ADVERTISEMENT

ಸಾವಿನ ಸಂದರ್ಭದ ಬದುಕಿನ ಪಯಣ

ವಿಶಾಖ ಎನ್.
Published 3 ಆಗಸ್ಟ್ 2018, 11:09 IST
Last Updated 3 ಆಗಸ್ಟ್ 2018, 11:09 IST
‘ಕಾರ್‌ವಾ’ ಚಿತ್ರದಲ್ಲಿ ಮಿಥಿಲಾ ಪಾಲ್ಕರ್, ದುಲ್ಖರ್ ಸಲ್ಮಾನ್, ಇರ್ಫಾನ್ ಖಾನ್
‘ಕಾರ್‌ವಾ’ ಚಿತ್ರದಲ್ಲಿ ಮಿಥಿಲಾ ಪಾಲ್ಕರ್, ದುಲ್ಖರ್ ಸಲ್ಮಾನ್, ಇರ್ಫಾನ್ ಖಾನ್   

ಚಿತ್ರ: ಕಾರ್‌ವಾ (ಹಿಂದಿ)
ನಿರ್ಮಾಣ: ರಾನಿ ಸ್ಕ್ರೂವಾಲಾ, ಪ್ರೀತಿ ರತಿ ಗುಪ್ತಾ
ನಿರ್ದೇಶನ: ಆಕರ್ಷ್‌ ಖುರಾನಾ
ತಾರಾಗಣ: ದುಲ್ಖರ್ ಸಲ್ಮಾನ್, ಇರ್ಫಾನ್‌ ಖಾನ್, ಮಿಥಿಲಾ ಪಾಲ್ಕರ್‌, ಅಮಲಾ ಪಾಲ್, ಕೃತಿ ಖರಬಂದ.

‘ಶ್ರೀಕಂಠ’ ಎಂಬ ಕನ್ನಡ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಡಿಕ್ಕಿಯಲ್ಲಿ ತನ್ನ ಹೆಂಡತಿಯ ಶವ ಇಟ್ಟುಕೊಂಡು, ಪಕ್ಕದಲ್ಲೊಬ್ಬ ವಾಚಾಳಿಯನ್ನು ಕೂರಿಸಿಕೊಂಡು ಹೋಗುವ ಕಥನವಿದೆ. ಸಾವ ನೋವಿನ ಪಯಣದಲ್ಲಿ ಬದುಕಿನ ತತ್ತ್ವವನ್ನು ಆ ಸಿನಿಮಾ ಬಿಚ್ಚಿತ್ತು. ‘ಕಾರ್‌ವಾ’ ಹಿಂದಿ ಸಿನಿಮಾದ ಆತ್ಮವೂ ಅದೇ. ಎದೆತಂತಿ ಮೀಟುವಷ್ಟು ತೀವ್ರವಾದ ಸಂಗತಿಯನ್ನು ಲಘು ಧಾಟಿಯಲ್ಲಿ ಹೇಳಿರುವ ಕ್ರಮ ಕಾಡುತ್ತದೆ.

ತನ್ನ ಫೋಟೊಗ್ರಫಿ ಚಾಳಿ ಒಪ್ಪದ ಅಪ್ಪನ ಕುರಿತು ಮಗನಿಗೆ ಅಸಮಾಧಾನ. ಅಂಥ ಅಪ್ಪ ಯಾತ್ರೆಗೆ ಹೊರಟಾಗ ಅಪಘಾತದಲ್ಲಿ ಸಾಯುತ್ತಾನೆ. ಅವನ ಶವ ಪಡೆಯಲು ಹೋಗುವ ಯುವಕನಿಗೆ ಕೊರಿಯರ್‌ನವರು ಬೇರೆ ಶವವನ್ನು ಕೊಟ್ಟುಬಿಡುತ್ತಾರೆ. ಮತ್ತೆ ಆ ಶವವನ್ನು ಅದರ ವಾರಸುದಾರರಿಗೆ ಮರಳಿಸಿ, ತನ್ನ ತಂದೆಯ ಶವ ಪಡೆಯಲು ಅವನು ಇನ್ನೊಂದು ಯಾತ್ರೆ ಹೊರಡಬೇಕಾಗುತ್ತದೆ.

ADVERTISEMENT

ಅವನ ಸ್ನೇಹಿತನ ವಾಹನದಲ್ಲಿ ಶುರುವಾಗುವ ಪ್ರಯಾಣ ಘಾಟ್ ರಸ್ತೆಯ ತಿರುವುಗಳನ್ನು ತೋರಿಸುತ್ತಾ ಹೋಗುವಂತೆ ಅಚ್ಚರಿಗಳ ದರ್ಶನ ಮಾಡಿಸುತ್ತಾ ಸಾಗುತ್ತದೆ. ಅವರಿಬ್ಬರಿಗೆ ಹೊಸ ತಲೆಮಾರಿನ ಹುಡುಗಿ ಜತೆಯಾಗುತ್ತಾಳೆ. ಫಿಲ್ಟರ್‌ ಇಲ್ಲದೆ ಮಾತನಾಡುವ ಅವಳು. ಫಿಲ್ಟರ್‌ನೊಳಗೇ ಇರುವಂತೆ ಆಡುವ ನಾಯಕ. ಉಡಾಳನಂತೆ ಕಂಡೂ ತತ್ತ್ವಜ್ಞಾನಿಯಂತೆ ಭಾಸವಾಗುವ ಅವನ ಸ್ನೇಹಿತ. ಎಲ್ಲವೂ ಎಲ್ಲರೂ ಅಡಿಗಡಿಗೂ ಕಾಡುತ್ತಾರೆ. ಸಣ್ಣ ಸಣ್ಣ ಸೂಕ್ಷ್ಮಗಳ ಮೂಲಕ ಹೊಸಕಾಲದ ತಲ್ಲಣಗಳನ್ನು ಗುಪ್ತಗಾಮಿನಿಯಂತೆ ಸಿನಿಮಾ ತುಳುಕಿಸುತ್ತದೆ. ಪ್ರಶ್ನೆ, ಚರ್ಚೆಗಳು ಕೂಡ ಎಲ್ಲೂ ವಾಚ್ಯವಾಗುವುದಿಲ್ಲ.

ಸೇತುವೆ ಮೇಲೆ ಹುಡುಗಿ ಕುಳಿತಿದ್ದಾಳೆ. ಸ್ನೇಹಿತ ತನ್ನ ಕುಡುಕ ಅಪ್ಪನಿಗೆ ಏಟು ಕೊಟ್ಟು, ಅಮ್ಮನಿಂದ ಹೊರದಬ್ಬಿಸಿಕೊಂಡ ಕಥೆ ಹೇಳಿ ಕೃತಕವಾಗಿ ಬಿಕ್ಕುತ್ತಾನೆ. ಅದನ್ನು ಕೇಳಿಸಿಕೊಂಡ ನಾಯಕನ ತಲೆ ತುಂಬಾ ತನ್ನಪ್ಪ ಎಂದೋ ಹೇಳಿದ ಬುದ್ಧಿಮಾತು. ಹುಡುಗಿ ಎಂಟನೇ ವರ್ಷದವಳಿದ್ದಾಗಲೇ ತಂದೆಯನ್ನು ಕಳೆದುಕೊಂಡ ನತದೃಷ್ಟೆ. ‘ನಮ್ಮೆಲ್ಲರ ತಂದೆಯರ ಮ್ಯಾಟರ್ರೇ ಹೀಗೆ’ ಎಂದು ಅವಳು ಉದುರಿಸುವ ಸಂಭಾಷಣೆಯಲ್ಲಿಯೂ ದೊಡ್ಡ ತತ್ತ್ವ.

ಸಿನಿಮಾದಲ್ಲಿನ ಮನರಂಜನೆಯ ಮಾದರಿಯೂ ತಾಜಾ. ಹುಸೇನ್ ದಲಾಲ್ ಬರೆದಿರುವ ಸಂಭಾಷಣೆಯ ಕಾಣ್ಕೆಯೂ ಇದರಲ್ಲಿದೆ. ಅವಿನಾಶ್ ಅರುಣ್ ಸಿನಿಮಾಟೊಗ್ರಫಿಯ ಕುಶಲತೆಗೆ ಹ್ಯಾಟ್ಸಾಫ್.

ಕಣ್ಣು ಮಿಟುಕಿಸದೇ ಇರಲಿ, ಮೌನವಾಗಿಯೇ ಇರಲಿ ನಟನೆಯಲ್ಲಿ ಇರ್ಫಾನ್ ಅವರನ್ನು ಅವರಿಗಷ್ಟೇ ಹೋಲಿಸಲು ಸಾಧ್ಯ. ದುಲ್ಖರ್‌ ಸಲ್ಮಾನ್ ಹಿಂದಿ ಸಿನಿಮಾ ಪ್ರವೇಶ ಅರ್ಥಪೂರ್ಣ ರೀತಿಯಲ್ಲಿ ಆಗಿದೆ. ಅವರದ್ದು ಮಾಗಿದ ಅಭಿನಯ ಎಂದು ನಿಸ್ಸಂಶಯವಾಗಿ ಹೇಳಬಹುದು. ಮಿಥಿಲಾ ಪಾಲ್ಕರ್‌ ಕೂಡ ಇಬ್ಬರೊಟ್ಟಿಗೆ ರೇಸಿನಲ್ಲಿ ಹಿಂದೆ ಬಿದ್ದಿಲ್ಲ.

ನಾಯಕನ ಸ್ನೇಹಿತ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿ, ಅಲ್ಲೊಬ್ಬಳು ಚೆಲುವೆಯನ್ನು ಮೋಹಿಸಿ, ಅವಳು ಅದೇ ಆಸ್ಪತ್ರೆಯ ಇನ್ನೊಂದು ಹಾಸಿಗೆ ಮೇಲಿರುವ ಅಜ್ಜನ ಮೂರನೇ ಹೆಂಡತಿ ಎಂದು ಗೊತ್ತಾಗಿ... ಇಷ್ಟೆಲ್ಲ ಆದಮೇಲೂ ಅವಳನ್ನೇ ಹಾರಿಸಿಕೊಂಡು ಹೋಗುವ ‘ಪಂಚ್’ ಕೊನೆಯಲ್ಲಿ. ವಿಪರೀತ ಊಹಾತೀತ ಎನ್ನುವ ಕಾರಣಕ್ಕೂ ಸಿನಿಮಾ ಪದೇ ಪದೇ ಕಣ್ಣರಳಿಸುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.