‘ನನಗೆ ಕಾಳಿಂಗ ಸರ್ಪ ಕಚ್ಚಿದ್ದೇ ಈ ಉರಗ ದೈತ್ಯನ ಬೇರೆ ಬೇರೆ ಪ್ರಭೇದದ ಹುಡುಕಾಟಕ್ಕೆ ಪ್ರೇರಣೆಯಾಯಿತು’ ಎನ್ನುತ್ತಾ ರೋಚಕ ಕಥೆಯೊಂದನ್ನು ಪಿ. ಗೌರಿಶಂಕರ್ ಬಿಚ್ಚಿಟ್ಟರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ಕಾಳಿಂಗ ಸೆಂಟರ್ ಫಾರ್ ರೇನ್ ಫಾರೆಸ್ಟ್ ಇಕಾಲಜಿ ಸಂಸ್ಥೆಯ ಮುಖ್ಯಸ್ಥ
ಪಿ. ಗೌರಿಶಂಕರ್, ಎರಡು ದಶಕಗಳಿಂದ ಕಾಳಿಂಗ ಸರ್ಪಗಳ ಸಂರಕ್ಷಣೆ, ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಕಾಳಿಂಗ ಸರ್ಪದ ಪ್ರಭೇದವನ್ನು 1836ರಲ್ಲಿ ಮೊದಲ ಬಾರಿಗೆ ಉರಗ ತಜ್ಞ ಕ್ಯಾಂಟರ್ ಗುರುತಿಸಿದ್ದರು. ಅದಕ್ಕೆ ವೈಜ್ಞಾನಿಕವಾಗಿ ಒಫಿಯೋಫಾಗಸ್ ಹಾನ್ಹಾ (Ophiophagus hannah) ಎಂಬ ಹೆಸರು ಕೊಟ್ಟಿದ್ದರು. ಜಗತ್ತಿನಲ್ಲಿ ಆಗಿನಿಂದಲೂ ಒಂದೇ ಪ್ರಭೇದದ ಕಾಳಿಂಗ ಸರ್ಪ ಇದೆ ಎಂದೇ ನಂಬಲಾಗಿತ್ತು. 185 ವರ್ಷಗಳ ನಂತರ ಅದೊಂದೇ ಅಲ್ಲ, ಅದರ ಜೊತೆಗೆ ಇನ್ನೂ ಮೂರು ಪ್ರಭೇದಗಳಿವೆ ಎಂಬುದನ್ನು ಗೌರಿಶಂಕರ್ ನೇತೃತ್ವದ ತಜ್ಞರ ತಂಡ (ಪ್ರಿಯಾಂಕಾ ಸ್ವಾಮಿ, ಡಾ.ಎಸ್.ಆರ್.ಗಣೇಶ್, ಡಾ.ಎಸ್.ಪಿ.ವಿಜಯಕುಮಾರ್, ರಿನೋನ್ ವಿಲಿಯಮ್ಸ್ ಹಾಗೂ ಪಿ.ಪ್ರಶಾಂತ್) ಸಂಶೋಧನೆ ಮೂಲಕ ಗುರುತಿಸಿದೆ.
ಅದು 2005ರ ಮಾರ್ಚ್. ಆಗುಂಬೆ–ಶೃಂಗೇರಿ ನಡುವಿನ ಕೇಲೂರಿನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡ ಸುದ್ದಿ ಬಂತು. ಹೋದರೆ ಅಲ್ಲಿನ ಗದ್ದೆ ಬಯಲಲ್ಲಿ ಒಂದಲ್ಲ, ಎರಡಲ್ಲ, ಮೂರು ಗಂಡು ಕಾಳಿಂಗ ಸರ್ಪಗಳು ಬುಸುಗುಟ್ಟುತ್ತಿದ್ದವು. ಅದು ಮಾಗಿಯ ಸಂಜೆ. ಹೆಣ್ಣು ಕಾಳಿಂಗವನ್ನು ಆಕರ್ಷಿಸಲು ಎರಡು ಗಂಡು ಸೇರಿ ಸೆಣಸುವುದು ಸಾಮಾನ್ಯ. ಆದರೆ ಅಲ್ಲಿ ಮೂರು ಸೇರಿದ್ದವು. ಒಂದನ್ನು ಹಿಡಿದು ಚೀಲಕ್ಕೆ ಹಾಕಿಕೊಂಡೆ. ಇನ್ನೊಂದು ಸ್ಥಳೀಯರು ಕೊಟ್ಟ ಗೋಣಿಚೀಲದಲ್ಲಿ ಹೊಕ್ಕಿತು. ನಾಗರಹಾವು ಸಂರಕ್ಷಿಸಿಡಲು ಇಟ್ಟುಕೊಂಡಿದ್ದ ಪುಟ್ಟ ಚೀಲಕ್ಕೆ ಮತ್ತೊಂದನ್ನು ಹಾಕಿದೆ. ಅದು ಗಾಬರಿಗೊಂಡು ಚೀಲದೊಳಗಿಂದಲೇ ನನ್ನ ಕೈಗೆ ಕಚ್ಚಿಯೇಬಿಟ್ಟಿತ್ತು ಎಂದು ಗೌರಿಶಂಕರ್ ನೆನಪಿಸಿಕೊಳ್ಳುತ್ತಾರೆ.
ಕಾಳಿಂಗ ಕಚ್ಚಿದರೆ ನಮ್ಮಲ್ಲಿ ಅದಕ್ಕೆ ಔಷಧ (ಆ್ಯಂಟಿ ವೆನಮ್) ಇಲ್ಲ. ಹೀಗಾಗಿ ಅವರು ಥಾಯ್ಲೆಂಡ್‌ನಿಂದ ತರಿಸಿಟ್ಟುಕೊಂಡಿದ್ದರು. ಕಾಳಿಂಗ ಕಚ್ಚುತ್ತಿದ್ದಂತೆಯೇ ಕೇಲೂರಿನಿಂದ 85 ಕಿಲೋಮೀಟರ್ ದೂರದ ಮಣಿಪಾಲದ ಆಸ್ಪತ್ರೆಗೆ ದೌಡಾಯಿಸಿದರು. ಅವರು ಥಾಯ್ಲೆಂಡ್‌ನಿಂದ ತರಿಸಿದ್ದ ಔಷಧವನ್ನೇ ಕೊಟ್ಟರು. ಆಶ್ಚರ್ಯವೆಂದರೆ ಅದು ಕೆಲಸ ಮಾಡಲಿಲ್ಲ. ಬದಲಿಗೆ ಅದರಿಂದ ಅಲರ್ಜಿ ಆಯಿತು. ಕಾಳಿಂಗ ಸರ್ಪ ಕಚ್ಚಿದಾಗ ದೇಹಕ್ಕೆ ಕಡಿಮೆ ವಿಷ ಬಿಟ್ಟಿರಬಹುದು. ಜೊತೆಗೆ ಆ ಸನ್ನಿವೇಶದಲ್ಲಿ ಅವರು ಬಹಳಷ್ಟು ದೃಢವಾಗಿ ವರ್ತಿಸಿದ್ದರು.
‘ವಿದೇಶಿ ಔಷಧ ನನ್ನ ದೇಹದಲ್ಲಿ ಏಕೆ ಕೆಲಸ ಮಾಡಲಿಲ್ಲ ಎಂಬ ಪ್ರಶ್ನೆ ಅಂದೇ ನನ್ನಲ್ಲಿ ಮೊಳೆಯಿತು. ಅದರ ಫಲವೇ ಕಾಳಿಂಗದ ಪ್ರಭೇದಗಳ ಅಧ್ಯಯನ. ಹತ್ತೊಂಬತ್ತು ವರ್ಷಗಳ ನಂತರ ಈಗ ಅದಕ್ಕೆ ಉತ್ತರ ಸಿಕ್ಕಿದೆ. ಥಾಯ್ಲೆಂಡ್‌ನಲ್ಲಿರೋದು ಬೇರೆ ಪ್ರಭೇದದ ಕಾಳಿಂಗ. ಇಲ್ಲಿಯದು ಬೇರೆ. ಹೀಗಾಗಿಯೇ ಔಷಧ ಕೆಲಸ ಮಾಡಲಿಲ್ಲ’ ಎನ್ನುತ್ತಾರೆ ಗೌರಿಶಂಕರ್.
2012ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಕಾಳಿಂಗ ಸರ್ಪಗಳ ಅಧ್ಯಯನ ಆರಂಭಿಸಿ ಮರುವರ್ಷವೇ ಬಾರಿಪಾಡ್‌ನ ನಾರ್ಥ್ ಒರಿಸ್ಸಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿಗೆ ನೋಂದಣಿ ಮಾಡಿಸಿದರು. ಮುಂದಿನ ಹನ್ನೊಂದು ವರ್ಷ ಕಾಳಿಂಗಗಳ ಪ್ರಭೇದದ ಹುಡುಕಾಟ. ಅದಕ್ಕಾಗಿ ಹದಿನಾಲ್ಕು ದೇಶಗಳನ್ನು ಸುತ್ತಿದ್ದಾರೆ.
ಕಾಳಿಂಗ ಸರ್ಪಗಳ ಕುರಿತಾದ ಮಾಹಿತಿಯ ಅಧ್ಯಯನ, ಅದರ ಮೈಬಣ್ಣ, ಚರ್ಮದ ಮೇಲಿನ ಪಟ್ಟೆಗಳು, ಡಿಎನ್‌ಎ ಪರೀಕ್ಷೆ–ಹೀಗೆ ಸಂಶೋಧನೆಯ ನಂತರ ಬೇರೆ ಬೇರೆ ಪ್ರದೇಶಗಳಲ್ಲಿ ಸದ್ಯ ನಾಲ್ಕು ಪ್ರಭೇದಗಳನ್ನು ಗುರುತಿಸಲು ಸಾಧ್ಯವಾಗಿದೆ. ಪಶ್ಚಿಮಘಟ್ಟ ಸಾಲಿನ ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ಭಾಗದಲ್ಲಿ ಒಂದು ರೀತಿ. ಆಂಧ್ರ ಪ್ರದೇಶದ ಉತ್ತರ ಭಾಗ, ಒಡಿಶಾ, ಪಶ್ಚಿಮ ಬಂಗಾಳ, ವಿಯೆಟ್ನಾಂ, ಕಾಂಬೋಡಿಯಾದಲ್ಲಿ ಮತ್ತೊಂದು ಪ್ರಬೇಧ. ಮೂರನೆಯದ್ದು ಮಲೇಶಿಯಾ, ಥಾಯ್ಲೆಂಡ್, ಸುಮಾತ್ರಾ, ಬಾಲಿಯಲ್ಲಿ ಕಂಡುಬಂದಿದೆ. ನಾಲ್ಕನೆಯದು ಫಿಲಿಪಿನ್ಸ್‌ನ ಲೂಸಾನ್ ದ್ವೀಪದಲ್ಲಿ ಮಾತ್ರ ಕಾಣಸಿಕ್ಕಿದೆ. ಇವುಗಳಲ್ಲಿ ಯಾವುದು ಹೆಚ್ಚು ವಿಷಕಾರಕ ಎಂಬುದರ ಸಂಶೋಧನೆ ಆಗಬೇಕಿದೆ. ಕಾಳಿಂಗ ಕಚ್ಚಿದರೆ ಸದ್ಯಕ್ಕೆ ಮದ್ದು ಇಲ್ಲ. ಈಗ ಅದರಲ್ಲಿನ ಬೇರೆ ಬೇರೆ ಪ್ರಭೇದಗಳನ್ನು ಗುರುತಿಸಿರುವುದು ಮದ್ದು ಕಂಡು ಹಿಡಿಯಲು ನೆರವಾಗಬಹುದು ಎಂದು ಗೌರಿಶಂಕರ್ ಹೇಳುತ್ತಾರೆ.
ಗೌರಿಶಂಕರ್ ಬೆಂಗಳೂರಿನವರು. ಅಪ್ಪ ಸೇನೆಯಲ್ಲಿದ್ದರು. ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ (ಎಂಇಜಿ) ಕ್ವಾರ್ಟರ್ಸ್‌ನಲ್ಲಿ ಬಾಲ್ಯ ಕಳೆದ ಅವರಿಗೆ ಆಗಿನಿಂದಲೂ ಕಾಡಲ್ಲಿ ಇರುವ, ಓಡಾಡುವ ಬಗೆಗೆ ಅತೀವ ಆಸಕ್ತಿ. ಅದಕ್ಕೆ ಎಂಇಜಿ ಕ್ಯಾಂಪಸ್, ಹಲಸೂರು ಕೆರೆ ಹಾಗೂ ಸುತ್ತಲಿನ ಪರಿಸರ ಒತ್ತಾಸೆಯಾಗಿತ್ತು. ಪತ್ನಿ ಶರ್ಮಿಳಾ ಆಗುಂಬೆಯ ಕಾಳಿಂಗ ಫೌಂಡೇಶನ್ ವ್ಯವಸ್ಥಾಪಕಿ. ಪತಿಯ ಆಶಯಗಳಿಗೆ ನೀರೆರೆಯುತ್ತಿದ್ದಾರೆ.
ಮಲೆನಾಡಿನಲ್ಲಿ ಭಯ ಕಮ್ಮಿ, ಭಕ್ತಿ ಜಾಸ್ತಿ
ಮಲೆನಾಡ ಜನರಲ್ಲಿ ಕಾಳಿಂಗದ ಬಗ್ಗೆ ಭಯ ಕಮ್ಮಿ, ಆದರೆ ಭಕ್ತಿ ಜಾಸ್ತಿ. ತಿಳಿವಳಿಕೆ ಇದೆ. ಕಾಳಿಂಗದ ಚಲನವಲನವನ್ನು ತಾಳ್ಮೆಯಿಂದ ಗಮನಿಸುತ್ತಾರೆ. ಕಾಳಿಂಗ ಇಲ್ಲೇ ಬಂದು ನೀರು ಕುಡಿದು ಹೋಗುತ್ತಾನೆ. ಆ ಮರ ಹತ್ತುತ್ತಾನೆ. ಅಲ್ಲೊಂದು ಸಲ ಆಹಾರ ತೆಗೆದುಕೊಳ್ಳುವುದು ನೋಡಿದ್ದೇವೆ. ಎರಡು ವರ್ಷದ ಹಿಂದೆ ಇಲ್ಲೊಂದು ಹೆಣ್ಣು ಗೂಡು ಮಾಡಿತ್ತು ಎಂದೆಲ್ಲ ಮಾತಾಡುತ್ತಾರೆ. ಆದರೆ ಈಶಾನ್ಯ ರಾಜ್ಯಗಳು ಸೇರಿದಂತೆ ಕೆಲವು ಕಡೆ ಕಾಳಿಂಗ ಕಂಡರೆ ಕೊಂದು ಸುಟ್ಟು ಹಾಕುತ್ತಾರೆ. ಇನ್ನೂ ಕೆಲವು ಕಡೆ ಆಹಾರಕ್ಕೂ ಬಳಕೆಯಾಗುತ್ತದೆ. ಹೀಗಾಗಿ ದಕ್ಷಿಣ ಭಾರತ ಹೊರತಾಗಿ ಉಳಿದೆಡೆ ಕಾಳಿಂಗದ ಸಂರಕ್ಷಣೆ ಸವಾಲಿನ ಸಂಗತಿ ಎಂಬುದು ಗೌರಿಶಂಕರ್ ಅವರ ಅನುಭವದ ಮಾತು.
ಹಾವುಗಳು ಸಾಮಾನ್ಯವಾಗಿ ಮನುಷ್ಯರನ್ನು ನೋಡಿದರೆ ತಟ್ಟನೆ ಮರೆಯಾಗುತ್ತವೆ. ನಾವು (ಮನುಷ್ಯರು) ಅದರ ಆಹಾರ ಅಲ್ಲ. ಹೀಗಾಗಿ ಅಟ್ಟಿಸಿಕೊಂಡು ಬಂದು ಕಚ್ಚಿ ಸಾಯಿಸುವ ಉದ್ದೇಶವೂ ಅವುಗಳಿಗೆ ಇರುವುದಿಲ್ಲ. ನಾವು ಅವುಗಳನ್ನು ಶತ್ರು ಎಂದು ಭಾವಿಸಿದ್ದೇವೆಯೇ ಹೊರತು ಅವು ನಮ್ಮನ್ನಲ್ಲ. ಹಾವಿನ ದ್ವೇಷ ಹನ್ನೆರಡು ವರುಷ ಎಂಬುದೆಲ್ಲ ಮೌಢ್ಯ. ಅವು ನಮ್ಮ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲ್ಲ. ಹಾವುಗಳ ಸಂರಕ್ಷಣೆಗೆಂದೇ ನಮ್ಮ ಪೂರ್ವಜರು ಕೆಲವು ಒಳ್ಳೆಯ ನಂಬಿಕೆಗಳನ್ನು ಬಿಟ್ಟು ಹೋಗಿದ್ದಾರೆ. ಹಾವುಗಳ ಮಿಲನದ ಹೊತ್ತಿನಲ್ಲಿ ನೋಡಬಾರದು ಅನ್ನುತ್ತಾರೆ. ನೋಡಿದರೆ ನಾವು ಸುಮ್ಮನಿರೊಲ್ಲ. ಕಲ್ಲು ಹೊಡೆಯುತ್ತೇವೆ. ಕೊಲ್ಲುತ್ತೇವೆ. ತೊಂದರೆ ಕೊಡುತ್ತೇವೆ ಎಂಬ ಕಾರಣಕ್ಕೆ ಈ ಪ್ರತೀತಿ. ನಾಗದೇವತೆ, ನಾಗಬನ ಎಂಬುದು ಹಾವುಗಳ ವಿಚಾರದಲ್ಲಿ ಒಳ್ಳೆಯ ನಂಬಿಕೆಗಳ ಫಲ ಎನ್ನುತ್ತಾರೆ.
ಕಾಳಿಂಗದ ಪ್ರಭೇದದ ಹುಡುಕಾಟದ ವೇಳೆ ಮಿಜೋರಾಂನಲ್ಲಿ ಮಳೆಯಲ್ಲೇ ಇಡೀ ದಿನ ನಡೆದು ಎರಡು ಬೆಟ್ಟ ದಾಟಿಕೊಂಡು ಹೋಗಿ ಕಾಡಲ್ಲಿಯೇ ಉಳಿದದ್ದು ಮರೆಯಲಾಗದ ಅನುಭವ ಎನ್ನುವ ಗೌರಿಶಂಕರ್, ಕಳೆದ ಎರಡು ದಶಕಗಳಲ್ಲಿ 500ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಸಂರಕ್ಷಣೆ ಮಾಡಿದ್ದಾರೆ. ಅದರಲ್ಲಿ 2014ರ ಮಾರ್ಚ್‌ನಲ್ಲಿ ಉಡುಪಿ ಜಿಲ್ಲೆ ಹೆಬ್ರಿ ಸಮೀಪದ ನಾಡ್ಪಾಲು ಗ್ರಾಮದ ಭಾಸ್ಕರ ಶೆಟ್ಟಿ ಅವರ ಮನೆ ಮುಂದೆ ಪೈಪ್‌ನಲ್ಲಿ ಅವಿತಿದ್ದ 15 ಅಡಿ ಉದ್ದದ 12.5 ಕೆ.ಜಿ ತೂಕದ ಕಾಳಿಂಗವೇ ಅತ್ಯಂತ ದೈತ್ಯ ಎಂಬುದು ದಾಖಲಾಗಿದೆ.
ಇನ್ನು ಕನ್ನಡದ್ದೇ ಕಾಳಿಂಗ!
ಸದ್ಯ ಗುರುತಿಸಿರುವ ಮೂರು ಪ್ರಭೇದಗಳ ಪೈಕಿ ಪಶ್ಚಿಮಘಟ್ಟದಲ್ಲಿ ಕಾಣಸಿಗುವುದಕ್ಕೆ ವೈಜ್ಞಾನಿಕ ಹೆಸರು ಇಡುವ ಅವಕಾಶ ಜಾಗತಿಕ ಸಮುದಾಯ ಗೌರಿಶಂಕರ್ ತಂಡಕ್ಕೆ ನೀಡಿತ್ತು. ತಮಗೆ ಸಿಕ್ಕ ಅವಕಾಶದಲ್ಲಿ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಕಾಳಿಂಗ (Ophiophagus Kalinga) ಹೆಸರನ್ನೇ ವೈಜ್ಞಾನಿಕವಾಗಿ ನಾಮಕರಣ ಮಾಡಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಕೇರಳದಲ್ಲಿ ಯಟ್ಟಡಿ ಮುರುಕನ್, ತಮಿಳುನಾಡಿನಲ್ಲಿ ರಾಜನಾಗಂ, ಆಂಧ್ರದಲ್ಲಿ ನಲ್ಲತ್ರಾಸು, ಒಡಿಶಾದಲ್ಲಿ ಅಹಿರಾಜ್ ಹೀಗೆ ಸ್ಥಳೀಯ ಹೆಸರಲ್ಲಿ ಕರೆಯಲ್ಪಡುವ ಈ ದೈತ್ಯ ಉರಗ ಇನ್ನು ಮುಂದೆ ಅಲ್ಲಿಯೂ ಒಫಿಯೊಫಾಗಸ್ ಕಾಳಿಂಗ ಎಂದು ವೈಜ್ಞಾನಿಕ ಹೆಸರಲ್ಲಿಯೇ ಗುರುತಿಸಲ್ಪಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.