ಶ್ರವಣದೋಷವುಳ್ಳ ತಮ್ಮ ಮಗನಿಗೆ ಮನೆಯವರೆಲ್ಲರೂ ಸೇರಿ ಮಾತು ಕಲಿಸಲು ಪಟ್ಟ ಪ್ರಯತ್ನಗಳ ಕುರಿತು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ದಾಖಲಿಸಿದ ಅನುಭವ ಕಥನ ‘ಮೂರನೇ ಕಿವಿ’ ಮುದ್ರಣ ಕಂಡು ಒಂದೂವರೆ ದಶಕದ ಬಳಿಕ ರಂಗರೂಪ ಪಡೆದಿದೆ.
ಮೈಸೂರಿನಲ್ಲಿದ್ದಾಗ ಮಾತು ಕಲಿತ ಅವರ ಮಗ ನಿರಂಜನ ಭಟ್ಟ 25 ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ‘ಪರಿವರ್ತನ ರಂಗಸಮಾಜ’ ಇದನ್ನು ಪ್ರಸ್ತುತಪಡಿಸಿದೆ. ‘ಈ ಕಥನದ ಭಿನ್ನ ವಸ್ತು, ನಿರೂಪಣೆ ಹಲವು ವರ್ಷಗಳಿಂದ ತೀವ್ರವಾಗಿ ಕಾಡಿದೆ’ ಎನ್ನುವ ಪ್ರೊ.ಎಸ್.ಆರ್. ರಮೇಶ್, ಕೃತಿಯನ್ನು ರಂಗರೂಪಕ್ಕೆ ತಂದು ನಿರ್ದೇಶಿಸಿದ್ದಾರೆ. ಈ ಕೃತಿಯ ಆಯ್ದ ಭಾಗ ಕೆಲವು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿತ್ತು. ಇತ್ತೀಚೆಗೆ ನಡೆದ ಮೈಸೂರು ವಿಜ್ಞಾನ ನಾಟಕೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿದ್ದ ನಾಟಕ, ಬೆಂಗಳೂರಿನಲ್ಲೂ ಪ್ರದರ್ಶನಗಳನ್ನು ಕಂಡಿದೆ.
ಬಹಳ ಮುಖ್ಯವಾಗಿ ಇದು ಕಿವಿ ಕೇಳದ, ಮಾತು ಬಾರದ ಮಗನಿಗೆ ಹಲವು ಪ್ರಯೋಗಗಳ ಮೂಲಕ ಮಾತು ಕಲಿಸುತ್ತಲೇ ಲೋಕಜ್ಞಾನವನ್ನೂ ಹೇಳಿಕೊಟ್ಟ ದಂಪತಿಯ ಸಕ್ಸಸ್ ಸ್ಟೋರಿ. ಆ ಯಶಸ್ಸಿನ ಕಡೆಗೆ ದಂಪತಿ ಸೇರಿ ಮನೆಯವರೆಲ್ಲರ ಪ್ರಯೋಗಶೀಲ ಪಯಣ ಮಾತ್ರ ಅತ್ಯಂತ ಕಷ್ಟಕರವಾದದ್ದು ಎಂಬುದು ಕೃತಿಯ ಉದ್ದಕ್ಕೂ ಎದ್ದುಕಾಣುವ ಅಂಶ. ತಾಯಿ ದೀಪಾ ಭಟ್ಟ ಅವರ ಪರಿಶ್ರಮವೇ ಹೈಲೈಟ್. ಸಮಸ್ಯೆ ಇದೆ ಎಂದು ಕೊರಗುವುದಕ್ಕಿಂತಲೂ, ಪರಿಹಾರ ಕಂಡುಕೊಳ್ಳುವುದೇ ಮುಖ್ಯವೆಂಬಂತೆ, ಕಥನದ ನಿರೂಪಣೆ ಇದೆ. ಕೊನೆಗೆ ಉಳಿಯುವುದು ಆ ಯಶಸ್ಸಿನ ಸಂತೃಪ್ತಿ. ಇದು ಕೃತಿಯನ್ನು ಓದಿರುವ ಎಲ್ಲರಿಗೂ ಆಗಿರುವ ಅನುಭವ.
ನಾಟಕವನ್ನು ನೋಡುವ ಸಂದರ್ಭದಲ್ಲೂ ಈ ಅನನ್ಯ ಅನುಭವಕ್ಕಾಗಿಯೇ ಓದುಗ, ಪ್ರೇಕ್ಷಕರು ಎದುರು ನೋಡುತ್ತಾರೆ. ಅದನ್ನು ರಂಗಭೂಮಿಗೆ ತಂದವರದ್ದೂ ಅದೇ ಉದ್ದೇಶ. ‘ಇದು ಕಟ್ಟು ಕಥೆಯಲ್ಲ!’ ಎಂಬುದು ಲೇಖಕರು ಕೃತಿಯ ಶೀರ್ಷಿಕೆಯೊಂದಿಗೆ ಕೊಟ್ಟಿರುವ ಅಡಿಸಾಲು. ಇದೊಂದು ವಾಸ್ತವ ಕಥೆ. ಕಲ್ಪನೆ ಎಂಬುದೇನೂ ಇಲ್ಲ. ಬಾಲಕನಿಗೆ ಐದಾರು ವರ್ಷದ ಅವಧಿಯಲ್ಲಿ ದಂಪತಿ ಶ್ರಮವಹಿಸಿ ಮಾತು ಕಲಿಸಲು ಪಟ್ಟ ಪ್ರಯತ್ನಗಳ ಗುಚ್ಛ. ಮುಖ್ಯವಾಗಿ ಮನೆ, ಆಸ್ಪತ್ರೆ ಹಾಗೂ ಶಾಲೆ ಕೇಂದ್ರಿತವಾದ, ತಾಯ್ತನ, ತಂದೆತನ ಹಾಗೂ ಮಗುತನದ ವಿಕಾಸದ ಕಥೆ. ಇದೆಲ್ಲವನ್ನೂ ಶ್ರವಣದೋಷ ಎಂಬ ಅಂಶವೇ ಒಟ್ಟುಗೂಡಿಸಿರುವುದು ವಿಶೇಷ.
ದಾವಣಗೆರೆಯಿಂದ ಮೈಸೂರಿಗೆ ಬಂದು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಸಲಹೆ ಪಡೆದು, ಕಿವುಡು ಮಕ್ಕಳ ತಾಯಂದಿರ ಸಂಸ್ಥೆಯಲ್ಲಿ ತಾಯಿ, ಮಗ ಇಬ್ಬರೂ ವಿದ್ಯಾರ್ಥಿಗಳಾಗಿ ಮಾತು ಕಲಿಯುವ, ಕಲಿಸುವುದೇ ಕಥನದ ಸಾರಲೇಖ. ನಾಟಕವೂ ಇದನ್ನೇ ನೆಚ್ಚಿಕೊಂಡಿದೆ.
ತಾಯಿ ಪಾತ್ರಧಾರಿ ಭುವನೇಶ್ವರಿ ತಮ್ಮ ತನ್ಮಯತೆಯ ಅಭಿನಯದಿಂದ, ಪತಿಯ ಪಾತ್ರಧಾರಿ ಕರ್ನಲ್ ಸತೀಶ್ ಅವರನ್ನು ಹಿಂದಿಕ್ಕುತ್ತಾರೆ. ಮೂಲ ಕಥೆಯಲ್ಲಿ ತಾಯಿ ತಾನು ಗಾಯಕಿ, ಸಿ.ಎ. ಆಗುವ ಆಸೆಯನ್ನು ಅದುಮಿಟ್ಟುಕೊಂಡರೆ, ನಾಟಕದ ತಾಯಿ ನೃತ್ಯಗಾತಿಯಾಗಬೇಕೆಂಬ ಆಸೆಯನ್ನು ಮಗನಿಗಾಗಿ ತ್ಯಜಿಸಿದಾಕೆ. ತಂದೆ ಮಾತ್ರ ಎರಡೂ ಕಡೆ ಪತ್ರಕರ್ತ. ಭುವನೇಶ್ವರಿ ನೃತ್ಯಪಟುವೂ ಆಗಿರುವುದರಿಂದ, ಸಂಕಟ, ಹತಾಶೆ, ಸಂಭ್ರಮಗಳನ್ನು ನೃತ್ಯಾಭಿನಯದಲ್ಲಿ ಪ್ರಸ್ತುತಪಡಿಸುವುದು ನಾಟಕದ ನಿರಂತರತೆಗೆ ನೆರವಾಗಿದೆ. ಬಾಲಕನ ಪಾತ್ರವನ್ನು ಅಭಿನಯಿಸಿರುವ ಅಭಯಸಿಂಹ ಪ್ರಯೋಗದ ಕೇಂದ್ರ ಬಿಂದು. ಆದರೆ, ಬಾಲಕನಿಗೆ ಮಾತು ಕಲಿಸುವ ಪಯಣದಲ್ಲಿ ಜೊತೆಯಾದ ಆತನ ಅಜ್ಜಿ ಮತ್ತು ಅಣ್ಣನನ್ನು ಈ ‘ಪ್ರಯೋಗ’ ಮರೆಯಬಾರದಿತ್ತು.
ಓದುಗರು ಹಾಗೂ ಪೋಷಕರ ಮೇಲೆ ಸಕಾರಾತ್ಮಕವಾಗಿ ಬಹುಪರಿಣಾಮ ಬೀರಿರುವ ಈ ಯಶೋಗಾಥೆಯನ್ನು ರಂಗರೂಪಕ್ಕೆ ತರುವಲ್ಲಿ ‘ಪರಿವರ್ತನ ರಂಗಸಮಾಜ’ ತಂಡದ ಪರಿಶ್ರಮ ಮೆಚ್ಚಬೇಕಾದ್ದೇ. ನಟ, ನಿರ್ದೇಶಕರಾದಿಯಾಗಿ ಎಲ್ಲರೂ ಇಲ್ಲಿನ ಭಿನ್ನ ಕಥಾವಸ್ತು, ನಿರೂಪಣೆಯನ್ನು ಉದ್ದಕ್ಕೂ ಸಂಭ್ರಮಿಸಿದ್ದಾರೆ.
ವಸ್ತುವಿನ ಕಾರಣದಿಂದ ಕನ್ನಡದ ರಂಗಭೂಮಿಯ ಮಟ್ಟಿಗೆ ಇದು ವಿಶೇಷ ಪ್ರಯೋಗ. ಆದರೆ, ನಿರೂಪಣೆಯ ದೃಷ್ಟಿಯಿಂದ ಸಾಮಾನ್ಯ ಸಾಮಾಜಿಕ ನಾಟಕಗಳ ನೆರಳನ್ನೇ ನೆಚ್ಚಿಕೊಂಡ ನಾಟಕ. ಪ್ರಯತ್ನಗಳ ಒರತೆಯಂತೂ ಇದೆ. ಆದರೆ, ಹೊಸ ವಸ್ತುವಿಗೆ ತಕ್ಕ ಪ್ರಯೋಗಶೀಲತೆಯ ಕೊರತೆಯೂ ಇದೆ. ಮೂಲಕೃತಿಯಲ್ಲಿ ಪ್ರಥಮ ಪುರುಷ ನಿರೂಪಣೆಯಲ್ಲಿ ಓದುಗರನ್ನೂ ಸೆಳೆಯುತ್ತಾ ಸೊಗಸಾಗಿ ಓದಿಸಿಕೊಂಡು ಹೋಗುವ ಹೃದ್ಯಂಗಮವಾದ ಗದ್ಯವು ನಾಟಕದಲ್ಲಿ ತಂದೆ ಪಾತ್ರಧಾರಿಯ ಸ್ವಗತವಷ್ಟೇ ಆಗುತ್ತದೆ.
ಕೃತಿಯಲ್ಲಿರುವ ಕೌಟುಂಬಿಕ, ಸಾಮಾಜಿಕ ಮತ್ತು ವೈದ್ಯಕೀಯ ವಿಜ್ಞಾನದ ಚೌಕಟ್ಟಿನಲ್ಲೇ ನಾಟಕ ಶುರುವಾಗಿ ಮುಗಿಯುತ್ತದೆ. ಅತ್ಯಂತ ಪರಿಣಾಮಕಾರಿಯಾದ ಮಾತುಗಳು ನಾಟಕವನ್ನೂ ಆವರಿಸಿವೆ. ಮಗುವಿಗೆ ಭಾಷೆ, ಮಾತು ಕಲಿಸುವ ಸಾಲುಸಾಲು ದೃಶ್ಯಗಳು ವಾಚ್ಯವಾಗಿ, ನಾಟಕ ಪ್ರಕಾರದ ಸೃಜನಶೀಲ ಸಾಧ್ಯತೆಗಳೂ ಪಕ್ಕಕ್ಕೆ ಸರಿದವೇ ಎಂಬ ಅನುಮಾನವೂ ಮೂಡುತ್ತದೆ. ಅಷ್ಟು ಹೊತ್ತಿಗೆ ಬರುವ ಹಿನ್ನೆಲೆ ಸಂಗೀತ, ಕೆಲವು ಹಾಡುಗಳು ಏಕತಾನತೆಯ ಭಾವವನ್ನು ದೂರ ಮಾಡುತ್ತವೆ.
‘ಮೂರನೇ ಕಿವಿ’ಯ ಮೂಲಕ ಒಡಮೂಡಿದ ‘ಯಶೋಗಾಥೆ‘ಯನ್ನು ಈ ರಂಗಪ್ರಯೋಗ ಇನ್ನೂ ವೃತ್ತಿಪರವಾಗಿ ದುಡಿಸಿಕೊಳ್ಳಲು ಸಾಧ್ಯವಿತ್ತು. ಕಥನದಲ್ಲಿ ಅಷ್ಟೇನೂ ಮುಖ್ಯವಾಗಿರದ ಅನುಕಂಪದ ಭಾವದಲ್ಲೇ ನಾಟಕವನ್ನು ರೂಪಿಸಿರುವುದರಿಂದ ಗೋಳಿನ ಕಥೆಯಾಗಿ ಮಾರ್ಪಟ್ಟಿದೆ. ರಂಗಭೂಮಿಗೆ ಒಬ್ಬ ‘ಚಿನ್ನಾರಿ ಮುತ್ತ’ನನ್ನು ತರುವ ಅವಕಾಶವಂತೂ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.