ADVERTISEMENT

ಕಾರ್ಯಾಚರಣೆಯಲ್ಲಿ ಮೃತಪಟ್ಟ ತನ್ನೀರ್ ಕೊಂಬನ್: ಲೋಪ ಪತ್ತೆಗೆ ತನಿಖೆಗೆ ಆದೇಶ

ಏಜೆನ್ಸೀಸ್
Published 3 ಫೆಬ್ರುವರಿ 2024, 10:45 IST
Last Updated 3 ಫೆಬ್ರುವರಿ 2024, 10:45 IST
<div class="paragraphs"><p>ತನ್ನೀರ್ ಕೊಂಬನ್</p></div>

ತನ್ನೀರ್ ಕೊಂಬನ್

   

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದ್ದ ತನ್ನೀರ್ ಕೊಂಬನ್ ಎಂಬ ಕಾಡಾನೆ ಸ್ಥಳಾಂತರ ಸಂದರ್ಭದಲ್ಲಿ ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ಶನಿವಾರ ಮೃತಪಟ್ಟಿದೆ.

ಕರ್ನಾಟಕದ ಹಾಸನದಲ್ಲಿ ಕಾಫಿ ತೋಟಕ್ಕೆ ನುಗ್ಗಿದ್ದ ಈ ಆನೆ, ಬಾಯಾರಿಕೆ ನೀಗಿಸಿಕೊಳ್ಳಲು ಅಳವಡಿಸಿದ್ದ ನೀರಿನ ಪೈಪ್‌ಗಳನ್ನು ನಾಶಗೊಳಿಸಿತ್ತು. ಹೀಗಾಗಿ ಜ. 16ರಂದು ಅರಿವಳಿಕೆ ನೀಡಿ ಇದನ್ನು ಸೆರೆಹಿಡಿಯಲಾಗಿತ್ತು. ರೇಡಿಯೊ ಕಾಲರ್ ಅಳವಡಿಸಿ ಮರಳಿ ಕಾಡಿಗೆ ಬಿಡಲಾಗಿತ್ತು. ಅದಕ್ಕೆ ‘ತನ್ನೀರ್ ಕೊಂಬನ್‌’ ಎಂದು ನಾಮಕರಣವನ್ನೂ ಮಾಡಲಾಗಿತ್ತು.

ADVERTISEMENT

ಇದೇ ಆನೆ ವಯನಾಡ್‌ನಲ್ಲಿ ಶುಕ್ರವಾರ ಪ್ರತ್ಯಕ್ಷಗೊಂಡಿತ್ತು. ಆನೆ ಸೆರೆ ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ಮಾಡಲು ಶುಕ್ರವಾರ ಬೆಳಿಗ್ಗೆ 10ರಿಂದಲೇ ವಯನಾಡ್ ಭಾಗದಲ್ಲಿ ನಿಷೇಧಾಜ್ಞೆಯನ್ನು ಅಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ವಿಶಾಲ್ ಸಾಗರ್ ಭಾರತ್ ಜಾರಿಗೊಳಿಸಿದ್ದರು. ಕಾರ್ಯಾಚರಣೆ ಆರಂಭಗೊಂಡರೂ ಸಂಜೆ 5ರವರೆಗೂ ಜನದಟ್ಟಣೆ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ.

‘5.35ರ ಹೊತ್ತಿಗೆ ಆನೆಗೆ ಮೊದಲ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. 6.18ಕ್ಕೆ ಎರಡನೇ ಡೋಸ್ ನೀಡಲಾಯಿತು. ಆಗ ಭಾರೀ ಜನದಟ್ಟಣೆ ಉಂಟಾಗಿತ್ತು. ಸಾಮಾನ್ಯವಾಗಿ ಇಂಥ ಕಾರ್ಯಾಚರಣೆಗಳನ್ನು ಸಂಜೆ ನಂತರ ಕೈಗೊಳ್ಳಬಾರದು’ ಎಂದು ಪರಿಣಿತರು ಹೇಳಿದ್ದಾರೆ.

ಕಾರ್ಯಾಚರಣೆ ಸಂಜೆ ಆರಂಭವಾಗಿದ್ದರಿಂದ, ನೀರು ಸಿಂಪಡಿಸಿ ಆನೆಯನ್ನು ಶಾಂತಗೊಳಿಸುವ ಪ್ರಕ್ರಿಯೆಯನ್ನು ಅರಣ್ಯ ಅಧಿಕಾರಿಗಳಿಗೆ ಮಾಡಲು ಸಾಧ್ಯವಾಗಿರಲಿಲ್ಲ. ಆನೆಯನ್ನು ಆಂಬುಲೆನ್ಸ್‌ಗೆ ಸ್ಥಳಾಂತರಿಸುವಾಗ ರಾತ್ರಿ 10.30 ಆಗಿತ್ತು. ಇದರೊಂದಿಗೆ ತರಬೇತಿ ಹೊಂದಿದ್ದ ಮೂರು ಕುಮ್ಕಿ ಆನೆಗಳನ್ನು ಬಳಸಲಾಗಿತ್ತು. 

‘ಆನೆಯನ್ನು ಹಿಡಿಯಲು ಶುಕ್ರವಾರ ಮಧ್ಯಾಹ್ನ 2ಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದರು. ಅದನ್ನು ಮರಳಿ ಕಾಡಿಗೆ ಕಳುಹಿಸುವ ಪ್ರಕ್ರಿಯೆಯೂ ವಿಫಲಗೊಂಡಿದೆ. ಆದಾಗ್ಯೂ, ಜನರನ್ನು ಚದುರಿಸಿ ಆನೆಯನ್ನು ಮರಳಿ ಕಾಡಿಗೆ ತೆರಳಲು ಅವಕಾಶ ನೀಡಲಿಲ್ಲ. ಆದರೆ ಇಡೀ ಕಾರ್ಯಾಚರಣೆಯನ್ನು ಅಧಿಕಾರಿಗಳು ನಿರ್ವಹಿಸಿದ ಕ್ರಮವೇ ಸರಿಯಾಗಿಲ್ಲ’ ಎಂದು ಪರಿಣಿತರು ಹೇಳಿದ್ದಾರೆ.

ಘಟನೆ ಕುರಿತು ಕೇರಳ ಅರಣ್ಯ ಸಚಿವ ಎ.ಕೆ.ಶಶಿಧರನ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಹೇಳಿದ್ದಾರೆ.

‘ಮರಣೋತ್ತರ ಪರೀಕ್ಷೆಯನ್ನು ಕೇರಳ ಮತ್ತು ಕರ್ನಾಟಕದ ಪಶುವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡ ಜಂಟಿಯಾಗಿ ನಡೆಸಲಿದೆ’ ಎಂದಿದ್ದಾರೆ ಎಂದು ‘ದಿ ಹಿಂದು’ ವರದಿ ಮಾಡಿದೆ.

‘ಆನೆ ಸೆರೆಹಿಡಿಯುವಲ್ಲಿ ಯಾವುದೇ ಲೋಪಗಳಾಗಿಲ್ಲ. ಆದರೆ ಆನೆ ಸೆರೆ ಹಿಡಿಯಲು ಅಗತ್ಯ ಆದೇಶವನ್ನು ಪಡೆಯುವಲ್ಲಿ ವಿಳಂಬವಾಗಿದೆ’ ಎಂದಿದ್ದಾರೆ.

ಆನೆ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಕೂಡಾ ಇತ್ತೀಚೆಗೆ ಮೃತಪಟ್ಟ ಘಟನೆ ನೆನಪಿನಿಂದ ಮಾಸುವ ಮೊದಲೇ ಮತ್ತೊಂದು ಆನೆ ಕಾರ್ಯಾಚರಣೆ ಸಂದರ್ಭದಲ್ಲಿ ಮೃತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.