ADVERTISEMENT

ಆಳ–ಅಗಲ| ಎಐ ದುರ್ಬಳಕೆ ತಡೆಗೆ ನಿಯಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
ಎಐ ಚಿತ್ರ: ಈಶ್ವರ ಬಡಿಗೇರ
ಎಐ ಚಿತ್ರ: ಈಶ್ವರ ಬಡಿಗೇರ   
ಕೃತಕ ಬುದ್ಧಿಮತ್ತೆಯ ನೆರವಿನಿಂದ ಸೃಷ್ಟಿಸಲಾದ ವಿಷಯಗಳಿಗೆ (ಕಂಟೆಂಟ್‌) ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ (2021) ಅಡಿಯಲ್ಲಿ ಬರುವ ನಿಯಮಗಳಿಗೆ ತಿದ್ದುಪಡಿ ಮಾಡಿ, ಹೊಸ ನಿಯಮಗಳನ್ನು ರೂಪಿಸಿದೆ. ಇದೇ 20ರಿಂದ ಜಾರಿಗೆ ಬರಲಿದೆ. ವಿಷಯದ ವರ್ಗೀಕರಣವು ಕಡ್ಡಾಯವಾಗಿದ್ದು, ಆಕ್ಷೇಪಾರ್ಹ ವಿಡಿಯೊ, ಆಡಿಯೊ, ಗ್ರಾಫಿಕ್ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಇದ್ದ ಸಮಯದ ಮಿತಿಯನ್ನು ಕಡಿತಗೊಳಿಸಲಾಗಿದೆ. ಎಐ ದುರ್ಬಳಕೆಯನ್ನು ತಡೆಯಲು ಹೊಸ ನಿಯಮಗಳನ್ನು ರೂಪಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದು ಆನ್‌ಲೈನ್ ಸೆನ್ಸಾರ್‌ಶಿಪ್‌ನ ಕ್ರಮವಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂ ಟ್ಯೂಬ್, ಎಕ್ಸ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣ/ಡಿಜಿಟಲ್‌ ವೇದಿಕೆಗಳಲ್ಲಿ ಪ್ರತಿ ದಿನವೂ ಆಡಿಯೊ, ವಿಡಿಯೊ, ಆಡಿಯೊ–ವಿಡಿಯೊಗಳನ್ನೊಳಗೊಂಡ ವಿಷಯಗಳು (ಕಂಟೆಂಟ್‌) ಅಪ್‌ಲೋಡ್ ಆಗುತ್ತಲೇ ಇರುತ್ತವೆ. ರಾಜಕೀಯ, ಸಿನಿಮಾ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಾಸ್ತವಿಕ ಆಡಿಯೊ/ವಿಡಿಯೊಗಳ ಜತೆಗೆ ಕೃತಕ ಬುದ್ಧಿಮತ್ತೆಯಿಂದ (ಎಐ) ಸೃಷ್ಟಿಸಿದವೂ ಇತ್ತೀಚೆಗೆ ಗಮನಾರ್ಹ ಸಂಖ್ಯೆಯಲ್ಲಿ ಕಾಣಸಿಗುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಯಾವುದು ನೈಜ ಮತ್ತು ಯಾವುದು ಎಐನಿಂದ ಸೃಷ್ಟಿಸಿದ್ದು ಎನ್ನುವುದನ್ನು ಪತ್ತೆಹಚ್ಚುವುದೂ ಕಷ್ಟವಾಗುತ್ತದೆ.

ಶಿಕ್ಷಣ, ಉದ್ಯೋಗ, ಮಾಹಿತಿ ಮತ್ತು ಸಾರ್ವಜನಿಕ ಸೇವೆಗಳನ್ನು ನೀಡುವ ದಿಸೆಯಲ್ಲಿ ಡಿಜಿಟಲ್ ಮಾಧ್ಯಮಗಳು ಉಪಯುಕ್ತವಾಗಿವೆ. ಆದರೆ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ರೀತಿಯ ಡಿಜಿಟಲ್ ಮಾಧ್ಯಮಗಳಲ್ಲಿ ನಕಲಿ ಖಾತೆಗಳು, ಮಹಿಳೆಯರಂತೆ ಬಿಂಬಿಸಿಕೊಳ್ಳುವುದು, ಸೈಬರ್ ಕಿರುಕುಳ, ಡೀಪ್‌ಫೇಕ್, ಸಲುಗೆಯ–ಆಪ್ತ ಚಿತ್ರಗಳನ್ನು ಒಪ್ಪಿಗೆಯಿಲ್ಲದೇ ಹಂಚಿಕೊಳ್ಳುವುದು ಮುಂತಾದ ಪ್ರವೃತ್ತಿಗಳು ಹೆಚ್ಚುತ್ತಿದ್ದು, ಅವು ಜನರ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಘನತೆ, ಖಾಸಗಿತನ ರಕ್ಷಣೆಗೆ ತೊಡಕಾಗಿ ಪರಿಣಮಿಸಿವೆ. ಇಂಥ ಆಕ್ಷೇಪಾರ್ಹವಾದ, ನಿಂದನಾತ್ಮಕವಾದ ಆಡಿಯೊ, ವಿಡಿಯೊ, ಚಿತ್ರಗಳನ್ನು ತಡೆಯುವ ದಿಸೆಯಲ್ಲಿ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೊಸ ನಿಯಮಗಳನ್ನು ರೂಪಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಗೆ (2021) ಇದುವರೆಗೆ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಈಗ ಅದರ ನಿಯಮಗಳಿಗೆ ತಿದ್ದುಪಡಿ ತಂದು, ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂತ್ರಗಳು ಮತ್ತು ಡಿಜಿಟಲ್ ಮೀಡಿಯಾ ನೀತಿಸಂಹಿತೆ) ತಿದ್ದುಪಡಿ ನಿಯಮಗಳು–2026’ ರೂಪಿಸಿದೆ. ಇದೇ 20ರಿಂದ ಈ ನಿಯಮಗಳು ಜಾರಿಗೆ ಬರಲಿವೆ. ಎಕ್ಸ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್‌ನಂಥ ವೇದಿಕೆಗಳ ಜತೆಗೆ ಅವುಗಳ ಬಳಕೆದಾರರೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾವುದೇ ಬಳಕೆದಾರ ನಿಯಮ ಉಲ್ಲಂಘಿಸಿದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ– 2021, ಭಾರತೀಯ ನ್ಯಾಯ ಸಂಹಿತೆ– 2023, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ– 2012, ಸ್ಫೋಟಕ ವಸ್ತುಗಳ ಕಾಯ್ದೆ– 1908 ಮುಂತಾದ, ಅಸ್ತಿತ್ವದಲ್ಲಿರುವ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ADVERTISEMENT

ಪ್ರಮುಖ ನಿಯಮಗಳು

* ಬಳಕೆದಾರನು ಆಡಿಯೊ/ವಿಡಿಯೊ, ಚಿತ್ರ ಎಐನಿಂದ ಸೃಷ್ಟಿಸಿದ್ದೇ ಅಲ್ಲವೇ ಎನ್ನುವುದನ್ನು ಸ್ಪಷ್ಟವಾಗಿ ಕಾಣುವಂತೆ ನಮೂದಿಸಬೇಕು. ವೇದಿಕೆಯು ಅದನ್ನು ಮರೆಮಾಚಬಾರದು, ತೆಗೆದುಹಾಕಬಾರದು. ಬಳಕೆದಾರ ನಮೂದಿಸದೇ ಇದ್ದರೆ ವೇದಿಕೆಯೇ ಆ ಕೆಲಸ ಮಾಡಬೇಕು ಇಲ್ಲವೇ ಅದನ್ನು ತೆಗೆದುಹಾಕಬೇಕು

* ಮಧ್ಯವರ್ತಿಯು (ವೇದಿಕೆ) ಕನಿಷ್ಠ ಮೂರು ತಿಂಗಳಿಗೆ ಒಮ್ಮೆ ಖಾಸಗಿ ನೀತಿ, ಬಳಕೆದಾರ ಒಪ್ಪಂದ ಅಥವಾ ಸೂಕ್ತ ವಿಧಾನದ ಮೂಲಕ ನಿಯಮಗಳ ಬಗ್ಗೆ ಇಂಗ್ಲಿಷ್‌ನಲ್ಲಿ ಅಥವಾ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಯಾವುದೇ ಭಾಷೆಯ ಮೂಲಕ ನಿಯಮಗಳ ಬಗ್ಗೆ ಮಾಹಿತಿ ನೀಡಬೇಕು (ಪ್ರಸ್ತುತ ನಿಯಮಗಳ ಅನ್ವಯ, ವರ್ಷಕ್ಕೆ ಒಮ್ಮೆ ಮಾಹಿತಿ ನೀಡಿದರೆ ಸಾಕು)

* ಯಾವುದೇ ಆಡಿಯೊ/ವಿಡಿಯೊ/ಚಿತ್ರ ಆಕ್ಷೇಪಾರ್ಹವಾಗಿದ್ದು, ನಿಯಮ ಉಲ್ಲಂಘಿಸುವಂತಿದ್ದರೆ, ನ್ಯಾಯಾಲಯ/ಸರ್ಕಾರಿ ಆದೇಶದ ಮೂರು ಗಂಟೆಗಳಲ್ಲಿ ಅದನ್ನು ವೇದಿಕೆಯಿಂದ ತೆಗೆಯಬೇಕು. ಪ್ರಸ್ತುತ ಅಂಥ ವಿಷಯಗಳನ್ನು ತೆಗೆಯಲು 36 ಗಂಟೆ ನೀಡಲಾಗುತ್ತಿದೆ

* ಯಾವುದೇ ಪೋಸ್ಟ್/ವಿಷಯ ಆಕ್ಷೇಪಾರ್ಹ ಎಂದು ಸಂಬಂಧಿಸಿದವರು ದೂರು ನೀಡಿದರೆ, ಅದನ್ನು 36 ಗಂಟೆಗಳಲ್ಲಿ ಇತ್ಯರ್ಥಪಡಿಸಿ, ತೆಗೆದುಹಾಕಬೇಕು. ಪ್ರಸ್ತುತ ಈ ಅವಧಿಯು 72 ಗಂಟೆಗಳು

* ಲೈಂಗಿಕ ಕ್ರಿಯೆ/ವರ್ತನೆ/ನಗ್ನತೆ ಬಗ್ಗೆ ಸಂಬಂಧಿಸಿದವರು ದೂರು ನೀಡಿದರೆ, ಅದನ್ನು 2 ಗಂಟೆಗಳಲ್ಲಿ ವೇದಿಕೆಯಿಂದ ತೆಗೆದುಹಾಕಬೇಕು. ಪ್ರಸ್ತುತ ಇದಕ್ಕೆ 24 ಗಂಟೆಗಳವರೆಗೆ ಅವಕಾಶ ಇದೆ

* ಸಂತ್ರಸ್ತರಿಂದ ದೂರು ಪಡೆದ 7 ದಿನಗಳ ಒಳಗಾಗಿ ಸಂಬಂಧಪಟ್ಟ ಅಧಿಕಾರಿಯು ಅದನ್ನು ಪರಿಹರಿಸಬೇಕು. ಪ್ರಸ್ತುತ ದೂರನ್ನು ವಿಲೇವಾರಿ ಮಾಡಲು 15 ದಿನಗಳವರೆವಿಗೂ ಅವಕಾಶವಿದೆ

ಯಾವುದಕ್ಕೆಲ್ಲ ವಿನಾಯಿತಿ?

ಒಂದು ವೇಳೆ ಆಡಿಯೊ, ವಿಡಿಯೊ ಅಥವಾ ಆಡಿಯೊ–ವಿಡಿಯೊ ಮಾಹಿತಿಗಳು ಕೆಲವು ನಿರ್ದಿಷ್ಟ ಉದ್ದೇಶಗಳ ಕಾರಣಕ್ಕೆ ಸೃಷ್ಟಿಸಿದ್ದರೆ ಅಂತಹ ಮಾಹಿತಿಗಳು ‘ಕೃತಕವಾಗಿ ಸೃಷ್ಟಿಸಿದ ಮಾಹಿತಿಗಳು’ ಎಂದು ಪರಿಗಣಿತವಾಗುವುದಿಲ್ಲ

* ಸಾಮಾನ್ಯ ಅಥವಾ ಸದುದ್ದೇಶದಿಂದ ಮಾಡಿದ ಎಡಿಟಿಂಗ್‌, ಇರುವ ಮಾಹಿತಿಯನ್ನು ಸುಧಾರಿಸಲು, ತಾಂತ್ರಿಕ ತಿದ್ದುಪಡಿ, ಬಣ್ಣದ ಹೊಂದಾಣಿಕೆ, ಆಡಿಯೊದಲ್ಲಿರುವ ಅನಗತ್ಯ ಗದ್ದಲವನ್ನು ಕಡಿಮೆ ಮಾಡಲು, ವಿಷಯವನ್ನು ಬದಲಾಯಿಸದ, ನಕಲು ಮಾಡಿದ ಅಥವಾ ಮಾಹಿತಿ, ಸಂದರ್ಭಗಳನ್ನು ತಿದ್ದುಪಡಿ/ತಿರುಚದ ಅಥವಾ ತಪ್ಪಾಗಿ ನಿರೂಪಿಸದ ಆಡಿಯೊ, ವಿಡಿಯೊ ಅಥವಾ ಆಡಿಯೊ–ವಿಡಿಯೊ ಮಾಹಿತಿಗಳು

* ಸಾಮಾನ್ಯವಾದ ಅಥವಾ ಒಳ್ಳೆಯ ಉದ್ದೇಶದಿಂದ ಸೃಷ್ಟಿಸಿದ ಮಾಹಿತಿಗಳು ಅಥವಾ ದಾಖಲೆಗಳು, ಪಿಡಿಎಫ್‌ ದಾಖಲೆಗಳು, ಶೈಕ್ಷಣಿಕ ಅಥವಾ ತರಬೇತಿ ಉದ್ದೇಶದ ವಿಷಯಗಳು, ಸಂಶೋಧನಾ ಫಲಿತಾಂಶಗಳು, ಸಚಿತ್ರ, ಕಲ್ಪಿತ ವಿವರಣೆಗೆ ಬಳಸಿದ ಮಾಹಿತಿಗಳು, ಟೆಂಪ್ಲೇಟ್‌ ಆಧಾರಿತ ಅಥವಾ ಪರಿಕಲ್ಪನೆ ಆಧಾರಿತ ವಿಷಯಗಳು, ವಿವರಗಳು

* ಆಡಿಯೊ–ವಿಡಿಯೊ ಮಾಹಿತಿಗಳಲ್ಲಿ ಯಾವುದೇ ಭಾಗವನ್ನು ತಿರುಚುವ ಉದ್ದೇಶ ಇಲ್ಲದೇ, ಬಳಕೆಯ ಅವಕಾಶ, ಸ್ಪಷ್ಟತೆ, ಭಾಷಾಂತರ, ವಿವರಣೆ, ಮಾಹಿತಿಗಳ ಹುಡುಕಾಟ ಅಥವಾ ಅನ್ವೇಷಣೆಯನ್ನು ಸುಧಾರಿಸುವುದಕ್ಕಾಗಿ ಕಂಪ್ಯೂಟರ್‌ ವ್ಯವಸ್ಥೆಯನ್ನು ಬಳಸುವುದಕ್ಕೂ ಈ ನಿಯಮ ಅವಕಾಶ ನೀಡುತ್ತದೆ.

ಕೃತಕವಾಗಿ ಸೃಷ್ಟಿಸಿದ ಮಾಹಿತಿ ಎಂದರೆ...

ಪರಿಷ್ಕೃತ ನಿಯಮಗಳ ಅಧಿಸೂಚನೆಯಲ್ಲಿ ಕೃತಕ ಬುದ್ಧಿಮತ್ತೆಯಿಂದ (ಎಐ) ಸೃಷ್ಟಿಸಿದ ವಿಷಯ ಎಂದು ಎಲ್ಲೂ ಉಲ್ಲೇಖಿಸಲಾಗಿಲ್ಲ. ಬದಲಿಗೆ ‘ಕೃತಕವಾಗಿ ಸೃಷ್ಟಿಸಿದ ಮಾಹಿತಿ’ (ಸಿಂಥೆಟಿಕಲಿ ಜನರೇಟೆಡ್‌ ಇನ್‌ಫರ್ಮೇಷನ್‌) ಎಂದು ಹೇಳಲಾಗಿದೆ.

ಅಧಿಸೂಚನೆಯಲ್ಲಿ ಕೃತಕವಾಗಿ ಸೃಷ್ಟಿಸಿದ ಮಾಹಿತಿಯನ್ನು ಈ ರೀತಿ ವ್ಯಾಖ್ಯಾನಿಸಿದೆ: ಕಂಪ್ಯೂಟರ್‌ ವ್ಯವಸ್ಥೆಯನ್ನು ಬಳಸಿಕೊಂಡು ಕೃತಕವಾಗಿ ಅಥವಾ ಕಂಪ್ಯೂಟಿಂಗ್‌/ಸೂತ್ರಗಳು/ಗಣನವಿಧಾನದ ಮೂಲಕ (ಆಲ್ಗರಿದಮಿಕಲಿ) ಸೃಷ್ಟಿಸಿದ, ಮಾರ್ಪಡಿಸಿದ ಅಥವಾ ತಿರುಚಿದ ಆಡಿಯೊ, ವಿಡಿಯೊ ಅಥವಾ ಆಡಿಯೊ–ವಿಡಿಯೊ ಎರಡನ್ನೂ ಒಳಗೊಂಡ ಮಾಹಿತಿ. ಆ ಮಾಹಿತಿಗಳು ವಾಸ್ತವ, ಅಧಿಕೃತ ಅಥವಾ ನಿಜ ಎಂಬಂತೆ ಬಿಂಬಿತವಾಗಿರುವಂತೆ ಇದ್ದರೆ ಮತ್ತು ಯಾವುದೇ ವ್ಯಕ್ತಿ ನಿಜವಾದ ವ್ಯಕ್ತಿ ಎಂಬಂತೆ ಅಥವಾ ಘಟನೆಯನ್ನು ವಾಸ್ತವ ಜಗತ್ತಿನಲ್ಲಿ ನಡೆದಿರುವ ನೈಜ ಘಟನೆಯಂತೆ ಚಿತ್ರಿಸಲಾಗಿದ್ದರೆ ಅಂತಹದ್ದು ಕೃತಕವಾಗಿ ಸೃಷ್ಟಿಸಿದ ಮಾಹಿತಿಯಾಗುತ್ತದೆ.

ಮಾಹಿತಿಗಳು ಯಾವ ರೂಪದಲ್ಲಿರುತ್ತವೆ?: ಕಂಪ್ಯೂಟರ್‌ ವ್ಯವಸ್ಥೆಯ ಮೂಲಕ ಸೃಷ್ಟಿಸಿದ ಮಾಹಿತಿಗಳು ಚಿತ್ರ, ಗ್ರಾಫಿಕ್‌, ವಿಡಿಯೊ, ಚಲಿಸುತ್ತಾ ಚಿತ್ರೀಕರಿಸಿರುವ ವಿಡಿಯೊ, ಧ್ವನಿ ಮುದ್ರಣ ಅಥವಾ ಬೇರೆ ಯಾವುದೇ ಆಡಿಯೊ, ಆಡಿಯೊ–ವಿಡಿಯೊ ಎರಡನ್ನೂ ಒಳಗೊಂಡ ಅಥವಾ ಆಡಿಯೊ ಇಲ್ಲದೆ ಕೇವಲ ವಿಡಿಯೊ ರೂಪದಲ್ಲಿ ಇರಬಹುದು

ಸೆನ್ಸಾರ್‌ಶಿಪ್: ಆಕ್ಷೇಪ

ಪರಿಷ್ಕೃತ ನಿಯಮಗಳಿಗೆ ಆಕ್ಷೇಪವೂ ವ್ಯಕ್ತವಾಗಿದೆ. ಕೇಂದ್ರವು ಡಿಜಿಟಲ್‌ ಮಾಹಿತಿಗಳನ್ನು ಸೆನ್ಸಾರ್‌ ಪ್ರಕ್ರಿಯೆಗೆ ಒಳಪಡಿಸಲು ಹೊರಟಿದೆ ಎಂದು ದೂರಲಾಗಿದೆ.

ನಿಯಮಗಳ ಬಗ್ಗೆ ಪ್ರತಿಕ್ರಿಯಿಸಿರುವ ಇಂಟರ್‌ನೆಟ್‌ ಫ್ರೀಡಂ ಫೌಂಡೇಷನ್‌, ‘ಆಕ್ಷೇಪಾರ್ಹ ಮಾಹಿತಿಗಳನ್ನು ಮೂರು ಗಂಟೆಗಳ ಒಳಗೆ ತೆಗೆದು ಹಾಕಬೇಕು ಎಂದು ಹೇಳಿರುವುದರಿಂದ ಡಿಜಿಟಲ್‌ ವೇದಿಕೆಗಳಿಗೆ ಆಕ್ಷೇಪಾರ್ಹ ಎಂದು ಹೇಳಲಾದ ಮಾಹಿತಿಗಳನ್ನು ಪರಿಶೀಲನೆಗೆ ಒಳಪಡಿಸುವುದು ಕಷ್ಟವಾಗಬಹುದು. ಹೀಗಾದಲ್ಲಿ ಅವುಗಳು ಸ್ವಯಂಚಾಲಿತವಾಗಿ ಅಂತಹ ವಿಷಯಗಳನ್ನು ತೆಗೆದುಹಾಕುವ ಅಥವಾ ನಿರ್ಬಂಧಿಸುವ ವ್ಯವಸ್ಥೆ ಜಾರಿಗೆ ತರಬಹುದು. ಹಾಗಾದಲ್ಲಿ ಇದು ಸಂವಿಧಾನ ನೀಡಿದ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ’ ಎಂದು ಹೇಳಿದೆ.

ಕೃತಕವಾಗಿ ಸೃಷ್ಟಿಸಿದ ಆಡಿಯೊ–ವಿಡಿಯೊ ಮಾಹಿತಿಗಳನ್ನು ಎಐ ಸೃಷ್ಟಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಸೂಚಿಸಿರುವುದನ್ನು ತಜ್ಞರು ಸ್ವಾಗತಿಸಿದ್ದಾರೆ. ಆದರೆ, ಆಕ್ಷೇಪಾರ್ಹ ವಿಚಾರಗಳನ್ನು ತೆಗೆದು ಹಾಕಲು ನೀಡಿರುವ ಗಡುವನ್ನು 3 ಗಂಟೆಗಳಿಗೆ ಇಳಿಸಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಪ್ರಕಟವಾಗಿರುವ ಮಾಹಿತಿಗಳು ತಿರುಚಿದ್ದೇ ಅಥವಾ ಆಕ್ಷೇಪಾರ್ಹವಾಗಿದೆಯೇ ಎಂಬುದನ್ನು ಮನುಷ್ಯರೇ ಪರಿಶೀಲಿಸಬೇಕು. ಆನ್‌ಲೈನ್‌ ವೇದಿಕೆಗಳಿಗೆ ಈಗ ನೀಡಿರುವ 36 ಗಂಟೆಗಳಲ್ಲೂ ಆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಹೀಗಿರುವಾಗ 3 ಗಂಟೆಗಳಲ್ಲಿ ತೆಗೆದುಹಾಕುವುದು ಸಾಧ್ಯವಾಗದ ಮಾತು. ಭವಿಷ್ಯದಲ್ಲಿ ಆನ್‌ಲೈನ್‌ ವೇದಿಕೆಗಳು ಅಂತಹ ಮಾಹಿತಿ ತೆಗೆದುಹಾಕಲು ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ತರಬಹುದು. ಇದು ಮಾಹಿತಿಗಳ ಸೆನ್ಸಾರ್‌ಗೆ ಕಾರಣವಾಗಬಹುದು’ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.