ನವದೆಹಲಿ: ಉಷ್ಣವಲಯದಲ್ಲಿರುವ ಎಲ್ಲಾ ರಾಷ್ಟ್ರಗಳಿಗೂ ಅನುಕೂಲವಾಗುವಂತೆ ಜಗತ್ತಿನಲ್ಲೇ ಅತ್ಯಾಧುನಿಕ ಮತ್ತು ಹೆಚ್ಚು ನಿಖರ ಮಾಹಿತಿ ನೀಡುವ ಹವಾಮಾನ ಮುನ್ಸೂಚನಾ ವ್ಯವಸ್ಥೆ ಭಾರತ್ ಹವಾಮಾನ ಮುನ್ಸೂಚನಾ ವ್ಯವಸ್ಥೆಯನ್ನು (BFS) ಭೂವಿಜ್ಞಾನ ಸಚಿವಾಲಯ ಬಿಡುಗಡೆ ಮಾಡಿದೆ.
ಪುಣೆಯಲ್ಲಿರುವ ಭಾರತೀಯ ಉಷ್ಣವಲಯ ಹವಾಮಾನ ಅಧ್ಯಯನ ಸಂಸ್ಥೆ (IITM) ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಗ್ರಾಮ ಮಟ್ಟದವರೆಗೂ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದ್ದು, ಶೇ 67ರಷ್ಟು ನಿಖರತೆ ಹೊಂದಿದೆ. ಈ ನೂತನ ವ್ಯವಸ್ಥೆಯನ್ನು ಭಾರತೀಯ ಹವಾಮಾನ ಇಲಾಖೆಗೆ ಕೇಂದ್ರ ಭೂವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಹಸ್ತಾಂತರಿಸಿದ್ದಾರೆ.
2022ರಲ್ಲೇ ಅಭಿವೃದ್ಧಿಗೊಂಡಿದ್ದ ಭಾರತ್ ಹವಾಮಾನ ಮುನ್ಸೂಚನಾ ವ್ಯವಸ್ಥೆ ಈವರೆಗೂ ಪರೀಕ್ಷಾ ಹಂತದಲ್ಲಿತ್ತು. ಇದರಿಂದ ಲಭ್ಯವಾಗುವ ಹವಾಮಾನ ಮಾಹಿತಿಯು ಮುಂಗಾರು, ಚಂಡಮಾರುತ, ಅಧಿಕ ಮಳೆ, ದಿಢೀರ್ ಮಳೆ (2 ಗಂಟೆ ಅವಧಿಯಲ್ಲಿ) ಸೇರಿದಂತೆ ವಿವಿಧ ರೀತಿಯ ಹವಾಮಾನ ಬದಲಾವಣೆಗೆ ತಕ್ಕಂತೆ ನಿಖರ ಮಾಹಿತಿ ನೀಡುವುದು ಶೇ 3ರಿಂದ ಶೇ 67ಕ್ಕೆ ಹೆಚ್ಚಳವಾಗಿದೆ.
‘ಭಾರತ್ ಹವಾಮಾನ ಮುನ್ಸೂಚನಾ ವ್ಯವಸ್ಥೆ ನೀಡುವ ನಿಖರ ಮಾಹಿತಿಯನ್ನು ವಿಶ್ಲೇಷಿಸಿ ಭಾರತೀಯ ಹವಾಮಾನ ಇಲಾಖೆಯು ರೈತರಿಗೆ ಮಾಹಿತಿ ನೀಡಲಿದೆ. ಈ ಮೊದಲು 4ರಿಂದ 5 ಪಂಚಾಯ್ತಿಗಳನ್ನು ಒಗ್ಗೂಡಿಸಿ ಹವಾಮಾನ ಮುನ್ಸೂಚನೆ ನೀಡಲಾಗುತ್ತಿತ್ತು. ಈ ನೂತನ ವ್ಯವಸ್ಥೆಯಿಂದ 1 ಅಥವಾ 2 ಪಂಚಾಯ್ತಿ ವ್ಯಾಪ್ತಿಯಲ್ಲಿನ ಹವಾಮಾನ ಬದಲಾವಣೆಯನ್ನೂ ನೀಡಲು ಸಾಧ್ಯವಾಗಿದೆ. 6 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿನ ಹವಾಮಾನ ಮುನ್ಸೂಚನೆ ನೀಡುವುದೂ ಈಗ ಸಾಧ್ಯ’ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ತಿಳಿಸಿದರು.
’ಈ ನಿಖರತೆಗಾಗಿ ಜಗತ್ತಿನ ಹಲವು ಹವಾಮಾನ ಮುನ್ಸೂಚನಾ ಸಂಸ್ಥೆಗಳು ನಿರಂತರ ಸಂಶೋಧನೆ ನಡೆಸುತ್ತಿವೆ. 6 ಕಿ.ಮೀ. ವ್ಯಾಪ್ತಿಯೊಳಗಿನ ನಿಖರ ಮಳೆ ಮಾಹಿತಿ ನೀಡುವಲ್ಲಿ ಭಾರತ್ ಹವಾಮಾನ ಮುನ್ಸೂಚನಾ ವ್ಯವಸ್ಥೆ ಮುಂಚೂಣಿಯಲ್ಲಿದೆ. ಹೀಗಾಗಿ ಬಿಎಫ್‌ಎಸ್ ಜಾಗತಿಕವಾಗಿ ಪ್ರಮುಖ ಹಾಗೂ ಸ್ಥಳೀಯವಾಗಿ ಪ್ರಸ್ತುತ’ ಎಂದಿದ್ದಾರೆ.
ಬಿಎಫ್‌ಎಸ್ ಕುರಿತು ಮಾಹಿತಿ ನೀಡಿರುವ ಐಐಟಿಎಂ ನಿರ್ದೇಶಕ ಎ. ಸೂರ್ಯಚಂದ್ರ ಎ. ರಾವ್, ‘ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಮಳೆಯ ನಿಖರ ಮಾಹಿತಿ ಸಿಗುತ್ತಿರಲಿಲ್ಲ. ಸಿಕ್ಕರೂ ಅದು ಶೇ 30ರಷ್ಟು ಮಾತ್ರ ನಿಖರವಾಗಿರುತ್ತಿತ್ತು. ಅದೂ ಅತಿ ಹೆಚ್ಚು ಮಳೆ ಬರುವ ಸಂದರ್ಭಗಳಲ್ಲಿ ಮಾತ್ರ. ಆದರೆ ಈಗ ಎಲ್ಲಾ ಬಗೆಯ ಮಳೆಯ ಮಾಹಿತಿಯೂ ಶೇ 67ರಷ್ಟು ನಿಖರವಾಗಿ ಲಭ್ಯ’ ಎಂದಿದ್ದಾರೆ.
‘ಈಗ ಲಭ್ಯವಾಗುತ್ತಿರುವ ಟಿಸಿಒ ಮಾಹಿತಿಯನ್ನು ಆಧರಿಸಿ ಮುನ್ಸೂಚನಾ ಮಾಹಿತಿ ನೀಡಲಾಗುತ್ತಿದೆ. ಇದು ರಾಡಾರ್ ಹಾಗೂ ಇತರ ಸಾಧನಗಳ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದು ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ’ ಎಂದು ರವಿಚಂದ್ರನ್ ತಿಳಿಸಿದ್ದಾರೆ.
ಟ್ರಯಾಂಗ್ಯುಲರ್ ಕ್ಯುಬಿಕ್ ಆಕ್ಟಾಹೆಡ್ರಲ್ (ಟಿಸಿಒ) ಎಂಬ ವ್ಯವಸ್ಥೆಯಲ್ಲಿ ಭೂಮಿಯ ಮೇಲ್ಮೈ ಅನ್ನು ಹಲವು ಪದರಗಳಾಗಿ ವಿಂಗಡಿಸಲಾಗುತ್ತದೆ. ಇದು ಜಾಗತಿಕ ಮಾನದಂಡವಾಗಿದ್ದು, ಕಂಪ್ಯೂಟರ್ ಬಳಸಿ ಹಲವು ಲೆಕ್ಕಾಚಾರಗಳ ಮೂಲಕ ಹವಾಮಾನ ಮುನ್ಸೂಚನೆ ನೀಡಲು ಸಾಧ್ಯವಾಗಲಿದೆ.
ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ.ಮೋಹಪಾತ್ರ ಪ್ರತಿಕ್ರಿಯಿಸಿ, ‘ಹವಾಮಾನ ಮುನ್ಸೂಚನಾ ಮಾಹಿತಿ ಪ್ರತಿ ಮನೆಗೂ ಲಭ್ಯವಾಗುವಂತೆ ಮಾಡಬೇಕು. ಅದಕ್ಕೆ ಪೂರಕವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಅವರಿಗೆ ಅನುಕೂಲವಾಗಬೇಕು ಎಂಬುದು 2019ರ ಕನಸು ಈಗ ನನಸಾಗಿದೆ. 6 ಕಿ.ಮೀ. ವ್ಯಾಪ್ತಿಯೊಳಗೆ ಮಳೆಯ ನಿಖರ ಮಾಹಿತಿ ನೀಡುವುದನ್ನು ಭಾರತ ಸಾಧಿಸಿ ತೋರಿಸಿದೆ. ಇದು ಹವಾಮಾನ ಮುನ್ಸೂಚನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ’ ಎಂದಿದ್ದಾರೆ.
‘ಭಾರತವು ಉತ್ತರ ಗೋಳಾರ್ಧದದ 8.4 ಡಿಗ್ರಿ ಮತ್ತು 37.6 ಡಿಗ್ರಿ ಅಕ್ಷಾಂಶದಲ್ಲಿದೆ. ಉಷ್ಣವಲಯಕ್ಕೆ ಬಿಎಫ್‌ಎಸ್ ಅತ್ಯಂತ ಸೂಕ್ತವಾಗಿದೆ. ಅದರಲ್ಲೂ 30 ಡಿಗ್ರಿ ದಕ್ಷಿಣ ಹಾಗೂ 30 ಡಿಗ್ರಿ ಅಕ್ಷಾಂಶದಲ್ಲಿನ ಉತ್ತರದ ನಡುವಿನ ರಾಷ್ಟ್ರಗಳು ಇದರ ಲಾಭ ಪಡೆಯಬಹುದು’ ಎಂದು ಸೂರ್ಯಚಂದ್ರ ಎಂ. ರಾವ್ ವಿವರಿಸಿದ್ದಾರೆ.
‘ಬಿಎಫ್‌ಎಸ್‌ನಿಂದ ಲಭ್ಯವಾಗುವ ಮಾಹಿತಿಯನ್ನು ವಿಶ್ಲೇಷಿಸಿ ನಿಖರ ಮಾಹಿತಿ ನೀಡಲು ಈ ಮೊದಲು ಇದ್ದ ‘ಪ್ರತ್ಯುಷ್’ ಸೂಪರ್ ಕಂಪ್ಯೂಟರ್‌ಗೆ 10 ಗಂಟೆಗಳು ಬೇಕಾಗಿತ್ತು. ಆದರೆ 2024ರಲ್ಲಿ ‘ಅರ್ಕಾ’ ಎಂಬ ನೂತನ ಸೂಪರ್ ಕಂಪ್ಯೂಟರ್ ಅನ್ನು ಇದಕ್ಕಾಗಿ ಬಳಸಲಾಗುತ್ತಿದ್ದು, ಇದು 4 ಗಂಟೆಯೊಳಗೆ ಮಾಹಿತಿ ನೀಡಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.