ಲೀಕ್ ಔಟ್ ನಾಟಕ
ಅಕ್ಷತಾ ಪಾಂಡವಪುರ ಅವರ ಏಕವ್ಯಕ್ತಿ ನಾಟಕ ‘ಲೀಕ್ ಔಟ್’ ಈಚೆಗೆ ನೂರನೇ ಪ್ರದರ್ಶನ ಕಂಡಿತು. ಬಹು ಹಿಂದೆ ನೋಡಿದ್ದೆ. ಈಗ ನೂರನೇ ಪ್ರದರ್ಶನವನ್ನೂ ನೋಡಿದೆ. ಅಕ್ಷತಾ ನೋಡುಗರನ್ನು ಕೇಂದ್ರವಾಗಿರಿಸಿಕೊಂಡು ನಾಟಕವನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಂತ ಅದು ಪೂರ್ತಿ ನೋಡುಗ ಕೇಂದ್ರಿತ ಎನ್ನಲಾಗದು. ಬದಲಿಗೆ, ನೋಡುಗರ ಮನಸ್ಸನ್ನು ಮೀಟಿ ಅವರನ್ನು ಅವರೇ ಪ್ರಶ್ನಿಸಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ತನ್ನೊಳಗಿನ ಪ್ರಶ್ನೆ ಅವರದೂ ಹೌದೇ? ಅಥವಾ ತನ್ನೊಳಗಿನ ಪ್ರಶ್ನೆ ಅವರದೂ ಆಗಿ ಪ್ರವೇಶ ಪಡೆದೀತೇ? ಎಂಬುದು ಅವರ ಪ್ರಯತ್ನ. ಮತ್ತು ಹಾಗೆ ಆಗಬೇಕು ಎಂಬುದು ಅವರ ಆಶಯ.
ಇದು ಬಹಳ ಸವಾಲಿನ ಕೆಲಸ. ಟ್ರೋಲ್ ಯುಗದಲ್ಲಿ ಹೀಗೆ ತನಗೆ ಪರಿಚಯವೇ ಇಲ್ಲದ ಪ್ರೇಕ್ಷಕರ ನಡುವೆ ಆತ್ಮವಿಶ್ವಾಸದಿಂದ ಮುನ್ನುಗ್ಗುವುದು ಮತ್ತು ಊಹಾತೀತ ಪ್ರತಿಕ್ರಿಯೆಗಳನ್ನು ತನ್ನೊಡನೆ ಕ್ಯಾರಿ ಮಾಡ್ಕೊಂಡು ತಾನು ಏನು ಹೇಳ ಹೊರಟಿದ್ದೇನೋ ಅದನ್ನು ತಲುಪಿಸಲು ಮುನ್ನಡೆಯುವುದು ಇಲ್ಲಿನ ಕ್ರಿಯೆಯಾಗಿದೆ. ಇದನ್ನವರು ಪ್ರೇಕ್ಷಕರನ್ನೇ ಪಾತ್ರಧಾರಿಗಳನ್ನಾಗಿಸಿಕೊಂಡು ಮಾಡುತ್ತಾರೆ. ಪ್ರೇಕ್ಷಕ ಪಾತ್ರಧಾರಿಗಳು ಕೆಲವೊಮ್ಮೆ ಸಂಕೋಚ, ಗಾಬರಿ, ಮುಜುಗರ, ಅಯ್ಯೋ ಸಿಕಾಕಿಕೊಂಡೆನೇ ಎಂಬ ಭಾವಕ್ಕೆ ಒಳಗಾಗುವ ಸಂಭವ ಹೆಚ್ಚು. ಅಪರೂಪಕ್ಕೆ ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸುವುದೂ ನಡೆಯಬಹುದು. ಇನ್ನೂ ಹಲವು ಸಂದರ್ಭಗಳಲ್ಲಿ ಪ್ರತಿವಾದಿಸುವುದು ಅಸಂಭವವಲ್ಲ. ಹೀಗಾಗಿ ಇದೊಂಥರ ಪಾಠ ಮಾಡುತ್ತಲೇ ವಿದ್ಯಾರ್ಥಿಗಳನ್ನು ಕಣ್ಣಳತೆಯಲ್ಲಿ ಕಾಯುತ್ತಲೇ ಇರಬೇಕಾದ, ಸ್ಪಂದಿಸಬೇಕಾದ ಶಿಕ್ಷಕಿಯ ಶ್ರಮವನ್ನು ಮತ್ತು ಅದರೊಂದಿಗೇ ಅದೊಂದು ಕಲಾಕೃತಿ ಎಂಬುದು ಮರೆತು ಹೋಗದಂತೆ ಅಭಿನಯಿಸುತ್ತಾ, ನಾಟಕದ ಮಾಹೋಲ್ ಅನ್ನು ಕಾಪಿಟ್ಟುಕೊಳ್ಳುತ್ತಾ ಎಲ್ಲವನ್ನೂ ನಿಭಾಯಿಸುವ ಹೆಚ್ಚಿನ ಶ್ರಮ ಬೇಡುವ ಪ್ರದರ್ಶನ ಆಗಿದೆ.
ಈ ಮಾದರಿಯನ್ನು ಆಯ್ಕೆ ಮಾಡಿಕೊಂಡಿರುವ ಅಕ್ಷತಾ, ಇದರ ಹಿಂದೆ ಒಂದು ಗುರಿಯನ್ನು ಇಟ್ಟುಕೊಂಡಿರುವುದು ಸ್ಪಷ್ಟ. ಯಾಕೆಂದರೆ, ಸಿನಿಮಾ, ಟಿ.ವಿ ಮಾಧ್ಯಮದಲ್ಲೂ ಪರಿಚಿತರಾಗಿರುವ ಅವರು ವೈಯಕ್ತಿಕ ಏಳ್ಗೆಯನ್ನು ಅಲ್ಲಿ ಹೆಚ್ಚು ಅನ್ವೇಷಿಸಬಹುದಾದ ಅವಕಾಶ ಉಳ್ಳವರು. ರಂಗಭೂಮಿ ತನ್ನ ಬೇರು ಮತ್ತು ಅಂಗಳ ಎಂಬ ಗಾಢ ನಂಬಿಕೆಯಲ್ಲಿ ತನ್ನ ನೆಲೆಯನ್ನು ರೂಪಿಸಿಕೊಳ್ಳುತ್ತಿದ್ದಾರೆ. ಜೊತೆ ಜೊತೆಗೇ ಕಲೆಯ ಸಾಧ್ಯತೆಗಳನ್ನು ವಿಸ್ತರಿಸಲು ಬಯಸುತ್ತಿದ್ದಾರೆ. ಆ ಸಾಧ್ಯತೆಯೆಂದರೆ ಮನಸ್ಥಿತಿಯನ್ನು ರೂಪಿಸುವುದು. ತಾವು ಕಳೆದುಕೊಳ್ಳುತ್ತಿರುವುದು ಏನು ಎಂಬುದನ್ನು ಹೆಣ್ಣು ಗಂಡುಗಳಿಬ್ಬರಿಗೂ ಅರುಹುವುದು.
ಇಷ್ಟೆಲ್ಲಾ ಹೇಳಿದ ಮೇಲೂ ಇದೊಂದು ನಾಟಕ ಎಂದು ನೋಡುವ ಪ್ರೇಕ್ಷಕರು ಅಲ್ಲಿ ನಾಟಕವನ್ನು ಅರಸುತ್ತಿರುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಈ ನಾಟಕವು ಪ್ರದರ್ಶನವಾಗುವ ಪ್ರದೇಶ, ಪ್ರೇಕ್ಷಕರ ವೈವಿಧ್ಯ ಇತ್ಯಾದಿಗಳಿಗೆ ತಕ್ಕಂತೆ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಕೆಲವೆಡೆ ಇದು ಭಾವನೆಗಳನ್ನು ಮೀಟಬಹುದು, ಕೆಲವೊಮ್ಮೆ ಸ್ಪರ್ಶಿಸಿ ದಾಟಬಹುದು, ಒಮ್ಮೊಮ್ಮೆ ಇನ್ನೇನೋ ನಿರೀಕ್ಷೆಯನ್ನು ಮುಟ್ಟಿಲ್ಲ ಅನ್ನಿಸಬಹುದು. ಹೀಗೆಲ್ಲಾ ಅನ್ನಿಸಿದರೆ ಅದು ಸಹಜ.
ಈ ನಾಟಕದೊಳಗೆ ಬರುವ ಹಲವು ಕತೆಗಳ ಪಾತ್ರಧಾರಿಗಳಾಗುವ ಪ್ರೇಕ್ಷಕರನ್ನು ಬಳಸುವಾಗ ಆಗುವ ಶಿಫ್ಟ್‌ಗಳು ಕೂಡಾ ಪ್ರೇಕ್ಷಕರನ್ನು ನಾಟಕದೊಳಕ್ಕೆ ಎಳೆದು ತರುವ ತಂತ್ರವಾಗಿದೆ. ಇದರಲ್ಲಿ ಅಕ್ಷತಾ ಸಫಲರಾಗುತ್ತಾರೆ. ಇದರ ಜೊತೆಗೇ ಇನ್ನೊಂದು ಶಿಫ್ಟನ್ನು ಮಾಡಬಹುದೇ ಎಂಬೊಂದು ಮಂಥನ ನನ್ನೊಳಗೆ ನಡೆಯಿತು. ಅದೆಂದರೆ, ನಾಟಕದ ನಟ್ಟನಡು ಸಮಯದಲ್ಲಿ ನಟಿಯೇ ಸುಮಾರು 20 ನಿಮಿಷವಾದರೂ ತೆರಪಿಲ್ಲದೆ ತಾನೇ ಪಾತ್ರವಾಗಿ ತೀವ್ರವಾಗಿ ತೊಡಗಿಸಿಕೊಂಡು ಪ್ರೇಕ್ಷಕರನ್ನು ಭಾವತೀವ್ರತೆಯ ಮಟ್ಟಕ್ಕೆ ಕರೆದೊಯ್ಯಬೇಕು. ಆನಂತರ ನಿಧಾನವಾಗಿ ಮತ್ತೆ ಪ್ರೇಕ್ಷಕರನ್ನು ಸಂವಾದದಲ್ಲಿ ಜೊತೆಗೂಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ನಾಟಕ ಪ್ರೇಕ್ಷಕರಿಗೆ ನೀಡುವ ಕಲಾನುಭವದ ಅನುಭವವೂ ಆಗಿ ಹೃದಯ ಸಂವಾದ ಚುರುಕುಗೊಳ್ಳಲು ಪೂರಕವಾಗಬಹುದೇನೋ ಎಂಬುದು.
ಈ ನಾಟಕವು ಎತ್ತುವ ಕೆಲವು ಪ್ರಶ್ನೆಗಳು ಗುನುಗುನಿಸುತ್ತವೆ. ಹಾಗೆಯೇ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತು. ಇರುವ ಚೌಕಟ್ಟಿನೊಳಗೆ ಅಲ್ಲಿಷ್ಟು ಇಲ್ಲಿಷ್ಟು ಸ್ಪಂದನೆ, ಕರುಣೆ, ಸರಿ ತಪ್ಪುಗಳ ವಿಶ್ಲೇಷಣೆಗಳೋ ಅಥವಾ ಇಡೀ ಚೌಕಟ್ಟು ಬದಲಾಗಬೇಕಾದ ಅನಿವಾರ್ಯತೆಯೋ? ಅವಳು ಅಂತವಳಲ್ಲ, ಅವನು ಅಂತವನಲ್ಲ ಎಂದು ಹೇಳುವುದರಲ್ಲೇ ಆಯಾಸ ಪಡುವುದೋ? ನಾನು ವಿವರಿಸುವುದಿಲ್ಲ, ಬದುಕುತ್ತೇನೆ ಎಂಬ ದಿಟ್ಟ ನಿಲುವಿಗೆ ಬಂದು ನಿಲ್ಲುವುದೋ? ಪಾತ್ರಧಾರಿ ಮಂಜುಳಾ ಕೊನೆಗೆ ತಾನೇ ಬಂದು ನೀವು ನನ್ನ ಬಗ್ಗೆ ಏನೇನೋ ಮಾತಾಡಿದ್ರಿ, ಆದರೆ ನಾನೇನು ಮಾಡಬೇಕು ಅನ್ನುವುದನ್ನು ನಾನೇ ನಿರ್ಧರಿಸ್ತೀನಿ, ನೀವು ಒಪ್ಪದಿದ್ರೆ ‘ಐ ಡೋಂಟ್ ಕೇರ್’ ಎಂದು ನಗುತ್ತಾ ಹೇಳಿದರೆ . .?
ಥೇಟ್ ಪಾಂಡವಪುರ ಅಕ್ಷತಾಳ ಹಾಗೇ - ಕಾರಲ್ಲಿ ಪ್ರಾಪರ್ಟಿ ಪೇರಿಸಿಕೊಂಡು ಹಳ್ಳಿಯ ಕೊರಕಲುಗಳೊಳಗೆ ಡ್ರೈವ್ ಮಾಡುತ್ತಾ, ತನ್ನದೇ ದಾರಿ ತಾನೇ ನಿರ್ಮಿಸಿಕೊಳ್ಳುತ್ತಾ, ಜೊತೆಗೂಡಿದವರ ಕೈಗೆ ಕೈ ಜೋಡಿಸುತ್ತಾ . . .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.