
ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ‘ಫ್ಲರ್ಟ್’ ಮಾಡುವ ಹುಡುಗನ ಕಥೆ. ಕಥೆಯ ನಾಯಕ ಕೃಷ್ಣ ಹತ್ತಾರು ಹುಡುಗಿಯರನ್ನು ಫ್ಲರ್ಟ್ ಮಾಡಿಕೊಂಡು ಅಡ್ನಾಡಿಯಂತೆ ಇರುತ್ತಾನೆ. ಚಿತ್ರ ಪ್ರಾರಂಭವಾಗಿ ಮೊದಲ ಹದಿನೈದು–ಇಪ್ಪತ್ತು ನಿಮಿಷ ಇದೊಂದು ಕಾಲಹರಣ ಮಾಡುವ ಸಿನಿಮಾದಂತೆ ಭಾಸವಾಗುತ್ತದೆ. ಆದರೆ ಬಳಿಕ ನಿಧಾನಕ್ಕೆ ತೆರೆದುಕೊಳ್ಳುವ ಕಥೆ ಚಿತ್ರ ಮುಗಿಯುವ ತನಕವೂ ಮಜಲುಗಳನ್ನು ಬದಲಿಸುತ್ತ, ತಿರುವುಗಳೊಂದಿಗೆ ತನ್ನೊಳಗೆ ಸೆಳೆದುಕೊಳ್ಳುತ್ತದೆ. ಕಿರುತೆರೆಯಿಂದ ಹಿರಿತೆರೆಗೆ ಬಂದ ಚಂದನ್ ಕುಮಾರ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಆದರೆ ಎಲ್ಲಿಯೂ ನಿರ್ದೇಶಕನ ಮೊದಲ ಸಿನಿಮಾ ಎಂಬುದು ಗೊತ್ತಾಗದಷ್ಟು ಸೊಗಸಾಗಿ ಚಿತ್ರವನ್ನು ಕಟ್ಟಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಕಥಾನಾಯಕ ಕೃಷ್ಣ ಜಿಮ್ ಟ್ರೈನರ್. ಜಿಮ್‌ಗೆ ಬರುವ ಹುಡುಗಿಯರನ್ನೆಲ್ಲ ಬುಟ್ಟಿಗೆ ಹಾಕಿಕೊಂಡು ಸಂಬಂಧ ಬೆಳೆಸುತ್ತ ಇರುತ್ತಾನೆ. ಆತನ ದೃಷ್ಟಿಯಲ್ಲಿ ಶೇಕಡ 90ರಷ್ಟು ಹುಡುಗಿಯರು ಮೋಸಗಾರ್ತಿಯರು. ಅವರ ಪ್ರಿಯತಮನಿಗೆ ಮೋಸ ಮಾಡಿ ಇನ್ನೊಬ್ಬನ ಜತೆ ಸುತ್ತಾಡುವವರು. ಅಂಥ ಹುಡುಗಿಯರನ್ನು ಪತ್ತೆ ಮಾಡಿ ಅವರ ಪ್ರಿಯತಮನಿಗೆ ವಿಷಯ ತಿಳಿಸಿ, ಬ್ರೇಕ್ ಅಪ್ ಮಾಡಿಸುವುದು ಈತನ ಸೈಡ್ ಬಿಸಿನೆಸ್. ಅವರ ಪ್ರೀತಿ ನಿಜವಾಗಿದ್ದರೆ ತಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ ಎಂಬ ಮನೋಭಾವದ ಹುಡುಗ ಈತ.
ಚಿತ್ರ ಶುರುವಾಗುವುದು ನ್ಯಾಯಾಲಯದಲ್ಲಿ ಕೃಷ್ಣ ಒಂದು ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪದ ವಿಚಾರಣೆಯಿಂದ. ವಿಚಾರಣೆಯ ಜತೆ ಜತೆಗೆ ಕಥೆ ತೆರೆದುಕೊಳ್ಳುತ್ತ ಹೋಗುತ್ತದೆ. ಸಿಕ್ಕ ಹತ್ತಾರು ಹುಡುಗಿಯರಿಗೆ ಮೋಸ ಮಾಡಿಕೊಂಡಿರುವ ಕೃಷ್ಣನಿಗೆ ಬಾಲ್ಯದ ಗೆಳೆಯ ಬಾಲು ಸಿಗುತ್ತಾನೆ. ಆತನೂ ಕೃಷ್ಣನ ಜತೆಯೇ ವಾಸಿಸಲು ಪ್ರಾರಂಭಿಸುತ್ತಾನೆ. ಅದಕ್ಕೆ ಏನು ಕಾರಣ ಎಂಬುದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತದೆ. ಕೃಷ್ಣ ಮತ್ತು ಬಾಲು ನಡುವೆ ಬರುವವಳು ಸನಿಹ. ಈಕೆಯ ಆಗಮನದ ನಂತರ ಕಥೆಯ ದಿಕ್ಕು ಬದಲಾಗುತ್ತದೆ. ಈ ಕಥೆ ಪ್ರಾರಂಭದಲ್ಲಿ ಸ್ವಲ್ಪ ಗೊಂದಲ ಮೂಡಿಸಿದರೂ ದ್ವಿತೀಯಾರ್ಧದಲ್ಲಿ ಕೃಷ್ಣ ಮತ್ತು ಸನಿಹಳ ಕಥೆ ಇಡೀ ಚಿತ್ರವನ್ನು ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ.
ಇಡೀ ಚಿತ್ರದ ದೊಡ್ಡ ಶಕ್ತಿ ಪಾತ್ರವರ್ಗ. ಕೃಷ್ಣನಾಗಿ ಚಂದನ್ ಇಷ್ಟವಾಗುತ್ತಾರೆ. ಸನಿಹಳಾಗಿ ನಿಮಿಕಾ ರತ್ನಾಕರ ಕಣ್ಣುಗಳಿಂದಲೇ ನಟಿಸಿದ್ದಾರೆ. ಪ್ರೇಮಕಥೆಯಲ್ಲಿ ಈ ಜೋಡಿ ಮೋಡಿ ಮಾಡುತ್ತದೆ. ಬಾಲುವಾಗಿ ಗಿರೀಶ್ ಶಿವಣ್ಣ ಹಾವಭಾವಗಳಿಂದಲೇ ನಗಿಸುತ್ತಾರೆ. ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಸ್ನೇಹದ ಹಾಡೊಂದನ್ನು ಹಾಡುತ್ತಾರೆ. ಈ ಹಾಡು ಕಥೆಗೆ ಪೂರಕವಾಗಿದೆ. ವಿನಯ್‌ಗೌಡ ಖಳನಾಯಕ ಎಂಬುದು ಗೊತ್ತಾಗಲು ಬಹಳ ಸಮಯ ಬೇಕಾಗುತ್ತದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಶೇಡ್‌ಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕನ ಅಣ್ಣನಾಗಿ ರಂಗಾಯಣ ರಘು ಇಷ್ಟವಾಗುತ್ತಾರೆ. ಆದರೆ ಕಿರಿಕಿರಿ ಮೂಡಿಸುವುದು ವಕೀಲನಾಗಿ ಬರುವ ಸಾಧು ಕೋಕಿಲ. ಬಹಳ ಗಂಭೀರವಾಗಿ ನಡೆಯಬೇಕಿದ್ದ ಕೋರ್ಟ್ ವಿಚಾರಣೆಯನ್ನು ಹಾಸ್ಯಮಯವಾಗಿಸಿರುವುದು, ಅಲ್ಲಿ ಬರುವ ಪಾತ್ರವರ್ಗಗಳು ಸ್ವಲ್ಪ ಕಿರಿಕಿರಿ ಮೂಡಿಸುತ್ತವೆ.
ನಕುಲ್ ಅಭ್ಯಂಕರ್ ಹಿನ್ನೆಲೆ ಸಂಗೀತ ಸೊಗಸಾಗಿದೆ. ಆದರೆ ಹಾಡುಗಳು ಕಾಡುವುದಿಲ್ಲ. ಎಚ್.ಸಿ. ವೇಣು ಛಾಯಾಚಿತ್ರಗ್ರಹಣ ಕಥೆಗೆ ನ್ಯಾಯ ಒದಗಿಸಿದೆ. ಯಾವ ಪ್ರಮುಖ ಪಾತ್ರವೂ ನಾವು ಊಹಿಸಿಕೊಂಡಂತೆ ಇರುವುದಿಲ್ಲ. ಚಿತ್ರಕಥೆಯಲ್ಲಿ ಭಿನ್ನತೆ ಕಾಣಿಸುತ್ತದೆ. ಚಿತ್ರದ ಮೊದಲಾರ್ಧದ ಕೆಲ ಸನ್ನಿವೇಶಗಳನ್ನು ಕತ್ತರಿಸಿ ಸ್ವಲ್ಪ ಬೇಗ ಮುಖ್ಯ ಕಥೆಗೆ ಬರುವ ಅವಕಾಶ ನಿರ್ದೇಶಕರಿಗಿತ್ತು. ಕೆಲವು ಕಡೆ ಅನವಶ್ಯ ಹಾಸ್ಯಕ್ಕೆ ಕಡಿವಾಣ ಹಾಕಿದ್ದರೆ ಚಿತ್ರ ಇನ್ನಷ್ಟು ಸೊಗಸಾಗುವ ಸಾಧ್ಯತೆ ಇತ್ತು.
ನೋಡಬಹುದಾದ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.