ADVERTISEMENT

ಉಪೇಂದ್ರ ನಟನೆಯ ಯುಐ ಸಿನಿಮಾ ವಿಮರ್ಶೆ | ಮಿದುಳಿಗೆ ಕೈ ಇಡುವ ಜಗತ್ತು!

ವಿನಾಯಕ ಕೆ.ಎಸ್.
Published 20 ಡಿಸೆಂಬರ್ 2024, 11:11 IST
Last Updated 20 ಡಿಸೆಂಬರ್ 2024, 11:11 IST
ಉಪೇಂದ್ರ
ಉಪೇಂದ್ರ   

ಶ್ರೀಮಂತರ ಸಂಪತ್ತನ್ನು ಕಿತ್ತು ಬಡವರಿಗೆ ಹಂಚಬೇಕು, ಸಮಾಜದಲ್ಲಿ ರಾಜಕಾರಣಿಗಳು ಶ್ರೀಮಂತರಾಗುವುದೇ ಬಡವರ ದುಡ್ಡಿನಿಂದ. ನಾವು ಅವರ ದಾಸ್ಯದಿಂದ ಹೊರಬರಬೇಕು, ಸಾಮಾನ್ಯರು ಶ್ರೀಮಂತರನ್ನು ಆಳುವಂತಾಗಬೇಕು ಎಂಬ ತಮ್ಮ ಹಿಂದಿನ ಸಿನಿಮಾಗಳ ಸಂದೇಶವನ್ನೇ ಉಪೇಂದ್ರ ಮತ್ತೆ ‘ಯುಐ’ನಲ್ಲಿ ಪುನರುಚ್ಚರಿಸಿದ್ದಾರೆ. ಆದರೆ ಅದನ್ನು ಹೇಳಿಕೊಂಡು ಹೋದ ರೀತಿ, ಅದಕ್ಕಾಗಿ ಸೃಷ್ಟಿಸಿದ ಜಗತ್ತು ಭಿನ್ನವಾಗಿದೆ. ಉಪೇಂದ್ರ ಅವರ ‘ಎ’, ‘ಸೂಪರ್‌’ ಸಿನಿಮಾಗಳ ಒಂದಷ್ಟು ಅಂಶಗಳು ಇಲ್ಲಿಯೂ ಮರುಕಳಿಸುತ್ತವೆ. ಅದರಲ್ಲಿಯೂ ‘ಎ’ ಸಿನಿಮಾದ ದೃಶ್ಯಗಳು, ಅಲ್ಲಿ ಬಳಸಿದ್ದ ತಂತ್ರಗಳು ಇಲ್ಲಿಯೂ ಕಾಣಸಿಗುತ್ತದೆ. ಅಷ್ಟಾಗಿಯೂ ‘ಯುಐ’ ಕಥೆ ಇಷ್ಟೇ ಎನ್ನಲು ಸಾಧ್ಯವಿಲ್ಲ. ಮನುಷ್ಯ ಪ್ರಕೃತಿಯನ್ನು ಹಾಳುಗೆಡುವುತ್ತಿರುವುದರಿಂದ ಹಿಡಿದು ಒಳಿತು, ಕೆಡುಕುಗಳವರೆಗೆ ಸಾಕಷ್ಟು ಅಂಶಗಳು ಚಿತ್ರದಲ್ಲಿ ಕಾಣಸಿಗುತ್ತದೆ. ಕಥೆಗಿಂತ ಹೆಚ್ಚಾಗಿ ಚಿತ್ರಕಥೆಯನ್ನು ಪ್ರಮುಖವಾಗಿಸಿಕೊಂಡಿರುವ ಚಿತ್ರವಿದು. 

ಉಪೇಂದ್ರ ಅವರ ‘ಶ್‌’, ‘ಎ’ ಸಿನಿಮಾದಂತೆಯೆ ಇಲ್ಲಿಯೂ ಸಿನಿಮಾದೊಳಗೊಂದು ಸಿನಿಮಾ. ಚಿತ್ರಮಂದಿರದಲ್ಲಿ ‘ಯುಐ’ ಸಿನಿಮಾ ನೋಡಿ ವಿಮರ್ಶೆ ಬರೆಯಲು ಪರದಾಡುವ ವಿಮರ್ಶಕನಿಂದ ಕಥೆ ಆರಂಭವಾಗುತ್ತದೆ. ಉಪೇಂದ್ರ ‘ಎ’ ಸಿನಿಮಾದಲ್ಲಿ ‘ಇದು ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಎಂಬ ಟ್ಯಾಗ್‌ಲೈನ್‌ ಇಟ್ಟಿದ್ದರು. ಇಲ್ಲಿ ‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ..’ ಎಂದಿದ್ದಾರೆ. ಅದೊಂದು ವಿಚಿತ್ರ ಲೋಕ. ಮಿದುಳು ಹೊಂದಿರುವವರ ಲೋಕವದು ಎಂಬುದನ್ನು ಉಪೇಂದ್ರ ಸೂಚ್ಯವಾಗಿ ಹೇಳಿದ್ದಾರೆ. ಅಲ್ಲಿ ಸತ್ಯ ಮತ್ತು ಕಲ್ಕಿಯಾಗಿ ದ್ವಿಪಾತ್ರದಲ್ಲಿ ಉಪೇಂದ್ರ ಬರುತ್ತಾರೆ. ಕಲ್ಕಿ ಖಳನಟನಾಗಿ ಜಗತ್ತನ್ನು ಬದಲಿಸಲು ಹೊರಟವನಾದರೆ, ಸತ್ಯ ಬುದ್ಧನಾಗಿ ಜಗತ್ತನ್ನು ಕಟ್ಟಲು ಹೊರಟವನು. ಕಲ್ಕಿ ಮನುಷ್ಯನ ಬಾಹ್ಯ ರೂಪದ ಪ್ರತೀಕವಾದರೆ, ಸತ್ಯ ಮನುಷ್ಯನ ಆಂತರಿಕ ರೂಪ ಎಂಬುದನ್ನು ಒಂದುಕಡೆ ಹೇಳುತ್ತಾರೆ.

ಈ ಜೋಡಿ ಅಲ್ಲಿನ ರಾಜನಾಗಿದ್ದ ರವಿಶಂಕರ್‌ ಅವರನ್ನು ಕುರ್ಚಿಯಿಂದ ಕೆಳಗಿಳಿಸುವುದು, ಅದರ ನಂತರದ ಆ ಸಾಮ್ರಾಜ್ಯವೇ ಒಟ್ಟಾರೆ ಚಿತ್ರಕಥೆ. ಇದಕ್ಕಾಗಿ ನಿರ್ದೇಶಕರು ಸೃಷ್ಟಿಸಿದ ಜಗತ್ತು ಬಹಳ ಮಜವಾಗಿದೆ. ಕಥೆ ಹೇಳಿಕೊಂಡು ಹೋದ ರೀತಿ, ಅದನ್ನು ದೃಶ್ಯವಾಗಿಸಿರುವುದು ಎಲ್ಲವೂ ಕೆಲವು ಕಡೆ ಭಿನ್ನಲೋಕಕ್ಕೆ ಹೋದ ಅನುಭವ ನೀಡುತ್ತದೆ. ಕೋಣೆಯಲ್ಲಿ ಸತ್ಯ ಬಂಧಿಯಾಗಿರುತ್ತಾನೆ. ಹೊರಗೆ ನೂರಾರು ಕೀಗಳು ಬಿದ್ದಿರುತ್ತವೆ. ಸಾಮಾನ್ಯವಾಗಿ ಯಾವ ಕೀ ಯಿಂದ ಬೀಗ ತೆರೆದುಕೊಳ್ಳಬಹುದೆಂದು ಯೋಚಿಸುತ್ತೇವೆ. ಯಾವುದೋ ಒಂದು ಕೀ ಬಳಸಿ, ಲಾಕ್‌ನ ಸ್ಕ್ರೂಗಳನ್ನೇ ಕಳಚಿ ಸತ್ಯ ಲಾಕ್‌ ತೆಗೆಯುತ್ತಾನೆ. ಬಹಳ ಸಮಾಧಾನದಿಂದ ಯೋಚಿಸಿದರೆ ಪರಿಹಾರ ಅಲ್ಲೇ ಇರುತ್ತದೆ. ಗಮನ ಮುಖ್ಯ ಎನ್ನುವ ರೀತಿಯ ಕೆಲವಷ್ಟು ದೃಶ್ಯಗಳು ಹೊಸತನದಿಂದ ಕೂಡಿವೆ. 

ADVERTISEMENT

ಇಡೀ ಚಿತ್ರದ ದೊಡ್ಡ ಶಕ್ತಿ ಉಪೇಂದ್ರ ನಟನೆ. ಸತ್ಯನಾಗಿ ಸೌಮ್ಯ ಪಾತ್ರದಲ್ಲಿ, ಕಲ್ಕಿಯಾಗಿ ರೌದ್ರ ಪಾತ್ರದಲ್ಲಿ ಉಪೇಂದ್ರ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಾರೆ. ರವಿಶಂಕರ್‌ ಪಾತ್ರಕ್ಕೆ ಸ್ವಲ್ಪ ಆದ್ಯತೆ ಇದೆ. ನಾಯಕಿ ಪಾತ್ರ ಹಾಡು, ನೃತ್ಯಕ್ಕೆ ಸೀಮಿತವಾಗಿದೆ. ಉಳಿದ ಪಾತ್ರಗಳಿಗೆ ಮಹತ್ವವಿಲ್ಲ. ಜೊತೆಗೆ ಒಂದು ಸರಿಯಾದ ಅಂತ್ಯವೂ ಇಲ್ಲ. ಗ್ರಾಫಿಕ್ಸ್‌ ಎಂದು ಗೊತ್ತಾಗದಷ್ಟು ಸೊಗಸಾಗಿರುವ ಗ್ರಾಫಿಕ್ಸ್‌ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ತಕ್ಕಂತಿದೆ. ಚಿತ್ರದ ಬಹುತೇಕ ಹಾಡುಗಳು, ಅದರ ಸಾಹಿತ್ಯ ಆ ಸನ್ನಿವೇಶದಲ್ಲಿ ಮಜ ನೀಡುತ್ತವೆ. ಒಂದಷ್ಟು ವಿಷಯಗಳನ್ನು ಉಪದೇಶ ಎನಿಸದಂತೆ ರಂಜನೀಯವಾಗಿ ಹೇಳುವ, ತಾಳ್ಮೆ ಪರೀಕ್ಷಿಸುವ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ನಿರ್ದೇಶಕರಿಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.