ನಾಯಕನ ಪ್ರವೇಶಕ್ಕೊಂದು ಹಾಡು, ಬುದ್ಧಿವಂತನಾದರೂ ಆಲಸಿಯಾಗಿರುವ ಹೀರೊ, ತಂದೆಯ ಮೇಲೆ ದ್ವೇಷ; ಬಳಿಕ ಅನುರಾಗ, ಘಟನೆಯೊಂದರ ಬಳಿಕ ಗಂಭೀರವಾಗುವ ನಾಯಕ, ನಾಯಕಿ ಸಿಕ್ಕ ಕೂಡಲೇ ಮತ್ತೊಂದು ಹಾಡು ಹೀಗೆ ಸಿದ್ಧಸೂತ್ರದಲ್ಲಿ ಹಲವು ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ. ಈ ಸಿದ್ಧಸೂತ್ರಗಳನ್ನು ಇಟ್ಟುಕೊಂಡೇ ‘ಸೂತ್ರಧಾರಿ’ ಹೆಣೆಯಲಾಗಿದೆ. ಕಥೆಯು ಕುತೂಹಲಕಾರಿ ಅಂಶಗಳನ್ನೊಳಗೊಂಡಿದ್ದರೂ, ಅದನ್ನು ಸೂಕ್ತವಾದ ಚಿತ್ರಕಥೆಯಾಗಿ ಪರಿವರ್ತಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ.
ನಾಯಕ ‘ವಿಜಯ್’(ಚಂದನ್ ಶೆಟ್ಟಿ) ಪೊಲೀಸ್ ಅಧಿಕಾರಿ. ಬುದ್ಧಿವಂತನಾಗಿದ್ದರೂ ಆಲಸಿ. ಮನೆಯಲ್ಲಿ ಅಮ್ಮ ಮದುವೆಗೆ ಒತ್ತಾಯಿಸಿದರೂ ಒಪ್ಪದ ಈತ ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಸ್ತ್ರೀಲೋಲ. ಎನ್‌ಕೌಂಟರ್ ಪ್ರಕರಣವೊಂದರಲ್ಲಿ ಅಮಾನತಿನಲ್ಲಿರುವ ಈತನಿಗೆ ಹೊಸ ಪ್ರಕರಣದ ತನಿಖೆಯೊಂದನ್ನು ಗೃಹ ಸಚಿವರೇ ಒಪ್ಪಿಸುತ್ತಾರೆ. ಅದು ಸರಣಿ ಅಪಹರಣ ಮತ್ತು ಅಪಹರಣಕ್ಕೊಳಗಾದವರೇ ಬಿಡುಗಡೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ. ಈ ಪ್ರಕರಣ ಕೈಗೆ ಸಿಗುತ್ತಲೇ ವಿಜಯ್ ಬದುಕಿಗೆ ‘ಆದ್ವಿಕಾ’(ಅಪೂರ್ವ) ಪ್ರವೇಶವಾಗುತ್ತದೆ. ಪ್ರಕರಣದ ತನಿಖೆ ಆರಂಭಿಸುವ ವಿಜಯ್‌ಗೆ ಎದುರಾಗುವ ಸವಾಲುಗಳಲೇ ಚಿತ್ರದ ಕಥೆ.
ಸಿನಿಮಾದಲ್ಲಿ ಬಹಳಷ್ಟು ದೃಶ್ಯಗಳು ಕೃತಕವಾಗಿವೆ. ಸಿಸಿಬಿ ಕಚೇರಿಯ ದೃಶ್ಯಗಳಲ್ಲಿ ಕಲಾ ನಿರ್ದೇಶಕರ ತಪ್ಪುಗಳೆಲ್ಲವೂ ತೆರೆ ಮೇಲೆ ಸ್ಪಷ್ಟವಾಗಿ ಕಾಣುತ್ತವೆ. ಚಿತ್ರಕಥೆಯು ಗಟ್ಟಿಯಾಗಿರದ ಕಾರಣ ಕಥೆಯು ಕುತೂಹಲ ಹುಟ್ಟಿಸುವುದಿಲ್ಲ. ದೃಶ್ಯಗಳನ್ನು ಎಳೆದಾಡಲಾಗಿದೆ. ಬೃಹತ್ ಪರದೆಗೆ ಬೇಕಾದ ಗುಣಮಟ್ಟದ ಕೊರತೆಯೂ ಗೋಚರಿಸುತ್ತದೆ. ಇಡೀ ಚಿತ್ರಕ್ಕಿಂತ ‘ಡ್ಯಾಶ್’ ಹಾಗೂ ‘ಟ್ರೆಂಡಿಂಗ್‌ನಲ್ಲಿ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು’ ಎಂಬ ಹಾಡಿಗೇ ಹೆಚ್ಚಿನ ಒತ್ತು ಮತ್ತು ಖರ್ಚು ಮಾಡಲಾಗಿದೆ. ಅದಕ್ಕೆ ತಕ್ಕ ಹಾಗೆ ಅವುಗಳು ಚೆನ್ನಾಗಿ ಮೂಡಿಬಂದಿವೆ. ಚಿತ್ರಕಥೆಗೆ ಪೂರಕವಾಗುವಂತೆ ಹಿನ್ನೆಲೆ ಸಂಗೀತ ಮಾಡಬಹುದಿತ್ತು.
ನಟನೆಯಲ್ಲಿ ಚಂದನ್ ಶೆಟ್ಟಿ ಅವರಿಗೆ ಇದು ಚೊಚ್ಚಲ ಸಿನಿಮಾ. ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಾ ಚಂದನ್ ನಟನೆಯಲ್ಲಿ ಪಳಗಿದ್ದಾರೆ. ಅಪೂರ್ವ, ತಬಲ ನಾಣಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.