ADVERTISEMENT

ಕಾಲಚಕ್ರ: ವೃದ್ಧಾಪ್ಯಕ್ಕೆ ಹಿಡಿದ ಕನ್ನಡಿ

ಕೆ.ನರಸಿಂಹ ಮೂರ್ತಿ
Published 10 ಜನವರಿ 2026, 23:30 IST
Last Updated 10 ಜನವರಿ 2026, 23:30 IST
<div class="paragraphs"><p>ಮೈಸೂರಿನ ರಂಗಾಯಣ ಹಾಗೂ ಬಹುರೂಪಿ ಆಯೋಜಿಸಿದ್ದ ನಾಟಕ ಕರ್ನಾಟಕ ರಂಗಾಯನಗಳ ನಾಟಕ ಉತ್ಸವದಲ್ಲಿ ಹುಲುಗಪ್ಪ ಕಟ್ಟಿಮನಿ ನಿರ್ದೇಶಿಸಿರುವ ಕಾಲಚಕ್ರ ನಾಟಕವನ್ನು ಕಲ್ಬುರ್ಗಿಯ ರಂಗಾಯಣದ ರೆಪರ್ಟರಿ ಕಲಾವಿದರು ನಾಟಕವನ್ನು ಪ್ರದರ್ಶಿಸಿದರು.</p></div>

ಮೈಸೂರಿನ ರಂಗಾಯಣ ಹಾಗೂ ಬಹುರೂಪಿ ಆಯೋಜಿಸಿದ್ದ ನಾಟಕ ಕರ್ನಾಟಕ ರಂಗಾಯನಗಳ ನಾಟಕ ಉತ್ಸವದಲ್ಲಿ ಹುಲುಗಪ್ಪ ಕಟ್ಟಿಮನಿ ನಿರ್ದೇಶಿಸಿರುವ ಕಾಲಚಕ್ರ ನಾಟಕವನ್ನು ಕಲ್ಬುರ್ಗಿಯ ರಂಗಾಯಣದ ರೆಪರ್ಟರಿ ಕಲಾವಿದರು ನಾಟಕವನ್ನು ಪ್ರದರ್ಶಿಸಿದರು.

   

ಪ್ರಜಾವಾಣಿ ಚಿತ್ರ.

  • ADVERTISEMENT

ಬಹುರೂಪಿ ಉತ್ಸವಕ್ಕೆ ಮುನ್ನಡಿಯಾಗಿ, ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶನಗೊಂಡ ‘ರಂಗಾಯಣಗಳ ನಾಟಕ ಉತ್ಸವ’ದ ಕೊನೆಯ ನಾಟಕ ‘ಕಾಲಚಕ್ರ’.

ವೃದ್ಧ ದಂಪತಿ, ಅವರ ಇಬ್ಬರು ಮಕ್ಕಳು, ದಂಪತಿಯನ್ನು ದತ್ತು ಪಡೆಯುವ ಇನ್ನೊಬ್ಬ ಯುವ ದಂಪತಿ ನಾಟಕದ ಕೇಂದ್ರ. ಎರಡು ಮನೆಯೊಳಗೆ ನಡೆಯುವ ನಾಟಕ. ಒಂದು ನೋವಿನ ಮನೆ. ಇನ್ನೊಂದು ನಲಿವಿನ ಮನೆ. ಎರಡೂ ಕಡೆ ನೋವೂ ನಲಿವೂ ಆಗಾಗ ಕೂಡಿಕೊಳ್ಳುತ್ತವೆ.

ನಾಟಕವು ಹತ್ತು ನಿಮಿಷಗಳ ವಿರಾಮದ ಅವಧಿಯನ್ನು ಹೊರತುಪಡಿಸಿ, ಎರಡು ಗಂಟೆ ಹರಡಿಕೊಂಡಿರುವ ಆರು ಸುದೀರ್ಘ ದೃಶ್ಯಾವಳಿಗಳ ಮೊತ್ತ. ಮಕ್ಕಳು, ಸೊಸೆಯಂದಿರ ನಿರ್ಲಕ್ಷ್ಯದಿಂದ ಬೇಸತ್ತ ವೃದ್ಧ ದಂಪತಿ, ಕಾಡುವ ಅನಾರೋಗ್ಯ, ಪ್ರತಿಯೊಂದಕ್ಕೂ ಅವಲಂಬಿಸಬೇಕಾದ ಶೋಚನೀಯ ಪರಿಸ್ಥಿತಿ, ಮೊಮ್ಮಕ್ಕಳ ಮೇಲಿನ ಪ್ರೀತಿ, ಮಕ್ಕಳಿಗೆ ತಮ್ಮ ಜೀವನೋಪಾಯವೇ ಮುಖ್ಯವಾಗುವ ಬಗೆ...ಇವೆಲ್ಲವೂ ಸೇರಿದ ಒಂದು ಕುಟುಂಬದ ಕತೆಯೊಳಗೆ ಇನ್ನೊಂದು ಕತೆ ಮೂಡಿಬರುತ್ತದೆ. ಅದು ಮಾದರಿ ಮಕ್ಕಳು ಮತ್ತು ಪೋಷಕರ ಕತೆ.‌‘ಮಕ್ಕಳು, ಸೊಸೆಯಂದಿರು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ’ ಎಂಬ ಹತಾಶೆಯಿಂದ ತಂದೆ ಇನಾಂದಾರ ಪತ್ರಿಕೆಯಲ್ಲಿ ಜಾಹೀರಾತು ಕೊಡುತ್ತಾರೆ. ತಂದೆ–ತಾಯಿಯನ್ನು ದತ್ತು ತೆಗೆದುಕೊಳ್ಳುವವರು ಬರಬಹುದು ಎಂದು. ಮಕ್ಕಳು ಉಚಿತ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅಲ್ಲಿಂದಲೂ ದಂಪತಿ ವಾಪಸು ಬಂದಾಗ, ಅವರನ್ನು ದತ್ತು ತೆಗೆದುಕೊಳ್ಳಲೆಂದೇ ರಾಘವ ಕರಂಕರ್‌–ಇರಾವತಿ ದಂಪತಿ ಬರುತ್ತಾರೆ. ಅವರ ಮನೆಗೆ ತೆರಳಿದ ಬಳಿಕ ಕಾಣುವುದು ಮಾದರಿ ಮಗ–ಸೊಸೆಯು ತಂದೆ–ತಾಯಿಯ ಕಾಳಜಿ ವಹಿಸಿ ಆರೈಕೆ ಮಾಡುವ ಕುಟುಂಬ.

ಇಲ್ಲಿ ಪೋಷಕರನ್ನು ನೋಡಿಕೊಳ್ಳಬೇಕಾದ ಮೂವರು ಮಕ್ಕಳ ಮಾದರಿಗಳು ಮುಖಾಮುಖಿಯಾಗುತ್ತವೆ. ವಿಶ್ವ–ಶರತ್‌ ಸಹೋದರರು, ರಾಘವ ಕರಂಕರ್‌ ನಡಾವಳಿಗಳು ಪ್ರೇಕ್ಷಕರ ಮುಂದೆ ಅನಾವರಣಗೊಂಡರೆ, ಸ್ವತಃ ಇನಾಂದಾರ್‌ ಕೂಡ ತಮ್ಮ ತಂದೆಯನ್ನು ಕೊನೆಗಾಲದಲ್ಲಿ ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ ಎಂಬ ಪಶ್ಚಾತ್ತಾಪದಲ್ಲೇ ನರಳುವುದು ಕೂಡ ಎದ್ದು ಕಾಣುವ ಅಂಶ. ಮಕ್ಕಳು ತನ್ನ ಆರೈಕೆ ಮಾಡುತ್ತಿಲ್ಲ ಎಂದು ದೂರಿದಾಗಲೆಲ್ಲ, ಪತ್ನಿಯು ‘ನೀವು ನಿಮ್ಮ ತಂದೆಗೆ ಬೆಲೆ ಕೊಟ್ರೇನು’ ಎಂದು ಪ್ರಶ್ನಿಸುತ್ತಾಳೆ. ಇದು ‘ಕಾಲಚಕ್ರ’ ನೀಡುವ ಸಂದೇಶ. ಇಂಥ ಸಂಭಾಷಣೆಗಳೇ ನಾಟಕದ ಜೀವಾಳ.

ಯಾವುದೇ ಸಮಾಜದಲ್ಲೂ ಕೌಟುಂಬಿಕ ಸಂಬಂಧಗಳು ಬಹಳ ಮುಖ್ಯ. ಆದರೆ ಅವುಗಳೇ ನಿರಂತರ ನರಳುವುದೂ ಸಾಮಾನ್ಯ. ಈ ನರಳುವಿಕೆಯೇ ಪ್ರಧಾನವಾದ, ಕಣ್ಣಲ್ಲಿ ನೀರು ಬರಿಸುವಂಥ ನಿರೂಪಣೆಯುಳ್ಳ ಕಥೆ, ಕಾದಂಬರಿ, ಸಿನಿಮಾಗಳು ಕನ್ನಡದಲ್ಲಿ ಹಲವು ಬಂದಿವೆ. ಆದರೆ ನಾಟಕಗಳು ಕಡಿಮೆ. ಹೀಗಾಗಿಯೇ ಎಚ್‌.ಕೆ.ಕರ್ಕೇರ ಅವರು ಸಮರ್ಥವಾಗಿ ಮರಾಠಿಯಿಂದ ಕನ್ನಡೀಕರಿಸಿರುವ ಜಯವಂತ ದಳ್ವಿಯವರ ಈ ನಾಟಕವು ಮನೋಜ್ಞ ಅಭಿನಯ ಹಾಗೂ ಸಂಭಾಷಣೆಗಳ ಮೂಲಕವೇ ಮನಕ್ಕಿಳಿಯುತ್ತದೆ. ಅದಕ್ಕೆ ಇಂಬಾಗಿ ಹರಿದು ಬರುವ ಕನ್ನಡ, ಹಿಂದಿಯ ಹಳೇ ಸಿನಿಮಾ ಗೀತೆಗಳು, ಭಾವಗೀತೆಗಳ ಸಾಲಿನ ಸಾಂಗತ್ಯವು ಪ್ರೇಕ್ಷಕರನ್ನು ಶೋಕಸಾಗರದ ಮುಂದೆ ನಿಲ್ಲಿಸುತ್ತವೆ. ಹಳೆಯ ಕಥಾವಸ್ತುವಿನ ಹೊಸ ಪ್ರಸ್ತುತಿಯು ಕೆಲವರ ಕಣ್ಣಂಚಲ್ಲಿ ನೀರೂ ಇಣುಕುವಂತೆ ಮಾಡುತ್ತದೆ. ಇದು ಕಾಲಚಕ್ರಕ್ಕೆ ಹಿಡಿದ ಹೊಸ ಕನ್ನಡಿಯೂ ಆಗುತ್ತದೆ.

ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರಲ್ಲಿ ಪ್ರತಿಯೊಬ್ಬರೂ ಪ‍ರಸ್ಪರರಿಗೆ ಪ್ರತಿಸ್ಪರ್ಧಿ ಎಂಬಂತೆ ಅಭಿನಯಿಸಿದ ಪರಿಣಾಮ, ಮರಾಠಿ ಪರಿಸರದಲ್ಲಿ ನಡೆಯುವ ಕತೆಯು ದೇಶ–ಕಾಲ ಮೀರಿ ಪ್ರೇಕ್ಷಕರ ಮನೆ–ಮನಗಳ ಕತೆಯಾಗಿ ಮಾರ್ಪಡುತ್ತದೆ.  ವೃದ್ಧ ದಂಪತಿ ಇನಾಂದಾರ–ರುಕ್ಮಿಣಿ ಪಾತ್ರದಲ್ಲಿ ಮೂವತ್ತರ ಹರೆಯದ ಮಹಾಂತೇಶ ರಾಯಚೂರು ಮತ್ತು ಭಾಗ್ಯಶ್ರೀ ಬಿ.ಪಾಳಾ ಅಭಿನಯ ಅಮೋಘವೆನ್ನಿಸುವಂತಿದೆ. ಮಕ್ಕಳ ಪಾತ್ರದಲ್ಲಿ ಅಭಿಷೇಕ್‌ ಎಸ್‌.ಕೆ ಮತ್ತು ರಾಘವೇಂದ್ರ, ಗಯ್ಯಾಳಿ ಸೊಸೆ ಲೀಲಾ ಪಾತ್ರಧಾರಿ ವಾಣಿಶ್ರೀ ಬಿ.ಮಾಳಗಿ, ರಾಘವ– ಇರಾವತಿ ದಂಪತಿಯಾಗಿ ಸಾಗರ ಘಾಳೆನೋರ್‌–ಅಂಬಿಕಾ ಎಸ್‌.ತೆಲೆಂಗಿ, ತೋರಿಕೆಯ ಕಿವುಡನ ಬಾಬುರಾವ್‌ ಪಾತ್ರದಲ್ಲಿ ಸಿದ್ದಾರ್ಥ ಕಟ್ಟೀಮನಿ ಸೇರಿ ಎಲ್ಲರೂ ಅದೇ ವಯೋಮಿತಿಗೆ ಸೇರಿದವರು.

ರಾಜುಕುಮಾರ ಎಸ್‌.ಕೆ. ಅವರ ರಂಗ ಸಜ್ಜಿಕೆ, ಶ್ರೀನಿವಾಸ ದೋರನಹಳ್ಳಿಯವರ ಬೆಳಕು, ಸಿದ್ಧಾರ್ಥ, ಸಾಗರ, ಮಹೇಶ ಹಾಗೂ ರಾಘವೇಂದ್ರ ಅವರ ಸಂಗೀತವೆಲ್ಲವೂ ನಾಟಕದ ಆಶಯಕ್ಕೆ ಸಮರ್ಥವಾಗಿ ದುಡಿದಿವೆ.‌ ಹುಲುಗಪ್ಪ ಕಟ್ಟೀಮನಿಯವರ ನಿರ್ದೇಶನವೂ ಜೊತೆಯಾಗಿದೆ. 

ಮರಾಠಿ ರಂಗಭೂಮಿಯಲ್ಲೂ ಹೆಚ್ಚು ಗಮನ ಸೆಳೆದ ಈ ನಾಟಕವು ಲೇಖಕ ಜಯವಂತ ದಳ್ವಿಯವರಿಗೂ ಪ್ರಸಿದ್ಧಿ ತಂದುಕೊಟ್ಟಿದೆ. ಪತ್ರಕರ್ತರೂ ಆಗಿದ್ದ ದಳ್ವಿ ಹಾಸ್ಯ ಬರಹಗಳಿಗೆ ಪ್ರಸಿದ್ಧರಾದಂತೆ ಮನಕಲಕುವ ನಾಟಕಕಾರರಾಗಿಯೂ ಉಳಿಯಲು ಈ ನಾಟಕದ ಕೊಡುಗೆ ದೊಡ್ಡದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.