ADVERTISEMENT

ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ವಿಮರ್ಶೆ: ಎಳೆ ರೌಡಿಯ ಪರಿವರ್ತನೆ ಕಥೆ

ಅಭಿಲಾಷ್ ಪಿ.ಎಸ್‌.
Published 6 ಫೆಬ್ರುವರಿ 2026, 14:37 IST
Last Updated 6 ಫೆಬ್ರುವರಿ 2026, 14:37 IST
ಸೂರ್ಯ ಪ್ರಖ್ಯಾತ್‌ 
ಸೂರ್ಯ ಪ್ರಖ್ಯಾತ್‌    

ಭೂಗತಲೋಕ, ರೌಡಿಸಂ ಕುರಿತ ಕಥೆಯಿರುವ ಸಿನಿಮಾಗಳಲ್ಲಿ ನಾಯಕನನ್ನೇ ರೌಡಿಯನ್ನಾಗಿಸಿದರೆ ಆತ ಕ್ಲೈಮ್ಯಾಕ್ಸ್‌ನಲ್ಲಿ ಕೊಲೆಯಾಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕಥೆಯ ಕೊನೆಯಲ್ಲಿ ಆತನಿಗೊಂದು ಪರಿವರ್ತನೆ ನೀಡುವುದು ಅನಿವಾರ್ಯವಾಗುತ್ತದೆ. ‘ಜೋಗಿ’, ‘ಎಕ್ಕ’ ಸೇರಿದಂತೆ ಹಲವು ಸಿನಿಮಾಗಳು ಇದೇ ಮಾದರಿಯಲ್ಲಿ ಬಂದಿವೆ. ಇದೇ ಅನಿವಾರ್ಯಕ್ಕೆ ಸಿಕ್ಕಿಕೊಂಡಂತೆ ‘ಜೆಸಿ’ ಸಿನಿಮಾ ಸಾಗುತ್ತದೆ. 

ಮಧುಸೂಧನ-ಮ್ಯಾಡಿ (ಸೂರ್ಯ ಪ್ರಖ್ಯಾತ್) ಕಾಲೇಜು ವಿದ್ಯಾರ್ಥಿ. ತಂದೆಗೆ (ರಂಗಾಯಣ ರಘು) ಮಗನ ಮೇಲೆ ಪ್ರೀತಿ ಕೊಂಚ ಹೆಚ್ಚು. ಮ್ಯಾಡಿಗೆ ಸಹಪಾಠಿ ಮೇಘನಾ(ಭಾವನಾ) ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಂಜಿನಿಯರಿಂಗ್ ಓದುತ್ತಿರುವಾಗಲೂ ಈ ಪ್ರೀತಿ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಮೇಘನಾಳಿಗೆ ಅನಾಮಿಕನೊಬ್ಬ ಕರೆ ಮಾಡಿ ಪೀಡಿಸುತ್ತಾನೆ. ಈತನನ್ನು ವಿಚಾರಿಸಿಕೊಳ್ಳಲು ಹೊರಡುವ ಮ್ಯಾಡಿ ರಾಕಾ ಎಂಬ ರೌಡಿ‌ ಕೈಗೆ ಸಿಕ್ಕು ಏಟು ತಿನ್ನುತ್ತಾನೆ. ಈತನ ವಿರುದ್ಧ ಪ್ರತೀಕಾರಕ್ಕೆ ಹಟ ಹಿಡಿಯುವ ಮ್ಯಾಡಿ ಆಕಸ್ಮಿಕವಾಗಿ ಪೊಲೀಸ್‌ ಕೈಗೆ ಸಿಕ್ಕು ನ್ಯಾಯಾಂಗ ಬಂಧನಕ್ಕೆ (ಜುಡಿಷಿಯಲ್‌ ಕಸ್ಟಡಿ–ಜೆಸಿ) ಒಳಗಾಗಿ ಜೈಲು ಸೇರುತ್ತಾನೆ. ಇಲ್ಲಿಂದ ಕುಮಾರಿ (ಥ್ರಿಲ್ಲರ್‌ ಮಂಜು) ಮೂಲಕ ರೌಡಿಸಂ ಲೋಕಕ್ಕೆ ಆತ ಇಳಿಯುವಂತಾಗುತ್ತದೆ. ಕಥೆ ತೆರೆದುಕೊಳ್ಳಲಾರಂಭಿಸುತ್ತದೆ. 

ಭೂತ, ಭವಿಷ್ಯ ಹಾಗೂ ವರ್ತಮಾನದಲ್ಲಿ ನಡೆಯುತ್ತಿರುವಂತೆ ನಾನ್‌ ಲೀನಿಯರ್‌ ಮಾದರಿಯಲ್ಲಿ ಚಿತ್ರಕಥೆಯಿದೆ. ಕಥೆ ಹೀಗೆ ಸಾಗಲಿದೆ ಎಂದು ಊಹಿಸಬಹುದಾಗಿದೆ. ದ್ವಿತೀಯಾರ್ಧಕ್ಕೆ ಹೋಲಿಸಿದರೆ ಮೊದಲಾರ್ಧದ ಕಥೆ ಗಟ್ಟಿಯಾಗಿದೆ. ಆಗಾಗ ಸುದ್ದಿಯಾಗುವ ಜೈಲುಗಳಲ್ಲಿನ ಎಲ್ಲಾ ಅವ್ಯವಹಾರ, ಚಟುವಟಿಕೆಗಳನ್ನು ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರೀತಿ, ಅಪ್ಪನ ಭಾವನಾತ್ಮಕ ದೃಶ್ಯಗಳು, ಕ್ರೈಂ ಲೋಕ ಹೀಗೆ ಎಲ್ಲಾ ಅಂಶಗಳನ್ನು ಹದವಾಗಿ ಬೆರೆಸಲಾಗಿದೆ.

ADVERTISEMENT

ಮೊದಲಾರ್ಧದಲ್ಲಿ ಎಲ್ಲಾ ಅವ್ಯವಹಾರಗಳ ತಾಣದಂತೆ ಕೇಂದ್ರ ಕಾರಾಗೃಹವನ್ನು ತೋರಿಸಲಾಗಿದೆ. ಆದರೆ ದ್ವಿತೀಯಾರ್ಧದಲ್ಲಿ ಇದೇ ಜೈಲು ಸ್ವಚ್ಛವಾಗಿದೆ ಎಂಬಂತೆ ಬಿಂಬಿಸಲಾಗಿದೆ. ನಾಯಕನ ಪರಿವರ್ತನೆಯನ್ನೇ ಧ್ಯೇಯವಾಗಿಸಿದ ನಿರ್ದೇಶಕರು ಬರವಣಿಗೆಯನ್ನು ಇಲ್ಲಿ ಸಡಿಲ ಮಾಡಿದ್ದಾರೆ. ಹೀಗಾಗಿಯೇ ಎಲ್ಲರಿಗೂ ಕಿವಿಮಾತು ಹೇಳುತ್ತಿದ್ದ ‘ಕುಮಾರಿ’ ಒಬ್ಬನೇ ಸಿಕ್ಕಿ ಹಾಕಿಕೊಂಡಾಗ, ಅಪ್ಪನನ್ನು ಕಂಡ ಕೂಡಲೇ ಏಕಾಏಕಿ ಪರಿವರ್ತನೆಯಾಗುವ ಮ್ಯಾಡಿಯನ್ನು ಕಂಡಾಗ, ಮ್ಯಾಡಿಯನ್ನು ಕೊಲ್ಲಲು ಹಪಹಪಿಸುತ್ತಿದ್ದ ‘ಕವಳ’ ಎಂಬ ರೌಡಿಯ ಹೆಂಡತಿ ಕ್ಲೈಮ್ಯಾಕ್ಸ್‌ನಲ್ಲಿ ಧ್ಯಾನಕ್ಕೆ ಕೂತಾಗ ಆಶ್ಚರ್ಯವಾಗುತ್ತದೆ. ರೌಡಿಸಂ ಸಿನಿಮಾಗಳಲ್ಲಿ ಸಂಭಾಷಣೆ ಇತ್ತೀಚಿನ ದಿನಗಳಲ್ಲಿ ಏಕತಾನತೆಯಂತೆ ಭಾಸವಾಗುತ್ತಿದೆ. 

ನಟನೆಯಲ್ಲಿ ಸೂರ್ಯ ಪ್ರಖ್ಯಾತ್‌ ‘ಮ್ಯಾಡಿ’ಯಾಗಿ ಜೀವಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ರಂಗಾಯಣ ರಘು ನಟನೆ ಚೆನ್ನಾಗಿದೆ. ‘ರಾಕಾ’ನಾಗಿ ವಿಜಯ್‌ ಸಿಂಹ ಖಳನಟನ ಪಾತ್ರಕ್ಕೆ ಗತ್ತು ತಂದಿದ್ದಾರೆ. ನೆನಪಿನಲ್ಲಿ ಉಳಿಯುವ ಹಾಡುಗಳಿಲ್ಲ. 

ನೋಡಬಹುದಾದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.