂರ್ಣಚಂದ್ರ ಮೈಸೂರು, ಹರಿಣಿ ಹಾಗೂ ಸೂರಿ ಅವರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಆದಿತ್ಯ ಪಾತ್ರದ ಬರವಣಿಗೆ ಮನರಂಜನಾತ್ಮಕವಾಗಿದೆ. ಆ ಪಾತ್ರವನ್ನು ಅಷ್ಟೇ ಚೆನ್ನಾಗಿ ಮಾಡಿದ್ದಾರೆ ಆದಿತ್ಯ.
ಕ್ಲೈಮ್ಯಾಕ್ಸ್ ದೃಶ್ಯಗಳ ಕಟ್ಟುವಿಕೆಯಲ್ಲಿ ಇನ್ನಷ್ಟು ಕೆಲಸವಾಗಬೇಕಿತ್ತು. ಕಥೆಯನ್ನು ಇಲ್ಲಿ ಹಠಾತ್ ಆಗಿ ಕೊನೆಗೊಳಿಸಲಾಗಿದೆ. ‘ಜಾಕಿ’ ಮಾದರಿಯ ದೃಶ್ಯವನ್ನು ರಿಕ್ರಿಯೇಟ್ ಮಾಡುವ ಸಂದರ್ಭದಲ್ಲಿ ಚಿತ್ರಕಥೆ ಇನ್ನಷ್ಟು ಬಲವಾಗಿರಬೇಕಿತ್ತು. ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಚರಣ್ ರಾಜ್ ಸಂಗೀತ ಸಿನಿಮಾಗೆ ಹೊಸ ರೂಪ ನೀಡಿವೆ.
ಇದು ನೋಡಬಹುದಾದ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.