ADVERTISEMENT

ಜಂಬೂ ಸರ್ಕಸ್‌ ಸಿನಿಮಾ ವಿಮರ್ಶೆ | ಮಾಸ್‌ ಮನರಂಜನೆಯ ಸರ್ಕಸ್‌

ವಿನಾಯಕ ಕೆ.ಎಸ್.
Published 12 ಸೆಪ್ಟೆಂಬರ್ 2025, 23:37 IST
Last Updated 12 ಸೆಪ್ಟೆಂಬರ್ 2025, 23:37 IST
ಅಂಜಲಿ ಅನೀಶ್‌, ಪ್ರವೀಣ್‌ ತೇಜ್‌
ಅಂಜಲಿ ಅನೀಶ್‌, ಪ್ರವೀಣ್‌ ತೇಜ್‌   

ರವಿಶಂಕರ್‌ ಮತ್ತು ಅಚ್ಯುತ್‌ ಕುಮಾರ್‌ ಒಳ್ಳೆ ಸ್ನೇಹಿತರು. ಇಬ್ಬರದ್ದು ಎದುರುಬದುರು ಮನೆ. ಆದರೆ ಅವರ ಪತ್ನಿಯರು ಬದ್ಧ ವೈರಿಗಳು. ಎರಡು ಕುಟುಂಬಗಳ ನಡುವೆ ಕೌಟುಂಬಿಕ ದ್ವೇಷ. ಹೀಗಾಗಿ ಎರಡೂ ಮನೆಯ ಮಕ್ಕಳನ್ನು ಪರಸ್ಪರ ನೆರಳು ಬೀಳದಂತೆ ಬೆಳೆಸಬೇಕೆಂಬುದು ತಾಯಂದಿರ ಹಟ. ಇಂಥ ಸನ್ನಿವೇಶದಲ್ಲಿ ನಡೆಯುವ ಪ್ರೇಮಕಥೆಯೇ ‘ಜಂಬೂ ಸರ್ಕಸ್‌’. ಕಮರ್ಷಿಯಲ್‌ ಸಿನಿಮಾಗಳನ್ನೇ ಮಾಡಿರುವ ನಿರ್ದೇಶಕ ಎಂ.ಡಿ. ಶ್ರೀಧರ್‌ ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇಡೀ ಚಿತ್ರವನ್ನು ಮನರಂಜನಾತ್ಮಕವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುದ್ದಕ್ಕೂ ಕಥೆ ಹೀಗೆ ಆಗುತ್ತದೆ ಎಂದು ಊಹಿಸಬಹುದಾದಷ್ಟು ಸರಳ ಕಥೆ. ಹೆಚ್ಚೇನು ತಿರುವುಗಳಿಲ್ಲ. ಪ್ರಾರಂಭದಲ್ಲಿಯೇ ಒಂದು ಟ್ವಿಸ್ಟ್‌ ಅನ್ನು ಪ್ರೇಕ್ಷಕರಿಗೆ ಗೊತ್ತುಮಾಡಿಸಿ ಬಿಟ್ಟಿದ್ದಾರೆ. ಚಿತ್ರದ ಮೊದಲಾರ್ಧ ನಾಯಕ ಆಕಾಶ್‌ ಮತ್ತು ನಾಯಕಿ ಅಂಕಿತಾ ಕಥೆಯಲ್ಲಿಯೇ ಮುಗಿದುಹೋಗುತ್ತದೆ. ಅಲ್ಲಲ್ಲಿ ಕೌಟುಂಬಿಕ ಹಿನ್ನೆಲೆ ಬರುತ್ತದೆ. ಒಂದೇ ಕಾಲೇಜಿನಲ್ಲಿ ಓದುವ ಆಕಾಶ್‌ ಮತ್ತು ಅಂಕಿತಾ ತಮ್ಮ ತಾಯಂದಿರಂತೆ ಬದ್ಧ ವೈರಿಗಳು. ಅವರ ಜಗಳ, ಕಿತ್ತಾಟವೇ ಮೊದಲಾರ್ಧದ ಚಿತ್ರಕಥೆ. ಆದರೆ ಆ ಸನ್ನಿವೇಶಗಳನ್ನು ಹಾಸ್ಯಮಯವಾಗಿ ಕಟ್ಟಿಕೊಟ್ಟಿದ್ದಾರೆ. ಜಗಪ್ಪ ಮತ್ತು ನಯನಾ ನಗಿಸಲೆಂದೇ ಇರುವ ಪಾತ್ರಗಳು. ದರ್ಶನ್‌, ಸುದೀಪ್‌ರಂಥ ಸ್ಟಾರ್‌ಗಳ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಾಣಿಸುವಂಥ ಹಾಸ್ಯಪಾತ್ರಗಳನ್ನು ಇವರಿಬ್ಬರು ನಿಭಾಯಿಸಿದ್ದಾರೆ. ಸನ್ನಿವೇಶಕ್ಕಿಂತ ಹೆಚ್ಚಾಗಿ ಮಾತು ಮತ್ತು ಹಾವಭಾವಗಳಿಂದಲೇ ನಗಿಸುತ್ತಾರೆ.

ದ್ವಿತೀಯಾರ್ಧ ಹಾಸ್ಯದ ಜತೆಜತೆಗೆ ಭಾವುಕವಾಗುತ್ತದೆ. ಈ ಯುವಜೋಡಿ ಎರಡೂ ಕುಟುಂಬಗಳನ್ನು ಹೇಗೆ ಒಂದು ಮಾಡುತ್ತವೆ ಎಂಬುದೇ ದ್ವಿತೀಯಾರ್ಧ. ಕೌಟುಂಬಿಕ ಮೌಲ್ಯಗಳನ್ನು ಹೇಳುತ್ತ, ಪ್ರೇಮಕಥೆಯೊಂದಿಗೆ ಒಡೆದ ಮನಸುಗಳನ್ನು ಒಂದು ಮಾಡುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಆಕಾಶ್‌ ಆಗಿ ಪ್ರವೀಣ್‌ ತೇಜ್‌, ಅಂಕಿತಾ ಆಗಿ ಅಂಜಲಿ ಅನೀಶ್‌ ತಮ್ಮ ತರಲೆ, ತುಂಟಾಟಗಳೊಂದಿಗೆ ಇಷ್ಟವಾಗುತ್ತಾರೆ. ನಾಯಕಿಯ ತಾಯಿಯಾಗಿ ಲಕ್ಷ್ಮಿ ಸಿದ್ಧಯ್ಯ, ನಾಯಕನ ತಾಯಿಯಾಗಿ ಸ್ವಾತಿ ಗುರುದತ್ತ ಬಜಾರಿಯರ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾತನಾಗಿ ಅವಿನಾಶ್‌ ಆಗೀಗ ಕಾಣಿಸುತ್ತಾರೆ. ರವಿಶಂಕರ್‌ ಮತ್ತು ಅಚ್ಯುತ್‌ ಕುಮಾರ್‌ಗು ಕಥೆಯಲ್ಲಿ ಹೆಚ್ಚು ಕೆಲಸವಿಲ್ಲ.

ADVERTISEMENT

ಕೃಷ್ಣಕುಮಾರ್‌ ಅವರ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಆದರೆ ಅಲ್ಲಲ್ಲಿ ಚಿತ್ರ ಕೆಲವು ವರ್ಷಗಳಷ್ಟು ಹಳೆಯದು ಎಂಬುದು ಗೊತ್ತಾಗುತ್ತದೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವು ಹಾಸ್ಯ ಸನ್ನಿವೇಶಗಳು ನಗು ತರಿಸಿದರೂ ಹಳಸಲು ಎನ್ನಿಸುತ್ತವೆ. ಬಹುಶಃ ಚಿತ್ರದಲ್ಲಿ ದೊಡ್ಡ ಸ್ಟಾರ್‌ ನಟರಿದಿದ್ದರೆ ಅವರ ಅಭಿಮಾನಿಗಳಿಗೆ ಒಟ್ಟಾರೆ ಕಥೆ ಹೆಚ್ಚು ಆಪ್ತವಾಗುತ್ತಿತ್ತು. ಇಲ್ಲಿ ಯುವಜೋಡಿ ಇರುವುದರಿಂದ ಕಥೆಯನ್ನು ಅವರಿಗೆ ಒಗ್ಗುವಂತೆ ಮಾಡುವತ್ತ ನಿರ್ದೇಶಕರು ಗಮನಹರಿಸಬಹುದಿತ್ತು. 

–ನೋಡಬಹುದಾದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.