
ಚಿತ್ರದ ಪೋಸ್ಟರ್
ಕೆಲ ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೊನಾ ಜಗತ್ತಿನ ದಿಕ್ಕನ್ನು ಬದಲಿಸಿತು. ಅದರಿಂದ ಹಲವರ ಬದುಕಿನಲ್ಲಿ ಏರಿಳಿತಗಳಾದವು. ವಿಶೇಷವಾಗಿ ಸಣ್ಣಪುಟ್ಟ ವಹಿವಾಟು ನಡೆಸಿಕೊಂಡಿದ್ದ ಬಡ ಕುಟುಂಬಗಳು ಬೀದಿಗೆ ಬಿದ್ದವು. ಅಂಥದ್ದೇ ಒಂದು ಕುಟುಂಬದ ಕಥೆಯನ್ನು ಹೊಂದಿರುವ ಚಿತ್ರ ‘ಮಗ್ಗಿ ಪುಸ್ತಕ’. ಗರ್ಭಿಣಿಯೊಬ್ಬಳು ಬೀದಿಗೆ ಬೀಳುತ್ತಾಳೆ. ಆಕೆಗೊಂದು ಹೆಣ್ಣುಮಗು ಜನಿಸುತ್ತದೆ. ಆ ಮಗುವೇ ಕಥಾನಾಯಕಿ ಭಾಗ್ಯ. ಆಕೆಯ ಕಥೆಯಿಂದ ಸಿನಿಮಾ ಪ್ರಾರಂಭವಾಗುತ್ತದೆ.
ಪ್ರಾರಂಭದಲ್ಲಿ ಇದೊಂದು ಮಹಿಳಾ ಪ್ರಧಾನ ಸಿನಿಮಾವಿರಬಹುದು ಎನ್ನಿಸಿದರೂ, ನಂತರ ಇಡೀ ಸಿನಿಮಾ ಕೊರೊನಾ ಕಾಲಘಟ್ಟ ಮತ್ತು ಮೊಬೈಲ್‌ಗೆ ಸಂಬಂಧಿಸಿದ ಕಥೆಯಾಗಿ ಪರಿವರ್ತನೆಗೊಳ್ಳುತ್ತದೆ. ಕೊರೊನಾ ಸಮಯದಲ್ಲಿ ಭಾಗ್ಯಳ ಕುಟುಂಬ ಅನುಭವಿಸುವ ನೋವು, ಸಂಕಟಗಳನ್ನು ಹೇಳಲಾಗಿದೆ. ಜತೆಗೆ ಆನ್‌ಲೈನ್ ತರಗತಿಯಿಂದ ಭಾಗ್ಯಳ ಮಗಳ ಕೈಗೊಂದು ಮೊಬೈಲ್ ಬರುತ್ತದೆ. ಒಂದು ಬಡ ಕುಟುಂಬ ಮೊಬೈಲ್ ಖರೀದಿಸಲು ಎಷ್ಟೆಲ್ಲ ಕಷ್ಟಪಡುತ್ತದೆ ಎಂಬುದನ್ನೂ ತೋರಿಸಲಾಗಿದೆ.
ಮೊಬೈಲ್‌ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವೂ ಇದೆ. ಬಡ ಕುಟುಂಬದ ಹೆಣ್ಣುಮಗುವೊಂದು ಮೊಬೈಲ್‌ನಿಂದ ಏನೆಲ್ಲ ಅಪಾಯಕ್ಕೆ ಸಿಲುಕಿಕೊಳ್ಳುತ್ತಾಳೆ, ಅದರಿಂದ ಕುಟುಂಬದ ಮೇಲೆ ಯಾವ ರೀತಿ ಪರಿಣಾಮಗಳಾಗುತ್ತವೆ ಎಂಬುದೇ ನಂತರದ ಕಥೆ. ಆ ಮೊಬೈಲ್‌ಗೆ ಬರುವ ಕರೆಗಳ ಸಂಖ್ಯೆಗೂ, ಮಗ್ಗಿ ಪುಸ್ತಕಕ್ಕೂ ಸಂಬಂಧ ಕಲ್ಪಿಸಿ ಶೀರ್ಷಿಕೆಯನ್ನು ಸಮರ್ಥಿಸಿಕೊಳ್ಳುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಕನ್ನಡದ ಅಕ್ಷರಮಾಲೆ, ಸಂಖ್ಯೆಗಳು, ಶ್ಲೋಕಗಳು, ಕಾಗುಣಿತ, ಸರಳ ಗಣಿತ...ಎಲ್ಲವೂ ಮಗ್ಗಿ ಪುಸ್ತಕದಲ್ಲಿ ಅಡಕವಾಗಿರುತ್ತಿತ್ತು. ಅದನ್ನು ನೆನಪಿಸಿಕೊಳ್ಳಲೆಂಬಂತೆ ರೂಪಕವಾಗಿ ಮಗ್ಗಿ ಪುಸ್ತಕ ಅಲ್ಲಲ್ಲಿ ಬರುತ್ತದೆ. ಜೀವನವೂ ಕೂಡ ಮಗ್ಗಿ ಪುಸ್ತಕದಂತೆ ಎನ್ನುವ ನಿರ್ದೇಶಕರು, ಬದುಕಿನಲ್ಲಿ ಯಾವುದನ್ನು ಕಳೆಯಬೇಕು, ಕೂಡಬೇಕು, ಭಾಗಿಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಲು ಚಿತ್ರದುದ್ದಕ್ಕೂ ಯತ್ನಿಸಿದ್ದಾರೆ.
ನಿರೂಪಣೆ ಮತ್ತು ಕಥೆಯಿಂದ ಕಲಾತ್ಮಕ ಚಿತ್ರ ಎನ್ನಿಸುತ್ತದೆ. ಆದಾಗ್ಯೂ ಹಾಡುಗಳಿಂದ, ಕೆಲ ದೃಶ್ಯಗಳಿಂದ ಚಿತ್ರಕ್ಕೆ ಕಮರ್ಷಿಯಲ್ ರೂಪ ಕೊಡಲು ನಿರ್ದೇಶಕರು ಯತ್ನಿಸಿರುವುದು ಎದ್ದು ಕಾಣುತ್ತದೆ. ಅಪ್ಪನ ಕುರಿತಾಗಿ, ಅಮ್ಮನ ಬಗೆಗಿನ ಹಾಡುಗಳ ಭಾವನಾತ್ಮಕವಾಗಿವೆ. ಚಿತ್ರದ ದೊಡ್ಡ ಶಕ್ತಿ ಒಳ್ಳೊಳ್ಳೆ ಗಾಯಕರು ಹಾಡಿರುವ ಹಾಡುಗಳು. ಆದರೆ ಅವುಗಳಲ್ಲಿ ಕೆಲವು ಸನ್ನಿವೇಶಗಳಿಗೆ ಪೂರಕವಾಗಿಲ್ಲ ಎಂಬ ಭಾವನೆ ಮೂಡಿಸುತ್ತವೆ. ಒಂದಷ್ಟು ಅನವಶ್ಯ ದೃಶ್ಯಗಳಿಗೆ ಕತ್ತರಿ ಹಾಕಿ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರಕಥೆಗೆ ಇನ್ನಷ್ಟು ಒತ್ತುಕೊಡಬಹುದಿತ್ತು.
ಭಾಗ್ಯ ಆಗಿ ರಕ್ಷಾ ಗೌಡ ಇಷ್ಟವಾಗುತ್ತಾರೆ. ಆಕೆಯ ತಾಯಿಯಾಗಿ ಮೇಘಶ್ರೀ, ತಾತನಾಗಿ ಮೈಸೂರು ರಮಾನಂದ್ ಗಮನ ಸೆಳೆಯುತ್ತಾರೆ. ರಂಜನ್, ರಾನ್ವಿ ಶೇಖರ್ ಈ ಕಾಲಘಟ್ಟದ ಹುಡುಗರನ್ನು ಪ್ರತಿನಿಧಿಸುತ್ತಾರೆ. ಯಶಸ್ ನಾಚಪ್ಪ ಸಂಗೀತ ಉತ್ತಮವಾಗಿದೆ. ಛಾಯಾಚಿತ್ರಗ್ರಹಣ ಇನ್ನಷ್ಟು ಸೊಗಸಾಗಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.