ADVERTISEMENT

ಪಕ್ಷಿಗಳ ದಾಹ ಇಂಗಿಸುವಿಕೆಯ ಯತ್ನ..!

ಮನೆಗಳ ಮುಂಭಾಗ–ಮೇಲ್ಭಾಗ, ರಸ್ತೆ ಬದಿಯ ಮರಗಳಲ್ಲಿ ನೀರಿನ ತೊಟ್ಟಿಗಳು

ಬಾಬುಗೌಡ ರೋಡಗಿ
Published 14 ಏಪ್ರಿಲ್ 2019, 20:00 IST
Last Updated 14 ಏಪ್ರಿಲ್ 2019, 20:00 IST
ವಿಜಯಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿರುವ ಮರಗಳಿಗೆ ಪಬ್ಲಿಕ್‌ ಪವರ್‌ ಸಂಘಟನೆ ಕಾರ್ಯಕರ್ತರು, ಪಕ್ಷಿಗಳಿಗಾಗಿ ತೂಗು ಹಾಕಿರುವ ನೀರು ಕುಡಿಯುವ ತೊಟ್ಟಿಪ್ರಜಾವಾಣಿ ಚಿತ್ರ; ಸಂಜೀವ ಅಕ್ಕಿ
ವಿಜಯಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿರುವ ಮರಗಳಿಗೆ ಪಬ್ಲಿಕ್‌ ಪವರ್‌ ಸಂಘಟನೆ ಕಾರ್ಯಕರ್ತರು, ಪಕ್ಷಿಗಳಿಗಾಗಿ ತೂಗು ಹಾಕಿರುವ ನೀರು ಕುಡಿಯುವ ತೊಟ್ಟಿಪ್ರಜಾವಾಣಿ ಚಿತ್ರ; ಸಂಜೀವ ಅಕ್ಕಿ   

ವಿಜಯಪುರ:ಬೇಸಿಗೆಯ ಬಿರು ಬಿಸಿಲಿಗೆ ಪರಿತಪಿಸಿ, ಕುಡಿಯುವ ನೀರಿಗೆ ಪರದಾಡುವ ಪಕ್ಷಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ, ಗುಮ್ಮಟ ನಗರಿಯ ಜನರು ಸ್ವಯಂ ಪ್ರೇರಣೆಯಿಂದ ಕುಡಿಯಲು ನೀರು, ತಿನ್ನಲು ಕಾಳಿನ ವ್ಯವಸ್ಥೆ ಒದಗಿಸುತ್ತಿರುವ ಚಿತ್ರಣ ಇದೀಗ ಎಲ್ಲೆಡೆ ಗೋಚರಿಸುತ್ತಿದೆ.

ಜಿಲ್ಲೆಯಾದ್ಯಂಥ ಜಲಮೂಲಗಳು ಬತ್ತುತ್ತಿವೆ. ನೀರಿಗಾಗಿ ದೂರದ ಪ್ರದೇಶಗಳಿಗೆ ಅಲೆಯಬೇಕಿದೆ. ಇದು ಪಕ್ಷಿ, ಪ್ರಾಣಿಗಳ ಬದುಕಿಗೂ ಮಾರಕವಾಗಿ ಪರಿಣಮಿಸಿದೆ.

ನೀರು, ಆಹಾರ ಇಲ್ಲದೆ ಪಕ್ಷಿಗಳು ಜೀವ ಕಳೆದುಕೊಳ್ಳುವ ಭೀತಿ ಎಲ್ಲೆಡೆ ಕಾಡುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಗುಮ್ಮಟ ನಗರಿಯ ಜನರು ತಮ್ಮ ಮನೆಗಳ ಎದುರು, ಮಾಳಿಗೆ ಮೇಲೆ ಹಾಗೂ ವಿವಿಧ ಸಂಘ–ಸಂಸ್ಥೆಗಳು ರಸ್ತೆ ಬದಿಯ ಮರಗಳಿಗೆ, ಪಾರ್ಕ್‌ಗಳಲ್ಲಿ ನೀರು, ಆಹಾರದ ವ್ಯವಸ್ಥೆ ಮಾಡುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ADVERTISEMENT

‘ಆಧುನಿಕತೆಯ ಹೊಡೆತಕ್ಕೆ ಪಕ್ಷಿ, ಪ್ರಾಣಿ ಸಂಕುಲದ ಜತೆಗೆ ಪರಿಸರವೂ ಕಣ್ಮರೆಯಾಗುತ್ತಿದೆ. ಇವುಗಳನ್ನು ಉಳಿಸುವ ಪ್ರಯತ್ನ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಬೇಸಿಗೆಯಲ್ಲಿ ನೀರಿಲ್ಲದೆ ಸಂಕಟ ಪಡುತ್ತಿರುವ ಪಕ್ಷಿಗಳ ರಕ್ಷಣೆಗಾಗಿ ಆಹಾರ ನೀರು ಒದಗಿಸಲು, ಕೈಗೊಂಡಿರುವ ಪಕ್ಷಿ ಸಂಕುಲ ರಕ್ಷಿಸಿ ಅಭಿಯಾನದ ಅಂಗವಾಗಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರ ಹಿಂಬದಿಯಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಲ್ಲಿರುವ ಮರಗಳಿಗೆ ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ನೀರು ಮತ್ತು ಕಾಳು ಇಡಲಾಗಿದೆ’ ಎನ್ನುತ್ತಾರೆ ಪಬ್ಲಿಕ್‌ ಪವರ್ ಸಂಘಟನೆಯ ಪ್ರಕಾಶ ಕುಂಬಾರ.

‘ಬಾಯಾರಿದವರಿಗೆ ನೀರು ಕೊಟ್ಟರೆ, ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಅಂತ ನಮ್ಮೂರಾಗ ಹಿರಿಯರು ಹೇಳುತ್ತಿದ್ದರು. ಸದ್ಯ ಕುಡಿಯುವ ನೀರಿಗಾಗಿ ಅಲೆದಾಟ ನಡೆಸಿರುವ ಪಕ್ಷಿಗಳ ಬಾಯಾರಿಕೆ ನೀಗಿಸಲು ಮನೆಯ ಮಹಡಿಯ ಮೇಲೆ ನಿತ್ಯ ಅಕ್ಕಿ ಮತ್ತು ನೀರು ತುಂಬಿಡುತ್ತಿದ್ದೇವೆ. ಇದರಿಂದ ನಮ್ಮ ಮನೆಯತ್ತ ಗಣನೀಯ ಪ್ರಮಾಣದಲ್ಲಿ ಪಕ್ಷಿಗಳು ಬರುತ್ತಿವೆ. ಈ ಹಿಂದೆ ಒಂದೇ ಒಂದು ಪಕ್ಷಿಯೂ ನಮ್ಮ ಮನೆಯತ್ತ ಸುಳಿಯುತ್ತಿರಲಿಲ್ಲ’ ಎಂದು ಸಾಯಿಪಾರ್ಕ್‌ನ ಸಾಹೇಬಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.