ಚಿತ್ರ: ಮಾಯಾನಗರಿ
ನಿರ್ದೇಶನ: ಶಂಕರ್ ಆರಾಧ್ಯ
ನಿರ್ಮಾಣ: ಶ್ವೇತಾ ಶಂಕರ್
ತಾರಾಗಣ: ಅನೀಶ್ ತೇಜೇಶ್ವರ್, ಶ್ರಾವ್ಯಾ ರಾವ್, ತೇಜು, ದ್ವಾರಕೀಶ್ ಮತ್ತಿತರರು
ಚಿತ್ರದ ನಾಯಕ ಶಂಕರ್ ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸಿನೊಂದಿಗೆ ಬೆಂಗಳೂರಿಗೆ ಬಂದವನು. ಅವಕಾಶಕ್ಕಾಗಿ ಅಲೆದು, ಹತ್ತಾರು ನಿರ್ಮಾಪಕರಿಗೆ ಕಥೆ ಹೇಳಿ ಸುಸ್ತಾಗುತ್ತಾನೆ. ಆತನ ಯಾವ ಕನಸುಗಳೂ ಈಡೇರದೇ ಸಾಯುವ ನಿರ್ಧಾರಕ್ಕೆ ಬರುತ್ತಾನೆ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವ ದೃಶ್ಯದಿಂದಲೇ ‘ಮಾಯಾನಗರಿ’ ಸಿನಿಮಾ ಪ್ರಾರಂಭವಾಗುತ್ತದೆ. ಸಿನಿಮಾರಂಗದಲ್ಲಿರುವವರಿಗೆ ಕಥೆ ಬಹುಬೇಗ ‘ಕನೆಕ್ಟ್’ ಆಗುತ್ತದೆ.
ಶಂಕರ್ ಈ ಚಿತ್ರದಲ್ಲಿ ನಟ ಶಂಕರ್‌ನಾಗ್ ಅಭಿಮಾನಿಯಾಗಿರುವುದರಿಂದ ಅವರನ್ನು ನೆನಪಿಸುವ ಕೆಲವು ದೃಶ್ಯಗಳು ಬರುತ್ತವೆ. ಇಡೀ ಸಿನಿಮಾದ ಕಥೆ ನಡೆಯುವ ಮುಖ್ಯ ಜಾಗಕ್ಕೂ ನಿರ್ದೇಶಕರು ಶಂಕರ್‌ನಾಗ್ ಹುಟ್ಟೂರಿನ ಹೆಸರನ್ನೇ ಇಟ್ಟು ಅವರ ಮೇಲಿನ ಪ್ರೀತಿಯನ್ನು ಇನ್ನಷ್ಟು ಮೆರೆದಿದ್ದಾರೆ. ಶಂಕರ್ ಪಾತ್ರದಲ್ಲಿ ಅನೀಶ್ ತೇಜೇಶ್ವರ್ ಅಚ್ಚುಕಟ್ಟಾಗಿ ನಟಿಸಿದ್ದಾರೆ. ನಟಿ ತೇಜು ಮೊದಲಾರ್ಧದಲ್ಲಿ ಸಿಗುವ ಸ್ವಲ್ಪ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಇಷ್ಟಾಗಿಯೂ ಸಿನಿಮಾ ಮಾಮೂಲಿ ಕಥೆಯಲ್ಲ. ನಿರ್ದೇಶಕರು ಕಥೆಗೆ ಅಲ್ಲಲ್ಲಿ ತಿರುವು ನೀಡುತ್ತಾ ಹೋಗುತ್ತಾರೆ. ನಟ ದ್ವಾರಕೀಶ್ ನಿರ್ಮಾಪಕನ ಪಾತ್ರದಲ್ಲಿ ತೆರೆಯ ಮೇಲೆ ಬಂದಿದ್ದು ಒಂದು ರೀತಿ ಅಚ್ಚರಿ. ಅವರ ಆಗಮನದ ನಂತರ ಚಿತ್ರ ಬೇರೆಯದೇ ರೀತಿ ತಿರುವು ಪಡೆದುಕೊಳ್ಳುತ್ತದೆ. ಇದೊಂದು ಮಾಮೂಲಿ ಹಾಡು, ಫೈಟು, ಲವ್ ಪರಿಕಲ್ಪನೆಯ ಚಿತ್ರ ಎನ್ನುವುದೇ ಸಂಪೂರ್ಣವಾಗಿ ಬದಲಾಗುತ್ತದೆ. ನಾಯಕ ಶಂಕರ್ ತನ್ನ ಚಿತ್ರಕ್ಕಾಗಿ ಒಂದು ಕಥೆಯನ್ನು ಹುಡುಕುವುದರೊಂದಿಗೆ ಚಿತ್ರ ಹಾರರ್ ಜಾನರ್‌ಗೆ ಬದಲಾಗುತ್ತದೆ. ಅದಕ್ಕೆ ಅಗತ್ಯ ಭಯವನ್ನು ಹುಟ್ಟಿಸುವಲ್ಲಿ ನಿರ್ದೇಶಕರು ಯಶ್ವಸಿಯಾಗಿದ್ದಾರೆ. ಭಯದ ನಡುವೆಯೇ ಬರುವ ನಟ ಚಿಕ್ಕಣ್ಣ ಸಹಜವಾಗಿ ನಗಿಸುತ್ತಾರೆ.
ಇಡೀ ಚಿತ್ರವನ್ನು ಹಾರರ್ ಜಾನರ್‌ನಲ್ಲಿಯೇ ಕಟ್ಟಿಕೊಡುವ ಅವಕಾಶ ನಿರ್ದೇಶಕರಿಗಿತ್ತು. ಮೊದಲಾರ್ಧದಲ್ಲಿ ಕಥೆಗೆ ಅನವಶ್ಯ ಪ್ರೀತಿ, ಹೊಡೆದಾಟದ ದೃಶ್ಯಗಳನ್ನು ಸೇರಿಸಿ ಕಮರ್ಷಿಯಲ್ ಚಿತ್ರವನ್ನಾಗಿಸುವ ನಿರ್ದೇಶಕರ ಯತ್ನ ಫಲಿಸಿಲ್ಲ. ದ್ವಿತೀಯಾರ್ಧದಲ್ಲಿ ತೆರೆದುಕೊಳ್ಳುವ ಶ್ರಾವ್ಯರಾವ್ ಅಭಿನಯದ ಕಥೆಗೂ ಕಮರ್ಷಿಯಲ್ ಲೇಪ ಅನವಶ್ಯವಾಗಿತ್ತು. ಹಾರರ್ ಸನ್ನಿವೇಶಗಳಲ್ಲಿ ಹಿನ್ನೆಲೆ ಸಂಗೀತ ಭಯ ಹುಟ್ಟಿಸುತ್ತದೆ. ಆದರೆ ಹಾಡುಗಳು ಕಾಡುವುದಿಲ್ಲ. ಹಲವು ವರ್ಷಗಳಷ್ಟು ಹಳೆಯ ಸಿನಿಮಾ ಇದಾಗಿರುವುದರಿಂದ ಛಾಯಾಚಿತ್ರಗ್ರಹಣ ವರ್ಣಮಯವೆನಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.