
ಚೈತ್ರಾ ಕುಂದಾಪುರ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಲಿಟ್ಟಿರುವ ಚೈತ್ರಾ ಕುಂದಾಪುರ ಅವರಿಗೆ ಅದೃಷ್ಟ ಒಲಿದು ಬಂದಿದೆ. 50 ದಿನಗಳ ಬಳಿಕ ಬಿಗ್‌ಬಾಸ್ ಮನೆಗೆ ಬಂದ ಚೈತ್ರಾ ಕುಂದಾಪುರಗೆ ಕ್ಯಾಪ್ಟನ್ ಆಗುವ ಅವಕಾಶ ಒದಗಿ ಬಂದಿದೆ. ಕಳೆದ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರಗೆ ಬಿಗ್‌ಬಾಸ್ ಆಫರ್ ಒಂದನ್ನು ಕೊಟ್ಟಿದ್ದರು.
ಈ ವಾರ ಬಿಗ್‌ಬಾಸ್ ಮನೆಯ ಸ್ಪರ್ಧಿಗಳೆಲ್ಲಾ ರಾಕ್ಷಸರಾಗಿ ಬದಲಾಗಿದ್ದಾರೆ. ‘ನಾಳೆ ಬಾ’ ಎಂಬ ಪರಿಕಲ್ಪನೆಯೊಂದಿಗೆ ಟಾಸ್ಕ್ ನೀಡಲಾಗಿದೆ. ಆದರೆ ಈ ಬಾರಿ ಸ್ಪರ್ಧಿಗಳು ಮಾತ್ರವಲ್ಲ, ಬಿಗ್‌ಬಾಸ್ ಕೂಡ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಟಾಸ್ಕ್ ಇರುವವರೆಗೂ ಸ್ಪರ್ಧಿಗಳು ವಿಲನ್ ಮಾತು ಕೇಳಬೇಕು. ಕಳೆದ ವಾರ ಜೋಡಿ ಟಾಸ್ಕ್ ನಡೆದಿತ್ತು. ಸ್ಪಂದನಾ ಸೋಮಣ್ಣ ಅವರ ಕಾಲಿಗೆ ಪೆಟ್ಟು ಬಿದ್ದ ಕಾರಣ ಚೈತ್ರಾ ಕುಂದಾಪುರ ಸರಣಿ ಟಾಸ್ಕ್‌ಗಳಲ್ಲಿ ಭಾಗಿಯಾಗಿ ಗೆದ್ದಿದ್ದರು. ಆ ಮೂಲಕ ಸ್ಪಂದನಾ ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ, ಈಗ ಸ್ಪಂದನಾ ಕ್ಯಾಪ್ಟನ್ಸಿಗೆ ಕುತ್ತು ಬಂದಿದೆ.
ಚೈತ್ರಾ ಕುಂದಾಪುರ ಅವರಿಗೆ ‘ಟಾಸ್ಕ್ ಆಡಿದ್ದು ನೀವು. ಆದರೆ, ಸ್ಪಂದನಾ ಮನೆಯ ಕ್ಯಾಪ್ಟನ್. ಕ್ಯಾಪ್ಟನ್ ರೂಮ್ ಈಗಲೇ ಓಪನ್ ಆಗುತ್ತೆ. ಮನೆಯ ಕ್ಯಾಪ್ಟನ್ಸಿ ನಿಮ್ಮದಾಗುತ್ತದೆ. ಸ್ಪಂದನಾ ಎಲ್ಲಾ ಕಳೆದುಕೊಂಡು ನೀವಿರೋ ಜಾಗಕ್ಕೆ ಬರುತ್ತಾರೆ. ನಿಮಗೆ ಓಕೆ ಅಂದ್ರೆ ಬಝರ್ ಒತ್ತಿ’ ಎಂದು ಆಫರ್ ಕೊಟ್ಟಿದ್ದಾರೆ. ಇದಕ್ಕೆ ಚೈತ್ರಾ ಕುಂದಾಪುರ ಒಪ್ಪಿಗೆ ಸೂಚಿಸಿ, ಈ ವಾರದ ಕ್ಯಾಪ್ಟನ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.