ADVERTISEMENT

‘ಪಪ್ಪಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರವಿಲ್ಲದೆ ಕಟ್ಟಿದ ಸರಳ ಕಥೆ

ಅಭಿಲಾಷ್ ಪಿ.ಎಸ್‌.
Published 2 ಮೇ 2025, 10:32 IST
Last Updated 2 ಮೇ 2025, 10:32 IST
ಪಪ್ಪಿ ಸಿನಿಮಾ 
ಪಪ್ಪಿ ಸಿನಿಮಾ    

‘ತಿಥಿ’, ‘ದೊಡ್ಡಹಟ್ಟಿ ಬೋರೇಗೌಡ’, ‘ಫೋಟೋ’, ‘ಶಿವಮ್ಮ’ ಹೀಗೆ ಕೆಲ ಸಿನಿಮಾಗಳು ಸಿದ್ಧಸೂತ್ರಕ್ಕೆ ಅಂಟಿಕೊಳ್ಳದೆ ಆದಷ್ಟು ನೈಜವಾಗಿ ಹಳ್ಳಿಯ ಜನರ ಕಥೆಗಳನ್ನು ಮನರಂಜನಾತ್ಮಕವಾಗಿ, ಭಾವನಾತ್ಮಕವಾಗಿ ತೆರೆ ಮೇಲೆ ತಂದಿವೆ. ‘ಪಪ್ಪಿ’ ಇದಕ್ಕೆ ಹೊಸ ಸೇರ್ಪಡೆ. ಅಪ್ಪಟ ಉತ್ತರ ಕರ್ನಾಟಕ ಭಾಷೆಯ ಈ ಸಿನಿಮಾ ಮನುಷ್ಯ–ನಾಯಿಯ ಪರಸ್ಪರ ಪ್ರೀತಿ, ವಿಶ್ವಾಸದ ಕಥೆ ಹೇಳುತ್ತಾ ವಾಸ್ತವ ಸ್ಥಿತಿಗತಿಗಳನ್ನು ತೆರೆದಿಟ್ಟಿದೆ.

ಬರಗಾಲದ ಕಾರಣದಿಂದ ಕೆಲಸ ಅರಸಿ ಸಿಂಧನೂರು ತಾಲ್ಲೂಕಿನ ದಡೇಸುಗೂರಿನ ದುರುಗಪ್ಪ–ರೇಣುಕಾ ದಂಪತಿ ಪುತ್ರ ಪರಶುರಾಮನ(ಪರ್ಶ್ಯಾ) ಜೊತೆ ಬೆಂಗಳೂರು ದಾರಿ ಹಿಡಿಯುತ್ತಾರೆ. ರೇಣುಕಾಳ ಅಣ್ಣ ಕನಕಪ್ಪನೂ ಜೊತೆಗಿದ್ದಾನೆ. ತಮ್ಮದೇ ಊರಿನ ಮೇಸ್ತ್ರಿಯ ಕೈಯಡಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿರುತ್ತಾರೆ. ಉಳಿಯಲೊಂದು ಗುಡಿಸಲು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಮೇಸ್ತ್ರಿಯೇ ಶಿಕ್ಷಕಿಯನ್ನು ನೇಮಿಸಿದ್ದಾನೆ. ಪರ್ಶ್ಯಾನನ್ನು ದುರುಗಪ್ಪ ಇಲ್ಲಿಗೆ ಸೇರಿಸುತ್ತಾನೆ. ಪರ್ಶ್ಯಾನಿಗೆ ಆದಿ ಸ್ನೇಹಿತನಾಗುತ್ತಾನೆ. ‘ಪಪ್ಪಿ ಎಂಬ ನಾಯಿಮರಿ ಕಳೆದುಹೋಗಿದೆ, ಹುಡುಕಿಕೊಟ್ಟವರಿಗೆ ₹10 ಸಾವಿರ ಬಹುಮಾನ’ ಎಂಬ ಜಾಹೀರಾತು ಸಿನಿಮಾದ ಕಥೆಯನ್ನು ಮುಂದುವರಿಸುತ್ತದೆ. 

ಸಿನಿಮಾದ ಮುಖ್ಯ ಕಥೆ ಪ್ರಾರಂಭವಾಗುವುದು ಮಧ್ಯಂತರದ ವೇಳೆಗೆ. ಚಿತ್ರದ ಮೊದಲಾರ್ಧವನ್ನು ಹಲವು ವಿಷಯಗಳನ್ನು ಹೇಳುವುದಕ್ಕಾಗಿ ನಿರ್ದೇಶಕರು ಮೀಸಲಿಟ್ಟಿದ್ದಾರೆ. ಬರಗಾಲ–ಸಾಲ, ಬೆಂಗಳೂರಿಗೆ ಉತ್ತರ ಕರ್ನಾಟಕದ ಜನರ ಗುಳೆ, ಮಹಾನಗರದೊಳಗೆ ಸಣ್ಣ ಗುಡಿಸಲುಗಳಲ್ಲಿ ಅವರ ಬದುಕು, ಅವರು ಕಾಣುವ ಸಣ್ಣ ಕನಸುಗಳು, ಬದಲಾದ ಉತ್ತರ ಕರ್ನಾಟಕದ ಜನರ ಜೀವನಶೈಲಿ, ಪರ್ಶ್ಯಾ–ಆದಿಯ ಸ್ನೇಹವನ್ನು ತೋರಿಸುವುದಕ್ಕೆ ಈ ಅವಧಿ ಬಳಕೆಯಾಗಿದೆ. ಇದು ಕೊಂಚ ದೀರ್ಘವೆನಿಸುತ್ತದೆ. ಮೊದಲಾರ್ಧದಲ್ಲೇ ಬರುವ ‘ಕಾಲ ಕೆಟೈತಂತ’ ಹಾಡಿನಲ್ಲಿ ಮಕ್ಕಳ ಮೂಲಕ ಸಮಾಜದಲ್ಲಿನ ಆಗುಹೋಗುಗಳನ್ನು ನಿರ್ದೇಶಕರು ಪ್ರಸ್ತುತಪಡಿಸಿದ್ದಾರೆ. ಆಕಾಶದೆತ್ತರದ ಅಪಾರ್ಟ್‌ಮೆಂಟ್‌ಗಳ ಕೆಳಗೆ ಕಾರ್ಮಿಕರ ಗುಡಿಸಲುಗಳು, ಅವರ ಜೀವನ ಹಲವು ಕಥೆಗಳನ್ನು ಮೌನವಾಗಿಯೇ ಹೇಳುತ್ತವೆ. ಕಥೆಯ ಎಳೆ ಸಣ್ಣದಾಗಿರುವುದರಿಂದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು.      

ADVERTISEMENT

ಉತ್ಸವ್‌ ಗೋನವಾರ ನಿರ್ದೇಶನದ ‘ಫೋಟೋ’ ಇದೇ ರೀತಿ ಹುಡುಗನೊಬ್ಬನ ಕನಸಿನ ಸುತ್ತವಿತ್ತು. ಅದರಲ್ಲೂ ಕೋವಿಡ್‌ ಲಾಕ್‌ಡೌನ್‌ ವಿಷಯವನ್ನೇ ಆಧಾರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿತ್ತು. ಈ ಸಿನಿಮಾದಲ್ಲೂ ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದ ಸ್ಥಿತಿಯನ್ನು ಸಣ್ಣ ಪ್ರಮಾಣದಲ್ಲಿ ಕಟ್ಟಿಕೊಡಲಾಗಿದೆ.    

ನಟನೆಯಲ್ಲಿ ‘ಪರ್ಶ್ಯಾ’ನಾಗಿ ಜಗದೀಶ್‌, ‘ಆದಿ’ಯಾಗಿ ಆದಿತ್ಯ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಜಗದೀಶ್‌ ಮಾತು ಮಾಲೆಪಟಾಕಿಯಂತೆ. ಪರ್ಶನ ಪಾತ್ರಕ್ಕೆ ಜೀವ ತುಂಬುತ್ತಾ ನಾಯಿಯ ಪ್ರೀತಿಯಲ್ಲಿ ಕರಗಿಹೋಗುವ ಪರಿ ಅದ್ಭುತ. ಸಂಭಾಷಣೆ ಪೂರ್ತಿ ಉತ್ತರ ಕರ್ನಾಟಕದ ಸೊಗಡಿನಲ್ಲಿದೆ. ಹೀಗಾಗಿ ಬೈಗುಳಗಳೂ ಸಿನಿಮಾದುದ್ದಕ್ಕೂ ತುಂಬಿಕೊಂಡಿವೆ. ಒಂದು ಹಂತದಲ್ಲಿ ಕಿರಿಕಿರಿ ಅನಿಸುತ್ತದೆ. ದುರುಗಪ್ಪ ಕಂಬ್ಳಿ ಹಾಗೂ ರೇಣುಕಾ ನಟನೆ ಚೆನ್ನಾಗಿದೆ. ಸುರೇಶ್‌ ಬಾಬು ಛಾಯಾಚಿತ್ರಗ್ರಹಣ ಪಾತ್ರಗಳ ಬದುಕನ್ನು ನೈಜವಾಗಿ ಸೆರೆಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.