
“ಈ ಪಾಕಿಸ್ತಾನ, ಹಿಂದೂಸ್ಥಾನ ಅಂತ ಯಾಕ ಆತು ಅಮ್ಮೀ ಜಾನ್? ನಾವೆಲ್ಲಾರೂ ಒಟ್ಟಿಗೇ ಕೂಡಿ ಇರಾಕ ಬರೂದಿಲ್ಲ ಏನು?” ಇದು ‘ರಾವಿ ನದಿ ದಂಡೆಯಲ್ಲಿ’ ನಾಟಕದಲ್ಲಿ ಬರುವ ಸಂಭಾಷಣೆ. ಶತ ಶತಮಾನಗಳಿಂದ ಸಹೋದರರಂತೆ ಬಾಳಿ ಬದುಕುತ್ತಿದ್ದ ಹಿಂದೂ–ಮುಸ್ಲಿಮರು ಕೆಲವೇ ಕೆಲವು ಮತಾಂಧರ ಸ್ವಾರ್ಥ ಮನೋಭಾವದಿಂದ ಹರಿದು ಹಂಚಿ ಹೋಗಬೇಕಾಯಿತು. ದೇಶ ಇಬ್ಭಾಗದ ಪರಿಣಾಮಗಳನ್ನು ನಾಟಕಕಾರ ಅಸಗರ್ ವಜಾಹತ್ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಾಟಕವನ್ನು ಇಟಗಿ ಈರಣ್ಣ ಕನ್ನಡಕ್ಕೆ ಸಮರ್ಥವಾಗಿ ತಂದಿದ್ದಾರೆ.
ಭಾರತದ ಲಕ್ನೋದಲ್ಲಿ ನೆಲೆಸಿದ್ದ ಮುಸ್ಲಿಂ ಕುಟುಂಬವೊಂದು ದೇಶ ಇಬ್ಭಾಗವಾದ ನಂತರ ಲಾಹೋರಿಗೆ ವಲಸೆ ಹೋಗುತ್ತದೆ. ಅಲ್ಲಿ ಅವರಿಗಾಗಿ ಹಂಚಿಕೆಯಾದ ಬಂಗಲೆ ಒಬ್ಬ ಹಿಂದೂ ವ್ಯಾಪಾರಿಯದ್ದು. ಗಲಭೆಯಲ್ಲಿ ಆ ಕುಟುಂಬದ ಹಿರಿಯ ಜೀವವೊಂದನ್ನು ಬಿಟ್ಟು ಉಳಿದವರೆಲ್ಲರ ಹತ್ಯೆಯಾಗಿರುತ್ತದೆ. ಆ ಮನೆಯಲ್ಲಿ ಆ ಹಿರಿಯ ಜೀವ ಮಾತ್ರ ಉಳಿದುಕೊಂಡಿರುತ್ತದೆ. ಬಂಗಲೆಯು ತನಗೆ ಸೇರಿದ್ದೆಂದು ಮುದುಕಿಯೂ, ತಮಗೆ ಹಂಚಿಯಾಗಿದ್ದೆಂದು ಮುಸ್ಲಿಂ ಕುಟುಂಬದ ವಾದ. ಇವರಿಬ್ಬರ ಸಂಘರ್ಷದೊಂದಿಗೆ ಆರಂಭವಾಗುವ ನಾಟಕ ಮಧ್ಯಂತರದ ಹೊತ್ತಿಗೆ ಬೇರೆಯದ್ದೇ ತಿರುವನ್ನು ಪಡೆದುಕೊಳ್ಳುತ್ತದೆ. ಮೊಗ್ಗೊಂದು ಹೂವಾಗಿ ಅರಳುವಂತೆ ಮುದುಕಿ ಹಾಗೂ ಮುಸ್ಲಿಂ ಕುಟುಂಬದ ಸದಸ್ಯರ ಮಧ್ಯದಲ್ಲಿ ಗಾಢ ಸಂಬಂಧ ಬೆಳೆದು ಬಿಡುತ್ತದೆ. ಆದರೆ ಧರ್ಮ–ಧರ್ಮಗಳ ಮಧ್ಯದ ಸಾಮರಸ್ಯವನ್ನು ಅರಗಿಸಿಕೊಳ್ಳಲಾರದ ಕೆಲ ಧರ್ಮಾಂಧರು ಇನ್ನಿಲ್ಲದಂತೆ ಈ ಕುಟುಂಬಕ್ಕೆ ಕಿರುಕುಳವನ್ನು ನೀಡುತ್ತಾರೆ. ಯಾವುದೇ ಬೆದರಿಕೆಗಳಿಗೆ ಜಗ್ಗದ ಮುಸ್ಲಿಂ ಕುಟುಂಬ ಹಿಂದೂ ಮುದುಕಿಗೆ ತಾಯಿಯ ಸ್ಥಾನವನ್ನು ಕೊಟ್ಟು ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ.
ಇಹಲೋಕವನ್ನು ತ್ಯಜಿಸಿದ ಹಿಂದೂ ವೃದ್ಧೆಯ ಶವಯಾತ್ರೆಯ ಸನ್ನಿವೇಶವೇ ಕೊನೆಯ ದೃಶ್ಯ. ಲಾಹೋರಿನ ಮುಸ್ಲಿಂ ಕುಟುಂಬಗಳೇ ಒಂದಾಗಿ ವೃದ್ಧೆಯ ಶವವನ್ನು ಹೊತ್ತು ‘ರಾಮ್ ನಾಮ್ ಸತ್ಯ ಹೇ’ ಎಂಬ ಘೋಷಣೆಯೊಂದಿಗೆ ಭಾರವಾದ ಮನಸಿನೊಂದಿಗೆ ಅಂತ್ಯಸಂಸ್ಕಾರಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ನಾಟಕ ವೀಕ್ಷಿಸುತ್ತಿದ್ದ ಪ್ರೇಕ್ಷಕ ವರ್ಗದಲ್ಲಿದ್ದ ನಾಲ್ಕಾರು ಮುಸ್ಲಿಮರು ವೇದಿಕೆಯ ಮೇಲೆ ಧಾವಿಸಿ ಬಂದು ಶವಕ್ಕೆ ಹೆಗಲು ಕೊಟ್ಟದ್ದು ಕಲಾವಿದರಿಗಷ್ಟೇ ಅಲ್ಲ, ಅಲ್ಲಿ ನೆರೆದವರಿಗೆಲ್ಲ ಅನಿರ್ವಚನೀಯ ಅನುಭವವನ್ನು ಕೊಟ್ಟಿತ್ತು. ನಂತರ ಆ ಮುಸ್ಲಿಮರು ನಾಟಕ ಕುರಿತು ಮೆಚ್ಚುಗೆ ಸೂಚಿಸಿದ್ದಲ್ಲದೇ, ‘ಇಂದಿನ ದಿನಗಳಲ್ಲಿ ಎಲ್ಲ ಧರ್ಮಗಳನ್ನು ಪರಸ್ಪರ ಗೌರವಿಸುತ್ತ ಸಾಮರಸ್ಯದಿಂದ ಬದುಕುವ ಮನೋಭಾವ ಎಲ್ಲರಲ್ಲೂ ಬರಬೇಕಿದೆ’ ಎಂದು ಹೇಳಿದ್ದು ರೋಮಾಂಚನವನ್ನುಂಟು ಮಾಡಿತು. ಈ ಮೂಲಕ ನಾಟಕ ಶಾಂತಿಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿತ್ತು.
ಯಾವುದೇ ಕಲೆಯಾಗಲಿ, ಮನರಂಜನೆಯನ್ನು ನೀಡುವುದರ ಜೊತೆಗೆ ಸಮಾಜಕ್ಕೊಂದು ಸಂದೇಶವನ್ನು ನೀಡುವ ಅಂಶಗಳಿಂದ ಕೂಡಿರಬೇಕು. ಅಂದಾಗ ಆ ಕಲೆ ಸಾರ್ಥಕತೆಯನ್ನು ಹೊಂದುತ್ತದೆ. ‘ರಾವಿ ನದಿ ದಂಡೆಯಲ್ಲಿ’ ನಾಟಕ ಮಾನವತ್ವದ ಸಂದೇಶವನ್ನು ನೀಡುವಂತಹ ನಾಟಕ. ಕೊನೆಯಲ್ಲಿ ಮನ ಮಿಡಿಯುವಂತಹ ತಾರ್ಕಿಕತೆಯ ಸಂದೇಶವನ್ನು ನೀಡಿ ಪ್ರೇಕ್ಷಕ ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ‘ಸಹ್ಯಾದ್ರಿ ರಂಗ ತರಂಗ- ಶಿವಮೊಗ್ಗ’ ಈ ತಂಡದ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ರಂಗಕರ್ಮಿ ಕಾಂತೇಶ ಕದರಮಂಡಲಗಿ ನಾಟಕವನ್ನು ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.