ADVERTISEMENT

Explainer | ಇಂದು ರಾಷ್ಟ್ರೀಯ ಮತದಾರರ ದಿನ: ನೀವು ತಿಳಿದಿರಲೇಬೇಕಾದದ್ದು...

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 11:34 IST
Last Updated 25 ಜನವರಿ 2020, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಈ ಬಾರಿ ‘ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಚುನಾವಣಾ ಅರಿವು (Electoral Literacy for Stronger Democracy)’ ಎಂಬ ಧ್ಯೇಯವನ್ನಿಟ್ಟುಕೊಂಡುಮತದಾರರ ದಿನ ಆಚರಿಸಲಾಗುತ್ತಿದೆ.

ಜನವರಿ 25ರಂದೇ ಯಾಕೆ?:1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 25ರಂದು‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಮೊದಲ ಬಾರಿ 2011ರಲ್ಲಿ ಆಚರಿಸಲಾಗಿತ್ತು. ಬಳಿಕ ಪ್ರತಿ ವರ್ಷ ಆಚರಿಸುತ್ತಾ ಬರಲಾಗಿದೆ.

ಉದ್ದೇಶವೇನು?:ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ. ಭಾಷಣ ಸ್ಪರ್ಧೆ, ಮತದಾನ ಜಾಗೃತಿ ಅಭಿಯಾನ, ಮತದಾರರ ಗುರುತಿನ ಚೀಟಿ ವಿತರಣೆ, ಛಾಯಾಚಿತ್ರ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ADVERTISEMENT

ಮತದಾರರ ಹಕ್ಕುಗಳು:18 ವರ್ಷ ವಯಸ್ಸು ಪೂರ್ಣಗೊಂಡವರ ಹೆಸರನ್ನುಮತದಾರರ ಪಟ್ಟಿಗೆ ಸೇರಿಸುವ ಚುನಾವಣಾ ಆಯೋಗ, ಮತದಾರರ ಗುರುತಿನ ಚೀಟಿ ನೀಡುತ್ತದೆ. ಒಂದು ವೇಳೆ, ಯಾವುದಾದರೂ ಕಾರಣಕ್ಕೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದ್ದರೆ ಅಂತಹವರು ಗುರುತಿನ ಚೀಟಿ ಇದ್ದರೂ ಮತದಾನ ಮಾಡುವಂತಿಲ್ಲ. ಬೇರೆ ದೇಶದ ಪೌರತ್ವ ಪಡೆದರೂ ಅಂತಹವರು ಮತದಾನದ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ.

ಚುನಾವಣಾ ಆಯೋಗದ ಬಗ್ಗೆ...:ಭಾರತೀಯ ಚುನಾವಣಾ ಆಯೋಗವು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆಗಳು, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ.

ಪ್ರಧಾನಿ,ರಾಷ್ಟ್ರಪತಿ ಶುಭಾಶಯ:ರಾಷ್ಟ್ರೀಯ ಮತದಾರರ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತುರಾಷ್ಟ್ರಪತಿ ರಾಮನಾಥ ಕೋವಿಂದ್ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

‘ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಸದೃಢಗೊಳಿಸಲು ಮತ್ತು ಮತದಾರರು ಹೆಚ್ಚು ಪಾಲ್ಗೊಳ್ಳುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುವ ಚುನಾವಣಾ ಆಯೋಗಕ್ಕೆ ಕೃತಜ್ಞತೆಗಳು. ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ಜನ ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸಲು ಈ ದಿನ ನಮಗೆ ಸ್ಫೂರ್ತಿಯಾಗಲಿ. ಇದರಿಂದ ನಮ್ಮ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಲಿದೆ’ ಎಂದು ಮೋದಿ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಮತದಾರರ ದಿನದ ಶುಭಾಶಯ ಕೋರಿದ್ದಾರೆ.

‘ದೇಶದ ಎಲ್ಲ ಜನರು, ವಿಶೇಷವಾಗಿ ಮತದಾರರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಬೇಕು ನಾನು ಬಯಸುತ್ತೇನೆ. ಅದೇ ರೀತಿ ಅವರು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಬಲಪಡಿಸುವಲ್ಲಿ ಯಶಸ್ವಿಯಾಗಿ ಕೊಡುಗೆ ನೀಡುತ್ತಾರೆ ಎಂಬುದಾಗಿ ಆಶಿಸುತ್ತೇನೆ’ ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.