ADVERTISEMENT

ಆಳ–ಅಗಲ: ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಹೊಸ ನಿಯಮ ಜಾರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 21:22 IST
Last Updated 13 ಫೆಬ್ರುವರಿ 2025, 21:22 IST
   

ದೂರಸಂಪರ್ಕ ಜಾಲವನ್ನು ದುರ್ಬಳಕೆ ಮಾಡಿಕೊಂಡು, ಮೊಬೈಲ್ ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುವ ಕರೆ, ಸಂದೇಶ ಕಳುಹಿಸುವುದನ್ನು ನಿರ್ಬಂಧಿಸಲು ಟ್ರಾಯ್ ತನ್ನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.  ವಾಣಿಜ್ಯ ಕರೆ/ಸಂದೇಶಗಳ ಕಿರಿಕಿರಿಯಿಂದ ಗ್ರಾಹಕರನ್ನು ರಕ್ಷಿಸುವುದಕ್ಕಾಗಿ 2018ರ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ತಂದಿದೆ. ಗ್ರಾಹಕರು ದೂರು ನೀಡಲು ಅವಕಾಶ ನೀಡಲಾಗಿದ್ದು, ಅದನ್ನು ನಿಗದಿತ ಕಾಲಾವಧಿಯಲ್ಲಿ ಇತ್ಯರ್ಥ ಪಡಿಸುವುದು ಕಡ್ಡಾಯವಾಗಿದೆ. ನಿಯಮ ಮೀರಿದರೆ ದೂರಸಂಪರ್ಕ ಕಂಪನಿಗಳಿಗೆ ಶಿಕ್ಷೆ/ದಂಡ ವಿಧಿಸಲು ನಿಯಮಗಳಲ್ಲಿ ಅವಕಾಶ ನೀಡಲಾಗಿದೆ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಅನಪೇಕ್ಷಿತ ವಾಣಿಜ್ಯ ಕರೆಗಳನ್ನು (ಯುಸಿಸಿ) ನಿಯಂತ್ರಿಸಲು ಕೆಲವು ಕಠಿಣ ಕ್ರಮಗಳಿಗೆ ಮುಂದಾಗಿದೆ. ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ಕಸ್ಟಮರ್ ಪ್ರಿಫರೆನ್ಸ್ ರೆಗ್ಯುಲೇಷನ್ಸ್‌ (ಟಿಸಿಸಿಸಿಪಿಆರ್)–2018ಕ್ಕೆ ಎರಡನೆಯ ತಿದ್ದುಪಡಿ ಮಾಡಿ ಹೊಸ ನಿಯಮಗಳನ್ನು ರೂಪಿಸಿದೆ. ಗೆಜೆಟ್‌ ಅಧಿಸೂಚನೆ ಹೊರಡಿಸಿದ ದಿನದಿಂದ ಎರಡು ಹಂತದಲ್ಲಿ (30 ದಿನ ಮತ್ತು 60 ದಿನ) ಹೊಸ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಟ್ರಾಯ್ ತಿಳಿಸಿದೆ.

ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಟೆಲಿ ಮಾರ್ಕೆಟಿಂಗ್ ಉದ್ದೇಶಕ್ಕೆ ಬಳಸಲಾಗುವ ಸಂಪರ್ಕಗಳಿಗೆ 10 ಅಂಕಿಗಳ ಮೊಬೈಲ್‌ ಸಂಖ್ಯೆ ಬಳಸುವುದನ್ನು ಟ್ರಾಯ್ ನಿರ್ಬಂಧಿಸಿದೆ. ‘140’ರಿಂದ ಆರಂಭವಾಗುವ ಮೊಬೈಲ್ ಸಂಖ್ಯೆಯ ಸರಣಿಯನ್ನು ಜಾಹೀರಾತುಗಳಿಗೆ ಬಳಸುವುದನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಜತೆಗೆ, ವ್ಯಾಪಾರ, ಉತ್ಪನ್ನ/ಸೇವೆಗಳ ಪ್ರಚಾರಕ್ಕೆ ‘1600’ರಿಂದ ಆರಂಭವಾಗುವ ಹೊಸ ಸಂಖ್ಯಾ ಸರಣಿಯನ್ನು ಬಳಸಬೇಕು ಎಂದು ಸೂಚಿಸಲಾಗಿದೆ.   

ADVERTISEMENT

ತಾವು ಯಾವ ರೀತಿಯ ಸಂವಹನ ನಡೆಸುತ್ತೇವೆ ಎನ್ನುವ ಬಗ್ಗೆ ನೋಂದಣಿ ಮಾಡಿಕೊಳ್ಳದ ನಂಬರ್‌ಗಳಿಂದ ಬರುವ ಕರೆ/ಸಂದೇಶಗಳನ್ನು (ಎಸ್‌ಎಂಎಸ್‌) ಕಳುಹಿಸುವವರ ವಿರುದ್ಧ ದೂರು ದಾಖಲಿಸಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ದೂರು ದಾಖಲಿಸುವ ಪ್ರಕ್ರಿಯೆಯನ್ನೂ ಸರಳೀಕರಿಸಲಾಗಿದೆ. ದೂರು ದಾಖಲಿಸಲು ಈಗ ಮೂರು ದಿನಗಳ ಕಾಲವಕಾಶ ಇದ್ದು, ಅದನ್ನು ಹೊಸ ನಿಯಮಗಳಲ್ಲಿ ಏಳು ದಿನಗಳಿಗೆ ವಿಸ್ತರಿಸಲಾಗಿದೆ.

ಯುಸಿಸಿ ಸಂಬಂಧದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲು ದೂರಸಂಪರ್ಕ ಕಂಪನಿಗಳಿಗೆ ಇದುವರೆಗೆ 30 ದಿನಗಳವರೆಗೂ ಸಮಯ ಇತ್ತು. ಆ ಅವಧಿಯನ್ನು 5 ದಿನಕ್ಕೆ ಇಳಿಕೆ ಮಾಡಲಾಗಿದೆ. ಇದುವರೆಗೂ ನಿಯಮ ಉಲ್ಲಂಘಿಸುವ ನಂಬರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು 7 ದಿನದಲ್ಲಿ 10 ದೂರು ದಾಖಲಾಗಬೇಕಿತ್ತು. ಹೊಸ ನಿಯಮದಲ್ಲಿ 10 ದಿನದಲ್ಲಿ 5 ದೂರು ದಾಖಲಾದರೂ ದಂಡ ವಿಧಿಸಲು ಅವಕಾಶ ಇದೆ. ದೂರಸಂಪರ್ಕ ಕಂಪನಿಗಳು ದೂರುಗಳನ್ನು ದಾಖಲಿಸಲು ವ್ಯವಸ್ಥೆ ರೂಪಿಸಬೇಕು. ತಮ್ಮ ಮೊಬೈಲ್ ಆ್ಯಪ್‌ಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ವರ್ಷಪೂರ್ತಿ ದೂರು ದಾಖಲಿಸಲು ಅವಕಾಶ ನೀಡಬೇಕು. 

ತಪ್ಪಿತಸ್ಥರಿಗೆ ದಂಡ/ಶಿಕ್ಷೆ: ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ, ಅವರ ನಂಬರ್‌ಗಳಿಂದ ಹೊರಹೋಗುವ ಕರೆಗಳನ್ನು 15 ದಿನ ಕಡಿತಗೊಳಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದರೆ, ಅವರ ಸಂಖ್ಯೆಯ ಸಂಪರ್ಕವನ್ನು ಒಂದು ವರ್ಷದವರೆಗೆ ಕಡಿತಗೊಳಿಸಲಾಗುತ್ತದೆ. 

ನಿಯಮಗಳನ್ನು ಜಾರಿ ಮಾಡುವಲ್ಲಿ ವಿಫಲವಾದರೆ, ಭಾರಿ ದಂಡ ವಿಧಿಸುವುದಾಗಿಯೂ ಟ್ರಾಯ್, ಕಂಪನಿಗಳನ್ನು ಎಚ್ಚರಿಸಿದೆ. ಯುಸಿಸಿಯ ಸಂಖ್ಯೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಯ ಉಲ್ಲಂಘನೆಗೆ ₹2 ಲಕ್ಷ ದಂಡ, ಎರಡನೆಯ ಬಾರಿಯ ಉಲ್ಲಂಘನೆಗೆ ₹5 ಲಕ್ಷ ದಂಡ ಮತ್ತು ನಂತರದ ಉಲ್ಲಂಘನೆಗೆ ₹10 ಲಕ್ಷ ದಂಡ ವಿಧಿಸಲು ನಿಯಮಗಳು ಅವಕಾಶ ಕಲ್ಪಿಸುತ್ತವೆ.

ದೂರಸಂಪರ್ಕ ಕಂಪನಿಗಳು ಗ್ರಾಹಕರಿಗೆ ಅನಪೇಕ್ಷಿತ ಮತ್ತು ವಾಣಿಜ್ಯ ಕರೆ/ಸಂದೇಶ ನಿರಾಕರಿಸುವ ಆಯ್ಕೆ ನೀಡುವುದನ್ನು  ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಮೊಬೈಲ್ ಸಂದೇಶಗಳನ್ನು ಸುಲಭವಾಗಿ ವಿಂಗಡಿಸಲು/ಗ್ರಹಿಸಲು ಸಾಧ್ಯವಾಗುವಂತೆ ಕೆಲವು ನಿರ್ದಿಷ್ಟ ಪದಗಳನ್ನು ಬಳಸಬೇಕು; ವಸ್ತು/ಸೇವೆಯ ಬಳಕೆಗೆ ಉತ್ತೇಜನ ನೀಡುವ ಸಂದೇಶಗಳಿಗೆ ‘ಪಿ’ ಎಂದು, ಸೇವೆಗೆ ‘ಎಸ್‌’ ಎಂದು, ವ್ಯಾವಹಾರಿಕ ಸಂದೇಶಕ್ಕೆ ‘ಟಿ’ ಎಂದು, ಸರ್ಕಾರಿ ಸಂದೇಶಗಳಿಗೆ ‘ಜಿ’ ಎಂದು ಬಳಸಬೇಕು ಎಂದು ನಿಯಮಗಳು ಹೇಳುತ್ತವೆ.

ಗ್ರಾಹಕರು ಒಮ್ಮೆ ಯಾವುದೇ ಜಾಹೀರಾತು ಕರೆ/ಎಸ್‌ಎಂಎಸ್ ನಿರ್ಬಂಧಿಸಿದ್ದರೆ, ಮತ್ತೆ ಅವರ ಸಮ್ಮತಿ ಪಡೆಯಲು 90 ದಿನಗಳ ನಂತರವೇ ಪ್ರಯತ್ನಿಸಬೇಕು.

ಅನಪೇಕ್ಷಿತವಾದ ಕರೆ ಮತ್ತು ಎಸ್‌ಎಂಎಸ್‌ಗಳ ಮಾದರಿಗಳನ್ನು ವಿಶ್ಲೇಷಣೆ ಮಾಡುವಂತೆಯೂ ಟ್ರಾಯ್ ದೂರಸಂಪರ್ಕ ಕಂಪನಿಗಳಿಗೆ ಸೂಚಿಸಿದೆ. ಅಸ್ವಾಭಾವಿಕವಾಗಿ ಕರೆಗಳಲ್ಲಿ ಹೆಚ್ಚಳ, ಕರೆಗಳ ಕಡಿಮೆ ಅವಧಿ, ಒಳಬರುವ ಹಾಗೂ ಹೊರಹೋಗುವ ಕರೆಗಳ ಅನುಪಾತದ ಆಧಾರದಲ್ಲಿ ಅನಪೇಕ್ಷಿತ ಕರೆಗಳನ್ನು ತಕ್ಷಣವೇ ಪತ್ತೆಹಚ್ಚಬಹುದಾಗಿದೆ ಎಂದೂ ಟ್ರಾಯ್ ಹೇಳಿದೆ.

ಗ್ರಾಹಕರ ದೂರುಗಳನ್ನು ಸರಿಯಾಗಿ ಇತ್ಯರ್ಥಪಡಿಸದೇ ಹಾಗೆಯೇ ಮುಕ್ತಾಯ ಮಾಡಿದರೆ ಹಾಲಿ ಇರುವ ದಂಡದ ಜತೆಗೆ ಹೆಚ್ಚು ದಂಡವನ್ನು ವಿಧಿಸಲಾಗುತ್ತದೆ. 

‌ಅನಪೇಕ್ಷಿತ, ವಾಣಿಜ್ಯ ಕರೆಗಳನ್ನು ಮಾಡುವವರ (ನೋಂದಣಿರಹಿತ) ವಿರುದ್ಧ ದೂರು ದಾಖಲಿಸಲು ಟೆಲಿಕಾಂ ಗ್ರಾಹಕರು ಡಿಎನ್‌ಡಿ (ಡು ನಾಟ್ ಡಿಸ್ಟರ್ಬ್) ಅಡಿ ನೋಂದಣಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಗ್ರಾಹಕರು ಬಯಸಿದರೆ, ತಮಗೆ ಸೇವೆ ಪೂರೈಸುವ ಕಂಪನಿಗಳ ಪ್ರಚಾರಕ್ಕೆ ಸಂಬಂಧಿಸಿದ ಎಸ್‌ಎಂಎಸ್‌ಗಳನ್ನೂ ಕೂಡ ನಿರ್ಬಂಧಿಸಲು ನಿಯಮಗಳಲ್ಲಿ ಅವಕಾಶವಿದೆ. 

ಗ್ರಾಹಕರಿಗೆ ಸೇವೆ ನೀಡುವ ಪ್ರತಿಯೊಂದು ಕಂಪನಿಯೂ ನೋಂದಾಯಿತ ವಾಣಿಜ್ಯ ಸಂಪರ್ಕ ವ್ಯವಸ್ಥೆಗಳಿಗೆ ಮಾತ್ರವೇ ತನ್ನ ಜಾಲವನ್ನು ಬಳಸಿ ವಾಣಿಜ್ಯ ಕರೆ/ಸಂದೇಶ ಕಳುಹಿಸಲು ಅವಕಾಶ ನೀಡಬೇಕು. ನೋಂದಾಯಿತ ಅಲ್ಲದವರು ಕರೆ/ಸಂದೇಶ ಕಳುಹಿಸಿದರೆ, ಆ ಸಂಖ್ಯೆಯನ್ನು ಹೊಸ ನಿಯಮಗಳ ಅಡಿ ಅಮಾನತ್ತಿನಲ್ಲಿಡಬಹುದು ಇಲ್ಲವೇ ಸಂಪರ್ಕವನ್ನೇ ಕಡಿತ ಮಾಡಬಹುದು.

ಪಾರದರ್ಶಕವಾದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನೂನುಬದ್ಧವಾದ ವಾಣಿಜ್ಯ ಕರೆಗಳಿಗೆ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ. ಆದರೆ, ವ್ಯಾಪಾರ ನೋದಣಿ ಇರುವ ಅಧಿಕೃತ ಸಂಖ್ಯೆಗಳಿಂದ ಬರುವ ಸಂದೇಶಗಳು ಕೂಡ ಕೆಲವು ಮಾಹಿತಿಗಳನ್ನು ಪ್ರಕಟಿಸಬೇಕಾದ ಅಗತ್ಯ ಇದೆ.

ವಂಚಕ ಕರೆಗಳ ವಿರುದ್ಧ ದೂರು ನೀಡಲೂ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ, ಇಂಥ ಪ್ರಕರಣಗಳಲ್ಲಿ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಷ್ಟೇ ಸಾಧ್ಯ. ಮತ್ತೊಂದು ಮುಖ್ಯ ಬದಲಾವಣೆ ಎಂದರೆ, ಸದ್ಯ ಅನಪೇಕ್ಷಿತ, ವಾಣಿಜ್ಯ ಕರೆಗಳನ್ನು ಮಾಡುವವರನ್ನು ಎರಡು ವರ್ಷ ನಿರ್ಬಂಧಿಸಲಾಗುತ್ತಿದೆ. ಆದರೆ, ಹೊಸ ನಿಯಮಗಳಲ್ಲಿ ಅದನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ.

ಆಧಾರ: ಪಿಟಿಐ, ಪಿಐಬಿ, ಟ್ರಾಯ್ ಹೊಸ ನಿಯಮಗಳು

ಯಾವೆಲ್ಲ ಕರೆ/ ಸಂದೇಶಗಳಿಗೆ ಅವಕಾಶ?

* ಅನುಮತಿ ನೀಡಿದ ಮತ್ತು ಸರ್ಕಾರದಿಂದ ಬರುವ ಸಂದೇಶ/ಕರೆಗಳನ್ನು ಬಿಟ್ಟು ಉಳಿದೆಲ್ಲ ವಾಣಿಜ್ಯ ಕರೆ/ಸಂದೇಶಗಳನ್ನು ಮೊಬೈಲ್‌ ಬಳಕೆದಾರರು ಬ್ಲಾಕ್‌ ಮಾಡಬಹುದು

* ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಕಳುಹಿಸುವ ಸಂದೇಶಗಳು/ ಮಾಡುವ ಕರೆಗಳನ್ನು (ವಾಯ್ಸ್‌ ಕಾಲ್‌) ಬ್ಲಾಕ್‌ ಮಾಡುವುದಕ್ಕೆ ಅವಕಾಶ ಇಲ್ಲ. ಈ ಕರೆಗಳು/ಸಂದೇಶಗಳು ಬರಬೇಕೇ ಬೇಡವೇ ಎಂದು ಬಳಕೆದಾರರ ಅನುಮತಿ ಪಡೆಯುವ ಅಗತ್ಯವೂ ಇಲ್ಲ

* ಜಾಹೀರಾತು ಸಂದೇಶ ಮಾಡುವ ಸಂಸ್ಥೆ ಅಥವಾ ವ್ಯಕ್ತಿ, ಅವುಗಳು ಬರದಂತೆ ತಡೆಯುವ ಆಯ್ಕೆಯನ್ನೂ ಬಳಕೆದಾರರಿಗೆ ನೀಡಬೇಕು. ಒಂದು ವೇಳೆ ಈ  ವ್ಯವಹಾರ ಅಥವಾ ಸೇವೆಗೆ ಸಂಬಂಧಿಸಿದ ವಿವರಗಳಿದ್ದರೂ ಅದನ್ನು ಜಾಹೀರಾತು/ವಾಣಿಜ್ಯ ಉದ್ದೇಶದ ಸಂದೇಶ ಎಂದೇ ಪರಿಗಣಿಸಲಾಗುತ್ತದೆ. ಬ್ಲಾಕ್‌ ಮಾಡದ ಬಳಕೆದಾರರಿಗೆ ಮಾತ್ರ ವಾಣಿಜ್ಯ/ಜಾಹೀರಾತು ಉದ್ದೇಶದ ಕರೆಗಳನ್ನು ಮಾಡಬಹುದು 

* ಸೇವೆಗೆ ಸಂಬಂಧಿಸಿದ ಸಂದೇಶ ಅಥವಾ ಕರೆಗಳಿಗೆ ಅವಕಾಶ ಇದೆ. ಅಂದರೆ ಗ್ರಾಹಕರು ಖರೀದಿಸಿದ ಉತ್ಪನ್ನಗಳಿಗೆ ಸಂಬಂಧಿಸಿದ ಸೇವೆ, ಉತ್ಪನ್ನದ ಬಗ್ಗೆ, ವಾರಂಟಿ  ಸೇರಿದಂತೆ ಇನ್ನಿತರ ಮಾಹಿತಿ ಒಳಗೊಂಡ ಸಂದೇಶ/ಕರೆಯನ್ನು ಸಂಬಂಧಿಸಿದವರು ತಮ್ಮ ಗ್ರಾಹಕರಿಗೆ ಮಾಡಬಹುದು. ಇದು ವಾಣಿಜ್ಯ/ಜಾಹೀರಾತು ಉದ್ದೇಶದ ಕರೆ/ಸಂದೇಶ ಆಗಿರುವುದಿಲ್ಲ 

* ವ್ಯಾವಹಾರಿಕ ಸಂದೇಶ/ಕರೆ ಕಳುಹಿಸುವುದಕ್ಕೆ ಟ್ರಾಯ್‌ ಅನುವು ಮಾಡಿದೆ. ಅಂದರೆ, ತಮ್ಮ ಗ್ರಾಹಕರು ಮಾಡಿದ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಅಥವಾ ಸಂಸ್ಥೆಗಳು ಗ್ರಾಹಕರಿಗೆ ಕರೆ/ಸಂದೇಶ ಕಳುಹಿಸಬಹುದು.  ಉದಾಹರಣೆ ಬ್ಯಾಂಕ್‌ನಿಂದ ಬರುವ ಒಟಿಪಿ, ಖಾತೆಯಿಂದ ಹಣ ಕಡಿತದ ಬಗ್ಗೆ ಬರುವ ಸಂದೇಶ, ಇ–ಕಾಮರ್ಸ್‌ ಸಂಸ್ಥೆಗಳಿಂದ ಬರುವ ಸಂದೇಶ/ಕರೆ ಇತ್ಯಾದಿ

ಸಂಪರ್ಕ ಕಡಿತ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ  ಟ್ರಾಯ್‌ ಮತ್ತು ದೂರಸಂಪರ್ಕ ಸಚಿವಾಲಯ ಒಟ್ಟಾಗಿ ಅನಪೇಕ್ಷಿತ ಕರೆಗಳನ್ನು ಮಾಡುವ, ವಂಚನೆ ಉದ್ದೇಶದ ಕರೆ ಮಾಡುವವರ ಒಂದು ಕೋಟಿ ಮೊಬೈಲ್‌ ಸಂಪರ್ಕಗಳನ್ನು ಕಡಿತಗೊಳಿಸಿದ್ದವು. 

ಸೈಬರ್‌ಅಪರಾಧ ಮತ್ತು ಹಣಕಾಸು ವಂಚನೆಯಲ್ಲಿ ತೊಡಗಿದ್ದವರ 2.27 ಲಕ್ಷ ಮೊಬೈಲ್‌ ಸಂಪರ್ಕಗಳನ್ನು ದೂರಸಂಪರ್ಕ ಸಚಿವಾಲಯ ಬ್ಲಾಕ್‌ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.