ಕಿರುತೆರೆಯ ಜನಪ್ರಿಯ ನೆಚ್ಚಿನ 'ಕಲರ್ಸ್ ಕನ್ನಡ' ವಾಹಿನಿಯು ಎರಡು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸಜ್ಜಾಗಿದೆ.
ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ಗಿಚ್ಚಿ ಗಿಲಿ ಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್‌ಸ್ಟಾರ್ ಮತ್ತು ಬಿಗ್ ಬಾಸ್‌ನಂತಹ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿರುವ ಕಲರ್ಸ್‌ನಲ್ಲಿ, 'ವಧು' ಹಾಗೂ 'ಯಜಮಾನ' ಹೆಸರಿನ ಧಾರಾವಾಹಿಗಳು ಜನವರಿ 27ರಿಂದ ಆರಂಭವಾಗಲಿವೆ.
ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಗಳನ್ನು ನಟಿಯರಾದ ಶ್ರುತಿ ಹಾಗೂ ಸಪ್ತಮಿ ಗೌಡ ವೀಕ್ಷಕರಿಗೆ ಪರಿಚಯಿಸಿದ್ದಾರೆ.
ವಧು
ವಿಚ್ಛೇದನ ಕೋರಿ ಬರುವ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ, ಒಂದಾಗಿ ಬಾಳುವಂತೆ ಮಾಡುವ ವಕೀಲೆ ನಾಯಕಿ 'ವಧು'. ಮನುಷ್ಯ ಸಂಬಂಧಗಳ ಬಗ್ಗೆ ಹೊಂದಿರುವ ಅಪಾರ ಗೌರವದ ಕಾರಣಕ್ಕೆ, ವೃತ್ತಿಯಲ್ಲಿ ಹಿಂದುಳಿದಿರುವ ಆಕೆ ಅವಿವಾಹಿತೆಯೂ ಹೌದು. ಮದುವೆಯಾಗುವ ಆಲೋಚನೆಯಲ್ಲಿದ್ದಾಳೆ.
ಯಶಸ್ವಿ ಉದ್ಯಮಿಯೊಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿ, ವಧು ಬಳಿಗೆ ನೆರವು ಕೋರಿ ಬಂದಾಗ, ಕಥೆ ತಿರುವು ಪಡೆದುಕೊಳ್ಳುತ್ತದೆ. ಪ್ರೀತಿ ಮತ್ತು ಬದ್ಧತೆಗಳ ಕುರಿತ ಅವಳ ನಿಲುವುಗಳು ಈ ಕೇಸ್‌ನ ನಂತರ ಬದಲಾಗುತ್ತವೆಯೇ ಎಂಬುದಕ್ಕೆ ಉತ್ತರ ಪ್ರತಿದಿನದ ಸಂಚಿಕೆಗಳಲ್ಲಿ ಇದೆ. ಸಂಬಂಧಗಳನ್ನು ಪರೀಕ್ಷೆಗೆ ಒಡ್ಡುತ್ತಾ, ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟದೊಂದಿಗೆ ಸಾಗುವ 'ವಧು' ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
'ವಧು' ಪಾತ್ರದಲ್ಲಿ ದುರ್ಗಾಶ್ರೀ ನಟಿಸಿದ್ದಾರೆ. ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಸೇರಿದಂತೆ ಇನ್ನಷ್ಟು ಮಂದಿ ತಾರಾಗಣದಲ್ಲಿದ್ದಾರೆ.
ಯಜಮಾನ
ಚೂರೂ ಸ್ವಾರ್ಥವಿಲ್ಲದ, ಕುಟುಂಬದವರ ಪ್ರೀತಿ ಗಳಿಸುವ ಮಹದಾಸೆ ಹೊಂದಿರುವ ರಘು ಹಾಗೂ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ ಝಾನ್ಸಿ, 'ಯಜಮಾನ' ಧಾರಾವಾಹಿಯ ನಾಯಕ–ನಾಯಕಿ. ವಿಧಿ ಇವರನ್ನು ಕಾಂಟ್ರ್ಯಾಕ್ಟ್ ಮದುವೆ ರೂಪದಲ್ಲಿ ಹತ್ತಿರ ಮಾಡುತ್ತದೆ.
ಕಷ್ಟದಲ್ಲಿರುವ ತನ್ನ ಕುಟುಂಬಕ್ಕೆ ಒಳಿತಾಗಲೆಂದು ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಎದುರಾಗುವ ತಿರುವುಗಳು ವೀಕ್ಷಕರ ಕುತೂಹಲ ಕೆರಳಿಸುತ್ತವೆ.
ಪರಸ್ಪರ ಅನುಕೂಲಕ್ಕಾಗಿ ಆರಂಭವಾದ ರಘು–ಝಾನ್ಸಿ ಸಂಬಂಧ, ಗಾಢವಾಗುತ್ತಾ ಸಾಗಿದರೂ ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕ ಇದ್ದದ್ದೇ. ಹೀಗಾಗಿ, ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟಗಳೊಂದಿಗೆ 'ಯಜಮಾನ' ಹೇಗೆ ಸಾಗುತ್ತದೆ, ನಾಯಕ–ನಾಯಕಿ ಒಂದಾಗುವರೇ ಎಂಬುದನ್ನು ವಾಹಿನಿಯಲ್ಲೇ ವೀಕ್ಷಿಸಬೇಕು. ಈ ಧಾರಾವಾಹಿ ರಾತ್ರಿ 10ಕ್ಕೆ ಪ್ರಸಾರವಾಗಲಿದೆ.
ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಫೂರ್ತಿ, ಪ್ರದೀಪ್ ಮತ್ತು ವಿಶ್ವ ಅವರೂ ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.