ADVERTISEMENT

‘ಮತ್ಸ್ಯಗಂಧ’ ಸಿನಿಮಾ ವಿಮರ್ಶೆ: ಕೇಸರಿ ಶಾಲಿನಂಚಿನ ಕೊಳೆಯ ಕಥನ

ವಿನಾಯಕ ಕೆ.ಎಸ್.
Published 23 ಫೆಬ್ರುವರಿ 2024, 12:45 IST
Last Updated 23 ಫೆಬ್ರುವರಿ 2024, 12:45 IST
<div class="paragraphs"><p>ಮತ್ಸ್ಯಗಂಧ ಚಿತ್ರದ ದೃಶ್ಯ</p></div>

ಮತ್ಸ್ಯಗಂಧ ಚಿತ್ರದ ದೃಶ್ಯ

   

ಚಿತ್ರ: ಮತ್ಸ್ಯಗಂಧ

ನಿರ್ದೇಶನ: ದೇವರಾಜ್‌ ಪೂಜಾರಿ

ADVERTISEMENT

ನಿರ್ಮಾಣ: ಬಿ.ಎಸ್ ವಿಶ್ವನಾಥ್

ತಾರಾಗಣ: ಪೃಥ್ವಿ ಅಂಬಾರ್‌, ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ಪ್ರಶಾಂತ್‌ ವರದಾಮೂಲ ಮತ್ತಿತರರು

ಹೊನ್ನಾವರದ ಟೊಂಕ ಪೊಲೀಸ್‌ ಠಾಣೆಯಿಂದ ಚಿತ್ರ ಪ್ರಾರಂಭವಾಗುತ್ತದೆ. ಕೇಸುಗಳೇ ಸಿಗದ ಕಡಲತೀರದ ಊರಿನಿಂದ ವರ್ಗಾವಣೆಗೊಂಡು ಹೋದರೆ ಸಾಕು ಎನ್ನುತ್ತಿರುತ್ತಾರೆ ಅಧಿಕಾರಿಗಳು. ಅಂತಹ ಹೊತ್ತಿನಲ್ಲಿ ಅದೇ ಠಾಣೆಯಲ್ಲಿರುವ ಚಿತ್ರದ ನಾಯಕ ಪರಂ, ಇನ್ಸ್‌ಪೆಕ್ಟರ್‌ ಆಗಿ ಬಡ್ತಿ ಪಡೆಯುತ್ತಾನೆ. ಮೀನುಗಾರರು ಮತ್ತು ಕೊಂಕಣಿಗರೇ ಪ್ರಾಬಲ್ಯ ಹೊಂದಿರುವ ಊರದು. ಎಲ್ಲರ ಹೆಗಲಿನಲ್ಲಿಯೂ ಕೇಸರಿ ಶಾಲು, ಬೈಕಲ್ಲಿ ಕೇಸರಿ ಬಾವುಟ. ಈ ಪಾಳಯಕ್ಕೆ ನಾಯಕ ಸ್ಥಳೀಯ ರಾಜಕಾರಣಿ ಸುಧೀರ್‌ ಪ್ರಭು. ಈ ಹುಡುಗರಿಗೆ ಕಿರಿಕ್‌ ಮಾಡಿ ಪರಂ ಊರವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಇದು ಪೊಲೀಸ್‌ ಮತ್ತು ಊರಿನ ನಡುವಿನ ಕಿತ್ತಾಟದ ಕಥೆ ಎನ್ನಿಸುವ ಹೊತ್ತಿಗೆ ನಿರ್ದೇಶಕರು ಕಥೆಗೊಂದು ಒಳ್ಳೆ ಟ್ವಿಸ್ಟ್‌ ನೀಡುತ್ತಾರೆ. 

ಚಿತ್ರದ ಪ್ರಾರಂಭದಲ್ಲಿಯೇ ಅಘನಾಶಿನಿ ತೀರದ ಬೆಸ್ತರ ಕೇರಿಯನ್ನು, ಊರನ್ನು ಬಹಳ ಚೆಂದವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಆದರೆ ನಂತರ ಚಿತ್ರದಲ್ಲಿ ಈ ಸೊಗಡು ಉಳಿದುಕೊಳ್ಳುವುದಿಲ್ಲ. ಇದೊಂದು ಮಾಸ್‌ ಕಥೆಯಾಗಿ ಬದಲಾಗಿ ಬಿಡುತ್ತದೆ. ಪೊಲೀಸ್‌ ಅಧಿಕಾರಿ ಪರಂ ಆಗಿ ಪೃಥ್ವಿ ಅಂಬಾರ್‌ಗೆ ವಿಭಿನ್ನ ಮತ್ತು ಸವಾಲಿನ ಪಾತ್ರ. ಈ ಪಾತ್ರದ ಪೋಷಣೆಯಲ್ಲಿ ಇನ್ನಷ್ಟು ಪಕ್ವ ಬೇಕಿತ್ತು. ಇನ್ಸ್‌ಪೆಕ್ಟರ್‌ ಜೊತೆಗೇ ಇರುವ ಪೇದೆ ದಿನೇಶ್‌ ನಾಯಕನಾಗಿ ರಂಗಭೂಮಿ ಕಲಾವಿದ ಪ್ರಶಾಂತ್‌ ವರದಾಮೂಲ ಅಲ್ಲಲ್ಲಿ ನಗಿಸುತ್ತಾರೆ. ಈ ಪಾತ್ರ ಆಡುವ ಮಾತುಗಳೂ ಉತ್ತರ ಕನ್ನಡದ ಸೊಗಡಿಗೆ ಹಿಡಿದ ಕನ್ನಡಿಯಂತಿವೆ. 

ವ್ಯವಸ್ಥೆ ಬೆಂಬಲಿತ ದೊಡ್ಡ ಗ್ಯಾಂಗೊಂದು ಗಾಂಜಾ ಸಾಗಾಣಿಕೆಗೆ ಊರಲ್ಲಿ ಕೇಸರಿ ಶಾಲು ಹೊದ್ದುಕೊಂಡು, ಪುಂಡಾಟಿಕೆ ಮಾಡಿಕೊಂಡಿರುವ ಈ ಮೀನುಗಾರ ಹುಡುಗರನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದೇ ಮುಖ್ಯ ಕಥೆ. ಖಳನಟರಾಗಿ ಸೌರವ್‌ ಲೋಕೇಶ್‌, ಶರತ್‌ ಲೋಹಿತಾಶ್ವ ಇದ್ದಾರೆ. ಇಲ್ಲಿತನಕ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರಶಾಂತ್‌ ಸಿದ್ಧಿ ಖಳನಟನಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರು ಇವರೇ. ಹಾಡುಗಳು ಕಾಡುವುದಿಲ್ಲ. ಆದರೆ ಹಿನ್ನೆಲೆ ಸಂಗೀತ ಚಿತ್ರಕ್ಕೊಂದು ದೊಡ್ಡ ಬಲ. ಸ್ಥಳೀಯ ವಾದ್ಯಗಳನ್ನೇ ಹೆಚ್ಚಾಗಿ ಬಳಸಿರುವ ಹಿನ್ನೆಲೆ ಸಂಗೀತ ಚಿತ್ರಮಂದಿರದಿಂದ ಆಚೆ ಬಂದ ನಂತರವೂ ಮನಸ್ಸಿನಲ್ಲಿ ಉಳಿಯುತ್ತದೆ. ಛಾಯಾಚಿತ್ರಗ್ರಾಹಕ ಪ್ರವೀಣ್‌ ಪ್ರಭು ಉತ್ತರ ಕನ್ನಡವನ್ನು ಇನ್ನಷ್ಟು ಚೆಂದವಾಗಿ ತೋರಿಸುವ ಅವಕಾಶವಿತ್ತು.

ಕಡಲೂರಿನ ಇಂದಿನ ರಾಜಕೀಯ, ವಾಸ್ತವ ತೆರೆದಿಡುವ ಚೆಂದದ ಕಥೆ. ಆದರೆ ಕಥೆಯ ವಿಸ್ತರಣೆಯಲ್ಲಿ, ಪಾತ್ರ ಪೋಷಣೆಯಲ್ಲಿ ನಿರ್ದೇಶಕರು ಸ್ವಲ್ಪ ಎಡವಿದಂತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.