ADVERTISEMENT

Explainer: ಭಾರತದಲ್ಲಿ ಕೋವಿಡ್‌–19 ದಕ್ಷಿಣ ಆಫ್ರಿಕಾ ತಳಿ, ಅಪಾಯವೇನು?

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 9:54 IST
Last Updated 17 ಫೆಬ್ರುವರಿ 2021, 9:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಹಾವಳಿ ಇನ್ನೂ ಮುಂದುವರಿದಿದ್ದು, ಪ್ರತಿ ದಿನ ದೇಶದಲ್ಲಿ ಹತ್ತಾರು ಸಾವಿರ ಹೊಸ ಪ್ರಕರಣಗಳು ಹಾಗೂ ನೂರಾರು ಸಾವು ವರದಿಯಾಗುತ್ತಲೇ ಇವೆ. ಈ ಮಧ್ಯೆ ಕೊರೊನಾ ವೈರಸ್‌ನ ಹೊಸ ತಳಿಗಳು ಪತ್ತೆಯಾಗುತ್ತಿದ್ದು, ಈ ಪೈಕಿ ಕೆಲವು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿವೆ.

ಈವರೆಗೆ ಬ್ರಿಟನ್, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ತಳಿಯು ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ತಳಿ ಇದೀಗ ಭಾರತಕ್ಕೂ ತಲುಪಿದೆ. ನಾಲ್ವರಲ್ಲಿ ಈ ತಳಿಯ ಕೋವಿಡ್–19 ಪತ್ತೆಯಾಗಿದೆ.

ಏನಿದು ಕೋವಿಡ್‌–19 ದಕ್ಷಿಣ ಆಫ್ರಿಕಾ ತಳಿ?

ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ತಳಿಯನ್ನು ‘ಸಾರ್ಸ್‌–ಕೋವ್-2 (SARS-CoV-2)’ ಅಥವಾ ‘20ಎಚ್‌/501ವೈ’ ಅಥವಾ ‘ಬಿ.1.351’ ಎಂದು ಗುರುತಿಸಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ 2020ರ ಡಿಸೆಂಬರ್‌ನಲ್ಲಿ ಮೊದಲ ಬಾರಿ ಪತ್ತೆಯಾಗಿತ್ತು. ಇದೀಗ 44 ದೇಶಗಳಿಗೆ ಹರಡಿದೆ. ಹೆಚ್ಚಿನ ಪ್ರಕರಣಗಳು ದಕ್ಷಿಣ ಆಫ್ರಿಕಾದಲ್ಲೇ ವರದಿಯಾಗಿವೆ.

ಕೋವಿಡ್ ವಿರುದ್ಧ ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳ ಪರಿಣಾಮವನ್ನು ಕಡಿಮೆ ಮಾಡಬಲ್ಲ ಸಾಮರ್ಥ್ಯವುಳ್ಳ ತಳಿಯಿದು ಎಂದು ಶಂಕಿಸಲಾಗಿದೆ. ಇದು ಒಟ್ಟು 8 ಪ್ರಮುಖ ರೂಪಾಂತರಗಳನ್ನು ಹೊಂದುವ ಮೂಲಕ ಸೃಷ್ಟಿಯಾಗಿದೆ. ಈ ತಳಿಯು ಮಾನವನ ಜೀವಕೋಶ ತಲುಪಿದಾಗ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಹೀಗಾಗಿ ಇದು ಹರಡುವ ತೀವ್ರತೆ ಹೆಚ್ಚಿರಬಹುದು ಎನ್ನಲಾಗಿದೆ.

ಆದರೆ, ಈ ತಳಿ ಅತಿ ವೇಗವಾಗಿ ಹರಡಬಲ್ಲದ್ದು ಮತ್ತು ಜನರಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಉಂಟುಮಾಡಬಲ್ಲದ್ದು ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ ಎಂದಿದ್ದಾರೆ ವಿಜ್ಞಾನಿಗಳು. ಆದಾಗ್ಯೂ, ಇದು ಹಿಂದಿನ ರೂಪಾಂತರಗಳಿಂದ ವೇಗವಾಗಿ ಹರಡಬಲ್ಲ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ದಕ್ಷಿಣ ಆಫ್ರಿಕಾ ತಳಿ

ಈವರೆಗೆ ದೇಶದಲ್ಲಿ ನಾಲ್ವರಲ್ಲಿ ಕೋವಿಡ್ ದಕ್ಷಿಣ ಆಫ್ರಿಕಾ ತಳಿಯಿಂದ ಸೋಂಕು ತಗುಲಿರುವುದು ಪತ್ತೆಯಾಗಿದೆ. ಒಬ್ಬರಲ್ಲಿ ಬ್ರೆಜಿಲ್ ತಳಿಯ ವೈರಸ್ ಪತ್ತೆಯಾಗಿದೆ.

ಸೋಂಕು ದೃಢಪಟ್ಟವರಲ್ಲಿ ಒಬ್ಬರು ಅಂಗೋಲಾ, ಮತ್ತೊಬ್ಬರು ತಾಂಜೇನಿಯಾ ಹಾಗೂ ಇಬ್ಬರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ಎಲ್ಲ ಸೋಂಕಿತರನ್ನು ಹಾಗೂ ಅವರ ಜತೆ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.

ನಾಲ್ವರು ಸೋಂಕಿತರ ಮಾದರಿಗಳಿಂದ ರೂಪಾಂತರ ತಳಿಯನ್ನು ಪ್ರತ್ಯೇಕಿಸಿ ಅಧ್ಯಯನ ನಡೆಸಲು ಐಸಿಎಂಆರ್‌ನ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಳಿ ವಿರುದ್ಧ ಯಾವೆಲ್ಲ ಲಸಿಕೆ ಪರಿಣಾಮಕಾರಿ?

ಆಸ್ಟ್ರಾಜೆನೆಕಾ ಲಸಿಕೆಯು ಕೋವಿಡ್‌ನ ಎಲ್ಲ ತಳಿಯ ವೈರಸ್ ವಿರುದ್ಧ ರಕ್ಷಣೆಗೆ ಪರಿಣಾಮಕಾರಿ ಎಂದು ಲಸಿಕೆ ತಯಾರಿಕಾ ಸಂಸ್ಥೆ ಹೇಳಿಕೊಂಡಿದೆ. ಆದರೆ, ಆಫ್ರಿಕಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಕೋವಿಡ್‌ನ ದಕ್ಷಿಣ ಆಫ್ರಿಕಾ ತಳಿಯಿಂದ ರಕ್ಷಣೆಗೆ ಆಸ್ಟ್ರಾಜೆನೆಕಾ ಲಸಿಕೆ ನೀಡುವಾಗ ಎಚ್ಚರಿಕೆ ವಹಿಸುವಂತೆ ಇತರ ದೇಶಗಳಿಗೆ ಸೂಚಿಸಿವೆ. ಆಸ್ಟ್ರಾಜೆನೆಕಾ ಬದಲಿಗೆ ಇತರ ಲಸಿಕೆಗಳನ್ನು ಪರಿಗಣಿಸುವಂತೆಯೂ ಸಲಹೆ ನೀಡಿದೆ.

ಕೋವಿಡ್‌ನ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾ ತಳಿಯ ವಿರುದ್ಧ ಫೈಜರ್ ಲಸಿಕೆ ಪರಿಣಾಮಕಾರಿ ಎಂದು ಅಧ್ಯಯನಗಳು ತಿಳಿಸಿವೆ. ಫೈಜರ್/ಬಯೊಎನ್‌ಟೆಕ್ ಹಾಗೂ ಮಾಡರ್ನಾ ಲಸಿಕೆಗಳೂ ದಕ್ಷಿಣ ಆಫ್ರಿಕಾ ತಳಿಯ ವಿರುದ್ಧ ಪರಿಣಾಮಕಾರಿ ಎಂದು ಆಯಾ ಕಂಪನಿಗಳು ಹೇಳಿವೆ.

ವಿಮಾನ ಸಂಚಾರ ಸ್ಥಗಿತ ಸಾಧ್ಯತೆ

ಕೋವಿಡ್‌-19ರ ಬ್ರಿಟನ್‌ ತಳಿಯು ಭಾರತದಲ್ಲಿ ಹರಡುವುದನ್ನು ತಡೆಯಲು ಬ್ರಿಟನ್‌ಗೆ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಿಂದ ಬರುವ ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸುವ ಕುರಿತೂ ಚರ್ಚೆ ನಡೆಯುತ್ತಿದೆ.

ದಕ್ಷಿಣ ಆಫ್ರಿಕಾ, ಬ್ರೆಜಿಲ್ ತಳಿಯ ಕುರಿತಾದ ಆತಂಕಗಳೇನು?

* ದಕ್ಷಿಣ ಆಫ್ರಿಕಾ ತಳಿಯು ಕ್ಷಿಪ್ರವಾಗಿ ಹರಡುವ ಗುಣ ಹೊಂದಿದೆ. ಈ ತಳಿಯು 44 ದೇಶಗಳಿಗೆ ಹರಡಿದೆ.

* ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಬಹುಪಾಲು ಜನರು ಈ ತಳಿಯ ಸೋಂಕಿಗೆ ತುತ್ತಾಗಿದ್ದಾರೆ.

* ಬ್ರೆಜಿಲ್ ತಳಿ ಸಹ ಬಹಳ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. 15 ದೇಶಗಳಿಗೆ ಇದು ಹರಡಿದೆ.

* ಬ್ರೆಜಿಲ್‌ನಲ್ಲಿ ಕೋವಿಡ್‌-19ರ ಮೂರನೇ ಅಲೆ ತೀವ್ರಗೊಳ್ಳಲು ಬ್ರೆಜಿಲ್ ತಳಿಯೇ ಕಾರಣವಾಗಿದೆ.

* ಭಾರತದಲ್ಲಿ ಕೋವಿಡ್‌-19ರ ಬ್ರಿಟನ್‌ ತಳಿಯ ಸೋಂಕಿಗೆ ತುತ್ತಾದವರ ಸಂಖ್ಯೆ ಈಗ 187.

* ಈ ಮೂರು ತಳಿಯ ಸೋಂಕಿನಿಂದ ಭಾರತದಲ್ಲಿ ಸಾವು ಸಂಭವಿಸಿಲ್ಲ.

(ಆಧಾರ: ಏಜೆನ್ಸಿಗಳ ಮಾಹಿತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.