ADVERTISEMENT

ರಂಗದ ಮೇಲೆ ಮಹದೇವ ಮೈಲಾರ

ರೂಪಾ .ಕೆ.ಎಂ.
Published 24 ಮೇ 2025, 23:16 IST
Last Updated 24 ಮೇ 2025, 23:16 IST
ನಾಟಕ ಪ್ರದರ್ಶನದಲ್ಲಿ ಅಭಯಾಶ್ರಮ ವಾತ್ಸಲ್ಯ ಮಕ್ಕಳ ಮಂದಿರ ತಂಡ
ನಾಟಕ ಪ್ರದರ್ಶನದಲ್ಲಿ ಅಭಯಾಶ್ರಮ ವಾತ್ಸಲ್ಯ ಮಕ್ಕಳ ಮಂದಿರ ತಂಡ   

ಕಾಂತನ ಕಳಕೊಂಡ

ಕಾಮಿನಿಯಂತೆ ಭಾರತ
ಹಾಕುವುದ ಕಣ್ಣೀರ
ಶಾಂತಿ ಸಮರದೊಳು
ಗುಂಡಿನೇಟಿನೊಳು ಮಡಿದ
ಮಹದೇವ ಮೈಲಾರ....

ಮುಗ್ಧ ಮಕ್ಕಳು ಒಕ್ಕೂರಲಿನಿಂದ ಈ ಹಾಡು ಹೇಳುತ್ತಿದ್ದಂತೆ ಮೈಲಾರ ಅವರ ಕಥೆ ರಂಗದ ಮೇಲೆ ಇಷ್ಟಿಷ್ಟೆ ಅನಾವರಣಗೊಂಡಿತು. ನಾಟಕದ ಆರಂಭದ ಹಾಡಿನಲ್ಲಿಯೇ ಮೈಲಾರ ಅವರು ಗುಂಡಿನೇಟಿಗೆ ಬಲಿಯಾಗಿದ್ದರ ಸಾಲು ಬರುವುದರಿಂದ ಮೈಲಾರ ಅವರ ವೀರಗಾಥೆಯನ್ನು ಅರಿಯುವ ಕುತೂಹಲವಂತೂ ನೆರೆದ ಕಣ್ಣುಗಳಲ್ಲಿ ಹೆಚ್ಚಿತ್ತು. ಅರಳಿಕಟ್ಟೆಯಲ್ಲಿ ಕುಳಿತ ಅಜ್ಜನ ಪಾತ್ರಧಾರಿ ಮಕ್ಕಳಿಗೆ ಮೈಲಾರ ಯಾರು?, ಈ ಕರುನಾಡಿನ ಕಣ್ಮಣಿ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಕಥೆಯನ್ನು ಸವಿಸ್ತಾರವಾಗಿ ಹೇಳಲು ಮುಂದಾದರು.

ADVERTISEMENT

ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ‘ಮಕ್ಕಳ ರಂಗ ಹಬ್ಬ’ದಲ್ಲಿ ನಡೆದ ‘ಮೈಲಾರ ಮಹದೇವ’ ನಾಟಕದ ಝಲಕ್‌ ಇದಾಗಿತ್ತು. ಬೆಂಗಳೂರಿನ ಅಭಯಾಶ್ರಮ ವಾತ್ಸಲ್ಯ ಮಕ್ಕಳ ಮಂದಿರದ ಮಕ್ಕಳು ಈ ನಾಟಕದಲ್ಲಿ ಅಭಿನಯಿಸಿ, ನೋಡುಗರ ಮನಸ್ಸನ್ನು ಗೆದ್ದರು.

ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಲು, ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಹಳೆ ಊದಿದ ಹಲವು ಮಹನೀಯರಲ್ಲಿ ಮೈಲಾರ ಮಹದೇವ ಕೂಡ ಪ್ರಾತಃಸ್ಮರಣೀಯರು. ಅಭಯಾಶ್ರಮದ ಪುಟ್ಟ ಮಕ್ಕಳು ತಮ್ಮ ಮೃದುದನಿಯನ್ನೇ ತಾರಕ ಸ್ವರಕ್ಕೆ ಏರಿಸಿ, ದೇಶಭಕ್ತಿಯನ್ನು ಉಕ್ಕಿಸುವ ಗೀತೆಗಳನ್ನು ಹಾಡಿದ್ದು ಎಂಥವರನ್ನೂ ಮೈನವೀರೇಳಿಸುವಂತೆ ಮಾಡಿತು.

ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಮಕ್ಕಳ ರಂಗ ಹಬ್ಬದಲ್ಲಿ ಅಭಯಾಶ್ರಮ ವಾತ್ಸಲ್ಯ ಮಕ್ಕಳ ಮಂದಿರ ನಡೆಸಿದ ನಾಟಕ.

ಮಹಾತ್ಮ ಗಾಂಧೀಜಿಯನ್ನು ತಮ್ಮ ಬದುಕಿನ ಆದರ್ಶವಾಗಿಸಿಕೊಂಡಿದ್ದ ಮೈಲಾರ ಮಹದೇವ ಅವರು ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅತ್ಯಂತ ಕಿರಿಯ ಹೋರಾಟಗಾರರಾಗಿದ್ದರು. ತಮ್ಮ 18ನೇ ವಯಸ್ಸಿಗೆ ಗಾಂಧೀಜಿಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಾಶಾಲಿಯಾಗಿದ್ದರು. ಇದೇ ಸಂದರ್ಭದಲ್ಲಿ ಗಾಂಧೀಜಿ ಜತೆ ಸೆರೆಮನೆ ವಾಸ ಅನುಭವಿಸಿದ್ದರು. ಸೆರೆಮನೆಯಲ್ಲಿದ್ದುಕೊಂಡೇ ಮಹದೇವ ಅವರು ಅಪ್ಪ–ಅಮ್ಮನಿಗೆ ಬರೆದ ಪತ್ರವನ್ನು ಅಭಯಾಶ್ರಮದ ಮಕ್ಕಳು ಓದುತ್ತಿದ್ದರೆ, ಎಂಥ ಕ್ರಾಂತಿಗೀತೆಯೂ, ಕೆಚ್ಚಿನ ಮಾತುಗಳು ಆರ್ದ್ರಭಾವವನ್ನು ಸ್ಫುರಿಸಬಲ್ಲವು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿತ್ತು.

ಈ ಮಕ್ಕಳು ಪಾತ್ರವೇ ತಾವಾದರು. ಸೆರೆಮನೆಯಲ್ಲಿದ್ದುಕೊಂಡೇ ಅಪ್ಪ ಅಮ್ಮನನ್ನು ನೆನೆಯುವ ಮಹದೇವ ಅವರನ್ನು ರಂಗದ ಮೇಲೆ ಬಿಂಬಿಸುವಂತೆ ಕಂಡರೂ ಆಂತರ್ಯದಲ್ಲಿ ಪ್ರೀತಿಗಾಗಿ ಹಪಾಹಪಿಸುವ ಮುಗ್ಧ ಮಕ್ಕಳ ದನಿಯಾಗಿ ಪ್ರಕಟಗೊಂಡರು.

‘ಅಪ್ಪ– ಅಮ್ಮ ನಾನಿಲ್ಲಿ ಗಾಂಧೀಜಿಯವರ ಜತೆ ಆರಾಮಾಗಿಯೇ ಇದ್ದೇನೆ ನೀವು ನನ್ನ ಬಗ್ಗೆ ಚಿಂತೆ ಮಾಡಬೇಡಿ.’ ಎಂಬ ಒಕ್ಕಣೆಯುಳ್ಳ ಪತ್ರವನ್ನು ಮೈಲಾರ ಪಾತ್ರಧಾರಿ ಕತ್ತಲು–ಬೆಳಕಿನ ವಿಶಿಷ್ಟ ಸಂಯೋಜನೆಯಲ್ಲಿ ಓದುತ್ತಿದ್ದರೆ, ತಂದೆ, ತಾಯಿ ಮತ್ತು ಮಕ್ಕಳ ಸಂಬಂಧಗಳು ಎಲ್ಲ ಕಾಲಕ್ಕೂ ಒಂದೇ.ಆಳವಾಗಿ ಯೋಚಿಸಿದಷ್ಟು ಮನುಷ್ಯನ ಹುಡುಕಾಟ ಇರುವುದೇ ಹಿಡಿ ಪ್ರೀತಿಗಾಗಿ ಮತ್ತು ಅವನ ಬದುಕು ಸವೆಯುವುದು ಆ ಪ್ರೀತಿಯ ಹಂಬಲದಲ್ಲಿಯೇ.

1942ರಲ್ಲಿ ಚಲೇಜಾವ್‌ ಚಳವಳಿ ಆರಂಭವಾಯಿತು. ಇದಾದ ಮೇಲೆ ಗಾಂಧೀಜಿ ಬ್ರಿಟಿಷರಿಗೆ ಸೆರೆ ಸಿಕ್ಕರು. ಈ ಚಳವಳಿ ಉಗ್ರ ರೂಪ ತಾಳಿತು. ಇತ್ತ ಮೈಲಾರ ಮಹದೇವ ಅವರು ಯುವ ಹೋರಾಟಗಾರರನ್ನು ಸಂಘಟಿಸಿದರು. ತಮ್ಮ ಎದುರಿಗೆ ಬಂದ ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿಯನ್ನು ತುಂಬುವ ಕಾಯಕವನ್ನು ನಿಷ್ಠೆಯಿಂದ ಮಾಡಿದರು. ಈ ರೀತಿ ಸಂಘಟನೆ ಮಾಡುತ್ತಿರುವಾಗಲೇ ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರಾದರು.

ಇದು ಮಹಾದೇವ ಅವರ ಜೀವನಾಧಾರಿತ ನಾಟಕವಾಗಿದ್ದರೂ, ರಂಗದ ತುಂಬಾ ಓಡಾಡಿದ ಮಕ್ಕಳು ಎಲ್ಲಿಯೂ ನಾಟಕದ ಕಥಾವಸ್ತುವಿಗೆ ಚ್ಯುತಿ ತರಲಿಲ್ಲ. ಅವರ ಚುರುಕುತನವೇ ಈ ನಾಟಕದ ಜೀವಾಳ. ಇಷ್ಟುದ್ದ ಸಂಭಾಷಣೆಯನ್ನು ಒಂದೇ ಗುಕ್ಕಿಗೆ ಹೇಳುವ ಮಕ್ಕಳ ಉತ್ಸಾಹದ ಮುಂದೆ ಉಳಿದೆಲ್ಲವೂ ಗೌಣವೇ ಆಗಿತ್ತು.

ಮನು ಬಳಿಗಾರ್‌ ಅವರ ಕಥೆಗೆ, ಕೆಎಸ್‌ಡಿಎಲ್‌ ಚಂದ್ರು ಅವರ ನಿರ್ದೇಶನವಿತ್ತು. ಬೆಳಕಿನ ಪರಿಕರಗಳನ್ನು ಮತ್ತು ಸಂಗೀತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ಅವಕಾಶವಿತ್ತು.

ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಮಕ್ಕಳ ರಂಗ ಹಬ್ಬದಲ್ಲಿ ಅಭಯಾಶ್ರಮ ವಾತ್ಸಲ್ಯ ಮಕ್ಕಳ ಮಂದಿರ ನಡೆಸಿದ ನಾಟಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.