ADVERTISEMENT

ಸೀತಾರಾಮ ಕಲ್ಯಾಣ: ಸ್ನೇಹ–ಪ್ರೀತಿಯ ದೃಶ್ಯಕಾವ್ಯ

ಕೆ.ಎಚ್.ಓಬಳೇಶ್
Published 25 ಜನವರಿ 2019, 10:36 IST
Last Updated 25 ಜನವರಿ 2019, 10:36 IST
‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಿಖಿಲ್‌ ಕುಮಾರ್‌ ಮತ್ತು ರಚಿತಾ ರಾಮ್
‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಿಖಿಲ್‌ ಕುಮಾರ್‌ ಮತ್ತು ರಚಿತಾ ರಾಮ್   

ಚಿತ್ರ: ಸೀತಾರಾಮ ಕಲ್ಯಾಣ

ನಿರ್ಮಾಣ: ಅನಿತಾ ಕುಮಾರಸ್ವಾಮಿ

ನಿರ್ದೇಶನ: ಎ. ಹರ್ಷ

ADVERTISEMENT

ತಾರಾಗಣ: ನಿಖಿಲ್‌ ಕುಮಾರ್, ರಚಿತಾ ರಾಮ್, ಶರತ್‌ ಕುಮಾರ್‌, ರವಿಶಂಕರ್‌, ಗಿರಿಜಾ ಲೋಕೇಶ್‌, ಮಧುಬಾಲ, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ

**

ನರಸಿಂಹ ಮತ್ತು ಶಂಕರ್‌ ಜೀವದ ಗೆಳೆಯರು. ಶಂಕರ್‌ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಂಪನಿಯ ಒಡೆಯ. ಆರ್ಯ ಅವನ ಮುದ್ದಿನ ಪುತ್ರ. ಆರ್ಯನಿಗೆ ಗೀತಾಳ ಪರಿಚಯವಾಗುವುದು ಸ್ನೇಹಿತನ ಮದುವೆಯಲ್ಲಿ. ಒಲ್ಲದ ಮನಸ್ಸಿನಿಂದಲೇ ಶಿಕ್ಷಣ ಪಡೆಯಲು ನಗರಕ್ಕೆ ಬರುತ್ತಾಳೆ ಗೀತಾ. ಅಲ್ಲಿ ಆಕೆಗೆ ಆರ್ಯನೇ ಗೆಳೆಯ. ಇಬ್ಬರ ಗೆಳೆತನ ಪ್ರೇಮಕ್ಕೆ ತಿರುಗುತ್ತದೆ. ಮದುವೆಯ ಪ್ರಸ್ತಾಪ ಬಂದಾಗ ಪ್ರಾಣ ಸ್ನೇಹಿತರ ನಡುವಿನ ದ್ವೇಷ ಜೀವ ತಳೆಯುತ್ತದೆ. ಇದರಿಂದ ತನ್ನದಲ್ಲದ ತಪ್ಪಿಗೆ ನಾಯಕ ಅಡಕತ್ತರಿಗೆ ಸಿಲುಕುತ್ತಾನೆ.

ಹೀಗೆ ಸ್ನೇಹದ ಮೌಲ್ಯವನ್ನೇ ಬಂಡವಾಳವಾಗಿಸಿಕೊಂಡ ಅಸಂಖ್ಯ ಕಥೆಗಳು ಈಗಾಗಲೇ ಬಂದುಹೋಗಿವೆ. ಕಥೆಯ ದೃಷ್ಟಿಯಿಂದ ‘ಸೀತಾರಾಮ ಕಲ್ಯಾಣ’ ಹೊಸತೇನನ್ನೂ ನೀಡುವುದಿಲ್ಲ. ಆದರೆ ಚಿತ್ರದ ಮೇಕಿಂಗ್, ನಿರೂಪಣೆಯ ಶೈಲಿಯಿಂದ ಪ್ರೇಕ್ಷಕರಿಗೆ ಮುದ ನೀಡುತ್ತದೆ.

ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕ ಎ. ಹರ್ಷ ವೃಥಾ ಕಸರತ್ತುಗಳನ್ನು ನಡೆಸಿಲ್ಲ. ಹುಡುಗನೊಬ್ಬ ಹಳ್ಳಿ ಹುಡುಗಿಯ ನವಿರಾದ ಪ್ರೇಮಕ್ಕೆ ಸಿಲುಕುವುದರೊಂದಿಗೆ ಸಿನಿಮಾ ಶುರುವಾಗುತ್ತದೆ. ನಾಯಕ ಮತ್ತು ನಾಯಕಿಯ ನಡುವಿನ ಸುತ್ತಾಟದಲ್ಲಿಯೇ ಮೊದಲಾರ್ಧ ಮುಗಿದುಹೋಗುತ್ತದೆ. ಮಧ್ಯಂತರದ ವೇಳೆಗೆ ಸ್ನೇಹಿತರ ಮುಖಾಮುಖಿಯೊಂದಿಗೆ ಕ್ರೌರ್ಯದ ಮಗ್ಗಲಿಗೆ ತಿರುಗುವ ಕಥಾನಕ, ಆ ಮೇಲೆ ಕಟ್ಟುಬೀಳುವುದು ಭಾವನಾತ್ಮಕ ಸೂತ್ರಕ್ಕೆ.ಹಾಡು, ಕುಣಿತ, ಹೊಡೆದಾಟದ ಮಗ್ಗಿಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡೇ ತೆರೆಯ ಮೇಲೆ ಕೌಟುಂಬಿಕ ಮೌಲ್ಯ, ಭಾವನಾತ್ಮಕ ಸಂಬಂಧ, ಸ್ನೇಹ, ಪ್ರೀತಿಯ ದೃಶ್ಯಕಾವ್ಯ ಸೃಷ್ಟಿಸಿದ್ದಾರೆ ನಿರ್ದೇಶಕರು.

ಕಥೆಗೊಂದು ತಿರುವು ಸಿಗುವುದೇ ದ್ವಿತೀಯಾರ್ಧದಲ್ಲಿ. ಅಪ್ಪ ಇಷ್ಟಪಟ್ಟ ಹುಡುಗನನ್ನು ಮದುವೆಯಾಗಲು ಹಸೆಮಣೆ ಏರುವ ಗೀತಾ ದಿಢೀರ್‌ ನಾಪತ್ತೆಯಾಗುತ್ತಾಳೆ. ಅವಳ ನಾಪತ್ತೆಗೆ ಕಾರಣ ಏನು ಎನ್ನುವುದೇ ಕಥೆಯ ತಿರುಳು. ಇದನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡಬೇಕು.

ಈ ಚಿತ್ರದಲ್ಲಿ ಲೋಪಗಳು ಇಲ್ಲವೆಂದಿಲ್ಲ. ಸಿನಿಮಾದಲ್ಲೊಂದುದೃಶ್ಯವಿದೆ. ಸಾಲ ತೀರಿಸಲಾಗದೆ ರೈತನೊಬ್ಬ ನೇಣು ಹಾಕಿಕೊಳ್ಳುವ ದೃಶ್ಯವದು. ಕೃಷಿಕರ ನೋವಿಗೆ ಸ್ಪಂದಿಸಲು ನಾಯಕ ಜಲಾಶಯ ನಿರ್ಮಿಸಲು ಮುಂದಾಗುತ್ತಾನೆ.ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಚಿತ್ರತಂಡದ ಉದ್ದೇಶವನ್ನು ಪ್ರೇಕ್ಷಕರು ಅನುಮಾನಿಸುವ ಅಗತ್ಯವಿಲ್ಲ. ಆದರೆ,ಕೌಟುಂಬಿಕ ಕಥನ ಮುನ್ನೆಲೆಗೆ ಬಂದಾಗ ರೈತರ ಸಮಸ್ಯೆಗಳು ಹಿನ್ನೆಲೆಗೆ ಸರಿಯುತ್ತವೆ. ಕೃಷಿ ಸಂಸ್ಕೃತಿಯ ನಾಡಿಮಿಡಿತ ನಿರ್ದೇಶಕರಿಗೆ ಅರ್ಥವಾದಂತಿಲ್ಲ. ನೆಲದ ವಾಸ್ತವದ ಬಗ್ಗೆ ತಿಳಿವಳಿಕೆ ಇಲ್ಲದೆ ಕೇವಲ ಭಾವುಕತೆ ಕಟ್ಟಿಕೊಡುವುದಕ್ಕೇ ಅನ್ನದಾತರ ಸಮಸ್ಯೆಗಳನ್ನು ಸಿನಿಮಾದಲ್ಲಿ ಬಳಸಿರುವುದು ಚೋದ್ಯ.

ಕಲಾವಿದರ ದಂಡೇ ಚಿತ್ರದಲ್ಲಿದೆ. ಕೌಟುಂಬಿಕ ಸಂಬಂಧವನ್ನು ಬೆಸೆಯುವ ಹುಡುಗನ ‍ಪಾತ್ರದಲ್ಲಿ ನಿಖಿಲ್ ಕುಮಾರ್‌ ಉತ್ಸಾಹದಿಂದ ನಟಿಸಿದ್ದಾರೆ. ಶರತ್‌ ಕುಮಾರ್, ರವಿಶಂಕರ್, ಚಿಕ್ಕಣ್ಣ ಅವರದು ಅಚ್ಚುಕಟ್ಟಾದ ನಟನೆ. ರಚಿತಾ ರಾಮ್ ಹಳ್ಳಿ ಹುಡುಗಿಯಾಗಿ ಇಷ್ಟವಾಗುತ್ತಾರೆ. ಅನೂಪ್‌ ರುಬೆನ್ಸ್‌ ಸಂಗೀತ ಸಂಯೋಜನೆಯ ಒಂದು ಹಾಡು ಕೇಳಲು ಇಂಪಾಗಿದೆ. ಸ್ವಾಮಿ ಅವರ ಛಾಯಾಗ್ರಹಣ ಸೊಗಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.