ADVERTISEMENT

ಆಳ–ಅಗಲ | ಸಮಗ್ರ ವಾಯು ರಕ್ಷಣಾ ವ್ಯವಸ್ಥೆ: ಭಾರತದ ಮಹತ್ವದ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
<div class="paragraphs"><p>ವಿಎಸ್‌ಎಚ್‌ಒಆರ್‌ಎಡಿಎಸ್‌ ಪರೀಕ್ಷೆ ನಡೆಸಿದ ಸಂದರ್ಭದ ಚಿತ್ರ</p></div>

ವಿಎಸ್‌ಎಚ್‌ಒಆರ್‌ಎಡಿಎಸ್‌ ಪರೀಕ್ಷೆ ನಡೆಸಿದ ಸಂದರ್ಭದ ಚಿತ್ರ

   
ಆಧುನಿಕ ಸೇನಾ ಸಂಘರ್ಷದಲ್ಲಿ ಕ್ಷಿಪಣಿಗಳು, ಯುದ್ಧವಿಮಾನಗಳು, ಡ್ರೋನ್‌ಗಳು ಹೆಚ್ಚು ಬಳಕೆಯಾಗುತ್ತಿವೆ. ಇವುಗಳ ದಾಳಿಯನ್ನು ತಡೆಯಲು ಯಾವುದೇ ದೇಶ ಸುವ್ಯವಸ್ಥಿತ ವಾಯು ರಕ್ಷಣಾ ವ್ಯವಸ್ಥೆ ಹೊಂದುವುದು ಮುಖ್ಯ. ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸೇನಾ ಸಂಘರ್ಷದಲ್ಲಿ ಇದರ ಪ್ರಾಮುಖ್ಯ ಜಗಜ್ಜಾಹೀರಾಗಿದೆ. ಪಾಕಿಸ್ತಾನದ ಎಲ್ಲ ವಾಯು ದಾಳಿಗಳನ್ನು ದೇಶದ ವಾಯು ರಕ್ಷಣಾ ವ್ಯವಸ್ಥೆ ಸಮರ್ಥವಾಗಿ ತಡೆಯಿತು; ಭಾರತದ ವಾಯುದಾಳಿಯನ್ನು ತಡೆಯಲು ಪಾಕ್‌ ವಾಯು ರಕ್ಷಣಾ ವ್ಯವಸ್ಥೆ ವಿಫಲವಾಗಿತ್ತು. ದೇಶದ ವಾಯು ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಮುಂದಡಿ ಇಟ್ಟಿರುವ ಭಾರತ, ಇತ್ತೀಚೆಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಸಮಗ್ರ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ದಿನ ಪ್ರಸ್ತಾಪಿಸಿರುವ ‘ಸುದರ್ಶನ ಚಕ್ರ’ ವಾಯು ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಈ ಪರೀಕ್ಷೆ ಮುನ್ನುಡಿ ಬರೆದಿದೆ.

ಪಹಲ್ಗಾಮ್‌ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಈ ವರ್ಷದ ಮೇ 7ರಂದು ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ‘ಆಪರೇಷನ್‌ ಸಿಂಧೂರ’ದ ನಂತರ ಪಾಕಿಸ್ತಾನವು ಭಾರತದ ಮೇಲೆ ನಡೆಸಿದ್ದ ಕ್ಷಿಪಣಿ, ಡ್ರೋನ್‌ಗಳ ದಾಳಿಯ ಸದ್ದಡಗಿಸಿದ್ದು ನಮ್ಮ ಸಮಗ್ರ ವಾಯು ರಕ್ಷಣಾ ವ್ಯವಸ್ಥೆ (ಇಂಟೆಗ್ರೇಟೆಡ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌–ಐಎಡಿಡಬ್ಲ್ಯುಎಸ್‌). ಸ್ವದೇಶಿ ನಿರ್ಮಿತ ಆಕಾಶ್‌ ಕ್ಷಿಪಣಿ ವ್ಯವಸ್ಥೆ, ರಷ್ಯಾ ನಿರ್ಮಿತ ಎಸ್‌–400 ಕ್ಷಿಪಣಿ ವ್ಯವಸ್ಥೆ, ಇದರೊಂದಿಗೆ ದೇಶೀಯ ಆಕಾಶ್‌ತೀರ ಕಮಾಂಡ್‌ ಮತ್ತು ನಿಯಂತ್ರಣ ವ್ಯವಸ್ಥೆ ಹಾಗೂ ಸಮಗ್ರ ವಾಯು ಕಮಾಂಡ್‌ ಮತ್ತು ನಿಯಂತ್ರಣ ವ್ಯವಸ್ಥೆಯು ಪಾಕಿಸ್ತಾನದ ದಾಳಿಯ ವಿರುದ್ಧ ರಕ್ಷಾ ಕವಚದಂತೆ ಕಾರ್ಯನಿರ್ವಹಿಸಿದ್ದವು.  

ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ತೋರಿಸಿದ್ದ ಈ ಕಾರ್ಯಾಚರಣೆ ಮುಕ್ತಾಯ ಕಂಡ ಎರಡೂವರೆ ತಿಂಗಳ ಬಳಿಕ, ಆಗಸ್ಟ್‌ 23ರಂದು ಭಾರತವು ಒಡಿಶಾ ಕರಾವಳಿಯಲ್ಲಿ ನಡೆಸಿದ ಬಹು ಹಂತಗಳ ಸಮಗ್ರ ವಾಯು ರಕ್ಷಣಾ ವ್ಯವಸ್ಥೆಯ ಪ್ರಯೋಗಾರ್ಥ ಪರೀಕ್ಷೆ ಮೊದಲ ಯತ್ನದಲ್ಲೇ ಯಶಸ್ವಿಯಾಗಿದೆ. ಡಿಆರ್‌ಡಿಒ ಮತ್ತು ಅದರ ಎರಡು ಅಂಗಸಂಸ್ಥೆಗಳು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ. ಸಂಪೂರ್ಣ ಸ್ವದೇಶಿ ಸಮಗ್ರ ವಾಯು ರಕ್ಷಣಾ ವ್ಯವಸ್ಥೆ ಎಂಬುದು ಇದರ ಹೆಗ್ಗಳಿಕೆ.  

ADVERTISEMENT

ಮೂರು ಹಂತಗಳ ರಕ್ಷಣಾ ಕವಚವನ್ನು ಹೊಂದಿರುವ ಈ ವ್ಯವಸ್ಥೆಯು ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪ್ರ ಪ್ರತಿಕ್ರಿಯೆಯ ಕ್ಷಿಪಣಿಗಳ ವ್ಯವಸ್ಥೆ (ಕ್ವಿಕ್‌ ರಿಯಾಕ್ಷನ್‌ ಸರ್ಫೇಸ್‌ ಟು ಏರ್‌ ಮಿಸೈಲ್ಸ್‌– ಕ್ಯುಆರ್‌ಎಸ್‌ಎಎಂ), ಅತ್ಯಾಧುನಿಕ ಅತಿ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ (ಅಡ್ವಾನ್ಸ್ಡ್‌ ವೆರಿ ಶಾರ್ಟ್‌ ರೇಂಜ್‌ ಏರ್‌ ಡಿಫೆನ್ಸ್‌ ವ್ಯವಸ್ಥೆ–ವಿಎಸ್‌ಎಚ್‌ಒಆರ್‌ಎಡಿಎಸ್‌) ಕ್ಷಿಪಣಿಗಳು ಮತ್ತು ಲೇಸರ್‌ ನಿರ್ದೇಶಿತ ಪ್ರಖರ ಶಕ್ತಿಯ ಅಸ್ತ್ರ (ಡೈರೆಕ್ಟೆಡ್‌ ಎನರ್ಜಿ ವೆಪನ್‌–ಡಿಇಡಬ್ಲ್ಯು) ವ್ಯವಸ್ಥೆಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕ್ಯುಆರ್‌ಎಸ್‌ಎಎಂ ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್‌) ಅಭಿವೃದ್ಧಿಪಡಿಸಿದ್ದರೆ, ವಿಎಸ್‌ಎಚ್‌ಒಆರ್‌ಎಡಿಎಸ್‌ ಅನ್ನು ಹೈದರಾಬಾದ್‌ನಲ್ಲಿರುವ ಇಮರಾತ್‌ ಸಂಶೋಧನಾ ಕೇಂದ್ರ (ಆರ್‌ಸಿಐ) ಮತ್ತು ಡಿಇಡಬ್ಲ್ಯು ವ್ಯವಸ್ಥೆಯನ್ನು ಹೈದರಾಬಾದ್‌ನಲ್ಲಿರುವ ಪ್ರಖರ ಶಕ್ತಿ (ಹೈ ಎನರ್ಜಿ) ವ್ಯವಸ್ಥೆಗಳು ಮತ್ತು ವಿಜ್ಞಾನಗಳ ಕೇಂದ್ರ (ಸಿಎಚ್‌ಇಎಸ್‌ಎಸ್‌) ಅಭಿವೃದ್ಧಿ ಪಡಿಸಿವೆ. 

ಆಗಸ್ಟ್‌ 23ರಂದು ನಡೆಸಿದ ಪರೀಕ್ಷೆಯಲ್ಲಿ ಈ ವಾಯುರಕ್ಷಣಾ ವ್ಯವಸ್ಥೆಯು ಎರಡು ಮಾನವ ರಹಿತ ವೈಮಾನಿಕ ವಾಹನ (ಯುಎವಿ) ಮತ್ತು ಒಂದು ಡ್ರೋನ್‌ ಅನ್ನು ಏಕಕಾಲಕ್ಕೆ ಹೊಡೆದುರುಳಿಸಿತ್ತು. ಪರೀಕ್ಷೆಗಾಗಿ ನಿಗದಿಪಡಿಸಲಾಗಿದ್ದ ಗುರಿಗಳು ಭಿನ್ನ ಭಿನ್ನ ಎತ್ತರ ಮತ್ತು ದೂರದಲ್ಲಿ ಹಾರಾಡುತ್ತಿದ್ದವು. ಮೂರೂ ವ್ಯವಸ್ಥೆಗಳು ಒಟ್ಟಾಗಿ ಕಾರ್ಯಾಚರಣೆ ಆರಂಭಿಸಿ, ನಿಗದಿತ ಗುರಿ ತಲುಪಿ ಯುಎವಿ ಮತ್ತು ಡ್ರೋನ್‌ ಅನ್ನು ಧ್ವಂಸ ಮಾಡಿದ್ದವು. ಅತ್ಯಂತ ಕೆಳ ಮಟ್ಟದಲ್ಲಿ ಹಾರಾಡುವ ಡ್ರೋನ್‌ಗಳಿಂದ ಹಿಡಿದು, ಎತ್ತರದಲ್ಲಿ ಹಾರಾಡುವ ಕ್ಷಿಪಣಿ ಮತ್ತು ಯುದ್ಧವಿಮಾನಗಳ ದಾಳಿಗಳ ವಿರುದ್ಧ ಈ ವ್ಯವಸ್ಥೆ ರಕ್ಷಾ ಕವಚವಾಗಿ ಕೆಲಸ ಮಾಡಬಹುದು ಎಂದು ಡಿಆರ್‌ಡಿಒ ವಿಜ್ಞಾನಿಗಳು ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಸ್ವಾಂತ್ರ್ಯೋತ್ಸವದ ಭಾಷಣದಲ್ಲಿ, 2035ರ ವೇಳೆಗೆ ದೇಶವು ಅತ್ಯಂತ ಸುಧಾರಿತ, ಸಮಗ್ರ ವಾಯುರಕ್ಷಣಾ ವ್ಯವಸ್ಥೆಯನ್ನು ಹೊಂದಬೇಕು ಎಂಬ ಗುರಿಯೊಂದಿಗೆ  ‘ಸುದರ್ಶನ ಚಕ್ರ’ ಯೋಜನೆಯನ್ನು ಘೋಷಿಸಿದ್ದಾರೆ. ಆ ಗುರಿಯ ಸಾಕಾರಕ್ಕೆ ಈಗ ನಡೆದಿರುವ ಸ್ವದೇಶಿ ನಿರ್ಮಿತ ಸಮಗ್ರ ವಾಯು ರಕ್ಷಣಾ ವ್ಯವಸ್ಥೆ ಚಿಮ್ಮು ಹಲಗೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

1.ಕ್ಯುಆರ್‌ಎಸ್‌ಎಎಂ

ಇದು ಕಡಿಮೆ ವ್ಯಾಪ್ತಿಯ ಮತ್ತು ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ. ಸಂಚರಿಸುತ್ತಿರುವ ಶಸ್ತ್ರಸಜ್ಜಿತ ಸೇನಾ ತುಕಡಿಗಳನ್ನು ವಾಯುದಾಳಿಯಿಂದ ರಕ್ಷಿಸುವುದಕ್ಕಾಗಿ ಇದನ್ನು ರೂಪಿಸಲಾಗಿದೆ. ಇದನ್ನು ವಾಹನಗಳಲ್ಲಿ ಅಳವಡಿಸಬಹುದಾಗಿದೆ. ಸಂಚರಿಸುತ್ತಿರುವಾಗಲೇ ವಾಯು ದಾಳಿಯಿಂದ ರಕ್ಷಣೆ ನೀಡುವ ಸಾಮರ್ಥ್ಯ ಇದಕ್ಕಿದೆ. 2022ರಲ್ಲೇ ಡಿಆರ್‌ಡಿಒ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿತ್ತು. ಸಂಪೂರ್ಣ ಸ್ವಯಂಚಾಲಿತ ಕಮಾಂಡ್‌ ಮತ್ತು ನಿಯಂತ್ರಣ ವ್ಯವಸ್ಥೆ, ಎರಡು ರೇಡಾರ್‌ಗಳು ಮತ್ತು ಒಂದು ಉಡಾವಣಾ ಸಲಕರಣೆಯನ್ನು ಇದು ಹೊಂದಿದೆ. 3 ಕಿ.ಮೀನಿಂದ 30 ಕಿ.ಮೀ ದೂರ ಮತ್ತು 10 ಕಿ.ಮೀನಷ್ಟು ಎತ್ತರದಲ್ಲಿರುವ ಶತ್ರುಗಳ ಯುದ್ಧವಿಮಾನ, ಹೆಲಿಕಾಪ್ಟರ್‌, ಡ್ರೋನ್‌ ಕ್ಷಿಪಣಿಗಳನ್ನು ಇದು ಹೊಡೆದು ಉರುಳಿಸಬಲ್ಲದು

2. ವಿಎಸ್‌ಎಚ್‌ಒಆರ್‌ಎಡಿಎಸ್‌

ಈ ವರ್ಷದ ಫೆಬ್ರುವರಿ 1ರಂದು ಡಿಆರ್‌ಡಿಒ ಈ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಅತ್ಯಂತ ಕಡಿಮೆ ಎತ್ತರದಲ್ಲಿರುವ ಗುರಿಯನ್ನು ಇದು ಧ್ವಂಸ ಮಾಡಬಲ್ಲದು. ಇದು ಮನುಷ್ಯನೇ ಹೊತ್ತೊಯ್ಯಬಹುದಾದ ರಕ್ಷಣಾ ವ್ಯವಸ್ಥೆ. ಅಂದರೆ, ಒಬ್ಬ ಸೈನಿಕ ಈ ವ್ಯವಸ್ಥೆಯನ್ನು ನಿಯಂತ್ರಿಸಬಹುದು. ಕ್ಷಿಪಣಿ ಉಡಾವಣಾ ಸಲಕರಣೆಯನ್ನು ಹಿಡಿದುಕೊಂಡು ಗುರಿಯತ್ತ ದಾಳಿ ಮಾಡಬಹುದು. ಹಗುರವಾದ ಈ ವ್ಯವಸ್ಥೆಯನ್ನು ಎಲ್ಲಿ ಬೇಕಾದರೂ ನಿಯೋಜಿಸಬಹುದು. ಭೂಸೇನೆ, ವಾಯು ಪಡೆ ಮತ್ತು ನೌಕಾ ಪಡೆಗಳಿಗೂ ಹೊಂದುವಂತಿರುವುದು ಇದರ ಬಹುದೊಡ್ಡ ಅನುಕೂಲ. 600 ಮೀಟರ್‌ನಿಂದ ಆರು ಕಿ.ಮೀ ದೂರದಲ್ಲಿರುವ ಗುರಿಯನ್ನು ನಿಖರ ದಾಳಿಯ ಮೂಲಕ ನಾಶಪಡಿಸಬಲ್ಲದು.

3. ಲೇಸರ್‌ ಆಧಾರಿತ ಡಿಇಡಬ್ಲ್ಯು

ಇದು ಶತ್ರುಗಳ ವಿಮಾನ, ಡ್ರೋನ್‌, ಕ್ಷಿಪಣಿಯನ್ನು ಲೇಸರ್‌ ಕಿರಣಗಳ ಮೂಲಕ ನಾಶ ಮಾಡುವ ಅಸ್ತ್ರ. ಈ ವರ್ಷದ ಏಪ್ರಿಲ್‌ 13ರಂದು ಡಿಆರ್‌ಡಿಒ ಈ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. 30 ಕಿಲೋವಾಟ್‌ ಲೇಸರ್‌ ಆಧಾರಿತ ಅಸ್ತ್ರ ಬಳಸಿ ಸಣ್ಣ ವಿಮಾನವನ್ನು ನಾಶ ಮಾಡಲಾಗಿತ್ತು. ಗರಿಷ್ಠ 3.5 ಕಿ.ಮೀ ದೂರದಲ್ಲಿರುವ ಗುರಿಗಳನ್ನು ಧ್ವಂಸ ಮಾಡಬಲ್ಲ ಸಾಮರ್ಥ್ಯ ಇದರದ್ದು. ಲೇಸರ್‌ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಭವಿಷ್ಯದ ಅಸ್ತ್ರಗಳು ಎಂದು ಬಣ್ಣಿಸಲಾಗುತ್ತಿದ್ದು, ಭಾರತವು ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಮೂಲಕ ಅಮೆರಿಕ, ಚೀನಾ, ರಷ್ಯಾ ಸಾಲಿಗೆ ಸೇರಿದೆ.

ಸಮಗ್ರ ವಾಯು ರಕ್ಷಣಾ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

* ಈ ವ್ಯವಸ್ಥೆಯು ರೇಡಾರ್‌, ನಿಯಂತ್ರಣ ಕೇಂದ್ರಗಳು, ಶಸ್ತ್ರಾಸ್ತ್ರಗಳು, ಯುದ್ಧವಿಮಾನಗಳು ಮತ್ತು ನೆಲ ಆಧಾರಿತ ಕ್ಷಿಪಣಿಗಳನ್ನೊಳಗೊಂಡ ಸಮನ್ವಯ ಜಾಲವನ್ನು ಬಳಸಿಕೊಂಡು ಶತ್ರುಗಳು ವಾಯು ಬೆದರಿಕೆಯನ್ನು (ಕ್ಷಿಪಣಿ, ಡ್ರೋನ್‌, ಯುದ್ಧವಿಮಾನ) ಪತ್ತೆ ಹಚ್ಚಿ, ಅದರ ಮೇಲೆ ನಿಗಾ ಇಟ್ಟು ಅದನ್ನು ಧ್ವಂಸ ಮಾಡುತ್ತದೆ 

* ರೇಡಾರ್‌ಗಳು ಶತ್ರುಗಳ ಬೆದರಿಕೆಯನ್ನು ಪತ್ತೆ ಹಚ್ಚಿ, ಅವುಗಳ ಮೇಲೆ ನಿಗಾ ಇಡುತ್ತಾ, ಅವುಗಳ ವೇಗ, ಎತ್ತರ, ಪಥಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ನೀಡುತ್ತವೆ

* ಎಲೆಕ್ಟ್ರೋ ಆಪ್ಟಿಕಲ್‌ ಸೆನ್ಸರ್‌ಗಳು ಹೆಚ್ಚುವರಿ ದತ್ತಾಂಶಗಳನ್ನು ನೀಡುವುದರ ಜೊತೆಗೆ, ವಾಯುದಾಳಿ ಬೆದರಿಕೆಯ ವಾಸ್ತವ ಚಿತ್ರಣವನ್ನು ನೀಡುತ್ತವೆ

* ಐಎಡಿಡಬ್ಲ್ಯುಎಸ್‌ನ ಹೃದಯ ಭಾಗವಾಗಿರುವ ಕೇಂದ್ರೀಕೃತ ನಿಯಂತ್ರಣಾ ವ್ಯವಸ್ಥೆಯು (ಸಿ2ಸಿ2) ವಿವಿಧ ರೇಡಾರ್‌ಗಳು ಮತ್ತು ಎಲೆಕ್ಟ್ರೊ–ಆಪ್ಟಿಕಲ್ ಸೆನ್ಸರ್‌ಗಳ ದತ್ತಾಂಶವನ್ನು ಬೆಸೆಯುವ ಮೂಲಕ ನಿರ್ದಿಷ್ಟ ವಾಯುಪ್ರದೇಶದ ಆ ಕ್ಷಣದ ಚಿತ್ರಣ ನೀಡುತ್ತದೆ. ಈ ವ್ಯವಸ್ಥೆಯು ವಿಮಾನದ ಪಥ, ವೇಗ, ಎತ್ತರ, ರೇಡಾರ್ ದತ್ತಾಂಶ ಆಧರಿಸಿ ಅಪಾಯದ ವಿಶ್ಲೇಷಣೆ ಮಾಡುವುದಲ್ಲದೇ ಅದನ್ನು ಎದುರಿಸಲು ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ನಿಗದಿಪಡಿಸುತ್ತದೆ. ಬೆದರಿಕೆಗೆ ಸಂಬಂಧಿದ ದತ್ತಾಂಶಗಳನ್ನು ಎಐ ತಂತ್ರಜ್ಞಾನದ ಮೂಲಕ ಇದು ವಿಶ್ಲೇಷಣೆಗೆ ಒಳಪಡಿಸುತ್ತದೆ

* ಗುರಿಯನ್ನು (ಶತ್ರು ದೇಶದ ವಿಮಾನ, ಕ್ಷಿಪಣಿ, ಡ್ರೋನ್‌, ಹೆಲಿಕಾಪ್ಟರ್‌) ನಿಗದಿ ಪಡಿಸಿದ ನಂತರ ಅವುಗಳನ್ನು ತಡೆಯಲು/ಹೊಡೆದುರುಳಿಸಲು ನಿಗದಿಪಡಿಸಲಾಗಿರುವ ಬಹು ಹಂತಗಳ ಪ್ರತಿದಾಳಿ ಅಸ್ತ್ರಗಳನ್ನು ಕಾರ್ಯಾಚರಣೆಗೆ ಇಳಿಸಲಾಗುತ್ತದೆ. ಇಲ್ಲಿ ಮೂರು ಹಂತಗಳಿರುತ್ತವೆ. ಹೊರಗಿನ ಹಂತ, ಮಧ್ಯಮ ಹಂತ ಮತ್ತು ಒಳಗಿನ ಹಂತ.

* ಹೊರಗಿನ ಹಂತದಲ್ಲಿ ದೂರ ವ್ಯಾಪ್ತಿಯ ಕ್ಷಿಪಣಿಗಳನ್ನು (ಕ್ಷಿಪ್ರ ಪ್ರತಿಗಾಮಿ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು) ಬಳಸಿ ಗುರಿಯನ್ನು ನಾಶ ಮಾಡಲಾಗುತ್ತದೆ. 

* ಮಧ್ಯದ ಹಂತದಲ್ಲಿ ಕಡಿಮೆ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಲಾಗುತ್ತದೆ. ಕಡಿಮೆ ದೂರದಲ್ಲಿರುವ ಬೆದರಿಕೆಯನ್ನು ಇದು ತಡೆಯುತ್ತದೆ

* ಒಳಗಿನ ಹಂತದಲ್ಲಿ ಲೇಸರ್‌ ಆಧಾರಿತ ಅಸ್ತ್ರಗಳು ಅಥವಾ ನಿರ್ದೇಶಿತ ಪ್ರಖರ ಶಕ್ತಿಯ ಶಸ್ತ್ರಾಸ್ತ್ರಗಳನ್ನು ಬಳಸಿ ಶತ್ರುಗಳ ಕ್ಷಿಪಣಿ, ವಿಮಾನ, ಡ್ರೋನ್‌ಗಳನ್ನು ನಾಶ ಪಡಿಸಲಾಗುತ್ತದೆ

* ಈ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಅತ್ಯಂತ ಸುವ್ಯವಸ್ಥಿತವಾದ ಜಾಲ ಅಗತ್ಯ. ಎಲ್ಲ ವಿಭಾಗಗಳೂ ಏಕಕಾಲಕ್ಕೆ ಅತ್ಯಂತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ

ಐಎಡಿಡಬ್ಲ್ಯುಎಸ್‌ ಏಕೆ ಮುಖ್ಯ?

* ರಷ್ಯಾ– ಉಕ್ರೇನ್‌ ಯುದ್ಧ, ಇಸ್ರೇಲ್–ಹಮಾಸ್ ಸಂಘರ್ಷದಲ್ಲಿ ಕ್ಷಿಪಣಿಗಳು, ಡ್ರೋನ್‌ಗಳದ್ದೇ ಮುಖ್ಯ ಪಾತ್ರ. ಇತ್ತೀಚೆಗೆ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ’ದಲ್ಲಿಯೂ ವೈಮಾನಿಕ ದಾಳಿಯದ್ದೇ ಗಣನೀಯ ಪಾಲು. ಶತ್ರುಗಳ ವೈಮಾನಿಕ ದಾಳಿಯಿಂದ ದೇಶವನ್ನು ರಕ್ಷಿಸುವುದರ ದೃಷ್ಟಿಯಿಂದ ಐಎಡಿಡಬ್ಲ್ಯುಎಸ್‌ಗೆ ಪ್ರಾಮುಖ್ಯವಿದೆ    

* ಐದಾರು ದಶಕಗಳ ಹಿಂದೆ ವಿಮಾನಗಳ ಮೂಲಕ ನೆಲದ ಮೇಲಿನ ಭೂಪ್ರದೇಶ–ದೃಶ್ಯಗಳನ್ನು ಕೇಂದ್ರೀಕರಿಸಿ ದಾಳಿಗಳನ್ನು ನಡೆಸಲಾಗುತ್ತಿತ್ತು. ಆದರೆ, ಇಂದು ಅತ್ಯಾಧುನಿಕ ಯುದ್ಧವಿಮಾನಗಳು ಬಂದಿವೆ. ಅತ್ಯಾಧುನಿಕವಾದ ರೇಡಾರ್‌ಗಳು, ಡ್ರೋನ್‌ಗಳಂತಹ ಆಧುನಿಕ ಅಸ್ತ್ರಗಳಿವೆ. ಇವುಗಳು ಎಲ್ಲ ರೀತಿಯ ಹವಾಮಾನಗಳಿಗೂ ಹೊಂದಿಕೊಂಡು ಕಾರ್ಯನಿರ್ವಹಿಸಬಲ್ಲವು   

* ಆಧುನಿಕ ಯುದ್ಧರಂಗದಲ್ಲಿ ನಗರ ಪ್ರದೇಶಗಳೂ ಸೇರಿದಂತೆ ಯಾವ ಪ್ರದೇಶವೂ ವಾಯು ದಾಳಿಯ ಅಪಾಯದಿಂದ ಮುಕ್ತವಾಗಿಲ್ಲ. ಯುದ್ಧವಿಮಾನಗಳು ಆಧುನಿಕ ಸಂವಹನ ಸಾಧನಗಳನ್ನೂ ಹೊಂದಿವೆ. ಊಹೆಯನ್ನೂ ಮಾಡಲಾಗದ ರೀತಿಯಲ್ಲಿ, ಯಾವುದೇ ದಿಕ್ಕಿನಿಂದ ಶತ್ರು ಮೇಲೆರಗಬಹುದು. ಇಂಥ ಸ್ಥಿತಿಯಲ್ಲಿ ದೇಶದ ರಕ್ಷಣೆಗೆ ಐಎಡಿಡಬ್ಲ್ಯುಎಸ್‌ನಂಥ ರಕ್ಷಣಾ ವ್ಯವಸ್ಥೆ ಅತ್ಯಗತ್ಯ 

ಆಧಾರ: ಪಿಟಿಐ, ಪಿಐಬಿ, ಡಿಆರ್‌ಡಿಒ ವೆಬ್‌ಸೈಟ್‌, ಬಿಇಎಲ್‌–ಇಂಡಿಯಾ.ಇನ್‌, ಏರ್‌ಡಿ‍ಫೆನ್ಸ್‌ನ್ಯೂಸ್.ಇನ್‌

ಆಗಸ್ಟ್‌ 23ರಂದು ಐಎಡಿಡಬ್ಲ್ಯುಎಸ್‌ ಪರೀಕ್ಷೆ ನಡೆಸಿದ ಸಂದರ್ಭದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.