ADVERTISEMENT

ಆಳ–ಅಗಲ | ಆ್ಯಪ್‌ ವಲಸೆ... ಎಲ್ಲಿಗೆ ಹೊರಟರು ಟಿಕ್‌ಟಾಕ್‌ ತಾರೆಯರು?

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 16:32 IST
Last Updated 2 ಜುಲೈ 2020, 16:32 IST
   
""
""
""

ಅತ್ತ ಚೀನಾ ಆ್ಯಪ್‌ಗಳ ನಿಷೇಧದ ಬೆನ್ನಹಿಂದೆಯೇ ಟಿಕ್‌ಟಾಕ್‌ನಿಂದ ಉಂಟಾಗಿರುವ ಉದ್ಯೋಗ ನಷ್ಟದ ಕುರಿತೂ ಚರ್ಚೆ ಶುರುವಾಗಿದೆ. ಇತ್ತ ಸ್ವದೇಶಿ ಆ್ಯಪ್‌ಗಳಿಗೆ ದಿಢೀರ್‌ ಬೇಡಿಕೆ ಕುದುರಿದೆ.

ಟಿಕ್‌ಟಾಕ್ ತಾರೆ ನಿಹಾರಿಕಾ ಜೈನ್‌ ಅವರಿಗೆ ಕೇವಲ 23ರ ಹರೆಯ. ಟಿಕ್‌ಟಾಕ್‌ನಲ್ಲಿ 28 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದ ನಿಹಾರಿಕಾ ಅವರಿಗೆ, ಅಲ್ಲಿನ ವಿಡಿಯೊಗಳಿಂದಲೇ ಪ್ರತಿ ತಿಂಗಳು ₹ 30,000ಕ್ಕೂ ಹೆಚ್ಚು ಆದಾಯ ಬರುತ್ತಿತ್ತು. ಟಿಕ್‌ಟಾಕ್ ನಿಷೇಧವಾಗಿರುವ ಕಾರಣ ಈಗ ಆ ಆದಾಯ ನಿಂತುಹೋಗಲಿದೆ. ಆದರೆ, ಈ ಆ್ಯಪ್‌ ನಿಷೇಧವಾಗಿರುವ ಬಗ್ಗೆ ಅವರಲ್ಲಿ ಅಸಮಾಧಾನವೇನೂ ಇಲ್ಲ.

‘ನನ್ನನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದದ್ದು ನನ್ನ ಪ್ರತಿಭೆಯೇ ಹೊರತು, ಟಿಕ್‌ಟಾಕ್‌ ಒಂದೇ ಅಲ್ಲ. ಈಗ ಅದರ ಬದಲಿಗೆ ಬೇರೆ ಪ್ಲಾಟ್‌ಫಾರಂ ಅನ್ನು ಬಳಸುತ್ತೇನೆ. ಟಿಕ್‌ಟಾಕ್ ವಿಡಿಯೊಗಳು ನನ್ನ ಜೀವನೋಪಾಯದ ಮಾರ್ಗವಾಗಿದ್ದವು ನಿಜ. ಆದರೆ, ನಾನು ಸರ್ಕಾರದ ನಿರ್ಧಾರವನ್ನು ಗೌರವಿಸುತ್ತೇನೆ’ ಎನ್ನುತ್ತಾರೆ ನಿಹಾರಿಕಾ. ಮಲ್ಟಿಮೀಡಿಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಿಹಾರಿಕಾ ಕಳೆದ ಆಗಸ್ಟ್‌ನಲ್ಲಷ್ಟೇ ಟಿಕ್‌ಟಾಕ್ ಖಾತೆ ತೆರೆದಿದ್ದರು.

ADVERTISEMENT

ಫ್ಯಾಷನ್‌ನ ಟ್ರೆಂಡ್‌ ಬಗ್ಗೆ ನಿಹಾರಿಕಾ ಅವರು ವಿಡಿಯೊ ಪೋಸ್ಟ್‌ ಮಾಡುತ್ತಿದ್ದರು. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಹೊಸ ಉತ್ಪನ್ನಗಳ ಬಗ್ಗೆ ವಿಡಿಯೊ ಮಾಡುತ್ತಿದ್ದ ಅವರಿಗೆ ಆಯಾ ಬ್ರ್ಯಾಂಡ್‌ ಕಂಪನಿಗಳು ಹಣ ಪಾವತಿ ಮಾಡುತ್ತಿದ್ದವು. ಆದರೆ, ಟಿಕ್‌ಟಾಕ್‌ನಿಂದ ನೇರವಾಗಿ ಅವರಿಗೆ ಯಾವುದೇ ಹಣ ಪಾವತಿ ಆಗುತ್ತಿರಲಿಲ್ಲ. ಬ್ರ್ಯಾಂಡ್‌ ಕಂಪನಿಗಳಿಂದ ಹಣ ಸಿಗಲು ಆರಂಭಿಸಿದಾಗ ಬ್ರ್ಯಾಂಡ್‌ ಪ್ರಚಾರವನ್ನೇ ನಿಹಾರಿಕಾ ಉದ್ಯೋಗ ಮಾಡಿಕೊಂಡಿದ್ದರು. ಈಗ ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಮಾಡಲು ಆರಂಭಿಸಿದ್ದಾರೆ.

ಟಿಕ್‌ಟಾಕ್‌ ತಾರೆಗಳಾಗಿ ಹಣ ಗಳಿಸುತ್ತಿದ್ದವರ, ಹಣಗಳಿಕೆ ವಿಧಾನ ಇದೇ ಆಗಿತ್ತು. ಲಕ್ಷಾಂತರ ಫಾಲೋವರ್ಸ್‌ ಹೊಂದಿರುವ ಟಿಕ್‌ಟಾಕ್ ತಾರೆಗಳನ್ನು ಬ್ರ್ಯಾಂಡ್‌ಗಳು ಆಯ್ಕೆ ಮಾಡಿಕೊಳ್ಳುತ್ತಿದ್ದವು. ಈ ತಾರೆಗಳು ಬ್ರ್ಯಾಂಡ್‌ನ ಉತ್ಪನ್ನಗಳ ಬಗ್ಗೆ ವಿಡಿಯೊ ಮಾಡಿದರೆ ಸಾಕು. ಅದನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದರ ಆಧಾರದ ಮೇಲೆ ಹಣದ ಮೊತ್ತ ನಿಗದಿಯಾಗುತ್ತಿತ್ತು. ಹೀಗೆ ಟಿಕ್‌ಟಾಕ್, ಹೊಸ ಸ್ವರೂಪದ ಉದ್ಯೋಗವನ್ನೂ ಸೃಷ್ಟಿಸಿತ್ತು. ಉನ್ನತ ಶಿಕ್ಷಣ ಪಡೆದವರಿಗೆ ಮಾತ್ರವಲ್ಲ, ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರೂ ಪ್ರತಿ ತಿಂಗಳು ಐದಂಕಿ ಮೊತ್ತದ ಸಂಪಾದನೆ ಮಾಡಲು ಟಿಕ್‌ಟಾಕ್‌ನಿಂದ ಸಾಧ್ಯವಾಗಿತ್ತು.

ರಾಜಸ್ಥಾನದ ‘ಡ್ಯಾನ್ಸಿಂಗ್ ಕಪಲ್‌’, ಜಾರ್ಖಂಡ್‌ನ ‘ವಿಲೇಜ್ ಡ್ಯಾನ್ಸರ್’, ಮಹಾರಾಷ್ಟ್ರದ ‘ಬಾಲಿವುಡ್ ಸ್ಟಾರ್ಸ್‌’ ಎಂಬ ಖಾತೆಗಳನ್ನು ನಿರ್ವಹಿಸುತ್ತಿದ್ದವರು ತಿಂಗಳಿಗೆ ₹15,000–₹25,000ರದವರೆಗೂ ಗಳಿಸಿದ್ದು ಇದೆ. ಈಗ ಈ ತಾರೆಗಳು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂನತ್ತ ಮುಖಮಾಡಿದ್ದಾರೆ.

ಹರಿಯಾಣದ ಬಿಜೆಪಿ ನಾಯಕಿ ಸೊನಾಲಿ ಫೋಗಟ್‌ ಸಹ ಟಿಕ್‌ಟಾಕ್ ತಾರೆ (2.8 ಲಕ್ಷ ಫಾಲೋವರ್ಸ್). ‘ನಾನು 13 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಆದರೆ ಟಿಕ್‌ಟಾಕ್‌ಗೆ ಬಂದಮೇಲೆ ಜನರ ಒಡನಾಟ ಹೆಚ್ಚಾಯಿತು, ನನ್ನ ಜನಪ್ರಿಯತೆಯೂ ಏರಿತು. ಸರ್ಕಾರದ ನಿರ್ಧಾರವನ್ನು ಗೌರವಿಸುತ್ತೇನೆ. ಜನರ ಜತೆ ಸಂವಹನ ನಡೆಸಲು ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಸುತ್ತೇನೆ’ ಎಂದು ಸೊನಾಲಿ ಹೇಳಿದ್ದಾರೆ.

ಆಧಾರ: ರಾಯಿಟರ್ಸ್‌, ಪಿಟಿಐ ಮತ್ತು ಇತರ ಮೂಲಗಳು

**

ತತ್ವಜ್ಞಾನಕ್ಕೂ ಟಿಕ್‌ಟಾಕ್‌ ನಂಟು
ಟಿಕ್‌ಟಾಕ್‌ನಲ್ಲಿ ತತ್ವಜ್ಞಾನದ ಬಗ್ಗೆ ಮಾತನಾಡುತ್ತಿದ್ದ ಮಹೇಂದ್ರ ಡೋಘ್ನಿ ಅವರಿಗೆ ಬರೋಬ್ಬರಿ 90 ಲಕ್ಷ ಫಾಲೋವರ್ಸ್ ಇದ್ದರು (ಯೂಟ್ಯೂಬ್‌ನಲ್ಲಿ 19 ಲಕ್ಷ ಫಾಲೋವರ್ಸ್ ಇದ್ದಾರೆ). ‘ನಾನು ಉಪನ್ಯಾಸಗಳನ್ನು ಆಫ್‌ಲೈನ್‌ನಲ್ಲೂ ನಡೆಸುತ್ತೇನೆ. ಆದರೆ, ಟಿಕ್‌ಟಾಕ್‌ನಲ್ಲಿ ಇರುವಷ್ಟು ‘ರೀಚ್’ ಆಫ್‌ಲೈನ್‌ ಮತ್ತು ಯೂಟ್ಯೂಬ್‌ನಲ್ಲಿ ಸಿಗುವುದಿಲ್ಲ. ಭಾರತದಲ್ಲಿ ಸಾಕಷ್ಟು ಜನ ಟಿಕ್‌ಟಾಕ್ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಬೇರೆ ಪ್ಲಾಟ್‌ಫಾರಂನಲ್ಲಿ ಇಷ್ಟು ಹಣ ಗಳಿಸುವ ಸಾಧ್ಯತೆ ಇಲ್ಲದಿರುವ ಕಾರಣ, ಆ ಜನರಿಗೆಲ್ಲಾ ಸಮಸ್ಯೆ ಆಗುತ್ತದೆ. ಹೀಗಾಗಿ ಟಿಕ್‌ಟಾಕ್ ನಿಷೇಧಿಸಬಾರದಿತ್ತು’ ಎಂದು ಡೋಘ್ನಿ ಹೇಳಿದ್ದಾರೆ.

ಗರ್ಭಿಣಿಯರು ಹೇಗೆ ಇರಬೇಕು, ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕು, ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಏನಿದೆ, ಮಕ್ಕಳ ಆಟದ ಸಾಧನಗಳು ಯಾವುವು, ಇಂಗ್ಲಿಷ್ ಅಕ್ಷರ ಬಳಕೆ ಹಾಗೂ ವಾಕ್ಯಗಳ ರಚನೆ ಮಾಡುವುದು ಹೇಗೆ, ಆಧಾರ್‌ ಮಾಡಿಸುವುದು ಹೇಗೆ... ಹೀಗೆ ಟಿಕ್‌ಟಾಕ್‌ನಲ್ಲಿ ಚರ್ಚೆಯಾಗದ ವಿಷಯಗಳೇ ಇರಲಿಲ್ಲ.

ನೌಕರರಿಗೆ ಟಿಕ್‌ಟಾಕ್‌ ಸಿಇಒ ಪತ್ರ
ಟಿಕ್‌ಟಾಕ್‌ನ ಭಾರತದಲ್ಲಿನ ಸುಮಾರು 2,000 ನೌಕರರಿಗೆ ಕಂಪನಿಯ ಸಿಇಒ ಕೆವಿನ್ ಮೇಯರ್‌ ಬುಧವಾರ ಮೇಲ್ ಮಾಡಿದ್ದಾರೆ. ‘ನಮ್ಮ ನೌಕರರೇ ನಮ್ಮ ಅತ್ಯಂತ ದೊಡ್ಡ ಶಕ್ತಿ, ಅವರ ಯೋಗಕ್ಷೇಮವೇ ನಮ್ಮ ಆದ್ಯತೆ. ಈ ಸ್ಥಿತಿಯನ್ನು ಸಕಾರಾತ್ಮಕವಾಗಿ ಬದಲಿಸಲು ನಮ್ಮ ಶಕ್ತಿಗನುಗುಣವಾಗಿ ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಮೇಲ್‌ನಲ್ಲಿ ಹೇಳಿದ್ದಾರೆ. ಆದರೆ ಉದ್ಯೋಗದ ಭವಿಷ್ಯದ ಬಗ್ಗೆ ಅವರು ಏನನ್ನೂ ಸ್ಪಷ್ಟವಾಗಿ ಹೇಳಿಲ್ಲ.

ಪಾರದರ್ಶಕವಾಗಿ ಇರಲಿಲ್ಲ: ಟಿಕ್‌ಟಾಕ್‌ನ ವಹಿವಾಟು ಪಾರದರ್ಶಕವಾಗಿ ಇರಲಿಲ್ಲ ಎಂಬ ಆರೋಪವೂ ಇದೆ. ‘ಟಿಕ್‌ಟಾಕ್‌ನ ಹಲವು ನೀತಿಗಳು ಪಾರದರ್ಶಕವಾಗಿ ಇರಲಿಲ್ಲ. ಅದು ಟಿಕ್‌ಟಾಕ್ ತಾರೆಗಳಿಗೆ ಹಣ ನೀಡುತ್ತದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿರಲಿಲ್ಲ. ಅಲ್ಲದೆ ಅದರಲ್ಲಿ ಮೂಲ ‘ಕಂಟೆಂಟ್‌ ಕ್ರಿಯೇಟರ್‌’ನ ಖಾತೆ ಸಿಗುತ್ತಿರಲಿಲ್ಲ. ಹೀಗಾಗಿ ನಾವು ಟಿಕ್‌ಟಾಕ್ ಖಾತೆ ತೆರೆಯಲಿಲ್ಲ’ ಎನ್ನುತ್ತಾರೆ ಇನ್‌ಸ್ಟಾಗ್ರಾಂನಲ್ಲಿ ತಾರೆಯಾಗಿರುವ ಅಭಿರಾಜ್ ಮತ್ತು ನಿಯತಿ ಜೋಡಿ. ಅವರ ‘ಫಾಲೋವಿಂಗ್ ಲವ್‌’ ಖಾತೆಯು ಹೆಚ್ಚು ಜನಪ್ರಿಯತೆ ಹೊಂದಿದೆ.

**
ಆಕ್ಸೆಸ್‌ ಸ್ಥಗಿತಕ್ಕೆ ಸರ್ಕಾರದ ಸೂಚನೆ
‘ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿಷೇಧ ಮಾಡಿರುವ 59 ಆ್ಯಪ್‌ಗಳಿಗೆ ಇಂಟರ್ನೆಟ್ ಸಂಪರ್ಕ ದೊರೆಯದಂತೆ ಕ್ರಮ ತೆಗೆದುಕೊಳ್ಳಿ’ ಎಂದು ಕೇಂದ್ರ ದೂರಸಂಪರ್ಕ ಇಲಾಖೆಯು, ಇಂಟರ್ನೆಟ್‌ ಸರ್ವಿಸ್ ಪ್ರೊವೈಡರ್‌ ಕಂಪನಿಗಳಿಗೆ ನಿರ್ದೇಶನ ನೀಡಿದೆ.

‘ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಮತ್ತು ತಕ್ಷಣವೇ ಜಾರಿಗೆ ತರಬೇಕು. ಈ ಆ್ಯಪ್‌ಗಳು ಮತ್ತು ಅವುಗಳಿಗೆ ಸಂಬಂಧಿಸಿದ ಜಾಲತಾಣಗಳನ್ನು ಬ್ಲಾಕ್ ಮಾಡಬೇಕು. ಇದನ್ನು ಜಾರಿಗೆ ತರದೇ ಇದ್ದಲ್ಲಿ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಇಲಾಖೆಯು ತನ್ನ ನಿರ್ದೇಶನದಲ್ಲಿ ಎಚ್ಚರಿಕೆ ನೀಡಿದೆ.

ಪ್ಲೇಸ್ಟೋರ್‌ನಿಂದ ಮತ್ತು ಆ್ಯಪ್‌ ಸ್ಟೋರ್‌ನಿಂದ ಈ ಆ್ಯಪ್‌ಗಳನ್ನು ತೆಗೆಯಿರಿ ಅಥವಾ ಅವು ಡೌನ್‌ಲೋಡ್ ಆಗದಂತೆ ತಡೆಹಿಡಿಯಿರಿ ಎಂದು ಗೂಗಲ್ ಮತ್ತು ಆ್ಯಪಲ್‌ ಕಂಪನಿಗಳಿಗೂ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಸರ್ಕಾರದ ನಿರ್ದೇಶನದ ಬಗ್ಗೆ ಕೇಳಿದ ಪ್ರತಿಕ್ರಿಯಗೆ ಗೂಗಲ್, ಆ್ಯಪಲ್‌, ರಿಲಯನ್ಸ್ ಜಿಯೊ, ವೊಡಾಫೋನ್–ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಯಾವುದೇ ಉತ್ತರ ನೀಡಿಲ್ಲ.

ಈಗಾಗಲೇ ಡೌನ್‌ಲೋಡ್ ಆಗಿರುವ ಫೋನ್‌ಗಳಿಂದ ಈ ಆ್ಯಪ್‌ಗಳನ್ನು ಡಿಲೀಟ್ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಇದು ತುಂಬಾ ಕಷ್ಟದ ಕೆಲಸ. ಇದಕ್ಕಾಗಿ ಹೊಸ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದು ದೂರಸಂಪರ್ಕ ಸೇವಾ ಕಂಪನಿಯೊಂದರ ಅಧಿಕಾರಿಗಳು ಹೇಳಿದ್ದಾರೆ.

**
ಉತ್ತರ ಕರ್ನಾಟಕದಲ್ಲಿ ಹೆಚ್ಚು
ವಿಡಿಯೊ ಷೇರ್ ಮಾಡಲು, ಸೂಕ್ತ ಮ್ಯೂಸಿಕ್ ಹೊಂದಿಸಲು, ಎಡಿಟಿಂಗ್ ವಿಧಾನ ಅತ್ಯಂತ ಸರಳವಾಗಿ ಇದ್ದುದೇ ಟಿಕ್‌ಟಾಕ್ ಬಹುಬೇಗ ಜನರನ್ನು ಸೆಳೆಯಲು ಕಾರಣವಾಗಿತ್ತು. ದೇಶದ ಅತ್ಯಂತ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್‌ಗಳಲ್ಲಿ ಟಿಕ್‌ಟಾಕ್‌ಗೆ ಅಗ್ರಸ್ಥಾನವಿತ್ತು. ಬಳಕೆದಾರರಲ್ಲಿ 25 ವರ್ಷದೊಳಗಿವರ ಸಂಖ್ಯೆ ಹೆಚ್ಚಾಗಿದ್ದರು. ನಮ್ಮ ರಾಜ್ಯದ ಉತ್ತರ ಕರ್ನಾಟಕದಲ್ಲಿ ಈ ಆ್ಯಪ್‌ ಹೆಚ್ಚು ಜನಪ್ರಿಯವಾಗಿತ್ತು. ಇಂಟರ್ನೆಟ್‌, ಸ್ಮಾರ್ಟ್‌ಫೋನ್ ಬಳಕೆ ಮಾಡಲು ಬಾರದವರೂ ಇದರ ವ್ಯಸನಿಗಳಾಗಿದ್ದರು. ಆ ಮಟ್ಟಿಗೆ ಟಿಕ್‌ಟಾಕ್ ಮೋಡಿ ಮಾಡಿದ್ದು ಸುಳ್ಳಲ್ಲ. ಹಳ್ಳಿ ಹುಡುಗರು, ಚಿಕ್ಕಮಕ್ಕಳೂ ರಾತ್ರಿ ಬೆಳಗಾಗುವ ಒಳಗೆ ಸ್ಟಾರ್‌ಗಳಾಗಿ ಬದಲಾಗಿದ್ದರು. ಈಗ ಅವರ ಸ್ಟಾರ್‌ಗಿರಿ ನೆಲಕಚ್ಚಿದೆ.

ರಾಜ್ಯದ ಮಟ್ಟಿಗೆ ಬಸು ಹಿರೇಮಠ, ಸ್ನೇಹಾಗೌಡ, ಪೂಜಾ, ಶಿವರಾಜ್, ಕಾವ್ಯ ಗೌಡ, ವಿದ್ಯಾಶ್ರೀ, ಶಿವಪುತ್ರ ಮೊದಲಾದವರು ದೊಡ್ಡ ಪಡೆಯನ್ನೇ ಹೊಂದಿದ್ದರು. ಮಲಯಾಳಂನಲ್ಲಿ ಟಿಕ್‌ಟಾಕ್ ಸ್ಟಾರ್‌ ಒಬ್ಬರು ಸಿನಿಮಾದಲ್ಲಿ ನಟಿಸುವ ಆಫರ್ ಪಡೆದುಕೊಂಡಿದ್ದರು. ಕೆಲವರು ಟಿಕ್‌ಟಾಕ್ ವಿಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿ, ಅಲ್ಲಿ ಫಾಲೋ ಮಾಡುವಂತೆ ತಮ್ಮ ಫಾಲೋವರ್ಸ್‌ಗೆ ಸೂಚಿಸುತ್ತಿದ್ದುದು ಟ್ರೆಂಡ್‌ ಆಗಿತ್ತು.

**

ಜಡೆ ಜಗಳ
ಟಿಕ್‌ಟಾಕ್‌ನಲ್ಲಿ ಜಗಳಗಳಿಗೂ ಬರವಿರಲಿ‌ಲ್ಲ. ಕೆಲವು ಬಳಕೆದಾರರು ನೇರವಾಗಿ ಮತ್ತೊಬ್ಬರ ಮೇಲೆ ಆಪಾದನೆ ಹೊರಿಸಿ ವಿಡಿಯೊ ಮಾಡುತ್ತಿದ್ದರು. ಬೈಸಿಕೊಂಡವರು ತಿರುಗಿ ಮತ್ತೊಂದು ವಿಡಿಯೊ ಮಾಡಿ ಹಾಕುತ್ತಿದ್ದರು. ಇದು ‘ಜಡೆ ಜಗಳ’ ಎಂದೇ ಟ್ರೋಲ್ ಆಗಿತ್ತು. ಇಂತಹ ನೂರಾರು ಸ್ವಾರಸ್ಯಕರ ಸಂಗತಿಗಳೂ ಅದರಲ್ಲಿದ್ದವು.


ಈಗ ಸ್ವದೇಶಿ ಆ್ಯಪ್‌ಗಳಿಗೆ ಬೇಡಿಕೆ
ಚೀನಾ ಆ್ಯಪ್‌ಗಳು ನಿಷೇಧಕ್ಕೊಳಗಾದ ಬೆನ್ನಲ್ಲೇ ಸ್ವದೇಶಿ ಆ್ಯಪ್‌ಗಳಿಗೆ ದಿಢೀರ್ ಬೇಡಿಕೆ ಕುದುರಿದೆ. ಶೇರ್‌ಚಾಟ್, ರೊಪೊಸೊ, ಚಿಂಗಾರಿ, ಗೋ ಸೋಷಿಯಲ್ ಮೊದಲಾದ ಆ್ಯಪ್‌ಗಳ ಡೌನ್‌ಲೋಡ್‌ ಪ್ರಮಾಣ ಏರಿಕೆಯಾಗಿದೆ. ಗಂಟೆಯೊಂದಕ್ಕೆ 5 ಲಕ್ಷ ಬಳಕೆದಾರರು ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದಾರೆ ಎಂದು ಶೇರ್‌ಚಾಟ್ ಹೇಳಿದೆ.

ಟಿಕ್‌ಟಾಕ್‌ ಸ್ಪರ್ಧಿ ಎಂದು ಹೇಳಲಾಗುವ ‘ಚಿಂಗಾರಿ’ ಆ್ಯಪ್ ಕೇವಲ 10 ದಿನಗಳಲ್ಲಿ ಐದೂವರೆ ಲಕ್ಷದಿಂದ 25 ಲಕ್ಷ ಡೌನ್‌ಲೋಡ್‌ನತ್ತ ದಾಪುಗಾಲಿಟ್ಟಿದೆ. ಇದು ಸಂಪೂರ್ಣ ಸ್ವದೇಶಿ ಆ್ಯಪ್ ಆಗಿದ್ದು, ಒಮ್ಮೆ ಬಳಕೆ ಮಾಡಿ ಎಂದು ಸಹಸ್ಥಾಪಕ ಸುಮಿತ್ ಘೋಷ್ ಆಹ್ವಾನ ನೀಡಿದ್ದಾರೆ. ಮತ್ತೊಂದು ಮೇಡ್ ಇನ್ ಇಂಡಿಯಾ ಆ್ಯಪ್ ‘ರೊಪೊಸೊ’ 6.5 ಕೋಟಿ ಬಾರಿ ಡೌನ್‌ಲೋಡ್‌ ಆಗಿದ್ದು, 12 ಭಾಷೆಗಳಲ್ಲಿ ಲಭ್ಯವಿದೆ.

ಗೋ ಸೋಷಿಯಲ್‌ ಸಾಮಾಜಿಕ ಜಾಲತಾಣವು ಶೇ 20ರಷ್ಟು ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಂಡಿವೆ. ‘ಟ್ರೆಲ್’ ಸಾಮಾಜಿಕ ಜಾಲತಾಣವು ಕಳೆದ 24 ಗಂಟೆಗಳಲ್ಲಿ ಶೇ 500ರಷ್ಟು ಬೆಳವಣಿಗೆ ದಾಖಲಿಸಿದೆ. ಈಗಾಗಲೇ 15 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಡಿಜಿಟಲ್ ಆಡಿಯೊ ತಾಣ ‘ಖಬರಿ’ ಬಳಕೆದಾರರ ಪ್ರಮಾಣ ಶೇ 80ರಷ್ಟು ಹೆಚ್ಚಿದೆ.

**

ಖಿನ್ನತೆ ತಾತ್ಕಾಲಿಕ
ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಹೀರೊನಂತೆ ಸಂಭಾಷಣೆ ಹೇಳುವುದು, ಅದಕ್ಕೆ ಒಂದಿಷ್ಟು ಮೆಚ್ಚುಗೆ ಗಳಿಸುವುದು ಸಾವಿರಾರು ಜನರ ವ್ಯಸನವಾಗಿತ್ತು. ‘ಲೈಕ್‌’ಗಳಿಲ್ಲದೆ ಇನ್ನು ತಮ್ಮನ್ನು ಯಾರು ಗುರುತಿಸುತ್ತಾರೆ ಎಂಬ ಖಿನ್ನತೆಯಿಂದ ಅವರೀಗ ಬಳಲುತ್ತಾರೆ. ಆದರೆ, ಇಂತಹ ಮನಃಸ್ಥಿತಿ ಹೆಚ್ಚಿನ ದಿನಗಳೇನೂ ಕಾಡುವುದಿಲ್ಲ. ಅವರು ಬಹುಬೇಗ ಅದರಿಂದ ಹೊರಬರುತ್ತಾರೆ. ಇಲ್ಲದಿದ್ದರೆ ಹೊಸದೊಂದು ಆ್ಯಪ್‌ ಅವರನ್ನು ಖಿನ್ನತೆಯಿಂದ ಹೊರಗೆ ಕರೆತರಲಿದೆ.

ಮೊಬೈಲ್‌ ಒಂದೇ ಅವರ ಪ್ರಪಂಚ ಆಗಿರುವುದರಿಂದ ಇಂದಿನ ಪೀಳಿಗೆಗೆ ಸಾಮಾಜಿಕ ಬೆಸುಗೆಯೇ ಇಲ್ಲವಾಗಿದೆ. ಆ್ಯಪ್‌ಗಳ ಸಂತೆಯಲ್ಲಿ ಮುಳುಗಿರುವ ಅವರಲ್ಲಿ ಪ್ರೀತಿ–ವಿಶ್ವಾಸದ ಕೊರತೆ ಹೆಚ್ಚಾಗುತ್ತಿರುವುದನ್ನೂ ನಾವು ಗುರ್ತಿಸಬಹುದು.

–ಡಾ. ಸದಾನಂದ ರಾವ್‌,ಸೈಕಾಲಜಿಸ್ಟ್‌, ನ್ಯೂಲೈಫ್‌ ಡಿ–ಅಡಿಕ್ಷನ್‌ ಅಂಡ್‌ ಕೌನ್ಸೆಲಿಂಗ್‌ ಸೆಂಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.