ADVERTISEMENT

Big Boss 8: ಎರಡು ವಾರ ಕ್ಯಾಪ್ಟನ್ ಆಗಿದ್ದ ಬ್ರೋಗೌಡಗೆ ಈಗ ಜೈಲೂಟ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 9:56 IST
Last Updated 13 ಮಾರ್ಚ್ 2021, 9:56 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್   

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ 12ನೇ ದಿನ ಮತ್ತೊಬ್ಬ ಸ್ಪರ್ಧಿ ಕಳಪೆ ಪ್ರದರ್ಶನದ ಆಧಾರದ ಮೇಲೆ ಜೈಲು ಸೇರಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಸಂದರ್ಭ ಸ್ಪರ್ಧಿಯ ಮೇಲಿನ ಮನೋಭಾವ ಬದಲಾಗಬಹುದು ಎಂದು ಬಿಗ್ ಬಾಸ್ ಆರಂಭಕ್ಕೂ ಮುನ್ನ ನಿರೂಪಕ ನಟ ಕಿಚ್ಚ ಸುದೀಪ್ ಹೇಳಿದ್ದರು. ಆ ಮಾತು ಇಲ್ಲಿ ಅಕ್ಷರಶಃ ನಿಜವಾಗಿದ್ದು, ಎರಡು ವಾರ ಕ್ಯಾಪ್ಟನ್ ಆಗಿದ್ದ ಬ್ರೋಗೌಡ ಅಲಿಯಾಸ್ ಶಮಂತ್ ಇದೀಗ ಕಳಪೆ ಪ್ರದರ್ಶನದ ಹಣೆಪಟ್ಟಿಯೊಂದಿಗೆ ಜೈಲು ಸೇರಿದ್ದಾರೆ.

ಜೈಲು ಸೇರಿದ ಬ್ರೋ ಗೌಡ: ಪ್ರತಿ ವಾರದಂತೆ ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮತ್ತು ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಮೊದಲಿಗೆ ಕಳಪೆ ಸ್ಪರ್ಧಿಯ ಆಯ್ಕೆ ವೇಳೆ ಮನೆಯ ಹಲವು ಸದಸ್ಯರು ಶಮಂತ್ ಕಡೆಗೆ ಬೊಟ್ಟು ಮಾಡಿದರು. ವೈಷ್ಣವಿ, ನಿಧಿ ಸುಬ್ಬಯ್ಯ ಸೇರಿ ಹಲವರು ಬ್ರೋಗೌಡಗೆ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿ ಎಂದರು. ದಿವ್ಯಾ ಸುರೇಶ್ ಅಂತೂ ಶಮಂತ್ ಇಲ್ಲಿಗೆ ಜನಮೆಚ್ಚುಗೆ ಗಳಿಸಲು ಬಂದಿದ್ದಾರಾ? ಅಥವಾ ಹುಡುಗಿಯರನ್ನು ಪಟಾಯಿಸಲು ಬಂದಿದ್ದರಾ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಜೈಲಲ್ಲಿ ನೋವು ತೋಡಿಕೊಂಡ ಶಮಂತ್: ಒಳ್ಳೆತನಕ್ಕೆ ಇಲ್ಲಿ ಬೆಲೆ ಇಲ್ಲ. ಚೈಲ್ಡಿಶ್ ಆಗಿ ಎಲ್ಲರೂ ನನ್ನನ್ನು ಕಳಪೆ ಸ್ಪರ್ಧಿ ಎಂದು ಆಯ್ಕೆ ಮಾಡಿದರು. ನಿಧಿ ಸುಬ್ಬಯ್ಯ ಕಾಲಿಗೆ ಗಾಯವಾದ ಓಡಿಹೋಗಿ ಅರಿಶಿನ ತಂದು ಹಚ್ಚಿದ್ದೆ. ಅವರೇ ನನಗೆ ಕಳಪೆ ಪಟ್ಟ ಕಟ್ಟಿದರು ಎಂದು ಬಿಗ್ ಬಾಸ್ ಜೊತೆ ಶಮಂತ್ ಹೇಳಿಕೊಂಡರು. ನೋಡುತ್ತಾ ಇರಿ. ಹೊರಗೆ ಬರುವ ಹೊತ್ತಿಗೆ ಹೊಸ ವ್ಯಕ್ತಿಯಾಗಿರುತ್ತೇನೆ. ಸಿನಿಮಾಗಳಲ್ಲಿ ಹೀರೊಗಳ ರೀತಿ ಸಾಧಿಸಿ ತೋರಿಸ್ತೀನಿ ಎಂದು ಬ್ರೋ ಗೌಡ ಹೇಳಿಕೊಂಡರು.

ಬಿಗ್ ಬಾಸ್ ನಿಯಮಗಳ ಪ್ರಕಾರ, ಜೈಲಿನಲ್ಲಿರುವ ಕಳಪೆ ಸ್ಪರ್ಧಿ ಮನೆಯಲ್ಲಿ ಅಡುಗೆ ಮಾಡಲು ಬೇಕಾದ ತರಕಾರಿ ಕತ್ತರಿಸಿ ಕೊಡಬೇಕು. ರಾಗಿ ಗಂಜಿ ಕುಡಿದು ಜೈಲಿನಲ್ಲಿರುವ ಕನಿಷ್ಠ ಸೌಲಭ್ಯದೊಂದಿಗೆ ಇರಬೇಕು.

ಇನ್ನೂ, ಬಿಗ್ ಬಾಸ್ ಮನೆಯಲ್ಲಿ ತಮಾಷೆ ಮಡುತ್ತಾ ನಗೆಯ ಅಲೆ ಎಬ್ಬಿಸುವ ಲ್ಯಾಗ್ ಮಂಜ ಅಲಿಯಾಸ್ ಮಂಜು ಪಾವಗಡ ಈ ವಾರದ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ಧಿ ಪಟ್ಟ ಗಳಿಸಿದ್ದಾರೆ. ಗೀತಾ, ಚಂದ್ರಕಲಾ, ದಿವ್ಯಾ ಉರುಡುಗ ಸೇರಿ ಹಲವು ಸ್ಪರ್ಧಿಗಳು ಮಂಜು ಹೆಸರು ಹೇಳಿದರು. ರಾಜೀವ್‌ ಮತ್ತು ಮಂಜು ಇಬ್ಬರಿಗೂ ಅಧಿಕ ಮತಗಳು ಬಿದ್ದವು. ಕ್ಯಾಪ್ಟನ್ ಆಗಿರುವ ರಾಜೀವ್, ಮಂಜು ಪಾವಗಡ ಅವರನ್ನೇ ಬೆಸ್ಟ್ ಪರ್ಫಾಮರ್ ಆಗಿ ಆಯ್ಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.