ADVERTISEMENT

Max Movie Review: ಸಿದ್ಧಸೂತ್ರಕ್ಕೆ ಅಂಟಿಕೊಳ್ಳದ ‘ಮ್ಯಾಕ್ಸ್‌’

ಅಭಿಲಾಷ್ ಪಿ.ಎಸ್‌.
Published 25 ಡಿಸೆಂಬರ್ 2024, 10:52 IST
Last Updated 25 ಡಿಸೆಂಬರ್ 2024, 10:52 IST
ಸುದೀಪ್‌ 
ಸುದೀಪ್‌    

ತಮಿಳಿನಲ್ಲಿ ಕಾರ್ತಿ ನಟನೆಯ ‘ಕೈಥಿ’ ಸಿನಿಮಾ ಕೆಲ ವರ್ಷಗಳ ಹಿಂದೆ ತೆರೆಕಂಡಿತ್ತು. ಪೊಲೀಸ್‌ ಠಾಣೆಯನ್ನು ಕೇಂದ್ರವಾಗಿಟ್ಟುಕೊಂಡು ಒಂದು ರಾತ್ರಿಯಲ್ಲಿ ನಡೆಯುವ ಕಥೆಯದು. ಇದೇ ಎಳೆಯನ್ನು ಬಳಸಿಕೊಂಡು ಅದರ ಮೇಲೆ ‘ಮ್ಯಾಕ್ಸ್‌’ನ ಹೊಸ ಕಥೆ ಹೆಣೆದಿದ್ದಾರೆ ನಿರ್ದೇಶಕ ವಿಜಯ್‌ ಕಾರ್ತಿಕ್‌. ಈ ಸಿನಿಮಾ ಮೂಲಕ ಸುಮಾರು ಎರಡೂವರೆ ವರ್ಷದ ಬಳಿಕ ನಟ ಸುದೀಪ್‌ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. 

ತನ್ನ ಖಡಕ್‌ ಕಾರ್ಯವೈಖರಿಯ ಕಾರಣಕ್ಕೆ ಹಲವು ಬಾರಿ ಅಮಾನತುಗೊಂಡ ಇನ್‌ಸ್ಪೆಕ್ಟರ್‌ ಅರ್ಜುನ್‌ ಮಹಾಕ್ಷಯ್‌(ಸುದೀಪ್‌) ಹೊಸ ಪೊಲೀಸ್‌ ಠಾಣೆಗೆ ವರ್ಗಾವಣೆ ಆಗಿದ್ದಾನೆ. ಕೆಲಸಕ್ಕೆ ಹಾಜರಾಗುವ ದಿನದ ಹಿಂದಿನ ಸಂಜೆ ಆತ ಪೊಲೀಸ್‌ ಠಾಣೆ ಇರುವ ಊರಿಗೆ ಬರುತ್ತಾನೆ. ಅದೇ ಸಂದರ್ಭದಲ್ಲಿ ರಾಜಕಾರಣಿಗಳಿಬ್ಬರ ಮಕ್ಕಳು ಕುಡಿದು ಕಾರು ಚಾಲನೆ ಮಾಡಿ, ರಸ್ತೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಕೈ ಮಾಡುತ್ತಾರೆ. ಇದನ್ನು ತಡೆಯುವ ನಾಯಕ ಅವರಿಬ್ಬರನ್ನು ಬಡಿದು ಪೊಲೀಸ್‌ ಠಾಣೆಗೆ ಕರೆದೊಯ್ದು ಎಫ್‌ಐಆರ್‌ ಹಾಕಲು ಹೇಳುತ್ತಾನೆ. ಇಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ಅತ್ತ ಅದೇ ರಾತ್ರಿ ಸರ್ಕಾರ ಬೀಳಿಸಲು ಸಿದ್ಧತೆ ನಡೆಸಿರುವ ಆ ರಾಜಕಾರಣಿಗಳು ಹಾಗೂ ಬಂಧನಕ್ಕೊಳಗಾದ ಅವರ ಮಕ್ಕಳು ಏನಾಗುತ್ತಾರೆ ಎನ್ನುವುದೇ ಚಿತ್ರದ ಕಥೆ. 

ರಿವರ್ಸ್‌ ಸ್ಕ್ರೀನ್‌ ಪ್ಲೇ ಮೂಲಕ ಚಿತ್ರದ ಕಥೆಯನ್ನು ಆರಂಭಿಸಿರುವ ನಿರ್ದೇಶಕ ರಾತ್ರಿಯಿಂದ ಬೆಳಗಿನವರೆಗಿನ ಘಟನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದ ಮೊದಲಾರ್ಧದ ಸ್ಕ್ರೀನ್‌ಪ್ಲೇ ಕುತೂಹಲಕಾರಿಯಾಗಿದೆ. ಸರಳವಾದ ಕಥೆಯನ್ನು ಹೊಂದಿದ್ದರೂ ವೇಗವಾದ ಚಿತ್ರಕಥೆಯ ಮೂಲಕ ಮುಂದೆ ಏನಾಗಲಿದೆ ಎನ್ನುವ ತಳಮಳ, ಕೌತುಕವನ್ನು ಸೃಷ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸುದೀಪ್‌ ನಟನೆಯ ಗತ್ತು ಇಲ್ಲಿ ಸಾಥ್‌ ನೀಡಿದೆ. ನೇರವಾಗಿ ಕಥೆಗೆ ಧುಮುಕುವ ಮೂಲಕ ನಾಯಕನಿಗೆ ಬಹುತೇಕರು ಹೆಣೆಯುವ ಸಿದ್ಧಸೂತ್ರವನ್ನು ಬಿಟ್ಟಿದ್ದಾರೆ. ಆದರೆ ಚಿತ್ರದ ದ್ವಿತೀಯಾರ್ಧದಲ್ಲಿ ಚಿತ್ರಕಥೆ ಹಿಡಿತ ತಪ್ಪುತ್ತದೆ, ನಾಯಕ ಊಹಿಸದಲ್ಲೆಲ್ಲ ಪ್ರತ್ಯಕ್ಷಗೊಳ್ಳುವಾಗ ಆಶ್ಚರ್ಯವಾಗುತ್ತದೆ! ದ್ವಿತೀಯಾರ್ಧವನ್ನು ಕೇವಲ ಆ್ಯಕ್ಷನ್‌ ಸನ್ನಿವೇಶಗಳಿಗೆ ಬಳಸಿಕೊಳ್ಳಲಾಗಿದೆ. ಅಭಿಮಾನಿಗಳನ್ನು, ಮಾಸ್‌ ಪ್ರೇಕ್ಷಕರನ್ನು ಕೇಂದ್ರೀಕರಿಸಿ ಇದನ್ನು ಹೆಣೆಯಲಾಗಿದೆ. ಆದರೆ ಇದಕ್ಕೆ ಪೂರಕವಾದ ಖಳನಾಯಕರ ಪಾತ್ರಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ನಾಯಕನ ತೋಳ್ಬಲದ ಜೊತೆಗೆ ಆತನ ಬುದ್ಧಿಯ ಆಟವಾಗಿಯೂ ‘ಮ್ಯಾಕ್ಸ್‌’ ತೆರೆಗೆ ಬಂದಿದೆ. ಚೆಸ್‌ನಲ್ಲಿರುವಂತೆ ಕಾಲಾಳುಗಳನ್ನು ಮುಂದಿಟ್ಟುಕೊಂಡು, ರಾಜನೂ ಯುದ್ಧಕ್ಕೆ ಇಳಿದಂತೆ ಈ ಚಿತ್ರದ ಕಥೆಯಿದೆ. ನಾಯಕ ಸೇದುವ ಸಿಗರೇಟ್‌ಗಳನ್ನು ಲೆಕ್ಕವಿಡುವುದು ಕಷ್ಟ. ಕಥೆಗೆ ನಾಯಕಿಯಿಲ್ಲ, ಅನಗತ್ಯ ಹಾಡುಗಳಿಲ್ಲ, ಎಳೆದಾಟವಿಲ್ಲ. ಹೀಗಾಗಿ 132 ನಿಮಿಷದಲ್ಲಿ ಸಿನಿಮಾ ಪೂರ್ಣಗೊಳ್ಳುತ್ತದೆ.  

ADVERTISEMENT

ನಟನೆಯಲ್ಲಿ ಸುದೀಪ್‌ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಆ್ಯಕ್ಷನ್‌ ದೃಶ್ಯಗಳಲ್ಲಿ ಅವರ ಸ್ಟೈಲ್‌, ಸಂಭಾಷಣೆಗಳು ‘ಮ್ಯಾಕ್ಸ್‌’ಗೆ ಹೊಸ ರೂಪ ನೀಡಿದೆ. ಅವರ ಹಿಂದಿನ ಸಿನಿಮಾಗಳಂತೆ ಇಲ್ಲಿ ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಜಾಗವಿಲ್ಲ. ನಿವೃತ್ತಿಯ ಅಂಚಿನಲ್ಲಿರುವ ಹೆಡ್‌ ಕಾನ್‌ಸ್ಟೆಬಲ್‌ ಪಾತ್ರದಲ್ಲಿ ಇಳವರಸು ನಟನೆ ಚೆನ್ನಾಗಿದೆ. ಉಗ್ರಂ ಮಂಜು, ಸುನೀಲ್‌, ವರಲಕ್ಷ್ಮಿ, ಸಂಯುಕ್ತ ಹೊರನಾಡು ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕಥೆಯ ವೇಗಕ್ಕೆ ಸೂಕ್ತವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.