ನಟ ಸುದೀಪ್
ಚಿತ್ರ: colorskannadaofficial
ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಎಂದಿನಂತೆ ಮತ್ತೆ ಶುರುವಾಗಿದೆ. ಎರಡು ದಿನ ಪೂರ್ತಿಯಾಗಿ ಖಾಲಿಯಾಗಿದ್ದ ಮನೆ ಈಗ ಸ್ಪರ್ಧಿಗಳಿಂದ ತುಂಬಿ ತುಳುಕುತ್ತಿದೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ರಿಲೀಸ್ ಆಗಿರುವ ಪ್ರೊಮೋದಲ್ಲಿ ಬಿಗ್‌ಬಾಸ್ ಮನೆಯ ಒಂದೊಂದು ಭಾಗವನ್ನು ತೋರಿಸಿದ್ದಾರೆ. ಇದಾದ ಬಳಿಕ ಎಂದಿನಂತೆ ಅದೇ ಸಮಯದಲ್ಲಿ ಬಿಗ್‌ಬಾಸ್ ರಾತ್ರಿ 9.30ಕ್ಕೆ ಎಂದು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಜಾಲಿವುಡ್ ಸ್ಟುಡಿಯೋವನ್ನು ಸೀಜ್ ಮಾಡಲಾಗಿತ್ತು. ಹೀಗಾಗಿ ಬಿಗ್‌ಬಾಸ್ ಶೂಟಿಂಗ್ ಸ್ಥಗಿತಗೊಂಡಿತ್ತು. ಸದ್ಯ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳನ್ನು ಸಮೀಪದ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಬಿಗ್‌ಬಾಸ್ ಮನೆಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ.
ಚಿತ್ರ: ಕಲರ್ಸ್ ಕನ್ನಡ
ಅಸಲಿಗೆ ಆಗಿದ್ದೇನು?
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಮಂಡಳಿಯು ಜಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಪೊಲೀಸ್ ಭದ್ರತೆಯಲ್ಲಿ ಜಾಲಿವುಡ್‌ಗೆ ಬೀಗ ಹಾಕಲಾಗಿತ್ತು.
ಡಿ.ಕೆ ಶಿವಕುಮಾರ್ ಹೇಳಿದ್ದೇನು?
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ‘ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಬಿಡದಿಯಲ್ಲಿರುವ ‘ಬಿಗ್ ಬಾಸ್ ಕನ್ನಡ’ ಚಿತ್ರೀಕರಣ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ನ ಬೀಗ ತೆರವುಗೊಳಿಸುವಂತೆ ಸೂಚಿಸಿದ್ದೇನೆ. ಪರಿಸರ ನಿಯಮ ಪಾಲನೆ ಆದ್ಯತಾ ವಿಷಯವಾಗಿದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಿಇಎಲ್‌ಎಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಸಮಯಾವಕಾಶ ನೀಡಲಾಗುವುದು. ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಎತ್ತಿಹಿಡಿಯವುದರ ಜತೆಗೆ, ಕನ್ನಡ ಮನರಂಜನಾ ಉದ್ಯಮಕ್ಕೆ ನನ್ನ ಬೆಂಬಲ ಸದಾ ಇರುತ್ತದೆ‘ ಎಂದು ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಹೇಳಿದ್ದೇನು?
ಇನ್ನು, ಡಿ.ಕೆ ಶಿವಕುಮಾರ್ ಅವರ ಟ್ವಿಟ್ ಅನ್ನು ರೀಟ್ವಿಟ್ ಮಾಡಿದ ಕಿಚ್ಚ ಸುದೀಪ್, ‘ಸಕಾಲದಲ್ಲಿ ಬೆಂಬಲ ನೀಡಿದ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ‘ಬಿಗ್ ಬಾಸ್ ಕನ್ನಡ’ ಭಾಗಿಯಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಲಪಾಡ್ ಅವರ ಪ್ರಾಮಾಣಿಕ ಪ್ರಯತ್ನಗಳಿಗೆ ನನ್ನ ಧನ್ಯವಾದ. ‘ಬಿಗ್ ಬಾಸ್ ಕನ್ನಡ 12’ ಇಲ್ಲಿಯೇ ಇರುತ್ತದೆ‘ ಎಂದು ಬರೆದುಕೊಂಡಿದ್ದಾರೆ.
ಸದ್ಯ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಜಾಲಿವುಡ್ ಸ್ಟುಡಿಯೋಗೆ ಹಾಕಲಾಗಿದ್ದ ಬೀಗವನ್ನು ತೆರವು ಮಾಡಲಾಗಿದ್ದು, ‘ಬಿಗ್‌ಬಾಸ್’ ಮತ್ತೆ ಎಂದಿನಂತೆ ಶುರುವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.