ADVERTISEMENT

ಆಳ-ಅಗಲ| ಉನ್ನತ ಶಿಕ್ಷಣ: ಕೇಂದ್ರೀಕೃತ ನಿಯಂತ್ರಣ?

ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 0:30 IST
Last Updated 16 ಡಿಸೆಂಬರ್ 2025, 0:30 IST
   
ದೇಶದ ಉನ್ನತ ಶಿಕ್ಷಣದ ಮೇಲುಸ್ತುವಾರಿ ಮತ್ತು ನಿಯಂತ್ರಣಕ್ಕಾಗಿ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ’ ಎಂಬ ಹೆಸರಿನಲ್ಲಿ ಒಂದೇ ಆಯೋಗವನ್ನು ಸ್ಥಾಪಿಸುವ ಪ್ರಸ್ತಾವವನ್ನು ಶಿಕ್ಷಣ ಸಚಿವಾಲಯವು ಮಸೂದೆಯಲ್ಲಿ ಮಾಡಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಹೇಳಿದ್ದು, ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಈಗಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಎನ್‌ಸಿಟಿಇ) ಹೊಸ ಆಯೋಗದೊಂದಿಗೆ ವಿಲೀನಗೊಳ್ಳಲಿವೆ.

ದೇಶದ ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರವು ಇಡೀ ವ್ಯವಸ್ಥೆಯನ್ನು ಒಂದೇ ಸಂಸ್ಥೆಯ ವ್ಯಾಪ್ತಿಯಲ್ಲಿ ತರುವ ಉದ್ದೇಶದಿಂದ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ’ ಮಸೂದೆ–2025 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ. 

ದೇಶದ ಉನ್ನತ ಶಿಕ್ಷಣದ ಮೇಲುಸ್ತುವಾರಿ ಮತ್ತು ನಿಯಂತ್ರಣಕ್ಕಾಗಿ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ’ ಎಂಬ ಹೆಸರಿನಲ್ಲಿ ಒಂದೇ ಆಯೋಗವನ್ನು ಸ್ಥಾಪಿಸುವ ಪ್ರಸ್ತಾವವನ್ನು ಶಿಕ್ಷಣ ಸಚಿವಾಲಯವು ಮಸೂದೆಯಲ್ಲಿ ಮಾಡಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಹೇಳಿದ್ದು, ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಈಗಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಎನ್‌ಸಿಟಿಇ) ಹೊಸ ಆಯೋಗದೊಂದಿಗೆ ವಿಲೀನಗೊಳ್ಳಲಿವೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಲೋಕಸಭೆಯಲ್ಲಿ ಮಸೂದೆಯನ್ನು  ಸೋಮವಾರ ಮಂಡಿಸಿದರು. ತರಾತುರಿಯಲ್ಲಿ ಮಸೂದೆಯನ್ನು ಮಂಡಿಸುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸುವ ಪ್ರಸ್ತಾವ ಮಸೂದೆಯಲ್ಲಿದ್ದು, ಉನ್ನತ ಶಿಕ್ಷಣವನ್ನೂ ಕೇಂದ್ರೀಕರಣ ಮಾಡುವಂತೆ ಕಾಣುತ್ತಿದೆ. ಹೀಗಾಗಿ ಇದರ ಅಧ್ಯಯನಕ್ಕೆ ಹೆಚ್ಚು ಸಮಯ ಬೇಕು ಎಂದು ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದರು.

ADVERTISEMENT

ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸುವ ಉದ್ದೇಶದಿಂದ ಅದನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಲಾಗಿದೆ.

ಮಸೂದೆಯ ಉದ್ದೇಶವೇನು?:

‘ವಿವಿಗಳು ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳು ಬೋಧನೆ, ಕಲಿಕೆ, ಸಂಶೋಧನೆ ಮತ್ತು ನವೀನ ಕಲ್ಪನೆಗಳ ಅಭಿವೃದ್ಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಲು, ವಿವಿಗಳು ಮತ್ತು ಇನ್ನಿತರ ಶಿಕ್ಷಣ ಸಂಸ್ಥೆಗಳು ಸ್ವತಂತ್ರ, ಸ್ವಯಂ ಆಡಳಿತದ ಸಂಸ್ಥೆಗಳಾಗಿ ರೂಪುಗೊಳ್ಳುವುದಕ್ಕೆ ನೆರವಾಗಲು ಹಾಗೂ ಸದೃಢವಾದ, ಪಾರದರ್ಶಕವಾದ ಮಾನ್ಯತೆ ಮತ್ತು ಸ್ವಾಯತ್ತ ಹೊಂದಿರುವ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಮಸೂದೆಯನ್ನು ರೂಪಿಸಲಾಗಿದೆ’ ಎಂದು ಸರ್ಕಾರ ಹೇಳಿದೆ. 

‘ಈಗಿನ ಉನ್ನತ ಶಿಕ್ಷಣ ವ್ಯವಸ್ಥೆ ಬಹಳ ವಿಸ್ತಾರವಾಗಿ ಬೆಳೆದಿದ್ದು, ಹಲವು ಸಾಂವಿಧಾನಿಕ ನಿಯಂತ್ರಣ ಪ್ರಾಧಿಕಾರಗಳಿವೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ವಿವಿಧ ಸಂಸ್ಥೆಗಳಿಂದ ಹಲವು ಅನುಮತಿ ಪಡೆಯಬೇಕಾಗುತ್ತಿದೆ. ಈ ಪ್ರಾಧಿಕಾರಗಳು ನಡೆಸುವ ಪರಿಶೀಲನೆಗಳಿಗೂ ಒಡ್ಡಿಕೊಳ್ಳಬೇಕಿದೆ. ದೇಶದ ಎಲ್ಲ ಶಿಕ್ಷಣ ವ್ಯವಸ್ಥೆಗಳ ಆಡಳಿತ ಮತ್ತು ನಿಯಂತ್ರಣ ಸೇರಿದಂತೆ ಇಡೀ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವುದಕ್ಕಾಗಿ, ಸುಸ್ಥಿರ ಅಭಿವೃದ್ಧಿಯ ನಾಲ್ಕನೇ ಗುರಿಯೂ ಸೇರಿದಂತೆ 21ನೇ ಶತಮಾನದ ಶಿಕ್ಷಣದ ಮಹತ್ವಾಕಾಂಕ್ಷೆಯ ಗುರಿಗಳಿಗೆ ಅನುಗುಣವಾಗಿ ನಮ್ಮ ದೇಶದ ಸಂಪ್ರದಾಯ ಮತ್ತು ಮೌಲ್ಯ ವ್ಯವಸ್ಥೆಗಳಿಗೆ ಪೂರಕವಾಗಿ ಹೊಸ ವ್ಯವಸ್ಥೆ ರೂಪಿಸುವುದಕ್ಕಾಗಿ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಈ ನೀತಿಗಳಿಗೆ ಪೂರಕವಾಗಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ’ ಎಂದು ಸರ್ಕಾರ ಮಸೂದೆಯಲ್ಲಿ ವಿವರಿಸಿದೆ.  

‘ದೇಶದಲ್ಲಿ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮತ್ತು ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್‌) ಹೆಚ್ಚಾಗಲು ಈ ಮಸೂದೆ ಕೊಡುಗೆ ನೀಡಲಿದೆ’ ಎಂದು ಅದು ಪ್ರತಿಪಾದಿಸಿದೆ. 

ದೇಶಕ್ಕೊಂದೇ ಸಂಸ್ಥೆ

ಮಸೂದೆಯು ಕಾಯ್ದೆಯಾಗಿ ಜಾರಿಯಾದರೆ ದೇಶದ ಉನ್ನತ ಶಿಕ್ಷಣದ ಆಗು ಹೋಗುಗಳನ್ನು ನೋಡುವುದಕ್ಕಾಗಿ ಮತ್ತು ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಅಥವಾ ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆಯಾಗಲಿದೆ (ಸೆಕ್ಷನ್‌ 5). ಇದು ದೇಶದ ಉನ್ನತ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಲಿದೆ. ಈ ಆಯೋಗವು ಒಬ್ಬ ಅಧ್ಯಕ್ಷ ಹಾಗೂ ಗರಿಷ್ಠ 12 ಸದಸ್ಯರನ್ನು ಹೊಂದಿರಲಿದೆ. ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ಅಧ್ಯಕ್ಷರನ್ನು ನೇಮಿಸಲಿದ್ದಾರೆ. ಅಧ್ಯಕ್ಷರ ಆರಂಭಿಕ ಅಧಿಕಾರಾವಧಿ ಮೂರು ವರ್ಷ. ಅದನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು. ಒಮ್ಮೆ ನೇಮಕಗೊಂಡ ಅಧ್ಯಕ್ಷರನ್ನು ಮತ್ತೊಂದು ಅವಧಿಗೆ ನೇಮಕ ಮಾಡುವುದಕ್ಕೂ ಮಸೂದೆ ಅವಕಾಶ ಕಲ್ಪಿಸುತ್ತದೆ. ‌

ಆಯೋಗದ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕಾಗಿ (ವಿಕಸಿತ ಭಾರತ ಶಿಕ್ಷಾ ವಿನಿಯಮನ್‌ ಪರಿಷತ್‌) (ಸೆಕ್ಷನ್‌–10), ಮಾನ್ಯತೆಯನ್ನು ನೀಡುವುದಕ್ಕೆ (ವಿಕಸಿತ ಭಾರತ ಶಿಕ್ಷಾ ಗುಣವತ್ತಾ ಪರಿಷತ್‌) (ಸೆಕ್ಷನ್‌–13) ಹಾಗೂ ಮಾನದಂಡ ನಿಗದಿ ಮಾಡುವುದಕ್ಕೆ (ವಿಕಸಿತ ಭಾರತ ಶಿಕ್ಷಾ ಮಾನಕ ಪರಿಷತ್‌) (ಸೆಕ್ಷನ್‌ 15) ಮೂರು ಪ್ರತ್ಯೇಕ ಪರಿಷತ್ತುಗಳನ್ನು ಸ್ಥಾಪನೆ ಮಾಡುವ ಪ್ರಸ್ತಾವವನ್ನು ಮಸೂದೆಯಲ್ಲಿ ಮಾಡಲಾಗಿದೆ. ಪ್ರತಿ ಪರಿಷತ್‌ ಕೂಡ ಅಧ್ಯಕ್ಷ ಮತ್ತು 14 ಸದಸ್ಯರನ್ನು ಹೊಂದಿರಲಿದೆ.  ಶೋಧ ಮತ್ತು ಆಯ್ಕೆ ಸಮಿತಿ ಮಾಡುವ ಶಿಫಾರಸಿನ ಆಧಾರದಲ್ಲಿ ರಾಷ್ಟ್ರಪತಿ ಅವರು ಈ ಪರಿಷತ್ತುಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ.  

ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವವರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಗಳ ಪ್ರತಿನಿಧಿಗಳನ್ನು ಅಧಿಷ್ಠಾನ ಮತ್ತು ಪರಿಷತ್ತುಗಳ ಸದಸ್ಯರಾಗಲಿದ್ದಾರೆ. 

ಅಧಿಷ್ಠಾನದ ಪ್ರಮುಖ ಜವಾಬ್ದಾರಿ

* ಉನ್ನತ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿರ್ದೇಶನ ನೀಡುವುದು

* ಮೂರೂ ಪರಿಷತ್ತುಗಳಿಗೆ ಮಾರ್ಗದರ್ಶನ ಮಾಡುವುದು ಮತ್ತು ಅವುಗಳ ನಡುವೆ ಸಮನ್ವಯ ಇರುವಂತೆ ನೋಡಿಕೊಳ್ಳುವುದು

* ಪರಿಷತ್ತುಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಹಣಕಾಸಿನ ಮತ್ತು ಆಡಳಿತಾತ್ಮಕ ನೆರವು ಕೊಡುವುದು

* ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವುದು

ಯಾವುದಕ್ಕೆಲ್ಲ ಅನ್ವಯ?

*  ದೇಶದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳು (ಕೇಂದ್ರೀಯ, ರಾಜ್ಯ, ಖಾಸಗಿ, ಡೀಮ್ಡ್‌), ಅವುಗಳ ವ್ಯಾಪ್ತಿಗೆ ಬರುವ ಕಾಲೇಜುಗಳು, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳು, ಐಐಟಿ, ಎನ್‌ಐಟಿ, ಐಐಎಸ್‌ಇಆರ್‌, ಐಐಎಂ, ಐಐಐಟಿಗಳು ಸೇರಿದಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪ್ರಾಮುಖ್ಯದ ಶಿಕ್ಷಣ ಸಂಸ್ಥೆಗಳು ಎಂದು ಘೋಷಿಸಿರುವ ಸಂಸ್ಥೆಗಳು ಈ ಮಸೂದೆಯ ವ್ಯಾಪ್ತಿಗೆ ಬರುತ್ತವೆ (ಸದ್ಯ ಐಐಟಿ ಮತ್ತು ಐಐಎಂಗಳು ಯುಜಿಸಿ ನಿಯಂತ್ರಣಕ್ಕೆ ಬರುವುದಿಲ್ಲ)

* ಮಸೂದೆಯು 1956ರ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಕಾಯ್ದೆ, 1987ರ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ ಕಾಯ್ದೆ ಮತ್ತು 1993ರ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್‌ ಕಾಯ್ದೆಯನ್ನು ರದ್ದು ಮಾಡಲಿದೆ 

* 1972ರ ವಾಸ್ತು ಕಲೆ ಕಾಯ್ದೆಯ ಅಡಿಯಲ್ಲಿ ಸ್ಥಾಪಿಸಲಾದ ವಾಸ್ತುಕಲೆ ‍ಪರಿಷತ್‌ (ಸಿಇಎ) ಅನ್ನು ವೃತ್ತಿಪರ ಮಾನದಂಡ ನಿಗದಿ ಸಂಸ್ಥೆಯಾಗಿ (ಪಿಎಸ್‌ಎಸ್‌ಬಿ) ಪರಿಗಣಿಸುವ ಪ್ರಸ್ತಾವವನ್ನು ಮಸೂದೆಯಲ್ಲಿ ಮಾಡಲಾಗಿದೆ. ಈ ಸಂಸ್ಥೆಯು ಮಾನದಂಡ ನಿಗದಿ ಪರಿಷತ್‌ನ ಸದಸ್ಯನಾಗಿ ಪಠ್ಯಕ್ರಮ ರಚನೆ, ಶಿಕ್ಷಣದ ಮಾನದಂಡ ನಿಗದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ. ಆದರೆ, ನಿಯಂತ್ರಣದ ಜವಾಬ್ದಾರಿ ಇದಕ್ಕೆ ಇರದು

* ವೈದ್ಯಕೀಯ ಶಿಕ್ಷಣ, ಕಾನೂನು ಶಿಕ್ಷಣ, ನರ್ಸಿಂಗ್‌, ಫಾರ್ಮಸಿ, ದಂತ ವೈದ್ಯಕೀಯ, ಪಶುವೈದ್ಯಕೀಯ ಮುಂತಾದ ವೃತ್ತಿಪರ ಶಿಕ್ಷಣದ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಸಂಸ್ಥೆಗಳು (ಉದಾ: ರಾಷ್ಟ್ರೀಯ ವೈದ್ಯಕೀಯ ಆಯೋಗ, ರಾಷ್ಟ್ರೀಯ ದಂತ ಆಯೋಗ, ಭಾರತೀಯ ವಕೀಲರ ಪರಿಷತ್ತು ಇತ್ಯಾದಿ) ಈ ಮಸೂದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ

ಭಾರಿ ದಂಡ

ಮಸೂದೆಯ ಸೆಕ್ಷನ್‌ 33 ನಿಯಮ ಉಲ್ಲಂಘನೆಗೆ ವಿಧಿಸಲಾಗುವ ದಂಡದ ಬಗ್ಗೆ ಪ್ರಸ್ತಾಪಿಸುತ್ತದೆ. ಕೇಂದ್ರ ಸರ್ಕಾರ ಅಥವಾ ಆಯಾ ರಾಜ್ಯ ಸರ್ಕಾರಗಳ ಅನುಮತಿ ಇಲ್ಲದೆ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡುವವರಿಗೆ ₹2 ಕೋಟಿ ದಂಡ ವಿಧಿಸುವ ಪ್ರಸ್ತಾವವನ್ನು ಮಸೂದೆಯಲ್ಲಿ ಮಾಡಲಾಗಿದೆ.  

ಪ್ರಸ್ತಾವಿತ ಉನ್ನತ ಶಿಕ್ಷಣ ವ್ಯವಸ್ಥೆ ಹೇಗಿರಲಿದೆ? ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ (ಭಾರತೀಯ ಉನ್ನತ ಶಿಕ್ಷಣ ಆಯೋಗ)

1. ವಿಕಸಿತ ಭಾರತ ಶಿಕ್ಷಣ ಮಾನಕ ಪರಿಷತ್‌ (ಭಾರತೀಯ ಉನ್ನತ ಶಿಕ್ಷಣ ಮಾನದಂಡ ನಿಗದಿ ಪರಿಷತ್‌)

*  ಅಧ್ಯಕ್ಷರು ಮತ್ತು 14 ಸದಸ್ಯರು ಇದರಲ್ಲಿ ಇರುತ್ತಾರೆ

* ಜವಾಬ್ದಾರಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರಬೇಕಾದ ಶೈಕ್ಷಣಿಕ ಗುಣಮಟ್ಟವನ್ನು ನಿಗದಿ ಮಾಡುವುದು ಮತ್ತು ಸಮನ್ವಯ ಸಾಧಿಸುವುದು

2. ವಿಕಸಿತ ಭಾರತ ಶಿಕ್ಷಣ ವಿನಿಯಮನ್‌ ಪರಿಷತ್‌ (ಭಾರತೀಯ ಉನ್ನತ ಶಿಕ್ಷಣ ನಿಯಂತ್ರಣ ಪರಿಷತ್‌) 

* ಅಧ್ಯಕ್ಷರು ಮತ್ತು 14 ಸದಸ್ಯರನ್ನು ಹೊಂದಿರಲಿದೆ

* ಜವಾಬ್ದಾರಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟದ ಕಾಯ್ದುಕೊಳ್ಳಲು ಮತ್ತು ಉತ್ತಮ ಸಂಬಂಧ ಸಾಧಿಸಲು ಕ್ರಮಗಳನ್ನು ಕೈಗೊಳ್ಳುವುದು ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಶಿಕ್ಷಣ ಸಂಸ್ಥೆಗಳು ನಿಯಂತ್ರಣ ನಿಯಮಗಳ ಪಾಲನೆ ಮಾಡುವಂತೆ ನೋಡಿಕೊಳ್ಳುವುದು

3. ವಿಕಸಿತ ಭಾರತ ಶಿಕ್ಷಣ ಗುಣವತ್ತಾ ಪರಿಷತ್‌ (ಭಾರತೀಯ ಉನ್ನತ ಶಿಕ್ಷಣ ಮಾನ್ಯತಾ ಪರಿಷತ್‌)

* ಅಧ್ಯಕ್ಷರು ಮತ್ತು 14 ಸದಸ್ಯರು

* ಜವಾಬ್ದಾರಿ: ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು ಮತ್ತು ಮಾನ್ಯತೆ ನೀಡುವ ಸ್ವತಂತ್ರ ವ್ಯವಸ್ಥೆಯ ಮೇಲುಸ್ತುವಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.