ADVERTISEMENT

Big Boss 8: ಇವರೇ ನೋಡಿ.. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸ್ಪರ್ಧಿಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2021, 4:51 IST
Last Updated 30 ಮಾರ್ಚ್ 2021, 4:51 IST
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್ 
ಕಲರ್ಸ್ ಕನ್ನಡ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್    

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ ಐದನೇ ವಾರ ಆರು ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಶಂಕರ್ ಅಶ್ವತ್ಥ್, ಶಮಂತ್, ಪ್ರಶಾಂತ್ ಸಂಬರಗಿ, ಅರವಿಂದ್, ನಿಧಿ ಸುಬ್ಬಯ್ಯ ಮತ್ತು ಶುಭಾ ಫೂಂಜಾ ಅವರು ಈ ಪಟ್ಟಿಯಲ್ಲಿದ್ದಾರೆ. ದಿವ್ಯಾ ಸುರೇಶ್ ಅವರ ಹೆಸರು ಸಹ ನಾಮಿನೇಟ್ ಆಗಿತ್ತಾದರೂ ನಾಯಕ ವಿಶ್ವನಾಥ್ ವಿಶೇಷ ಅಧಿಕಾರ ಬಳಸಿ ಅವರನ್ನು ಸೇಫ್ ಮಾಡಿದ್ದಾರೆ.

ನಾಮಿನೇಶನ್‌ನಲ್ಲಿ ಅರವಿಂದ್ ಹೆಸರು: ಬೈಕ್ ರೇಸರ್ ಅರವಿಂದ್ ಹಲವು ಟಾಸ್ಕ್‌ಗಳಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ನೇರ ನುಡಿ ಮೂಲಕ ಬಿಗ್ ಬಾಸ್ ಮನೆಯಲ್ಲಿ ಹೆಸರಾಗಿದ್ದಾರೆ. ಆದರೆ, ಉತ್ತಮ ಸ್ಪರ್ಧಿ ಮತ್ತು ನೇರ ನುಡಿಗಳೇ ಅವರಿಗೆ ಮುಳುವಾಗುತ್ತಿವೆ. ಅರವಿಂದ್ ನನ್ನ ಕಾಂಪಿಟೇಟರ್ ಎಂಬ ಕಾರಣಕ್ಕೆ ಮಂಜು ಪಾವಗಡ ಅವರು ಹೆಸರು ಸೂಚಿಸಿದ್ದಾರೆ. ಇನ್ನೂ, ತಮ್ಮ ನಡವಳಿಕೆ ಬಗ್ಗೆ ಸುದೀಪ್ ಬಳಿ ನೇರಾನೇರ ಹೇಳಿದ ಅರವಿಂದ್ ಅವರನ್ನು ಪ್ರಶಾಂತ್ ನಾಮಿನೇಟ್ ಮಾಡಿದರು.

4ನೇ ವಾರ ಮೊದಲ ಸ್ಪರ್ಧಿಯಾಗಿ ನಾಮಿನೇಶನ್‌ನಿಂದ ಸೇಫ್ ಆದ ಮಂಜು ಪಾವಗಡ ಅವರ ಹೆಸರನ್ನೂ ರಘು ಸೂಚಿಸಿದರಾದರೂ ಬಹುಮತ ಇಲ್ಲದ ಕಾರಣ ಕೈಬಿಡಲಾಗಿದೆ.

ADVERTISEMENT

‘ನಾನು ಹೊರಗೆ ಹೋಗಬೇಕಿತ್ತು’: 4 ವಾರಗಳಿಂದ ಕೊನೆಯ ಸ್ಪರ್ಧಿಯಾಗಿ ಎಲಿಮಿನೇಶನ್‌ನಲ್ಲಿ ಸೇಫ್ ಆಗುತ್ತಿರುವ ಹಾಲಿ ನಾಯಕ ವಿಶ್ವನಾಥ್, ನಾನು ಮನೆಯಿಂದ ಹೊರಹೋಗಿದ್ದರೆ ಸರಿಯಾಗುತ್ತಿತ್ತು ಎಂದು ಅಸಮಾಧಾನ ತೋರ್ಪಡಿಸುತ್ತಿದ್ದಾರೆ. ಪ್ರತಿ ಬಾರಿ ಕೊನೆಯ ಸ್ಪರ್ಧಿಯಾಗಿ ಉಳಿಯುತ್ತಿರುವುದು ನನಗೆ ಸರಿ ಆಗುತ್ತಿಲ್ಲ ಎಂದು ನಿಧಿ ಸುಬ್ಬಯ್ಯ ಅವರ ಬಳಿ ಹೇಳಿಕೊಂಡರು. ಈ ಬಾರಿ ಬಿಗ್ ಬಾಸ್ ಮನೆಯ ನಾಯಕನಾಗಿರುವ ಕಿರಿಯ ಸ್ಪರ್ಧಿ ವಿಶ್ವನಾಥ್, ಈ ವಾರ ನಾಮಿನೇಶನ್‌ನಿಂದ ಹೊರಗುಳಿದಿದ್ದಾರೆ.

ಮಹಿಳೆಯರಿಗೆ ತಂಡಗಳ ಕ್ಯಾಪ್ಟನ್ಸಿ ಹೊಣೆ: ಗ್ರೂಪ್ ಟಾಸ್ಕ್‌ಗಳನ್ನು ನೀಡಲು ಎರಡು ತಂಡಗಳ ನಾಯಕರನ್ನು ಆಯ್ಕೆ ಮಾಡುವಂತೆ ಬಿಗ್ ಬಾಸ್, ನಾಯಕ ವಿಶ್ವನಾಥ್‌ಗೆ ಸೂಚನೆ ನೀಡಿದರು. ತಂಡದ ಸದಸ್ಯರ ಸಲಹೆ ಮೇರೆಗೆ ದಿವ್ಯಾ ಉರುಡುಗ ಮತ್ತು ಶುಭಾ ಪೂಂಜಾ ಅವರನ್ನು ನಾಯಕಿಯರಾಗಿ ಆಯ್ಕೆ ಮಾಡಿದರು. ಬಳಿಕ ಈ ಇಬ್ಬರು ನಾಯಕರು ಟಾಸ್ಕ್‌ನಲ್ಲಿ ಗೆದ್ದು ತಮ್ಮ ತಂಡಕ್ಕೆ ಒಬ್ಬ ಸದಸ್ಯ ಮತ್ತು ಎದುರಾಳಿ ತಂಡಕ್ಕೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡುವ ಅಧಿಕಾರವಿತ್ತು. ಎರಡು ಬಾರಿ ಗೆದ್ದ ದಿವ್ಯಾ, ಅರವಿಂದ್ ಮತ್ತು ರಾಜೀವ್ ಅವರನ್ನು ಸೇರಿಸಿಕೊಂಡರು. ಶುಭಾ ಪೂಂಜಾ ತಂಡಕ್ಕೆ ವೈಷ್ಣವಿ ಮತ್ತು ನಿಧಿ ಅವರನ್ನು ಸೂಚಿಸಿದರು. ಬಳಿಕ ಉಳಿದರನ್ನು ಆಯ್ಕೆ ಮಾಡಿಕೊಳ್ಳಲು ನಾಯಕರಿಗೆ ಟಾಸ್ಕ್ ಇಲ್ಲದೆ ನೇರ ಅಧಿಕಾರ ನೀಡಲಾಯ್ತು. ದಿವ್ಯಾ ಸುರೇಶ್, ಶಮಂತ್ ಹೀಗೆ ಬಲಿಷ್ಠ ಸ್ಪರ್ಧಿಗಳನ್ನು ಉರುಡುಗ ಆಯ್ದುಕೊಂಡರು. ಶುಭಾ ತಂಡಕ್ಕೆ ಮಂಜು ಪಾವಗಡ ಅವರ ಸಾಥ್ ಸಿಕ್ಕಿತು.

ಬಲಿಷ್ಠ ತಂಡಕ್ಕೆ ಹೀನಾಯ ಸೋಲು: ತಂಡದ ಆಯ್ಕೆ ಬಳಿಕ ಬಲೂನ್ ಟಾಸ್ಕ್ ಅನ್ನು ನೀಡಲಾಗಿತ್ತು. ಬಲೂನುಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬಣ್ಣದ ಕಾಗದಗಳಿರುತ್ತವೆ. ಬಲೂನ್ ಮೇಲೆ ಕುಳಿತು ಅವುಗಳನ್ನು ಸ್ಪರ್ಧಿಗಳು ಒಡೆಯಬೇಕು. ಯಾವ ತಂಡ ಹೆಚ್ಚು ಚಿನ್ನದ ಕಾಗದ ಸಂಗ್ರಹಿಸುತ್ತದೋ ಆ ತಂಡ ವಿಜೇತರಾಗುತ್ತಾರೆ ಎಂಬ ನಿಯಮಾವಳಿ ಇತ್ತು. ಇದರಲ್ಲಿ ಶುಭಾ ಪೂಂಜಾ ಅವರ ತಂಡ 29 ಚಿನ್ನದ ಕಾಗದ ಸಂಗ್ರಹಿಸಿ ಚಾಕ್ಲೆಟ್ ಗೆದ್ದುಕೊಂಡರು. 21 ಚಿನ್ನದ ಕಾಗದ ಸಂಗ್ರಹಿಸಿದ್ದ ದಿವ್ಯಾ ಉರುಡುಗ ಅವರ ಬಲಿಷ್ಠ ತಂಡ ಸೋಲೊಪ್ಪಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.