ಶಿವಮೊಗ್ಗ ರಂಗಾಯಣದಲ್ಲಿ ನಡೆದ ‘ಚಿಣ್ಣರ ಸಿಹಿಮೊಗೆ’ ಮಕ್ಕಳ ರಂಗ ಶಿಬಿರ, ಮಕ್ಕಳೇ ಪ್ರದರ್ಶಿಸಿದ ‘ಸೂರ್ಯ ಬಂದ’ ಎಂಬ ಸುಂದರ ನಾಟಕದಿಂದ ಕಳೆಗಟ್ಟಿತ್ತು. ವೈದೇಹಿ ಅವರು ರಚಿಸಿದ ಈ ನಾಟಕ ಮಕ್ಕಳಿಗೆ ಮುದ ನೀಡುವ ಒಂದು ಫ್ಯಾಂಟಸಿ ಕತೆ. ಆದರೆ ಅದರಲ್ಲಿ ಬದುಕು, ಪರಿಸರ ಕುರಿತಾಗಿ ವಿಶೇಷ ಸಂದೇಶಗಳಿದ್ದವು. ಮಕ್ಕಳು ಗುಡ್ಡ ಒಂದಕ್ಕೆ ಚಾರಣ ಹೋಗಿರುತ್ತಾರೆ. ಅಲ್ಲಿನ ಹಳ್ಳಿಯೊಂದರಲ್ಲಿ ಬೆಳಕೇ ಇರುವುದಿಲ್ಲ. ಆ ಊರಿನವರೆಲ್ಲರೂ ನಿದ್ರಾದೇವಿಯ ಪ್ರಭಾವಕ್ಕೊಳಗಾಗಿ ಸದಾ ನಿದ್ರಿಸುತ್ತಿರುತ್ತಾರೆ! ಏಕೆಂದರೆ ಆ ಊರಿನ ಸದಾ ನಿದ್ರಿಸುವ ರಾಕ್ಷಸನೊಬ್ಬ ತನ್ನ ನಿದ್ರೆಗೆ ಅಡ್ಡಿಯಾಗುತ್ತಿದೆ ಎಂದು ಸೂರ್ಯನನ್ನು ದೊಡ್ಡ ಗುಡ್ಡದ ಹಿಂದೆ ಬಚ್ಚಿಟ್ಟಿರುತ್ತಾನೆ. ಈ ಕಥೆಯನ್ನು ಆ ಊರಿನ ಅಜ್ಜ ಪುಟಾಣಿಗಳಿಗೆ ಹೇಳುತ್ತಾನೆ. ಮಕ್ಕಳು ಹೇಗಾದರೂ ಮಾಡಿ ಆ ರಾಕ್ಷಸನಿಂದ ಸೂರ್ಯನನ್ನು ರಕ್ಷಿಸಿ ಹೊರ ತರಬೇಕು ಎಂದು ಹೊರಡುತ್ತಾರೆ. ಬೆಟ್ಟ ಕಡಿಯಬೇಕು ಎಂದು ಯೋಚಿಸಿದಾಗ ಅದರಿಂದ ಆಗುವ ಪರಿಸರ ಹಾನಿಯ ಬಗ್ಗೆ ಚಿಂತನೆ ಮಾಡುವ ಮಕ್ಕಳು ಕೊನೆಗೆ ಸೂರ್ಯನ ಕುದುರೆಗಳ ಸಹಾಯದಿಂದ ಬೆಟ್ಟವನ್ನೇ ಸರಿಸಿ, ಬೆಟ್ಟದ ಮರೆಯಿಂದ ಸೂರ್ಯ ಹೊರಬರುವಂತೆ ಮಾಡುತ್ತಾರೆ ಹಾಗೂ ಊರಿನ ಜನರನ್ನು ನಿದ್ರೆಯಿಂದ ಮುಕ್ತಗೊಳಿಸುತ್ತಾರೆ. ಇವರಿಗೆ ತೊಂದರೆ ಕೊಡಲು ಬರುವ ನಿದ್ರಾ ರಾಕ್ಷಸನನ್ನು ಬೆಳಕು ತೋರಿಸಿ ಬೆದರಿಸುವ ಕತ್ತಲಿನಾಚಿಗೆ ಬೆಳಕಿದೆ ಎಂಬ ಸಂದೇಶವನ್ನು ಸಾರುತ್ತಾರೆ.
ಕತ್ತಲೆ ಕಳೆಯುವ ಬೆಳಕು ಮೂಡಿಸಲು ನಾವು ನಮ್ಮದೇ ಪ್ರಯತ್ನ ಮಾಡಬೇಕಷ್ಟೇ. ಮನಸ್ಸು ಮಾಡಿದರೆ ಮಕ್ಕಳು ಬೆಟ್ಟವನ್ನೂ ಸರಿಸಬಲ್ಲರು. ತಮಗೆ ತೊಂದರೆ ಕೊಟ್ಟ ರಾಕ್ಷಸನನ್ನೇ ಕೊನೆಗೆ ಕ್ಷಮಿಸುವ ಮಕ್ಕಳು, ತಪ್ಪು ಮಾಡಿದವರನ್ನೂ ಕ್ಷಮಿಸಿ ನಮ್ಮವರನ್ನಾಗಿಸಿಕೊಳ್ಳಬೇಕೆಂಬ ಸಹಿಷ್ಣುತೆಯ ಪಾಠ ಹೇಳುತ್ತಾರೆ. ಯಾವುದನ್ನೇ ಆಗಲಿ ಪರಿಸರಕ್ಕೆ ಹಾನಿಯಾಗದಂತೆ ಮಾಡಬೇಕು ಎನ್ನುವ ಇನ್ನೊಂದು ಮಹತ್ತರ ಸಂದೇಶವನ್ನು ಕಥೆಯ ಮೂಲಕ ಹೇಳುತ್ತದೆ, ಈ ನಾಟಕ.
ಕುಂದಾಪುರ ಸಮೀಪದ ತೆಕ್ಕಟ್ಟೆಯ ಧಮನಿ ಟ್ರಸ್ಟ್ ಪ್ರಸ್ತುತ ಪಡಿಸಿದ ಈ ನಾಟಕದ ನಿರ್ದೇಶಕರು ರಂಜಿತ್ ಶೆಟ್ಟಿ ಕುಕ್ಕೆಡೆ. ಹಾರುವ ಹಕ್ಕಿಗಳು, ಚಲಿಸುವ ಬೆಟ್ಟ, ಸೂರ್ಯನ ಕುದುರೆ ರಥ ಎಲ್ಲವನ್ನು ಅತ್ಯುತ್ತಮ ಬೆಳಕಿನ ಸಂಯೋಜನೆಯೊಂದಿಗೆ ರಂಗದ ಮೇಲೆ ತಂದವರು ಶ್ರೀಶ ತೆಕ್ಕಟ್ಟೆ. ತಕ್ಕ ಸಂಗೀತ ನೀಡಿದವರು ರೋಶನ್ ಎಸ್ ಬೈಕಾಡಿ.
ನಾಟಕದ ಬಹುಮುಖ್ಯ ಹೈಲೈಟ್ ಮಕ್ಕಳ ಅತ್ಯುತ್ತಮ ಅಭಿನಯ. ರಾಕ್ಷಸನ ಪಾತ್ರಧಾರಿ ಅಭಿನಯ ಚೇತೋಹಾರಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.