ADVERTISEMENT

ಪ್ರಜಾವಾಣಿ ಸಾಧಕರು 2023 | ಗುರುರಾಜ್‌ - ಕಪ್ಪೆಗಳ ಅಧ್ಯಯನದ ‘ಫ್ರಾಗ್ ವಾಚರ್’

ಪ್ರಜಾವಾಣಿ ವಿಶೇಷ
Published 1 ಜನವರಿ 2023, 5:42 IST
Last Updated 1 ಜನವರಿ 2023, 5:42 IST
 ಡಾ.ಕೆ.ವಿ.ಗುರುರಾಜ್‌
ಡಾ.ಕೆ.ವಿ.ಗುರುರಾಜ್‌   

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****


ಹೆಸರು : ಡಾ.ಕೆ.ವಿ.ಗುರುರಾಜ್‌

ADVERTISEMENT

ವೃತ್ತಿ : ವಿಜ್ಞಾನಿ

ಸಾಧನೆ : ಕಪ್ಪೆಗಳ ಅಧ್ಯಯನ ಹಾಗೂ ಸಂಶೋಧನೆ

ವಿಜ್ಞಾನಿಗಳು ಜನಸಾಮಾನ್ಯರಿಂದ ದೂರವಿದ್ದು, ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಕೊಳ್ಳುವುದೇ ಹೆಚ್ಚು. ಜನರ ಅದರಲ್ಲೂ ವಿಜ್ಞಾನದ ಆಸಕ್ತರ ಜತೆಗೆ ಇದ್ದು ಅಧ್ಯಯನಗಳಲ್ಲಿ ತೊಡಗಿಕೊಳ್ಳುವವರು ಮತ್ತು ಜನರನ್ನು ತೊಡಗಿಸಿಕೊಳ್ಳುವವರು ಅತಿ ವಿರಳ. ಡಾ.ಕೆ.ವಿ.ಗುರುರಾಜ ಅಂತಹ ಅಪರೂಪದ ವಿಜ್ಞಾನಿಗಳಲ್ಲಿ ಒಬ್ಬರು.

ಇವರು ಉಭಯಚರ ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಕಪ್ಪೆಗಳ ಅಧ್ಯಯನದಲ್ಲಿ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿರುವ ಆಸಕ್ತರನ್ನು ತೊಡಗಿಸಿಕೊಳ್ಳುತ್ತಿರುವುದು ವಿಶೇಷ. ಕಪ್ಪೆಗಳ ವರ್ತನೆ ಅವುಗಳು ವಾಸವಿರುವ ಪ್ರದೇಶದ ಪರಿಸರ, ಅವುಗಳ ವೈವಿಧ್ಯವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪ್ರತಿ ವರ್ಷವೂ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ‘ಫ್ರಾಗ್‌ ವಾಚ್‌’ ಅಥವಾ ಕಪ್ಪೆಗಳ ವೀಕ್ಷಣೆ ಕ್ಯಾಂಪ್‌ಗಳನ್ನು ಹಮ್ಮಿಕೊಳ್ಳುತ್ತಾರೆ. ಇದು ಕೇವಲ ವೀಕ್ಷಣೆಯ ಕಾರ್ಯಕ್ಕೆ ಸೀಮಿತವಲ್ಲ ಅತ್ಯಂತ ಪ್ರಾಚೀನ ಪ್ರಭೇದಗಳನ್ನು ಗುರುತಿಸುವುದು, ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಸಂರಕ್ಷಿಸುವುದಕ್ಕೆ ಒತ್ತು ನೀಡುವುದು ಕ್ಯಾಂಪ್‌ನ ಮುಖ್ಯ ಉದ್ದೇಶ.

ಕಪ್ಪೆಗಳಲ್ಲಿ ಮೂರು ಪ್ರಧಾನ ಸಂತಾನೋತ್ಪತ್ತಿ ವರ್ತನೆಗಳು, ಪಶ್ಚಿಮಘಟ್ಟಗಳಲ್ಲಿ 22 ಹೊಸ ಪ್ರಭೇದದ ಕಪ್ಪೆಗಳು ಮತ್ತು 2 ಹೊಸ ಪ್ರಭೇದದ ಮೀನುಗಳನ್ನು ಪತ್ತೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಜ್ಞಾನ ಜರ್ನಲ್‌ಗಳಲ್ಲಿ ಸುಮಾರು 50 ಪ್ರಬಂಧಗಳು ಪ್ರಕಟವಾಗಿವೆ. 2014 ರಲ್ಲಿ ಕಪ್ಪೆಗಳನ್ನು ಗುರುತಿಸುವ ‘ಫ್ರಾಗ್‌ ಫೈಂಡ್‌ ಆಂಡ್ರಾಯ್ಡ್ ಆ್ಯಪ್‌’ ಕೂಡ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಜಿಯೋಸ್ಲ್ಪಾಷಿಯಲ್ ಎಕ್ಸಲೆನ್ಸ್‌ ಪ್ರಶಸ್ತಿಯೂ ಲಭಿಸಿದೆ. ಇವರು ಬೆಂಗಳೂರಿನ ಸೃಷ್ಟಿ ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಆರ್ಟ್‌, ಡಿಸೈನ್‌ ಅಂಡ್‌ ಟೆಕ್ನಾಲಜಿ ಸಂಸ್ಥೆಯಲ್ಲಿ ಡೀನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.