ನಟ ಸುದೀಪ್
ಚಿತ್ರ: ಜಿಯೋ ಹಾಟ್ ಸ್ಟಾರ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಭಾನುವಾರ ಆರಂಭಗೊಂಡಿದೆ. ಈ ಬಾರಿಯ ಬಿಗ್‌ಬಾಸ್‌ಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ನಟ ಸುದೀಪ್ ಹಾಗೂ ತಾಯಿ ಸರೋಜಾ
ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ವೇದಿಕೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ಕಿಚ್ಚ ಸುದೀಪ್ ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕಿಚ್ಚ.. ಕಿಚ್ಚ ಎಂದು ಕೂಗಿದ್ದಾರೆ. ಜೊತೆಗೆ ಬಿಗ್‌ಬಾಸ್ ಕೂಡ ಕಿಚ್ಚ ಸುದೀಪ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
‘ಪ್ರೀತಿಯ ಸುದೀಪ್.. ಬಿಗ್‌ಬಾಸ್ ಸೀಸನ್ 12ಕ್ಕೆ ನಿಮಗೆ ಸ್ವಾಗತ. ಕನ್ನಡ ಪರಂಪರೆಯ ರೂವಾರಿಗಳಾಗಿರುವ ನೀವು ಈ ಕಾರ್ಯಕ್ರಮದಲ್ಲಿ ಮುಂದುವರೆಯುತ್ತಿರುವುದು ಬಿಗ್‌ಬಾಸ್ ಹಾಗೂ ತಂಡಕ್ಕೆ ಇನ್ನಷ್ಟೂ ಹುರುಪು ತಂದಿದೆ. ಕೋಟ್ಯಂತರ ಅಭಿಮಾನಿಗಳ ಮಧ್ಯೆ ನಿಮ್ಮ ಅತಿ ದೊಡ್ಡ ಅಭಿಮಾನಿ ನಿಮ್ಮ ತಾಯಿ ಸರೋಜಾರವರ ಹಾರೈಕೆ ಇಲ್ಲದೆ ಈ ಸೀಸನ್ ಆರಂಭವಾಗುತ್ತಿರುವುದು ನಿಮ್ಮ ಜೊತೆಗೆ ಬಿಗ್‌ಬಾಸ್ ತಂಡಕ್ಕೆ ನೋವು ಉಂಟಾಗಿದೆ. ಪ್ರತ್ಯಕ್ಷವಾಗಿ ಅವರು ನಮ್ಮ ಜೊತೆಗೆ ಇಲ್ಲವಾದರೂ ಪರೋಕ್ಷವಾಗಿ ಅವರ ನೆನಪುಗಳು ಸದಾ ನಿಮ್ಮ ಹಾಗೂ ನಮ್ಮ ಜೊತೆಗೆ ಇರಲಿ ಎಂದು ಬಿಗ್‌ಬಾಸ್ ಬಯಸುತ್ತಾರೆ’ ಎಂದರು.
ಶೋ ಆರಂಭಕ್ಕೂ ಮುನ್ನ ಬಿಗ್‌ಬಾಸ್ ತಂಡ ಕಿಚ್ಚ ಸುದೀಪ್ ಅವರಿಗೆ ಕುಂಕುಮ, ವಿಭೂತಿ ಹಾಗೂ ತಾಯಿ ಸರೋಜಾ ಅವರು ಧರಿಸಿಕೊಳ್ಳುತ್ತಿದ್ದ ಶಾಲ್ ಅನ್ನು ವೇದಿಕೆಗೆ ತಂದು ಕೊಟ್ಟಿದ್ದಾರೆ. ಆಗ ಕಿಚ್ಚ ಸುದೀಪ್ ಕುಂಕುಮ ಹಾಗೂ ವಿಭೂತಿಯನ್ನು ಹಣೆಗೆ ಇಟ್ಟುಕೊಂಡಿದ್ದಾರೆ.
ಇದಾದ ಬಳಿಕ ಮಾತಾಡಿದ ಕಿಚ್ಚ, ಈ ಎರಡು ಡಬ್ಬದಲ್ಲಿ ಸಾಯಿಬಾಬಾ ಅವರ ವಿಭೂತಿ, ಇನ್ನೊಂದರಲ್ಲಿ ಆಂಜನೇಯ ಕುಂಕುಮವನ್ನು ನನ್ನ ತಾಯಿ ಇಡುತ್ತಿದ್ದರು ಎಂದರು. ಆಗ ಟಿವಿ ಪರದೆ ಮೇಲೆ ಕಿಚ್ಚ ಸುದೀಪ್ ತಾಯಿ ಅದೇ ಶಾಲ್ ಧರಿಸಿಕೊಂಡು ಕುಳಿತುಕೊಂಡ ಫೋಟೊವನ್ನು ಹಾಕಲಾಯಿತು. ಈ ಫೋಟೊ ನೋಡುತ್ತಿದ್ದಂತೆ ಕಿಚ್ಚ ಸುದೀಪ್ ಭಾವುಕರಾದರು.
ಸದ್ಯ ಈ ಬಾರಿಯ ಬಿಗ್‌ಬಾಸ್ ಮನೆಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸಲ ಬಿಗ್‌ಬಾಸ್ ‘ಒಂಟಿ ವರ್ಸಸ್ ಜಂಟಿ’ ಎಂಬ ಪರಿಕಲ್ಪನೆಯನ್ನು ಒಳಗೊಂಡಿದೆ. ಈಗಾಗಲೇ ಒಂಟಿ ತಂಡದಲ್ಲಿ ಕಾಕ್ರೋಚ್ ಸುಧಿ, ಜಾಹ್ನವಿ, ಧ್ರುವಂತ್, ಮಲ್ಲಮ್ಮ, ಅಶ್ವಿನಿ ಗೌಡ ಹಾಗೂ ಧನುಷ್ ಗೌಡ ಇದ್ದಾರೆ.
ಇನ್ನು, ಜಂಟಿ ತಂಡದಲ್ಲಿ ಕರಿಬಸಪ್ಪ– ಅಮಿತ್ ಪವಾರ್, ರಾಶಿಕಾ ಶೆಟ್ಟಿ - ಮಂಜು ಭಾಷಿಣಿ, ಡಾಗ್ ಸತೀಶ್ - ಚಂದ್ರಪ್ರಭ, ಗಿಲ್ಲಿ ನಟ - ಕಾವ್ಯ ಶೈವ, ಅಶ್ವಿನಿ - ಅಭಿಷೇಕ್ ಶ್ರೀಕಾಂತ್ ಜಂಟಿಯಾಗಿದ್ದಾರೆ. ಅಲ್ಲದೆ ಸ್ಪಂದನಾ ಸೋಮಣ್ಣ, ರಕ್ಷಿತಾ ಶೆಟ್ಟಿ ಹಾಗೂ ಮಾಳು ನಿಪನಾಳ ಇಂದು ರಾತ್ರಿಯ ಸಂಚಿಕೆಯಲ್ಲಿ ಯಾವ ತಂಡಕ್ಕೆ ಹೋಗುತ್ತಾರೆ ಎಂದು ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.