ADVERTISEMENT

Film Review - ಮೋಹನದಾಸ | ಸತ್ಯದೊಂದಿಗೆ ‘ಮೋಹನದಾಸ’ನ ಮುಖಾಮುಖಿ

ಶರತ್‌ ಹೆಗ್ಡೆ
Published 1 ಅಕ್ಟೋಬರ್ 2021, 16:03 IST
Last Updated 1 ಅಕ್ಟೋಬರ್ 2021, 16:03 IST
ಮೋಹನದಾಸ 
ಮೋಹನದಾಸ    

l ನಿರ್ಮಾಣ: ಮಿತ್ರಚಿತ್ರ

l ನಿರ್ದೇಶನ: ಪಿ.ಶೇಷಾದ್ರಿ

l ಸಂಗೀತ: ಪ್ರವೀಣ್‌ ಗೋಡ್ಖಿಂಡಿ

ADVERTISEMENT

l ಛಾಯಾಗ್ರಹಣ: ಜಿ.ಎಸ್‌. ಭಾಸ್ಕರ್‌

l ಸಂಕಲನ: ಬಿ.ಎಸ್‌. ಕೆಂಪರಾಜು

l ತಾರಾಗಣ: ಸಮರ್ಥ್‌ ಹೊಂಬಾಳ್‌, ಪರಂ ಸ್ವಾಮಿ, ಶ್ರುತಿ, ಅನಂತ್‌ ಮಹದೇವನ್‌, ದತ್ತಣ್ಣ

***

ಬಾಲ್ಯದಿಂದಲೇ ಮಹಾತ್ಮಾ ಗಾಂಧೀಜಿಯವರ ಸತ್ಯದೊಂದಿಗಿನ ಅಪ್ಪಟ ಹೋರಾಟವನ್ನು ಕಟ್ಟಿಕೊಡಲು ಯತ್ನಿಸಿದೆ ಪಿ. ಶೇಷಾದ್ರಿ ನಿರ್ದೇಶನದ ‘ಮೋಹನದಾಸ’.

ಬಾಲಕ ಮೋಹನದಾಸ ತಪ್ಪು ಮಾಡುತ್ತಾನೆ. ಗೊತ್ತಿದ್ದೂ ಆ ತಪ್ಪುಗಳನ್ನು ಮತ್ತೆ ಮಾಡುತ್ತಾನೆ. ಮನಸ್ಸಿನಲ್ಲಿ ತೊಳಲಾಡುತ್ತಾನೆ. ಅದೆಲ್ಲವನ್ನೂ ಹೇಳಲೇಬೇಕೆಂದಾಗ ಕೇಳುವ ಕಿವಿಗಳಿಗೆ ತಡಕಾಡುತ್ತಾನೆ. ಪಶ್ಚಾತ್ತಾಪದ ಘಟನೆಗಳನ್ನೆಲ್ಲಾ ಅಕ್ಷರ ರೂಪಕ್ಕಿಳಿಸಿ ಅಪ್ಪನಿಗೆ ಒಪ್ಪಿಸುತ್ತಾನೆ. ಪತ್ರ ಓದಿದ ಕರಮಚಂದ್‌, ‘ಈಗ ನೀನು ಶುದ್ಧ ಅಪರಂಜಿಯಾದೆ’ ಎಂದು ಘೋಷಿಸುವಲ್ಲಿಗೆ ಮೋಹನದಾಸನ ಬಾಲ್ಯದ ಶೋಧ ತೆರೆಯ ಮೇಲೆ ಮುಗಿಯುತ್ತದೆ.

ಪೋರಬಂದರ್‌ನಲ್ಲಿ ಗಾಂಧೀಜಿಯ ಬಾಲ್ಯಸಹಜ ಜೀವನದ ಕೆಲವೇ ಘಟನೆಗಳನ್ನು ಆಯ್ದುಕೊಂಡು ಪ್ರತ್ಯೇಕ ಘಟಕಗಳನ್ನಾಗಿಸಿ (ಬ್ಲಾಕ್‌ಗಳನ್ನಾಗಿಸಿ) ನಿರ್ದೇಶಕರು ವಿಸ್ತರಿಸುತ್ತಾ ಹೋಗಿದ್ದಾರೆ. ಹಾಗಾಗಿ ಇಡೀ ಚಿತ್ರದಲ್ಲಿ ಯಾವುದಾದರೂ ಒಂದು ಬ್ಲಾಕ್‌ ನೋಡಿದರೂ ‘ಮೋಹನದಾಸ’ ಪ್ರೇಕ್ಷಕನಿಗೆ ತಲುಪಿಬಿಡುತ್ತಾನೆ.

ಹಣ ಕಳ್ಳತನ ಮಾಡಿದ್ದು, ಸಿಗರೇಟ್‌ ಸೇದಿದ್ದು, ಮಾಂಸ ತಿಂದದ್ದು... ಇದೇ ನಾನು ಮಾಡಿದ ತಪ್ಪು ಎಂದು ಗಾಂಧೀಜಿಯ ತೊಳಲಾಟವನ್ನು ತೋರಿಸುವಲ್ಲಿ ಈ ಎರಡೇ ಸನ್ನಿವೇಶಗಳನ್ನು ಚಿತ್ರದುದ್ದಕ್ಕೂ ಹೆಚ್ಚು ತೋರಿಸಿದ್ದಾರೆ. ಹಾಗಾಗಿ ಸಣ್ಣ ಸಣ್ಣ ಸಂದರ್ಭಗಳ ಸಾಕ್ಷ್ಯಚಿತ್ರದಂತೆಯೂ ‘ಮೋಹನದಾಸ’ ಗೋಚರಿಸುತ್ತದೆ.

ತಾಂತ್ರಿಕವಾಗಿ ಗಾಂಧಿ ಕಾಲದ ಸನ್ನಿವೇಶ, ಹಿನ್ನೆಲೆಗಳ ಮರುಸೃಷ್ಟಿಗೆ ನಿರ್ದೇಶಕರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಸ್ವವಿಮರ್ಶೆಯ ಸನ್ನಿವೇಶವನ್ನು ನೆರಳು ಮತ್ತು ಮಂದ ಬೆಳಕಿನಲ್ಲೇ ಕಥೆ ಹೇಳಲು ಛಾಯಾಗ್ರಹಣ ಪ್ರಯತ್ನಿಸಿದೆ. ಕೆಲವೆಡೆ ಸಾಕಷ್ಟು ಪ್ರಯಾಸಪಟ್ಟಿದೆ. ಯಾವುದೇ ಕಸರತ್ತು ಇಲ್ಲದ ಪ್ರಸ್ತುತಿ ಇದೆ.ಹಲವೆಡೆ ಮೌನವೇ ಸಾಕಷ್ಟು ಮಾತನಾಡುತ್ತದೆ. ಅಲ್ಲಲ್ಲಿ ಸರಳ ಸಾಹಿತ್ಯದ ಹಾಡುಗಳು, ವೈಷ್ಣವ ಜನತೋ ಕನ್ನಡ ಅವತರಣಿಕೆಯೇನೋ ಇದೆ. ಆದರೆ ಅದೇ ಹಾಡಿನ ಹಿನ್ನೆಲೆ ಸಂಗೀತ ಮಾತ್ರ ಮನಸ್ಸಿನಲ್ಲಿ ಉಳಿಯುತ್ತದೆ.

ಕಸ್ತೂರ್‌ಬಾ ಪಾತ್ರ ಗೃಹಿಣಿಯ ನಡ
ವಳಿಕೆಗಷ್ಟೇ ಸೀಮಿತವಾಗಿಬಿಟ್ಟಿದೆ. ಪುತಲಿಬಾಯಿ (ಶ್ರುತಿ) ಮೋಹನ
ದಾಸನ ಶಕ್ತಿ. ಆದರೆ, ಕರಮ್‌ಚಂದ್‌ (ಅನಂತ್‌ ಮಹದೇವನ್‌) ಕೊನೆವರೆಗೂ ಅಸೌಖ್ಯದಿಂದ ಶಯ್ಯಾವಸ್ಥೆಯಲ್ಲೇ ಇರುವ ಪಾತ್ರವಾಗಿ ಮಲಗಿಯೇಬಿಟ್ಟಿದೆ. ಪಶ್ಚಾತ್ತಾಪ ಅರ್ಪಣೆ ವೇಳೆಗಷ್ಟೇ ತಂದೆತನದ ಉತ್ಕಟ ಭಾವ ಪ್ರಕಟಿಸಲು ಅವಕಾಶ ಸಿಕ್ಕಿದೆ.

ದತ್ತಣ್ಣ ಗರ್ದಿಗಮ್ಮತ್ತಿನ ವಿವರಣೆಕಾರನ ವೇಷದಲ್ಲಿ ಕಾಣಿಸಿ ಶ್ರವಣಕುಮಾರನ ಕಥೆ ಹೇಳುವ ಪರಿ, ಮಕ್ಕಳಿಗೆ ತಾತನನ್ನು ನೆನಪಿಸುತ್ತದೆ. ‘ಶ್ರವಣ ಕುಮಾರ ಸತ್ತಿಲ್ಲ, ನಮ್ಮ ಹೃದಯದಲ್ಲೇ ಇದ್ದಾನೆ’ ಎಂದಾಗ, ಅದು ಮೋನ್ಯಾನ (ಮೋಹನದಾಸ) ಪಾಲಿಗೆ ಒಗಟಾಗಿ ಕೇಳುತ್ತದೆ. ಕೊನೆಯಲ್ಲಿ ಗೆಲ್ಲುವ ಸತ್ಯಕ್ಕಾಗಿ ನಾವೇಕೆ ಜೀವನಪೂರ್ತಿ ಕಷ್ಟಪಡಬೇಕು? ಎಂಬ ಮೋಹನದಾಸನ ಪ್ರಶ್ನೆಗೆ ಪುತಲಿಬಾಯಿ, ‘ಅದೆಲ್ಲಾ ದೇವರ ಪರೀಕ್ಷೆ’ ಎಂದು ಉತ್ತರಿಸುವುದು ಆ ಸಂದರ್ಭವನ್ನು ನಿವಾರಿಸುವ ಪ್ರಯತ್ನವಾಗಿ ಕಾಣಿಸುತ್ತದೆಯೇ ವಿನಾ ಮೋಹನದಾಸನಿಗೆ ಸರಿಯಾದ ಉತ್ತರ ಆಗುವುದಿಲ್ಲ.ಕರ್ಸನ್‌ದಾಸ್‌ ಗಾಂಧಿಗೆ ಸಾಲಕೊಟ್ಟ ಸ್ನೇಹಿತರು ಮೋಹನದಾಸನನ್ನು ಅಡ್ಡಗಟ್ಟಿ ಚೂರಿ ಹಿಡಿದು ಬೆದರಿಸುವುದು, ಬಾಲಿಶ ಸನ್ನಿವೇಶ ಎನಿಸುತ್ತದೆ.

ಒಟ್ಟಿನಲ್ಲಿ ಗಾಂಧಿಯನ್ನು ಎರಡು ಗಂಟೆಗಳ ಚೌಕಟ್ಟಿನಲ್ಲಿ ಹಿಡಿದಿಡುವುದು ಕಷ್ಟ. ಆದರೆ, ಅಷ್ಟರೊಳಗೆ ಸಾಧ್ಯವಾದಷ್ಟು ಅರ್ಥ ಮಾಡಿಸಲು ಪ್ರಯತ್ನ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.